spot_img
spot_img

ಮರೆಯಲಾಗದ ರತ್ನ , ಲಾಲ್ ಬಹದ್ದೂರ್ ಶಾಸ್ತ್ರಿ

Must Read

- Advertisement -

ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ ೨, ೧೯೦೪ ರಂದು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು. ತಂದೆ ಶಾರದ ಪ್ರಸಾದ ಶ್ರೀವಾತ್ಸವ.ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಒಂದೂವರೆ ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡರು. ಆಗ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತಮ್ಮ ತವರು ಮನೆಗೆ ಹೋದರು.ಕಿತ್ತು ತಿನ್ನುವ ಬಡತನ.ಪುಟ್ಟ ಹಳ್ಳಿಯಲ್ಲಿ ವಾಸ.ಅವರಿಗೆ ಶಿಕ್ಷಣದ ಸ್ಥಿತಿ ಗಮನಾರ್ಹವಾಗಿರಲಿಲ್ಲ. ಪ್ರಾಥಮಿಕ ಶಿಕ್ಷಣ ಮುಗಿಯುವಷ್ಟರಲ್ಲಿ ಅವರ ಮಾವನ ಮನೆಗೆ ಇವರ ಶಿಕ್ಷಣ ಮುಂದುವರೆಸಲು ಕಳಿಸಲಾಯಿತು. ಅವರ ಪ್ರೌಢ ಶಾಲಾ ಶಿಕ್ಷಣ ಕೂಡ ಕಷ್ಟಗಳಲ್ಲಿ ಸಾಗುತ್ತಿತ್ತು.ಚಪ್ಪಲಿಯಿಲ್ಲದೇ ಬರಿಗಾಲಿನಿಂದ ನಡೆದುಕೊಂಡು ಬಿರು ಬಿಸಿಲಿನಲ್ಲಿ ಕಿಲೋ ಮೀಟರುಗಟ್ಟಲೇ ನಡೆದು ಹೋಗಿ ಶಿಕ್ಷಣ ಕಲಿಯುವಂತಾಗಿತ್ತು.

ಇದೇ ಸಂದರ್ಭದಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟ ವಿಷಯದಿಂದ ಪ್ರಭಾವಿತರಾದ ಶಾಸ್ತ್ರಿಯವರು ತಮ್ಮ ವ್ಯಾಸಾಂಗ ನಿಲ್ಲಿಸಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡರು.ಆಗ ಅವರಿಗೆ ಹನ್ನೊಂದು ವರ್ಷ ವಯಸ್ಸು.ಇದು ಅವರ ತಾಯಿಯನ್ನು ಚಿಂತೆಗೀಡು ಮಾಡಿತು.ಹೀಗೆ ತಮ್ಮ ಹದಿನಾರನೆಯ ವಯಸ್ಸಿನವರೆಗೆ ಸ್ವಾತಂತ್ರ್ಯದ ಚಟುವಟಿಕೆಗಳಲ್ಲಿ ತೊಡಗಿದರು.ಇವರ ಕಲ್ಲು ಮನಸ್ಸು ಕರಗದೆಂದು ಗೊತ್ತಾಗಿದ್ದ ತಾಯಿ ಅದನ್ನು ತಡೆಯಲಿಲ್ಲ.

ಬ್ರಿಟಿಷ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾಪೀಠವನ್ನು ಸೇರುವ ಮೂಲಕ ಅಲ್ಲಿನ ದೇಶದ ಶ್ರೇಷ್ಠ ಬುದ್ಧಿ ಜೀವಿಗಳ ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. “ಶಾಸ್ತ್ರೀ” ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ.ಆದರೆ ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿಯಿತು.

- Advertisement -

ವೈವಾಹಿಕ ಬದುಕು

೧೯೨೭ ರಲ್ಲಿ ತಮ್ಮ ಹಳ್ಳಿಯ ಪಕ್ಕದ ಹಳ್ಳಿ ಮಿರ್ಜಾಪುರದ “ಲಲಿತಾದೇವಿ”ಯೊಡನೆ ಇವರ ವಿವಾಹವಾಯಿತು.ಇವರ ವಿವಾಹದಲ್ಲಿ ಕೈಮಗ್ಗದ ಬಟ್ಟೆ ಮತ್ತು ಚರಕವನ್ನು ಇವರಿಗೆ ನೀಡಲಾಗಿತ್ತು.ಭಾರತೀಯ ಸಾಂಪ್ರದಾಯದಂತೆ ಇವರ ವಿವಾಹ ಜರುಗಿತು.ಇವರಿಗೆ ಕುಸುಮ, ಹರಿಕೃಷ್ಣ, ಸುಮನ, ಅನಿಲ, ಸುನಿಲ, ಅಶೋಕ ಎಂಬ ಮಕ್ಕಳು ಜನಿಸಿದರು.

ಸ್ವಾತಂತ್ರ್ಯ ಹೋರಾಟದ ಬದುಕು

ವಿವಾಹ ನಂತರವೂ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.೧೯೩೦ ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡರು ಇದು ಬಹಳ ತೀವ್ರತರವಾಗಿತ್ತು. ಈ ಸಂದರ್ಭದಲ್ಲಿ ಇವರನ್ನು ಬಂಧಿಸಿದ ಬ್ರಿಟಿಷರು ಏಳು ವರ್ಷಗಳ ಕಾಲ ಕಾರಾಗೃಹದಲ್ಲಿ ಇರಿಸಿದರು.ಇದರಿಂದ ಇವರ ಹೋರಾಟದ ಕೆಚ್ಚು ಹೆಚ್ಚಾಯಿತು.೧೯೪೬ ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಇವರ ಶಕ್ತಿಯನ್ನು ಅರಿತ ಸರ್ಕಾರದವರು ಇವರನ್ನು ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದರು.ನಂತರದ ದಿನಗಳಲ್ಲಿ ಇವರು ಗೃಹ ಸಚಿವ ಸ್ಥಾನಕ್ಕೆ ಏರಿದ್ದು ಇತಿಹಾಸ.

ರೈಲ್ವೇ ಸಚಿವ ಸ್ಥಾನಕ್ಕೆ ರಾಜೀನಾಮೆ

೧೯೫೧ ರಲ್ಲಿ ಇವರನ್ನು ದೆಹಲಿಗೆ ಕರೆಸಿಕೊಳ್ಳುವ ಮೂಲಕ ಕೇಂದ್ರ ಮಂತ್ರಿಮಂಡಲ ವಿವಿಧ ಖಾತೆಗಳಲ್ಲಿ ಇವರಿಗೆ ಅವಕಾಶ ನೀಡಲಾಯಿತು.ರೈಲ್ವೆ ಸಚಿವ,ಸಾರಿಗೆ ಸಚಿವ,ಸಾರಿಗೆ ಸಂಪರ್ಕ ಸಚಿವ,ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ. ಇಂಥ ಸಂದರ್ಭದಲ್ಲಿ ನಡೆದ ರೈಲ್ವೆ ಅಪಘಾತವೊಂದಕ್ಕೆ ಇವರ ಮೇಲೆ ಜವಾಬ್ದಾರಿ ಎಂದು ಅನಿಸಿದ್ದರಿಂದ ತಮ್ಮ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇಡೀ ದೇಶದಲ್ಲೇ ಪ್ರಶಂಸೆಗೆ ಪಾತ್ರವಾಯಿತು.ಈ ವಿಚಾರವಾಗಿ ನೆಹರೂರವರು ಮಾತನಾಡುತ್ತ “ಶಾಸ್ತ್ರೀಯವರು ಈ ಅವಘಡಕ್ಕೆ ಜವಾಬ್ದಾರರಲ್ಲ.ಅವರ ಉನ್ನತ ಆದರ್ಶಗಳು ದೃಢ ನಿಷ್ಠೆಗಳು ಎಲ್ಲರಿಗೂ ಮಾದರಿ” ಎಂದು ಹೇಳಿದರು.

- Advertisement -

ಯುದ್ದದ ಘಟನೆಗಳು

ಇವರು ಪ್ರಧಾನಿಯಾಗಿದ್ದು ಅಲ್ಪ ಅವಧಿ ಆದರೆ ಎರಡು ಪ್ರಮುಖ ಯುದ್ದಗಳ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಹಲವು ಪ್ರಯತ್ನಗಳನ್ನು ಅವರ ಮಾಡಬೇಕಾಯಿತು.೧೯೬೨ ರ ಚೀನಾ ಯುದ್ದದ ಸೋಲು ೧೯೬೫ ರ ಪಾಕಿಸ್ತಾನದ ವಿರುದ್ದದ ಗೆಲುವು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಶಾಸ್ತ್ರಿಯವರು ತಳೆದ ನಿಲುವು ವಿಶ್ವಸಂಸ್ಥೆ ಭಾರತಕ್ಕೆ ಸಹಾಯ ಹಸ್ತ ಚಾಚುವಂತೆ ಮಾಡಿತಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಇವರು ಕೇವಲ ಹದಿನೇಳು ತಿಂಗಳು ಪ್ರಧಾನಿಯಾಗಿದ್ದು. ಸ್ವತಃ ಒಂದು ಹೊತ್ತಿನ ಉಪವಾಸಕ್ಕೆ ಕರೆ ಕೊಡುವ ಮೂಲಕ ದೇಶದ ಆರ್ಥಿಕತೆಗೆ ಜನರಿಗೆ ಪ್ರೇರಣೆಯಾದರು.ಅಷ್ಟೇ ಅಲ್ಲ “ ಜೈ ಹಿಂದ್,ಜೈಜವಾನ್ ಜೈ ಕಿಸಾನ್” ಘೋಷಣೆ ದೇಶದ ಯೋಧ ಮತ್ತು ರೈತನ ಬಗ್ಗೆ ಅವರಿಗಿರುವ ಅಪಾರ ಕಾಳಜಿಗೆ ಹಿಡಿದ ಕೈಗನ್ನಡಿ.೧೯೬೬ ಜನವರಿಯಲ್ಲಿ ಮಹಮ್ಮದ ಅಯೂಬ್ ಖಾನ್ ಅಲೆಕ್ಸ ನಿಕೊಯೆವಿಟ್ ಕೊಸಿಜಿನ್ ಅವರಿಂದ ಆಯೋಜಿಸಲಾದ ತಾಷ್ಕೆಂಟ್ ಒಪ್ಪಂದದಲ್ಲಿ ಭಾಗವಹಿಸಿದ ಶಾಸ್ತ್ರಿ ಅದರ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿದರು.

ಪಾರದರ್ಶಕ ವ್ಯಕ್ತಿತ್ವ.

ಇವರು ಪ್ರಧಾನಿಯಾಗಿದ್ದ ಸಂದರ್ಭ ಒಂದು ದಿನ ಇವರ ಮಗ ಸುನೀಲ್ ಶಾಸ್ತ್ರಿ ವೈಯುಕ್ತಿಕ ಕಾರಣಕ್ಕೆ ಕಾರನ್ನು ಬಳಸಿಕೊಂಡಿದ್ದ.ಇದನ್ನು ಕಂಡ ಶಾಸ್ತ್ರಿಯವರು ಚಾಲಕನನ್ನು ಕರೆದು ಅವನು ಕ್ರಮಿಸಿದ ದೂರ ಅದರ ವೆಚ್ಚ ತಿಳಿದು ಆ ಹಣವನ್ನು ತಮ್ಮ ಸ್ವಂತ ಹಣದಿಂದ ಕಟ್ಟಿದ್ದು ಅವರ ಪಾರದರ್ಶಕ ವ್ಯಕ್ತಿತ್ವಕ್ಕೆ ಒಂದು ನಿದರ್ಶನ. ಸರಕಾರದ ಹಣ ಯಾವತ್ತೂ ಪೋಲು ಆಗಲು ಅನಗತ್ಯ ವೆಚ್ಚಕ್ಕೆ ಅವಕಾಶ ನೀಡದಂತೆ ಆಡಳಿತ ನಡೆಸಿದ ಶಾಸ್ತ್ರಿಯವರು ಇಂದಿಗೂ ಮಾದರಿ.ಬಡತನದಲ್ಲಿ ಹುಟ್ಟಿ ಬಡತನದ ಅನುಭವದಲ್ಲಿ ಬೆಳೆದು ಜಗತ್ತಿಗೆ ತಮ್ಮ ಆದಶದ ಬದುಕನ್ನು ನಿಷ್ಠೆಯಿಂದ ಬದುಕುವ ಮೂಲಕ ಬದುಕಿನ ಯಾತ್ರೆ ಮುಗಿಸಿದ ಶಾಸ್ತ್ರಿ ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿದ್ದಿದ್ದು ಕೇವಲ ಒಂದು ಸಾವಿರ ರೂಪಾಯಿಗಳು ಮಾತ್ರ.ತ್ಯ ಸರಳತೆ,ಪ್ರಾಮಾಣಿಕತೆಗಳ ಪಾಠವನ್ನು ಮೈಗೂಡಿಸಿಕೊಂಡಿದ್ದ ಶಾಸ್ತ್ರೀಜಿ ಅವರ ಸರಳ ಪ್ರಾಮಾಣಿಕ ಜೀವನ ಇಂದಿನ ಜನರಿಗೆ ದಾರಿದೀಪವಾಗಲಿ.ಅವರು ನಡೆದು ಬಂದ ದಾರಿಯಲ್ಲಿ ಎಲ್ಲರೂ ಬದುಕನ್ನು ರೂಢಿಸಿಕೊಳ್ಳುವಂತಾಗಲಿ,ಅವರ ಆತ್ಮಕ್ಕೆ ಶಾಂತಿ ಕೋರೋಣ.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ-೫೯೧೧೧೭

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group