ಸರ್ಕಾರದ ವಿವಿಧ ಕಾಮಗಾರಿಗಳ ವಿವರ ನೀಡಿದ ಶಾಸಕರು

0
453
ಸಿಂದಗಿಯಲ್ಲಿ ಶಾಸಕ ರಮೇಶ ಭೂಸನೂರ ಅವರು ಪತ್ರಿಕಾಗೋಷ್ಠಿ ನಡೆಸಿದರು.

ಸಿಂದಗಿ: ತಾಲೂಕಿನ ಕನ್ನೋಳ್ಳಿದಿಂದ ಬೂದಿಹಾಳ ರಸ್ತೆ ಕಾಮಗಾರಿ ಹಾಗೂ ಯಂಕಂಚಿಯಿಂದ ಸುಂಗಠಾಣ ರಸ್ತೆ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ಮಾರನೇ ದಿನವೇ ಇದು ಸಚಿವರ ಅನುದಾನ ಎಂದು ಕಾಂಗ್ರೆಸ್ ಮುಖಂಡರು ಭೂಮಿಪೂಜೆ ನೆರವೇರಿಸುತ್ತಾರೆ ಎಂದರೆ ಮಾಜಿ ಸಚಿವರು ತೀರಿಹೋಗಿ ಒಂದು ವರ್ಷ ಗತಿಸಿದೆ ಮತ್ತೆ ಅವರ ಅನುದಾನ ಇರುತ್ತಾ.. ಇದೇನು ಪಂಚವಾರ್ಷಿಕ ಯೋಜನೆಯಾ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಶಾಸಕ ರಮೇಶ ಭೂಸನೂರ ಅವರು ಕೆಂಡಮಂಡಲವಾದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರು ತಳವಾರ ಸಮುದಾಯಕ್ಕೆ ಎಸ್‍ಟಿ ಮೀಸಲಾತಿ ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು ಅದರಂತೆ ನುಡಿದಂತೆ ನಡೆದುಕೊಂಡಿದ್ದಾರೆ. ಸಮಾಜದ ಮುಖಂಡರು ಪದೇ ಪದೇ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಟಿ ನೀಡಿ ಒತ್ತಾಯಿಸಿದ್ದರು ಅಲ್ಲದೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತಳವಾರ ಸಮುದಾಯಕ್ಕೆ ನೀಡಿದ ಭರವಸೆ ಈಡೇರಿಸುವಂತೆ ಅನೇಕರು ಪ್ರಸ್ತಾಪ ಮಾಡಿದಂತೆ ತಾನು ಕೂಡಾ ಪ್ರಶ್ನೆ ಎತ್ತಿದ್ದೆ ಅದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರದಿಂದ ಅನುಮೋದನೆ ಗೊಂಡ ಮೀಸಲಾತಿ ಪಟ್ಟಿಯನ್ನು ಕೆಲವು ತಾಂತ್ರಿಕ ದೋಷಗಳನ್ನು ನಿವಾರಿಸಿ ಈ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನೂ ಕೆಲ ದಿನಗಳಲ್ಲಿ ಒಂದು ಬೃಹತ್ ಸಮಾವೇಶ ಹಮ್ಮಿಕೊಂಡು 20ರಿಂದ 25 ಜನರಿಗೆ ಸಾಂಕೇತಿಕವಾಗಿ ಎಸ್‍ಟಿ ಸರ್ಟಿಫಿಕೇಟ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಡಣಿ ಬ್ರಿಜ್‍ಗೆ ಟೆಂಡರ್; ತಾಲೂಕಿನ ಕಡಣಿ ಬ್ರಿಜ್ ಕಾಮಗಾರಿಗೆ ರೂ. 33 ಕೋಟಿ ಹಣ ಮೊನ್ನೆ ನಡೆದ ಸಭೆಯಲ್ಲಿ ಬಿಡುಗಡೆಯಾಗಿ ಟೆಂಡರ ಪ್ರಕ್ರಿಯೆ ನಡೆದಿದೆ.

ಗುತ್ತಿಬಸವಣ್ಣ ಏತನೀರಾವರಿಗೆ ಹಣ ಬಿಡುಗಡೆ; ಗುತ್ತಿ ಬಸವಣ್ಣ ಏತನೀರಾವರಿಗೆ ಕೇಂದ್ರ ಸರಕಾರದ ಎಐಪಿಪಿ ಅಡಿಯಲ್ಲಿ ಮೊದಲ ಹಂತದ ಜಾಕವೆಲ್ 5-10ದಿಂದ 97 ಕಿ ಮೀ ಕಾಲುವೆಗೆ 49 ಡಿಸ್ಟ್ರೀಬ್ಯೂಟರ್ ಕಾಮಗಾರಿಗೆ 5-5-1999ರಲ್ಲಿ 337.92ಕೋಟಿ ಅನುಮೋದನೆಗೊಂಡು ನೀರಿನ ಪ್ರಮಾಣ 11.314 ಟಿಎಂಸಿ ಬಳಕೆಯೊಂದಿಗೆ 41900 ಹೆಕ್ಟೇರ ಭೂ ಪ್ರದೇಶ ನೀರಾವರಿಗೆ ಒಳಪಟ್ಟಿತು ನಂತರ 2ನೇ ಹಂತ 97 ರಿಂದ 147 ಕಿ ಮೀ ವರೆಗೆ ಕಾಲುವೆ 19 ಡಿಸ್ಟ್ರೀಬ್ಯೂಟರ್ 2 ಪಂಪಿನ ನಿರ್ಮಾಣದಿಂದ 4.94 ಟಿಎಂಸಿ ನೀರಾವರಿಗೆ ಬಳಕೆಯೊಂದಿಗೆ 20682 ಹೆಕ್ಟರ್ ಭೂಪ್ರದೇಶ ನೀರಾವರಿಗೆ ಒಳಪಡಿಸುವ ಯೋಜನೆ ಒಂದೇ ಕ್ಷೇತ್ರಕ್ಕೆ ಸೀಮೀತವಾದದಲ್ಲ. ಆರು ಮತಕ್ಷೇತ್ರಗಳಿಗೆ ಒಳಪಡುತ್ತದೆ. ಅಲ್ಲದೆ 5 ವರ್ಷಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ ದೀಪಾ ಇಲೆಕ್ಟ್ರೀಕಲ್ ಹುಬ್ಬಳ್ಳಿ ಇವರಿಗೆ 4.68 ಕೋಟಿ ಜಿಎಸ್ಟಿ ರಹಿತ 15-2-21 ರಂದು ಗುತ್ತಿಗೆ ನೀಡಲಾಗಿದೆ ಜಾಕವೆಲ್‍ಗಳು ಹಳೆಯದಾಗಿರುವುದರಿಂದ ರೈತರಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಅದಕ್ಕೆ 21-22 ನೇ ಸಾಲಿನ 2 ಹೊಸ ಮೋಟಾರ 2 ಪಂಪ ರೂ 10 ಕೋಟಿ ಮೊತ್ತದಲ್ಲಿ ಸದರ ಕಾಮಗಾರಿಗೆ 8.82 ಲಕ್ಷ ಮೊತ್ತದ ಕೆಂಬಾವಿಯಿಂದ 8-12-21ರಂದು ಟೆಂಡರ ಕರೆಯಲಾಗಿದೆ. ಉಳಿದ 6 ಹೊಸ ಪಂಪ ಹಾಗೂ 6 ಮೋಟಾರ ಖರೀದಿಗಾಗಿ ರೂ 30 ಕೋಟಿಯ ಅಂದಾಜು ಪತ್ರಿಕೆ ಮಾಡಿ 23-11-21 ರಂದು ಅನುಮೋದನೆಗೆ ರವಾನಿಸಲಾಗಿದೆ ಎಂದು ದಾಖಲೆ ಪ್ರಚುರಪಡಿಸಿದರು.

ಸಿಂದಗಿ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ರೂ. 10 ಕೋಟಿ ಅಲ್ಲದೆ ಹೆಚ್ಚುವರಿಯಾಗಿ ರೂ 5 ಕೋಟಿ ಮತ್ತು ಆಲಮೇಲ ಪ ಪಂ ಗೆ ರೂ. 5 ಕೋಟಿ ಹೆಚ್ಚುವರಿಯಾಗಿ 3 ಕೋಟಿ ಅನುದಾನ ತರಲಾಗಿದೆ. ಸಾಮಾಜಿಕ ನ್ಯಾಯದಡಿ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಕೈಕೊಳ್ಳಲಾಗುವುದು. ಎಸ್‍ಡಿಪಿ ಯೋಜನೆಯಡಿ ಬಳಗಾನೂರ ಗ್ರಾಮದಿಂದ ಕೊರಳ್ಳಿ ಗ್ರಾಮದವರೆಗೆ ರಸ್ತೆ ನಿರ್ಮಾಣಕ್ಕೆ ರೂ. 10 ಕೋಟಿ ಅಲ್ಲದೆ ತಾಲೂಕಿನ ಒಟ್ಟು ರಸ್ತೆಗಳ ಸುಧಾರಣೆಗಾಗಿ ರೂ 50 ಕೋಟಿ ಅನುದಾನ ಬಿಡುಗಡೆಯಾಗಿದೆ ಅದರಲ್ಲಿ ಪಟ್ಟಣದ ಬಸವೇಶ್ವರ ಪಂಪನಿಂದ ಡಾ. ಅಂಬೇಡ್ಕರ ವೃತ್ತದವರೆಗೆ ರಸ್ತೆ ಮತ್ತು ಫೂಟ್‍ ಪಾಥ್ ನಿರ್ಮಾಣ, ಮಹಾತ್ಮಾಗಾಂಧಿ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ, ಡಾ. ಅಂಬೇಡ್ಕರ ವೃತ್ತದಿಂದ ಮೋರಟಗಿ ನಾಕಾದವರೆಗೆ ಸಿಸಿ ರಸ್ತೆ ಮತ್ತು ಪೂಟ್ ಪಾಥ್ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ನಿಂಗು ಬಗಲಿ, ಗುರು ತಳವಾರ, ಸುದರ್ಶನ ಜಿಂಗಾಣಿ ಸೇರಿದಂತೆ ಹಲವರಿದ್ದರು.