ಹೌದು, ಯಾರೋ ಇದ್ದಕ್ಕಿದ್ದಂತೆ ನಮ್ಮನ್ನು ಉದ್ದಾರ ಮಾಡ್ತಾರೆ ಅಥವಾ ಯಾರೋ ನನ್ನನ್ನು ಕೈಲಿಡಿದು ನಡೆಸುತ್ತಾರೆ ಎಂಬ ಒಣ ಆಲೋಚನೆಗಳನ್ನು ತ್ಯಜಿಸಿಬಿಡಬೇಕು. ಯಾರೂ ಯಾರನ್ನು ನಂಬಿ ಕೂರುವ ಹುಂಬರಾಗಬಾರದು. ಇನ್ನ್ಯಾರೋ ಬಂದು ಬದುಕನ್ನು ಜಾದುಗೊಳಿಸುವುದಿಲ್ಲ. ನಮ್ಮ ಬದುಕನ್ನು ನಾವೇ ಬೆರಗಾಗುವಂತೆ ಬದುಕಲು ಕಾಯಕ ನಿಷ್ಠೆ, ಪ್ರಾಮಾಣಿಕತೆ, ಸೋಲುಂಡರು ಮತ್ತೆ ಎದ್ದು ನಿಂತು ಗುರಿ ತಲುಪಿಯೇ ತೀರುತ್ತೇನೆ ಎಂಬ ಛಲ ನಮ್ಮೊಳಗೆ ಬರಬೇಕು.
ಪ್ರಸ್ತುತ ಪ್ರಪಂಚ ನಾನು ನನ್ನದು ಎನ್ನುವ ಸ್ವಾರ್ಥದಿಂದ ತುಂಬಿ ತುಳುಕುತ್ತಿದೆ. ಇನ್ನು ನನ್ನ ಜೊತೆಗೆ ನೀನು ಬೆಳೆಯಬೇಕು ನನ್ನೊಟ್ಟಿಗೆ ಸಾಗಬೇಕು ಎಂದು ಜೊತೆಗಿದ್ದವರು ನಮ್ಮ ಭುಜದ ಮೇಲು ಕೈ ಇರಿಸಿ ನಡೆ ಬಲವಾದ ಹೆಜ್ಜೆ ಗುರುತುಗಳನ್ನು ಊರೋಣ ಎಂದು ಹೇಳುವವರು ಸಹ ಬೆರಳೆಣಿಕೆಗಿಂತಲೂ ಕಡಿಮೆ ಇರುತ್ತಾರೆ. ಏಕೆಂದರೆ ಇರುವ ಬರುವ ಯಶಸ್ಸೆಲ್ಲವೂ ನನ್ನದೇ ಪಾಲಿಗಿರಲೆಂದು ಯೋಚಿಸುವ ಈ ಹೊತ್ತಿನ ಜನರಲ್ಲಿ ನೀನು ಉದ್ದಾರ ಆಗು ಎಂದು ಹರಸುವವರೇ ವಿರಳ. ಒಂದು ವೇಳೆ ನೀನು ಉದ್ದಾರ ಆಗಲೇಬೇಕೆಂದು ಪಣತೊಟ್ಟು, ಪಟ್ಟು ಹಿಡಿದು ನಿನ್ನನ್ನು ಮುನ್ನಡೆಸುವವರು ಇದ್ದಾರೆ ಎಂದರೆ ಅದು ತಾಯಿ-ತಂದೆ, ಕುಟುಂಬಸ್ಥರು ಮಾತ್ರ. ಇಲ್ಲದ ಹೊರತು ಯಾರೂ ನಿನ್ನ ಸಕ್ಸಸ್ ಬಯಸುವುದಿಲ್ಲ. ಎಷ್ಟೋ ಬಾರಿ ನಮ್ಮ ಜೊತೆ ನಮ್ಮವರಿದ್ದಾರೆ, ನನ್ನ ಏಳಿಗೆಯನ್ನು ಬಯಸುವವರಿದ್ದಾರೆ ಎಂಬ ಭ್ರಮೆಯ ಸುತ್ತ ಬದುಕುತ್ತಿರುತ್ತೇವೆ. ಲಾಭವಿಲ್ಲದ ಹೊರತು ಯಾರೂ ಕೂಡ ನಿನ್ನವರಂತಿರುವುದಿಲ್ಲ, ಇದ್ದರೆ ಅದು ಪಾಲಿಗೆ ಸಿಕ್ಕ ಅದೃಷ್ಟವೇ ಸರಿ. ಒಮ್ಮೊಮ್ಮೆ ನಮ್ಮವರೆಂದು ತಿಳಿದು ನಾವೇ ಇಟ್ಟ ನಂಬಿಕೆ ನಮಗೆ ಗೊತ್ತಿಲ್ಲದೇ ಕಾಪಾಳಕ್ಕೆ ಕಣ್ಣೀರು ಸುರಿದ ಉದಾಹರಣೆಗಳು ಸಿಗಬಹುದು.
ಪ್ರೀತಿ, ವಾತ್ಸಲ್ಯ ತುಂಬಿ ತುಳುಕಿರಬೇಕಾದರೆ ಹೃದಯದಲ್ಲಿ ಮಡುಗಟ್ಟಿದ ನೋವು ಇರಬಹುದು. ನಮ್ಮ ಸುತ್ತಲೂ ಒಡೆದ ಮನಸ್ಸುಗಳನ್ನು ಕೂಡಿಸಿ ಸೇತುವೆ ಕಟ್ಟುವವರು ಬೆರಳೆಣಿಕೆಯಷ್ಟು ಅಷ್ಟೇ. ಯಾರೋ ನಿಮ್ಮನ್ನ ಅರ್ಥಮಾಡಿಕೊಳ್ತಾರೆ, ಇನ್ನ್ಯಾರೋ ನಿಮಗೆ ಸಂಕಷ್ಟ ಅಂದಾಗ ಸಮಾಧಾನ ಮಾಡ್ತಾರೆ, ದುಃಖದ ಮಡುವಿನಲ್ಲಿ ಮುಳುಗಿದಾಗ ಸಾಂತ್ವನ ಹೇಳ್ತಾರೆ ಎನ್ನುವ ಹುಚ್ಚು ಆಲೋಚನೆಗಳನ್ನು ಕಿತ್ತೆಸೆದು ಗಟ್ಟಿತನ ತಂದುಕೊಳ್ಳಬೇಕಿದೆ. ನಾನು ಉದ್ದಾರ ಆದ್ರೆ ನನಗೆ ಎಲ್ಲ ಯಾರ ಉದ್ದಾರ ತಗೊಂಡು ನನಗೇನ್ ಆಗ್ಬೇಕು ಅನ್ನುವ ಕಾಲವಿದು.
ಏನಾದ್ರು ಮಾಡಬೇಕು ಅಂತ ಹೊಸ ಯೋಜನೆ ಹಾಕಿಕೊಳ್ಳುವಾಗ ಯಾರಾದರೂ ಅದನ್ನು ತಡೆಯುತ್ತಾರೆ ಅಥವಾ ಹಳಿತಪ್ಪಿಸುತ್ತಾರೆ. ನಿಮ್ಮ ಮುಂದಿನ ಯೋಜನೆಗಳ ಸಂಪೂರ್ಣ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಸದ್ದಿಲ್ಲದೆ ಅಂದುಕೊಂಡಿದ್ದನ್ನು ತಕ್ಕಮಟ್ಟಿಗೆಯಾದರು ಮಾಡಿಯೇ ತೀರುತ್ತೇನೆ ಎಂಬ ಛಲದೊಂದಿಗೆ ಮುನ್ನುಗ್ಗುಬೇಕು. ಯಾರು ನನ್ನನ್ನು ತೊರೆದರು, ಯಾರು ಏನೆನ್ನುವರು, ಸಮಾಜ ಹೇಗೆ ನನ್ನನ್ನು ನಡೆಸಿಕೊಳ್ಳುತ್ತದೆ ಎಂಬ ಅರ್ಥವಿಲ್ಲದ ಪ್ರಶ್ನೆಗಳನ್ನು ಒಳಗೊಳಗೇ ಕೇಳಿಕೊಂಡು ಕೊರಗುವ ಮೊದಲು ಇದು ನನ್ನ ಬದುಕು ನಿರ್ಧಾರ ನನ್ನದು.
ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬ ನಂಬಿಕೆ ಸಣ್ಣ ನಂಬಿಕೆ, ಯಾರಿಗೂ ಕೆಡುಕು ಬಯಸುತ್ತಿಲ್ಲ ಎಂಬ ಆತ್ಮ ತೃಪ್ತ ಇದ್ದದ್ದೆ ಆದರೆ ಅರ್ಧಕ್ಕರ್ದ ಬದುಕಿನಲ್ಲಿ ಉದ್ದಾರವಾದಂತೆ. ಇದ್ದಕ್ಕಿದ್ದಂತೆ ಬದುಕಿನಲ್ಲಿ ಏನೋ ಬದಲಾವಣೆ, ಇನ್ನೇನೋ ಹೊಸತು ನಮ್ಮ ಬೆನ್ನತ್ತಿ ಬರುವುದಿಲ್ಲ. ಬದಲಿಗೆ ನಾವೇ ಅವುಗಳ ಬೆನ್ನತ್ತಬೇಕು. ಬೆನ್ನು ಬಿದ್ದು ಶ್ರಮಿಸಬೇಕು. ಆಗಾಗ ಹಿರಿಯರು ಮನೆಯಲ್ಲಿ ಹೇಳುವ ಒಂದು ಮಾತು ನೆನಪಾಗುತ್ತಲೇ ಇರುತ್ತದೆ. ಅದೇನೆಂದರೆ “ಕೂತು ಉಂಡರೆ ಕುಡುಕೆ ಹೊನ್ನು ಸಾಲದು” ನಮ್ಮ ಬಳಿ ಏನೇ ಸಂಪತ್ತಿದ್ದರು ಅದನ್ನು ಕ್ಷಣಮಾತ್ರದಲ್ಲಿ ನಾವು ಖರ್ಚು ಮಾಡಬಹುದು. ಆದರೆ ಅದನ್ನು ರಕ್ಷಿಸಲು, ಕಾಪಾಡಿಕೊಂಡು ಹೋಗಲು ಬುದ್ದಿವಂತಿಕೆ ಮುಖ್ಯ. ನಮ್ಮ ಬಳಿ ಜ್ಞಾನ ಇದ್ದರೆ ಏನೂ ಇಲ್ಲದಿದ್ದರೂ ಸಹ ಇಲ್ಲದಿರುವುದನ್ನು ಗಳಿಸಬಹುದು, ಬೆಳೆಯಬಹುದು ಆದರೆ ಜ್ಞಾನವೇ ಇಲ್ಲವೆಂದ ಮೇಲೆ ಇದ್ದದ್ದು ಕಳೆದುಕೊಳ್ಳಬಹುದು. ನಾವು ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ತೋರಿದರೆ ನಮ್ಮನ್ನು ಅದೇ ಉದ್ದಾರದೆಡೆಗೆ ಕೊಂಡೊಯುತ್ತದೆ. ಅವರಿವರ ಕೊಂಕು ಮಾತುಗಳು, ಸಲ್ಲದ ಹರಟೆ, ಬೇಡದ ವಿಚಾರಗಳ ಕುರಿತು ಮಾತು, ಕೆಲಸಕ್ಕೆ ಬಾರದೆ ಇರುವಂತಹ ಆಲೋಚನೆಗಳು, ಯಾರು ಎಷ್ಟೇ ಸಾಧನೆ ಮಾಡಿದ್ದರು ಅದನ್ನು ನೋಡಿ ಸಂತಸ ಪಡದೆ ಹಗೆ ಸಾಧಿಸುವುದು ಇದೆಲ್ಲವೂ ಕೈಲಾಗದ ತಿಳಿಗೇಡಿಗಳು ಮಾತ್ರ ಮಾಡಲು ಸಾಧ್ಯ. ಹಾಗಾಗಿ ಇವೆಲ್ಲವುಗಳನ್ನು ಮೂಟೆ ಕಟ್ಟಿ ಎಸೆದು ನಾಳೆಗಳನ್ನು ಬೆಳಗಿಸಲು ಶ್ರಮಿಸಬೇಕು.
ನಮಗಾಗಿ ನಾಳೆಗಳ ಹೊಸ ಯೋಜನೆಯನ್ನು ಕಟ್ಟಬೇಕು. ಪ್ರತಿ ಬಾರಿ ಯಾರೋ ನನ್ನನ್ನು ಕೈಲಿಡಿದು ಎತ್ತುತ್ತಾರೆ, ಇನ್ನ್ಯಾರೋ ಕುಸಿದು ನಿಂತಾಗ, ಸೋತು ನಾಳೆಗಳ ಮೇಲೆ ಭರವಸೆ ಕಳೆದಕೊಂಡಾಗ, ಬದುಕಿನಲ್ಲಿ ಏನೂ ಇಲ್ಲ, ಏನೇನು ಇಲ್ಲವೆಂದು ಕೊಂಡಾಗ ಧೈರ್ಯ ಹೇಳಿ ನಮ್ಮನ್ನು ಮುನ್ನಡೆಸುತ್ತಾರೆ, ನಮ್ಮವರಿದ್ದಾರೆ ಎಂದು ಮೈ ಮರೆಯುವಂತಿಲ್ಲ. ಕಾಲ ಮೊದಲಿನಂತೆ ಇಲ್ಲ. ನಮ್ಮವರೆಂದರೆ ಸಾಕು ಅವರು ಬೆಳೀಬೇಕು, ಚೆನ್ನಾಗಿರಬೇಕು ಅಂತ ಬೆನ್ನಿಗೆ ನಿಂತು ಪ್ರೋತ್ಸಾಹಿಸುವ ಆ ಕಾಲ ಕಳೆದೆ ಹೋಯ್ತು.
ಒಂದೇ ಮನೆಯವರೇ ಈಗಿನ ಕಾಲದಲ್ಲಿ ನಮ್ಮವರೆಂದು ನಮ್ಮವರನ್ನೇ ಭಾವಿಸದಿರುವಾಗ ಇನ್ನು ನಮ್ಮ ಸುತ್ತಮುತ್ತಲಿರುವವರಿಂದ ಅದನ್ನು ನಿರೀಕ್ಷಿಸುವುದು ಅಸಾಧ್ಯ ಮಾತೆ ಸರಿ. ನಿಮ್ಮದಲ್ಲದ ಕಥೆಗೆ ನಿಮ್ಮನ್ನು ನಾಯಕ/ಕಿ ಯನ್ನಾಗಿಸುವ ಪರರ ಬುದ್ದಿವಂತಿಕೆಗೆ ಸಲಾಂ ಹೇಳಿ. ಕೈಲಾಗದ ಒಣಗೇಡಿಗಳು ಮಾತ್ರ ಅಂತಹ ತಿಳಿಗೇಡಿತನ ಮಾಡಲು ಸಾಧ್ಯ. ಅದಲ್ಲದ ಹೊರತಾಗಿ ಮೂರ್ಖರ ಕೈಲಿ ಇನ್ನೇನು ಮಾಡಲು ಸಾಧ್ಯ. ಒಂದು ಲೆಕ್ಕದಲ್ಲಿ ತಮ್ಮ ಕಥೆಯನ್ನ ತಾವೇ ಬೇರೆಯವರ ಮೇಲೆ ಎಣೆದು ಬರೆಯುವ ಒಣ ಸಾಹಾಸವೇ ಹೊರತು ಮತ್ತೇನಲ್ಲ. ತಲೆಗೂದಲು ಉದುರಿದ ಮಾತ್ರಕೆ ತಲೆಯೇ ಉದುರಿದಂತೆಂದು ಭಾವಿಸಬಾರದು. ಸತ್ತ ಜೀವಸತ್ವ ಉದುರಲೇಬೇಕಲ್ಲವೇ ಹಾಗಾಗಿ ಯಾರದೋ ಒಣ ಹರಟೆಯ ಯೋಚನೆಗಳು ನಿಮ್ಮ ತಲೆ ಹೊಕ್ಕದಿರಲಿ.
ಕೆಲವರು ನಿಮ್ಮ ಶ್ರೇಯಸ್ಸನ್ನು ಬಯಸುವವರಂತೆ ಮುಗ್ಧತೆ ತೋರುತ್ತಾರೆ. ಮತ್ತೆ ಕೆಲವರು ಏಕ್ದಂ ನಟಿಸುತ್ತಾರೆ. ಕೆಲವರಲ್ಲಿ ಉಳಿದವರು ಏನೂ ಅರಿಯದವರಂತೆ ಇರುತ್ತಾರೆ. ಎಲ್ಲರೂ ನಮ್ಮವರೇ ಎಂದುಕೊಳ್ಳಬೇಕು ಆದರೂ ಅವರು ನಮ್ಮವರಲ್ಲದವರು ಎನ್ನುವುದನ್ನು ಅರಿಯಬೇಕು. ಅವರೆಲ್ಲರೂ ಬದುಕಿನಲ್ಲಿ ಆರ್ಥಪೂರ್ಣವಾದ ಪಾಠ ಹೇಳಿಕೊಟ್ಟವರು ಎಂದು ಭಾವಿಸಬೇಕು. ಬಹುತೇಕರು ಬದುಕೆಂಬ ಕಥೆಯಲ್ಲದ ಕಥೆಯಲ್ಲಿ ಮುನ್ನುಡಿ ಬರೆಯುವುದಕ್ಕಾಗಲಿ ಒಟ್ಟು ಬದುಕಿಗೆ ಅರ್ಥ ಹೇಳುವ ಬೆನ್ನುಡಿಯನ್ನಾಗಲಿ ಬರೆಯುವವರಿಗಿಂತ ಹೆಚ್ಚಾಗಿ ನಿಮ್ಮ ಬದುಕಿಗೆ ತೆರೆ ಎಳೆಯುವ, ನಾಂದಿಯಾಡುವ ಕಥೆಯನ್ನೇ ಹೆಣೆದಿರುತ್ತಾರೆ.
ಸಮಯ ಮಾತ್ರ ನಿನ್ನ ನಿಜವಾದ ಬದುಕಿನ ಜೊತೆ ನಿಲ್ಲುವ ಮತ್ತು ನಿನ್ನನ್ನು ನಿಲ್ಲಿಸದೆ ನಡೆಸುವ ಬಂಧು. ಇನ್ನೂ ನನ್ನಿಂದ ಏನೇನೂ ಸಾಧ್ಯವಿಲ್ಲ ಎಂದು ಎಂದಿಗೂ ಕೈಕಟ್ಟಿ ಕೂರದಿರಿ. ಯಾಕೆ ಗೊತ್ತಾ? ಹೌದು ಅಲ್ಲೆಲ್ಲೋ ಸುಂದರವಾಗಿ ಹರಳಿದಂತಹ ಒಂದು ಹೂ ಹೀಗೆ ಯೋಚಿಸತ್ತೆ, ಏನೆಂದರೆ ನಾನು ಯಾವ ದೇವರ ಶಿರದ ಮೇಲೆ ನಗುತ್ತೇನೋ, ಯಾವ ಮನೆಯ ಬಾಗಿಲಲಿ ನಳನಳಿಸುತ್ತೇನೋ, ಅದ್ಯಾವ ಜೋಡಿಗೆ ಕೊರಳ ಮಾಲೆಯಾಗುತ್ತೇನೋ, ಯಾವ ನರಿಯ ಕೇಶರಾಶಿಯಲಿ ನಲಿಯುತ್ತೇನೋ, ಅದ್ಯಾವ ಪರಿಸೆಯ ತೇರೇರಿ ತೂಗುತ್ತೇನೋ, ಅದ್ಯಾರ ಕಳೇಬರಕೆ ಹಾರವಾಗಿ ಸ್ವರ್ಗ ಸೇರುತ್ತೇನೋ ಇದ್ಯಾವುದಾದರೂ ಒಂದು ಆಗದಿದ್ದರೂ ನನ್ನ ಹುಟ್ಟಿಗೆ ಅರ್ಥವೇನು ಎಂಬುದಾಗಿ ನಗುವ ಹೂ ವೊಂದು ಹೆಚ್ಚೆಂದರೆ ಮೂರು ದಿನ ಬದುಕಬಹುದು ಅಂತಹ ಹೂ ತನ್ನ ಹುಟ್ಟಿಗೆ ಅರ್ಥ ಹುಡುಕುವುದಾದರೆ ಅದಕ್ಕಿಂತ ಹೆಚ್ಚುಕಾಲ ಬದುಕುವ ಮನುಷ್ಯನ್ಯಾಕೆ ನಾನು ಏನನ್ನಾದರೂ ಸಾಧಿಸಬಾರದೆಂಬ ಛಲ ಹೊಂದಬಾರದು.
ಅರೆ! ಖಂಡಿತ ಅಂತಹ ಎದೆಗಾರಿಕೆ ಬೆಳೆಸಿಕೊಳ್ಳಲೇಬೇಕು. ಏಕೆಂದರೆ ಏನಾದರೂ ಆಗಲೇಬೇಕು, ಆತ್ಮತೃಪ್ತಿಯಾಗುವಂತೆ ಬದುಕಬೇಕು. ಇಲ್ಲಿ ಯಾರು ಯಾರನ್ನು ಬಲ್ಲರು. ನಿಮ್ಮಲ್ಲಿರುವ ಶಕ್ತಿಯನ್ನು, ಬಲವನ್ನು ನೀವೇ ಕಂಡುಕೊಳ್ಳಬೇಕು. ಆಗಾಗ ಒಂದು ಮಾತು ನೆನಪಾಗುತ್ತಲೇ ಇರುತ್ತದೆ ಏನೆಂದರೆ “ಕರಿಚ ಸಿಂಹಸ್ಯ ಬಲಂ ನ ಮೂಷಿಕ” ಇದರರ್ಥ ಸಿಂಹದ ಶಕ್ತಿಯನ್ನು ಗೌರವಿಸುವುದು ಇಲಿಯಲ್ಲ, ಆನೆ. ಎಂಬುದಾಗಿ ಹಾಗಾಗಿ ನಿಮ್ಮ ಶಕ್ತಿಯನ್ನು ನೀವು ಗೊತ್ತುಪಡಿಸಲು ಕಿರುಚಬೇಕಿಲ್ಲ, ಆರ್ಭಟಿಸಬೇಕಿಲ್ಲ ಸಮಯ ಬಂದಾಗ ಆದಾಗದೆ ತಿಳಿಯುತ್ತದೆ. ನೀವು ನಿಮ್ಮ ಮುಂದಿನ ಕೆಲಸ ಮಾಡಬೇಕಷ್ಟೆ. ಯಾರೂ ನಿಮಗೆ ಏಕಾಏಕಿ ರಾಜನ ಸ್ಥಾನವನ್ನು ನೀಡುವುದಿಲ್ಲ, ಬದಲಿಗೆ ನಿಮ್ಮ ಶಕ್ತಿ ಎದುರಿರುವವರಿಗೆ ತಿಳಿದಾಗ ಅವರೇ ನಿಮ್ಮ ಸ್ಥಾನ ನಿರ್ಧಾರಿಸುತ್ತಾರೆ. ಅದು ನಿಮ್ಮ ಕೈಯಲ್ಲೇ ಇರುತ್ತದೆ. “ಉದ್ದಾರೇದಾತ್ಮನಾತ್ಮನಮ್” ಎಂದರೆ ನಿಮ್ಮನ್ನು ನೀವೇ ಮೇಲಕ್ಕೆತ್ತಿಕೊಳ್ಳಿ ಎಂದರ್ಥ.
ಯಾರೋ ನಿಮ್ಮ ಬದುಕನ್ನು ಸುಪ್ರಸಿದ್ದ ನಾಟಕಕಾರ ಜಾದೂ ಮಾಡಿದಂತೆ ನಿಮ್ಮ ಬದುಕನ್ನು ಜಾದೂಗೊಳಿಸುವುದಿಲ್ಲ, ಬದಲಿಗೆ ನಿಮ್ಮ ಬದುಕನ್ನು ತಿದ್ದಿ, ತೀಡಿ ಸುಂದರಗೊಳಿಸಿಕೊಳ್ಳುವ ಅವಕಾಶವನ್ನು ನೀವೇ ಸೃಷ್ಟಿಸಿಕೊಳ್ಳಬೇಕು. ನಮ್ಮ ಉದ್ದಾರ(ಏಳಿಗೆ)ನಮ್ಮ ಕೈಯಲ್ಲೇ ಇದೆ ಎಂಬುದನ್ನರಿತು ಯಾರ ಮೇಲು ಅವಲಂಬಿತವಾಗದೆ ನಡೆಯಬೇಕಿದೆ. ನೀವೂ ನಡೆಯುವಿರಿ, ನೀವೂ ಗೆಲ್ಲುವಿರಿ, ನಿಮ್ಮೊಂದಿಗೆ ನೀವೇ ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದೆ ಸಾಗಿ ಒಳಿತಾಗಲಿ, ನಿಮ್ಮ ಬದುಕು ಏಳಿಗೆ ಕಾಣಲಿ.
ಡಾ ಮೇಘನ ಜಿ
ಉಪನ್ಯಾಸಕರು