ಬೆಳಗಾವಿ ಜಿಲ್ಲಾ ಕಸಾಪ ವತಿಯಿಂದ ತಿಂಗಳ ಉಪನ್ಯಾಸ ಕಾರ್ಯಕ್ರಮ
ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಅತ್ಯಂತ ಆಸಕ್ತಿಯಿಂದ ಸೇವೆ ಮಾಡಿದ ಶಾಂತಾದೇವಿ ಮಾಳವಾಡರ ಬದುಕು ನಿಜಕ್ಕೂ ಮಾದರಿಯಾದದು. ಕೇಂದ್ರ,ರಾಜ್ಯ ಸೇರಿದಂತೆ ವಿವಿಧ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಲೇಖಕಿಯರ ಸಂಘದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷರಾಗಿ ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ವೀರ ವನಿತೆಯರ ಮತ್ತು ಶರಣ ಶರಣೆಯರ ಕುರಿತಾದ ಕಥಾ ಮಾಲಿಕೆಯ ಮಕ್ಕಳ ಪುಸ್ತಕಗಳು ಪ್ರಸ್ತುತ ಸಮಾಜಕ್ಕೆ ಮಕ್ಕಳಿಗೆ ಇತಿಹಾಸ ಅರಿಯಲು ಸಹಾಯಕವಾಗಿವೆ. ಅವರು ಬರೆದಂತೆ, ನುಡಿದಂತೆ, ನಡೆದು ಮಹಾ ತಪಸ್ವಿಯ ಹಾಗೆ ಜೀವನ ಸಾಗಿಸಿದರು ಎಂದು ಸಾಹಿತಿಗಳು ಮತ್ತು ಗೋಕಾಕ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಭಾವಿಯವರು ಹೇಳಿದರು.
ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಶತಮಾನ ಕಂಡ ಸಾಹಿತಿಗಳು ಸರಣಿ ಮಾಲಿಕೆಯ ತಿಂಗಳ ಕಾರ್ಯಕ್ರಮದಲ್ಲಿ “ದಿ. ಶಾಂತಾದೇವಿ ಮಾಳವಾಡ ಅವರ ಬದುಕು ಬರಹ’ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಳವಾಡರ ಜೀವನ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ. ಸಾ.ಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ ಶತಮಾನ ಕಂಡ ಸಾಹಿತಿಗಳು ಕಾರ್ಯಕ್ರಮ ನಿಜಕ್ಕೂ ಮರೆತು ಹೋದ ಮಹಾನುಭಾವರನ್ನು ನೆನಪಿಸುವ ವಿಶೇಷ ಕಾರ್ಯಕ್ರಮವಾಗಿದೆ.ಇಂತಹ ಕಾರ್ಯಕ್ರಮಗಳು ರಾಜ್ಯದಲ್ಲೆಡೆ ಸಾಗಲಿ ಮುಂಬರುವ ಪೀಳಿಗೆಗೆ ಹಿಂದಿನವರ ಜೀವನ ಮಾರ್ಗದರ್ಶಿಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮರ ಕವನ ಗಾಯನ ಕಾರ್ಯಕ್ರಮ ಶಿವಲೀಲಾ ಪಾಟೀಲ, ಅನ್ನಪೂರ್ಣ ಕುರಬೆಟ, ಪ್ರತಿಭಾ ಕಳ್ಳಿ ಮಠ, ರುದ್ರಮ್ಮ ಯಾಳಗಿ, ರಾಜಶ್ರೀ ಬಿರಾದಾರ ಮತ್ತು ಭುವನಾ ಹಿರೇಮಠ ನಡೆಸಿಕೊಟ್ಟರು.
ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮೋಹನ ಪಾಟೀಲ, ರಮೇಶ ಬಾಗೇವಾಡಿ, ಡಿ.ಎಸ್ ದೊಡ್ಡಭಂಗಿ ಶಿವಾನಂದ ನಾಯಕ ಶಿವಾನಂದ ತಲ್ಲೂರ, ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಸುನಿಲ ಹಲವಾಯಿ ಸ್ವಾಗತಿಸಿದರು. ಎಂ. ವೈ.ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಾವತಿ ಸೋನೊಳ್ಳಿ ನಿರೂಪಿಸಿದರು. ವೀರಭದ್ರ ಅಂಗಡಿ ವಂದಿಸಿದರು.