“ಲೂಸಿ ಸಾಲ್ಡಾನಾ ಗುರುಮಾತೆಯ ಬದುಕು ಬರಹ”-ಸ್ತ್ರೀ ಕುಲದ ಹೆಮ್ಮೆ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

“ಲೂಸಿಸಾಲ್ಡಾನಾ ಗುರುಮಾತೆಯ ಬದುಕುಬರಹ” ಇದು ಶ್ರೀ ವೈ.ಬಿ.ಕಡಕೋಳ ಅವರ ಸಂಪಾದಿತ ಕೃತಿ. ಕತೆಯಲ್ಲ ಜೀವನ, ಅಮೃತಧಾರೆ, ಒಂಟಿ ಪಯಣ, ಮನೆಮದ್ದು, ಅಡಿಗೆ ವೈವಿಧ್ಯ ಈ ಐದು ಕೃತಿಗಳನ್ನು ಒಂದಡೆ ಸುಂದರವಾಗಿ ಸಂಕಲಿಸಿದ್ದಾರೆ. ಇದು 2021ರಲ್ಲಿ ಎಸ್.ಎಲ್.ಎನ್. ಪಬ್ಲಿಕೇಷನ್ ಬೆಂಗಳೂರಿನಿಂದ ಪ್ರಕಟವಾಗಿದೆ. 700 ಪುಟದ ಹರವು ಪಡೆದಿದೆ.

ಕಡಕೋಳ ಅವರು ಕ್ರೀಯಾಶೀಲ ಶಿಕ್ಷಕರು. ಸಾಹಿತ್ಯವನ್ನು ಹವ್ಯಾಸವಾಗಿ ಆರಾಧಿಸುತ್ತ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಚಾಪುಮೂಡಿಸಲು ಸದಾಪ್ರಯತ್ನಿಸುತ್ತಿರುವ ಪ್ರಯ್ನಶೀಲ ಶಿಕ್ಷಕರು. ಕಾಯಕ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಆಗದೆ ಇರುವ ಈ ಕೆಟ್ಟ ಕಾಲದಲ್ಲಿ ಕಡಕೋಳ ಅವರು ಲೂಸಿ ಸಾಲ್ಡಾನಾ ಗುರುಮಾತೆಯವರ ಬದುಕು-ಬರಹ ಸಂಪಾದಿಸಿ ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನಕ್ಕೆ ಸಾವಿರಸಲಾಮ ಅಭಿಮಾನದಿಂದ ಅರ್ಪಿಸುವೆ ಹೃದಯಾಳದಿಂದ.

‘ಕಥೆಯಲ್ಲ್ಲ ಜೀವನ’ದ ಕಥಾನಾಯಕಿ ಲೂಸಿ ಸಾಲ್ಡಾನಾ ಗುರುಮಾತೆಯವರು. ಇವರು 4/6/1948 ರಂದು ಕಾಶ್ಮೀರ ಸಾಲ್ಡಾನಾ ಹಾಗೂ ಜೂಲಿಯಾನರ ಮಗಳಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ, ಬೈಲೂರಿನಲ್ಲಿ ಜನಿಸಿದರು. ಇವರು ಕ್ರಿಶ್ಚಿಯನ್ ಸಮುದಾಯದವರು ತಂದೆ-ತಾಯಿಗೆ ಹುಟ್ಟಿದ ಹತ್ತುಜನ ಮಕ್ಕಳಲ್ಲಿ ಇವರು ಏಳನೆಯವರು. ಇವರ ತಂದೆ ಶಾಲೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದವರು. ಬಡತನ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರ ತಾಯಿ ಶಾಲೆಯಲ್ಲಿ ಮಕ್ಕಳಿಗೆ ಹಾಡು ಕಥೆ ಹೇಳಿಕೊಡುತ್ತಿದ್ದರಂತೆ. ಈ ಸಂಸ್ಕಾರ ಈ ಕಥಾನಾಯಕಿ ಮೇಲೆ ಸಹಜವಾಗಿ ಆಗಿದೆ.

- Advertisement -

ಇವರು ಮೂರನೆಯ ತರಗತಿ ಪರೀಕ್ಷೆ ನಂತರ ರಜೆಯಲ್ಲಿ ಇವರ ತಂದೆ ಇವರನ್ನು ಮುಂಬೈಗೆ ಕರೆದುಕೊಂಡು ಹೋಗಲು ಅಣಿಯಾಗುತ್ತಾರೆ. ಅಲ್ಲಿ ಇವರ ಅಕ್ಕ ಇರುವದರಿಂದ. ತಮ್ಮ ಊರಿನಿಂದ ಕಡೂರಿನವರಗೆ ಬಸ್ಸಿನಲ್ಲಿ ಬರುವರು. ಕಡೂರಿನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುವರು. ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಾಗ ಮಧ್ಯಾಹ್ನವಾಗಿರುತ್ತದೆ. ಇವರಿಗೆ ನೀರಡಿಕೆಯಾಗಿರುತ್ತದೆ.

ತಂದೆ ನಿದ್ರೆಗೆ ಜಾರಿರುತ್ತಾರೆ. ತಂದೆಯನ್ನು ಎಚ್ಚರಿಸದೆ ನೀರು ಕುಡಿಯಲು ನಲ್ಲಿಯತ್ತ ದಾವಿಸಿ ನೀರುಕುಡಿದು ಬರುವಷ್ಟರಲ್ಲಿ ರೈಲು ಹೊರಟಿರುತ್ತದೆ. ಇವರಿದ್ದ ಬೋಗಿಗೂ ನೀರಿನ ನಲ್ಲಿಗೂ ಅಂತರ ಬಹಳ ಇರುತ್ತದೆ ಓಡಿ ಹೋಗುವದರಲ್ಲಿ ರೈಲು ಬಹುದೂರ ಚಲಿಸಿರುವದು. ಈ ಬಾಲ ಹೆಣ್ಣು ಮಗು ಅಳುತ್ತ ಹುಬ್ಬಳ್ಳಿ ರೈಲು ನಿಲ್ದಾಣದ ಒಂದು ಮೂಲೆಯಲ್ಲಿ ಕುಳಿತಿರುತ್ತದೆ. ಮನೆಯ ಭಾಷೆ ಕೊಂಕಣಿ, ಅಲ್ಪಸ್ವಲ್ಪ ಹಿಂದಿ ಬರುತ್ತದೆ. ಕನ್ನಡ ಭಾಷೆ ಬರುವದಿಲ್ಲ.

ಈ ಮಗು ಗಮನಿಸಿದ ರೈಲು ಸಿಬ್ಬಂದಿಗಳಾದ ವೈ.ಎಂ.ಸದ್ಲಾಪುರ, ಬಿ.ಸಿ.ಚಕ್ರವರ್ತಿ. ಎಂ.ಎಂ.ಮಡುವಾಳ ಈ ಮೂವರು ಅಮರಗೊಳಿನ ರೇಲ್ವೆ ಕಾಟರ್ಸ್‍ಗೆ ಕರೆದುಕೊಂಡು ಹೋಗುವರು. ನಂತರ ಸ್ಟೇಶನ್ ಮಾಸ್ತರ ಮನೆಯಲ್ಲಿ ಕೆಲಸಕ್ಕೆ ಇಡುವರು. ಅಲ್ಲಿ ಈ ಮಗು ಕಷ್ಟಗಳನ್ನು ಸಹಿಸುತ್ತ ಸ್ವಲ್ಪ ದಿನ ಕಾಲ ಕಳೆಯುವದು. ಇವಳ ಕಷ್ಟ ಅರಿತ ಮಹಾದೇವ ಎಂಬ ವ್ಯಕ್ತಿ ಇವಳನ್ನು ತಂದು ತಮ್ಮ ಮನೆಯಲ್ಲಿ ಇಟ್ಟು ಜೋಪಾನ ಮಾಡುತ್ತಾರೆ.

ಮುಂದೆ ಈ ವ್ಯಕ್ತಿ ಮದುವೆಯಾಗಲು ಕನ್ಯ ಹುಡುಕಲು ಆರಂಭಿಸುತ್ತಾರೆ ಮನೆಯವರ ಒತ್ತಾಯಕ್ಕೆ. ಆಗ ‘ಲೂಸಿ’ ಅವರ ಮುಂದಿನ ಬಾಳ ಭವಿಷ್ಯ ಗಮನಿಸಿ ಇವರನ್ನೆ ಮದುವೆ ಆಗುತ್ತಾರೆ. ಹುಡುಗಿ ಕ್ರಿಶ್ಚಿಯನ್ ಧರ್ಮದವಳು. ಹುಡುಗ ಲಿಂಗಾಯತ ಧರ್ಮದವನು ಮದುವೆ ನಡೆದು ಸಂಸಾರ ಆರಂಭವಾಗುವದು ಸಣ್ಣ ವಯಸ್ಸಿನಲ್ಲಿ. ಈ ಮಗು ಮೊದಲಿನಿಂದಲೂ ‘ಮಹಾದೇವನಿಗೆ’ ಮಾಮಾ ಎಂದೆ ಕರೆಯುತ್ತಿರುತ್ತದೆ. ಆದರೆ ಮದುವೆ, ಸಂಸಾರ ಎಂಬ ಕಲ್ಪನೆಮಾತ್ರ ಇರುವದಿಲ್ಲ. ಇರುವ ವಯಸ್ಸು ಅವಳದಲ್ಲ.

ಮುಂದೆ ಗಂಡನಿಗೆ ಒಡತಿಯಾಗಿ ನಾಲ್ಕು ಐದು ವರ್ಷ ಸಂಸಾರ ಸುಂದರವಾಗಿ ಸಾಗಿರುವಾಗಲೆ ಗಂಡ ಮಹಾದೇವ ಕೈಲಾಸವಾಸಿಯಾಗುವನು. ಇದೆಲ್ಲ ‘ಲೂಸಿಸಾಲ್ಡಾನಾ’ ಹದಿಮೂರರ ಪ್ರಾಯದಲ್ಲಿ ಇರುವಾಗ ಶÉರವೇಗದಲ್ಲಿ ನಡೆದು ಹೋಗುವ ಘಟನೆಗಳು. ಸೀನಿ ಮಾದರಿಯಲ್ಲಿ ನಡೆಯುತ್ತವೆ. ಉಂಡು ಆಡಿ ಶಾಲೆ ಕಲಿಯುವ ಸಂದರ್ಭದಲ್ಲಿ ಈ ಮಗು ಬದುಕಿನ ಜವಾಬ್ದಾರಿಗಳನ್ನೆಲ್ಲ ಮುಗಿಸಿ ಅಪರಾಧಿಯಂತೆ ನಿಂತಿರುವದು ಕರುಳು ಹಿಂಡುವ ಸಂದರ್ಭವೆನಿಸಿದೆ. ಗಂಡ ಮಹಾದೇವ ತೀರಿದಾಗ ಆಗಿನ ಪ್ರಜ್ಞಾವಂತ ಹಿರಿಯರು ನೇಮದಂತೆ ಮುತ್ತೈದತನದ ಪವಿತ್ರ ಆಭರಣಗಳನ್ನು ಕಳಚದೆ ಸಣ್ಣ ಮಗುವೆಂದು ಹಾಗೆ ಬಿಟ್ಟು.

ಅವಳ ಹುಟ್ಟಿದ ಊರಿಗೆ ಕಳಿಸುವರು. ತಾಳಿ ಕಳೆದ ಮೇಲೆ ತವರಿಗೆ ಬಂದಂತೆ! ತವರಿಗೆ ಬರುವರು ಲೂಸಿ ಸಾಲ್ಡಾನಾ. ತಂದೆ-ತಾಯಿಗಳು ತಮ್ಮ ಧರ್ಮದಲ್ಲಿ ಮತ್ತೊಂದು ಮದುವೆ ಮಾಡುವ ಸದಾಶಯ ವ್ಯಕ್ತಪಡಿಸಿದರೂ ಅದನ್ನು ದಿಕ್ಕರಿಸಿ ಮರಳಿ ಮಣ್ಣಿಗೆ ಎಂಬಂತೆ ಮತ್ತೆ ಹುಬ್ಬಳ್ಳಿಗೆ ಪಯಣಿಸಿ ಗಂಡನ ಅಣ್ಣ ಆಶೆಯದಂತೆ ಹುಬ್ಬಳ್ಳಿಯಲ್ಲಿ ಕಲಿಕೆ ಆರಂಭಿಸಿ ಎಂ.ಎ.ದವರಿಗೆ ಓದಿ. ನಂತರ 1977 ರಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ಆರಂಭಿಸಿ ಸಾರ್ಥಕ ಸೇವೆ ಮಾಡುವರು. ಕಲಿಯುವಾಗ, ವೃತ್ತಿ ಜೀವನದ ಆರಂಭದಲ್ಲಿ ದೊಡ್ಡ ನೌಕರಿಯ ವರಗಳು ಬರುತ್ತವೆ.

ತವರು ಮನೆಯವರ ಬಂಧು ಬಳಗದವರು ಎಷ್ಟೇ ಒತ್ತಾಯ ಮಾಡಿದರೂ ಮರುಮದುವೆಗೆ ಒಪ್ಪದ ದೃಢ ನಿರ್ಧಾರದ ಗಟ್ಟಿ, ದಿಟ್ಟ ಮಹಿಳೆ ಇವರು. ಒಂಟಿ ಪಯಣದಲ್ಲಿ ಅನೇಕ ಪ್ರಸಂಗಗಳು ಇವರನ್ನು ಅಶಾಂತಿಗೆ ನೂಕಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ಬಂದರೂ ಅವುಗಳನ್ನು ಸಮರ್ಥವಾಗಿ ನಿಬಾಯಿಸಿ. ಸುಂದರ ಬಾಳು ಶಾಲೆಯ ಮಕ್ಕಳ ಜೊತೆ ಕಳೆದವರು ಲೂಸಿ ಸಾಲ್ಡಾನಾ ಗುರುಮಾತೆ. ಇದು ಸಂವೇದನೆಯ ಹೆಮ್ಮೆ.

ಇವರ ಬದುಕಿನ ಚಿತ್ತಾರಗಳನ್ನು ಗಮನಿಸಿದಾಗ ನನಗೆ ಜನಪದ ಸಾಹಿತ್ಯದಲ್ಲಿ ಬರುವ ‘ಕೆರೆಗೆಹಾರ’ ಕಥೆಯ ಭಾಗೀರಥಿ ಪಾತ್ರ ಕಣ್ಮುಂದೆ ಕುಣಿದಾಡಿದಂತಾಗುತ್ತದೆ. ಆ ಮಹಾತಾಯಿ ಗಂಡ ಮಹಾದೇವರಾರ, ಈ ಮಹಾತಾಯಿ ಗಂಡ ಮಹಾದೇವ. ಭಾಗೀರತಿ ಸಮಾಜದ ಬೇಡಿಕೆಗೆ ತನ್ನ ಬದುಕು ಮೀಸಲು ಇಟ್ಟು ಆಹುತಿ ಆಗುವಳು ಜನರಿಗೆ ಬೇಕಾದ ಗಂಗೆಗಾಗಿ. ಈ ಆಧುನಿಕ ಭಾಗೀರತಿ ತನ್ನ ನೀರಡಿಕೆಗಾಗಿ ತಪ್ಪಿಸಿಕೊಂಡು ತಪ್ಪುದಂಡ ಸುಮ್ಮನೆ ಕಟ್ಟಿ ಸಮಾಜದ ಎಲ್ಲ ಮಕ್ಕಳ ತಾಯಿಯಾಗಿರುವದು. ಒಂದಕ್ಕೊಂದು ಸಾಮ್ಯವಿದೆ ಎನಿಸುತ್ತದೆ.

ಬದುಕಿನಲ್ಲಿ ಒಮ್ಮೆ ಬರುವ ಮದುವೆ ಸಾಕು. ಎರಡನೆಯದು ಬೇಡವೆಂದು ಅಕ್ಕಮಹಾದೇವಿಯ ಹಾದಿ ಹಿಡಿದು ‘ಶಿಕ್ಷಕ’ ವೃತ್ತಿಯ ಪಾವಿತ್ರ್ಯ ಪಾವನಗೊಳಿಸಿ ಎರಡೂ ಧರ್ಮದ ಕೀರ್ತಿಗೆ ಬಂಗಾರ ಸಂಸ್ಕøತಿ ಇವರ ಆತ್ಮದ ಅಂದವಾಗಿ; ಅದು ಮುಂದೆ ಸಮಾಜದಲ್ಲಿ ಚೆಂದವಾಗಿ ಶಾಲೆಯಲ್ಲಿ ಪಾರಿಜಾತದ ಹೂವಾಗಿ ಅರಳಿ ಎಲ್ಲ ಮಕ್ಕಳಿಗೆ ಬೇಕಾಗಿ ಜ್ಞಾನದ ಸುಗಂಧ ನೀಡಿ ಸದಾ ಆರೋಗ್ಯವಂತ ಸುವಾಸನೆ ನೀಡಿರುವದು ಅಂದವೆನಿಸಿದೆ.

ಅಂದಕಾರ ಹೊರಹಾಕುವ ಬ್ರಹ್ಮಾಸ್ತ್ರವಾಗಿ ಪ್ರಯೋಗವಾಗಿ ನೆಲಮೂಲ ಸಂಸ್ಕೃತಿಗೆ ಬೆಲೆ ತಂದಿದೆ. ಬೈಲೂರ, ಹುಬ್ಬಳ್ಳಿ ಪರಿಸರದ ಜೊತೆಗೆ ಮಲೆನಾಡಿನ ಸೆರಗು, ವಿದ್ಯಯ ಕಾಶಿ ಧಾರವಾಡ ಪುಣ್ಯ ನೆಲಕ್ಕೂ ವಜ್ರದ ಹರಳು ಈ ಗುರುಮಾತೆ ಸಾಲ್ಡಾನಾ ಅವರು. ಸಾಲುಮರದ ತಿಮ್ಮಕ್ಕ ಮರಗಳನ್ನು ಮಕ್ಕಳಂತೆ ಪೋಷಿಸಿ; ಮಕ್ಕಳಿಲ್ಲವೆಂಬ ಕೊರಗನ್ನು ಕಳೆದುಕೊಂಡು ನಾಡಿಗೆ ತಾಯಿಯಾದರು.

ಈ ಗುರುಮಾತೆ ಪತಿಯನ್ನು ಸಾವಿಲ್ಲದ ಕೇಡಿಲ್ಲದ ಭಾವ ಭಕ್ತಿಯಲ್ಲಿ ಆರಾಧಿಸಿ; ಮಕ್ಕಳಿಲ್ಲದಿದ್ದರೂ ಕಲಿಸುವ ಶಾಲೆಯ ಮಕ್ಕಳನ್ನು ತನ್ನ ಮಕ್ಕಳೆಂದು ಸಮತೂಕದ ನೆಲೆಯಲ್ಲಿ ಬದುಕು ಸವಿಸಿ ‘ಶಿಕ್ಷಕ’ ಪವಿತ್ರ ಕಾಯಕಕ್ಕೆ ಕೈಲಾಸದ ಕಲ್ಪನೆ ತಂದವರು ಯಾವ ಒಣ ಆಡಂಬರವಿಲ್ಲದೆ. ಮಾದರಿ ಅಲ್ಲವೆ ಈ ಗುರುಮಾತೆ ನಮ್ಮ ಶಿಕ್ಷಣ ವ್ಯವಸ್ಥೆಗೆ? ಆದರೆ ಸರಕಾರದ ಹಳದಿ ಕಣ್ಣಿಗೆ ಇವರು ಕಂಡಿಲ್ಲ. ಯಾಕೆಂದರೆ ಇವರು ಪ್ರಚಾರ ಪ್ರೀಯ ಬಿಸುಲು ಗುದುರೆ ಏರಿದವರಲ್ಲ.

ಸರಕಾರದ ಪ್ರಶಸ್ತಿಗಿಂತಲೂ ಸಮಾಜದ, ಮಕ್ಕಳ ಹೃದಯಾಳದ ದೊಡ್ಡ ಪ್ರಶಸ್ತಿ ಸಿಕ್ಕಿರುವಾಗ; ಸರಕಾರದ ಪ್ರಶಸ್ತಿ ಆಶೆ ಇವರಿಗೆ ಎಲ್ಲಿಂದ ಬರಬೇಕು!. ಸುಡುವ ಒಡಲನು ತಣಿಸಿ ಶಿಕ್ಷಣದ ಸಿರಿ ಸದ್ದಿಲ್ಲದೆ ಮಕ್ಕಳ ಹೃದಯ ಮುಡಿಗೆ ಮುಡಿಸಿ ಬಂಗಾರದ ಬಾಳು ಮಕ್ಕಳಿಗೆ ನೀಡಿದವರು ಈ ಗುರುಮಾತೆ. ಇದು ಕತೆಯಲ್ಲಿ ಜೀವನ ಭಾಗ ಓದಿ ಪ್ರಭಾವಿತನಾಗಿ ನನ್ನ ಶಕ್ತಿಗೆ ಅನುಸಾರ ತಿಳಿದ ಹೊಳೆದ ವಿಚಾರಗಳನ್ನು ಇಲ್ಲಿ ದಾಖಲಿಸಿರುವೆ.

ಭಾಗ ಎರಡು ‘ಅಮೃತಧಾರೆ’ ಯಲ್ಲಿ ಲೂಸಿ ಸಾಲ್ಡಾನಾ ಅವರು ಸಂಗ್ರಹಿಸಿದ ನೂರಾರು ನುಡಿ ಮುತ್ತುಗಳು ಅಳವಟ್ಟಿವೆ. ಅವುಗಳಲ್ಲಿ ಉದಾಹರಣೆಗೆ ಕೆಲವನ್ನು ಗಮನಿಸಬಹುದು: ‘ಸಮಾಜ ಸೇವೆ ಎಂದರೆ ಸಂಪತ್ತನ್ನು ಹಂಚಿಕೊಳ್ಳುವದಲ್ಲ, ಕಷ್ಟವನ್ನು ಹಂಚಿಕೊಳ್ಳುವುದು’. ‘ಯಶಸ್ಸಿನ ಗುಟ್ಟು ಅಡಗಿರುವುದು ಪ್ರಯತ್ನ ಎಂಬ ಮೂರು ಅಕ್ಷರಗಳಲ್ಲಿ ಮಾತ್ರ’. ಹೀಗೆ ಅನುಭವ ತುಂಬಿದ ಅಮೃಧಾರೆ ಇಲ್ಲಿ ಹದವರಿತು ಹರಡಿದೆ ಚಂದದಿಂದ.

ಭಾಗ ಮೂರು ‘ಒಂಟಿಪಯಣ’ ಇದು ಇವರು ರಚಿಸಿದ ಕವನ ಸಂಕಲನ. ಇಲ್ಲಿ ಐವತ್ತು ಕವಿತೆಗಳು ಸುಂದರವಾಗಿ ಅನಾವರಣಗೊಂಡಿವೆ. ಈ ಸಂಕಲನದ ಮೂರನೆಯ ಕವಿತೆ ‘ಮದುವೆಯ ಬಂಧನ’ದ ಅಂದ ಹೀಗಿದೆ:

ಮದುವೆಯ ಬಂಧನಕೆ ಅವಳನು ಸಿಲುಕಿಸಿದರು
ಸ್ನೇಹಿತರ ಮಧ್ಯದಿ ತಾಳಿಯ ಕಟ್ಟಿದರು.
ಪತಿಯ ಭಾವನೆಯ ಅವಳು ತಾಳಲೇ ಇಲ್ಲ
ಸತಿಯೆಂಬ ಅಧಿಕಾರ ಅವರು ಚಲಾಯಿಸಲೇ ಇಲ್ಲ”

ಸಣ್ಣ ವಯಸ್ಸಿನಲ್ಲಿ ಸಂಸಾರ ಭಾರ ಹೊರಿಸಿದಾಗ ಆಗುವ ಅವಗಡಗಳಿಗೆ ಲೂಸಿಯಾ ಅವರು ಪ್ರತ್ಯಕ್ಷ ಸಾಕ್ಷಿಯಾಗಿ ನಿಲ್ಲುತ್ತಾರೆ. ಮುಗ್ದ ಮನಸ್ಸನ್ನು ಮದುವೆಗೆ ಸಿಲುಕಿಸುವ ಭಾವ ಅಮಾನವಿಯ ನೆಲೆಯದು. ಮನೆಯವರ ವಿರೋಧದ ನಡುವೆ ಸ್ನೇಹಿತರ ಸಹಾಯದಿಂದ ಮದುವೆಯಾದ ಸಂದರ್ಭ ಇಬ್ಬರಿಗೂ ಬಿಸಿತುಪ್ಪವಾದರೂ ಅನಿವಾರ್ಯವಾಗಿತ್ತು ಆ ಸಂದರ್ಭದಲ್ಲಿ. ಗಂಡನೆಂಬ ಭಾವನೆ ಆಗ ಅವಳಿಗಿಲ್ಲ. ಹೆಂಡತಿ ಎಂದು ಅಧಿಕಾರ ಚಲಾಯಿಸದೆ ಪ್ರೀತಿಯಿಂದ ಗಂಡ ಮಹಾದೇವ ಕಂಡ ಆ ನೆನಪು ಇಲ್ಲಿ ಕೆನೆಕಟ್ಟಿ ನಿಂತಿದೆ. ಪತಿರಾಯ ಮರಣದತ್ತ ಮುಖಮಾಡಿದ ಸಂದರ್ಭ ಹೀಗೆ ಅರಳಿದೆ:

ವಿಶಾಲ ಹೃದಯದ ಉದಾರ ಮನಸಿನ
ಹೃದಯವಂತಿಕೆಯ ಮಹಾದೇವನು
ಭುವಿಯ ಋಣವ ಕಡಿದೊಗೆದು
ಸಾಗಿದನು ಆ ಭಗವಂತನ ಪಾದಾರವಿಂದದೊಳು”

ಹೃದಯ ವೈಶಾಲ್ಯದ ಪತಿರಾಯ ಬಹಳದಿನ ಜೊತೆ ಇರದೆ ಭೂಮಿಋಣ ಕಡಿದುಕೊಂಡು ಭಗವಂತನ ಪಾದಾರವಿಂದದಲ್ಲಿ ಐಕ್ಯವಾದುದನ್ನು ಮುಗ್ದಭಾವದಿಂದ ಸರಳ ರೀತಿಯಲ್ಲಿ ನಿರೂಪಿಸಿದ್ದಾರೆ. ಗಂಡ ಮರಣ ಹೊಂದಿದರೂ ನನ್ನ ಜೊತೆ ಜೀವಂತ ಇದ್ದಾನೆ ಎನ್ನುವ ಹಳವಂಡ ಹದವರಿತು ಹರಿದಿರುವದು ಹೀಗೆ:

ಒಮ್ಮೊಮ್ಮೆ ಮಾವ ಕನಸಿನೊಳು ಬಂದು ಸಂತೈಸುವನು
ಅವಳ ಬಾಡಿದ ಮುಖವ ಎತ್ತಿ ಕಣ್ಣೀರ ಒರೆಸುವರು
ನಾನು ಎಲ್ಲೂ ಹೋಗಿಲ್ಲ ನಿನ್ನ ಬಳಿ ಇರುವೆನೆನ್ನುವನು
ಕಣ್ಣು ತೆರೆದು ನೋಡಿದಾಗ ಮಾವ ಕಣ್ಮರೆಯಾಗುವರು”

ಯಾವದೆ ವ್ಯಕ್ತಿ ಬಹಳಷ್ಟು ಹಚ್ಚಿಕೊಂಡಾಗ ಅದು ಆತ್ಮದಲ್ಲಿ ಸೇರಿ ತನ್ನದೆ ಪ್ರಭಾವ ಬೀರುತ್ತದೆ. ಇಲ್ಲದವರು ಇದ್ದಾರೆಂದು ಬದುಕು ನೂಕುವದಿದೆಯಲ್ಲ ಅದು ಅರ್ಥಪೂರ್ಣವಾದುದು. ಬಾಳ ಭವಿಷ್ಯ ಬಹುಬೇಗ ಕೊನೆಯಾದಾಗ, ಏಕಾಂಗಿಯಾಗಿ ಬದುಕು ನೂಕುವ ಸಂದರ್ಭದಲ್ಲಿ ಮನದ ಮೊಗಸಾಲೆಯಲ್ಲಿ ಇಂಥಹ ವಿಚಾರಗಳು ಸಹಜವಾಗಿ ಹರಿದಾಡುವವು. ಅವು ಇಲ್ಲಿ ಕಾವ್ಯದ ರೂಪಪಡೆದು ಗದ್ಯಗಂದಿಯಾಗಿ ಒಡಮೂಡಿದರೂ ಕೊಂಚ ಚಂದ ಎನಿಸಿದೆ.

ಮರೆಯಾದ ಪತಿರಾಯನ ಲೂಸಿನಾ ಅವರು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ವಿಚಾರಗಳು ಕರುಣರಸದ ಕುಡಿಯಾಗಿ ಅರಳಿರುವದು ಹೀಗೆ:

“ಬಾಳಿನೊಳುಬಂದು, ನಿಲ್ಲದಂತೆ ಹೋದರು
ಮದುವೆಯ ಬಂಧನದಲ್ಲಿ ಬಿಗಿದರು
ಒಂಟಿಯಾಗಿ ಪಯಣಿಸಲು ಈ ಜಗದಿ ಬಿಟ್ಟರು
ಕಷ್ಟ ಸುಖದಿ ಜೊತೆಯಾಗದೆ ಎನ್ನ ಮರೆತರು”

ಕಟ್ಟಿದ ಕನಸು ಕಹಿಯಾದಾಗ. ಸಂಸಾರ ಬಂಧನ ಬಿಡುಗಡೆಯಾದಾಗ ಒಂಟಿಯಾಗಿ ಬದುಕು ನೂಕುವದು ಈ ಸಮಾಜದಲ್ಲಿ ಅದು ಮಹಿಳೆ ಎಂದರೆ ಸಾಗರವನ್ನು ದಾಟಿದಂತೆ. ಆ ಭಾವದ ತಳಮಳಗಳನ್ನು ಮರೆಯಾದ ಪತಿರಾಯನ ನೆವದಲ್ಲಿ ತೊಡಿಕೊಂಡ ಸಂತಸ ಪಡುವ. ಮುಂದಿನ ದಿನಗಳನ್ನು ಚಂದದಿಂದ ನೂಕುವ ಪರಿಕಲ್ಪನೆ ಈ ಕವಿತೆಯಲ್ಲಿ ಚಂದದಿ ಹರಡಿಕೊಂಡಿದೆ.

ಈ ಕವನ ಸಂಕಲನದ ಕೊನೆಯ ಕವಿತೆ ‘ಕ್ರಿಸ್‍ಮಸ್’ ಇದರ ಅಂದ ಹೀಗಿದೆ;

ಮೇರಿ ಮಾತೆಯ ಉದರದಲಿ ದೈವೀಕೃಪೆಯಿಂದ ಜನಿಸಿಬಂದ ಏಸು

ಬೆತ್ಲೆಹೇಮಿನ ದನದ ಕೊಟ್ಟಿಗೆಯಲಿ ಅವತರಿಸಿದನು ದೇವ ಪುತ್ರನು
ಅವನ ಶೋಧನೆಯಲಿ ಬೆನ್ನತ್ತಿಹನು ನಾಸ್ತಿಕನು

ಅದೇ ಹುಟ್ಟಿದ ಶಿಶುಗಳನ್ನು ಏಸುವೆಂದು ಹತ್ಯೆಗೈದರು ರಾಕ್ಷಸರು”

ಇಲ್ಲಿ ಏಸು ಜನರ ದೈವಿಕೃಪೆಯ ನೆಲೆಯಲ್ಲಿ ಅವತರಿಸಿದ ವಿಚಾರವನ್ನು ಮನಮುಟ್ಟುವಂತೆ ಹೇಳಲಾಗಿದೆ. ಇದನ್ನು ಸಹಿಸದ ರಾಕ್ಷಸರು ಏಸುವನ್ನು ಹತ್ಯೆ ಮಾಡಿದ ರೀತಿ ಕವಯಿತ್ರಿ ಯ ಆಕ್ರೋಶಕ್ಕೆ ಕಾರಣವಾಗಿರುವದು ಅರ್ಥಪೂರ್ಣವೆನಿಸಿದೆ. ಒಟ್ಟಾರೆ ಏಸುವಿನ ಚರಿತ್ರೆ ಹೇಳುವದು ಹೀಗೆ:

ಅಧರ್ಮವ ನಾಶಮಾಡಿ ಧರ್ಮವ ಉಳಿಸಲು ಹುಟ್ಟಿದಾತ
ಲೋಕಕಲ್ಯಾಣಕ್ಕಾಗಿ ಶಿಲುಬೆಗೇರಿಸಲ್ಪಟ್ಟ ದೇವಧೂತ
ಮೂರು ದಿನಕ್ಕೆ ಸಮಾಧಿಯಿಂದ ಎದ್ದು ಬಂದು
ನಲ್ವತ್ತುದಿನ ಧರ್ಮೋಪದೇಶ ಮಾಡಿ ಸ್ವರ್ಗದೆಡೆಗೆ ಸಾಗಿದ.”

ಅಂಧಕಾರವನ್ನು ಅಳಿದು, ಧರ್ಮದ ನೆಲೆಗಟ್ಟು ಗಟ್ಟಿಯಾಗಿ ಉಳಿಯಲು, ಲೋಕಕಲ್ಯಾಣದ ಸಲುವಾಗಿ ಜನಿಸಿ ಬಂದು ಶಿಲುಬಿಗೇರಿದ ಏಸುವಿನ ಚಿತ್ರವನ್ನು ಕಣ್ಮುಂದೆ ಕಟ್ಟಿದಂತೆ ಸರಳ ಸುಂದರ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವನ ಮರಣಾನಂತರದ ಬದುಕನ್ನು ಪವಾಡ ಸದೃಶ್ಯದ ನೆಲೆಯಲ್ಲಿ ಬಿಂಬಿಸಿರುವದು ಅಭಿಮಾನ, ಭಕ್ತಿಯ ಸಂಕೇತವೆನಿಸಿದೆ.

ಈ ಕೃತಿಯಲ್ಲಿ ನಾಲ್ಕನೆಯ ಭಾಗ ‘ಮನೆಮದ್ದು’ ಇಲ್ಲಿ ವನಸ್ಪತಿ ನೆಲೆಯಲ್ಲಿ; ಕೈಗೆ ಸಿಗುವ ವಸ್ತುಗಳಿಂದ ಆರೋಗ್ಯ ಸರಿಪಡಿಸಿಕೊಳ್ಳು ವಿಧಾನವನ್ನು ಹನ್ನೆರಡು ಉಪ ಅಧ್ಯಾಯಗಳಲ್ಲಿ ನಿರೂಪಿಸಿದ್ದಾರೆ. ಉದಾಹರಣೆಗೆ ‘ಉಷ್ಣದಿಂದ ಗಂಟಲು, ಹುಬ್ಬು ಕೆಮ್ಮಿಗೆ ಲವಂಗ ತಿನ್ನಬೇಕು’ ಹೀಗೆ ನೂರಾರು ವಿಧಾನಗಳು ಇಲ್ಲಿ ಎಡೆಪಡೆದಿವೆ. ಇವು ಸಾಮಾನ್ಯರ ಬದುಕಿಗೆ ಬಹಳಷ್ಟು ಉಪಯುಕ್ತವೆನಿಸಿವೆ.

ಈ ಕೃತಿಯ ಕೊನೆಯ ಭಾಗ ‘ಅಡುಗೆವೈವಿಧ್ಯ’ ಇಲ್ಲಿ ವಿವಿಧ ತರದ ಅಡುಗೆ ವಿಧಾನಗಳನ್ನು ಚಂದದಿಂದ ಹೇಳಿದ್ದಾರೆ. ಉದಾಹರಣೆಗೆ ‘ಮಾವು ಶ್ಯಾವಿಗೆಯ ಹಲ್ವ’: ಸಾಮಾನು: ತುಪ್ಪ 1/2 ಕೇಜಿ, ಗೋಡಂಬಿ 1 ಕಪ್. ಮಾಡುವ ವಿಧಾನ : ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹಣ್ಣನ್ನು ಹೆಚ್ಚಿ ಮಿಕ್ಸಿಗೆ ಹಾಕಿ ದಪ್ಪವಾಗಿ ರುಬ್ಬಿ ತೆಗೆಯಬೇಕು. ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಫ್ರೈಮಾಡಿ ತೆಗೆದು.

ಶಾವಿಗೆ ತುಪ್ಪದಲ್ಲಿ ಹುರಿದು ಗ್ಲಾಸ್ ನೀರು ಹಾಕಬೇಕು, ಕುದಿಯುವಾಗ ಸಕ್ಕರೆ ಮಾವಿನರಸಹಾಕಿ ಗಟ್ಟಿಯಾಗುವರೆಗೆ ತಿರುವುತ್ತ ಇದಕ್ಕೆ ಫ್ರೈ ಮಾಡಿದ ಗೋಡಂಬಿ ದ್ರಾಕ್ಷಿ ಹಾಕಿ ಇಳಿಸಬೇಕು. ಹೀಗೆ ಸಾಮಾನ್ಯರಿಗೂ ತಿಳಿಯುವಂತೆ, ಮಾಡಿ ಸವಿಯುವಂತೆ ಸರಳವಾಗಿ ತಿಳಿಸಿರುವದು ಚಂದವೆನಿಸಿದೆ. ಕೃತಿಯ ಕೊನೆಯಲ್ಲಿ ಲೂಸಿಸಾಲ್ಡಾನಾ ಅವರು ಸರಕಾರಿ ಶಾಲೆಗೆ ಲಕ್ಷ ಲಕ್ಷ ಹಣ ದತ್ತಿ ನೀಡಿದ ವಿವರವನ್ನು ಎಲ್.ಐ.ಲಕ್ಕಮ್ಮನವರು ಇಲ್ಲಿ ಜೋಡಿಸಿರುವರು. ಕೊನೆಯಲ್ಲಿ ಸಂಪಾದಕರ ಪರಿಚಯವನ್ನು ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ ಅವರು ‘ವಜ್ರದ ಹರಳು’ ಕೃತಿಗೆ ಬರೆದಲೇಖನ ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಹೀಗೆ ಈ ಕೃತಿಯನ್ನು ಸುಂದರವಾಗಿ ಸಂಪಾದಕರು ಸಂಪಾದಿಸಿರುವರು.

ಲೂಸಿ ಸಾಲ್ಡಾನಾ ಅವರ ಹೋರಾಟದ ಬದುಕಿನ ಮಜಲುಗಳನ್ನು ಶ್ರಮ ಸಂಸ್ಕøತಿಯ ಎಳೆಗಳನ್ನು ನಾಡಿಗೆ ಪರಿಚಯಿಸುತ್ತಿರುವದು ಅರ್ಥಪೂರ್ಣವೆನಿಸಿದೆ. ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಸಂಯಮದಿಂದ ಎದುರಿಸಿ. ಸಮಾಜದ ಕಣ್ಣಲ್ಲಿ ಕಣ್ಮಿನಿಯಾಗುವದು ಕಷ್ಟದ ಕೆಲಸ. ಬದುಕಿನ ವನವಾಸ, ಅಜ್ಞಾತವಾಸದಲ್ಲಿ ಗೆದ್ದು. ಕಷ್ಟಗಳ ಕಡಲುದಾಟಿ. ಕಾಡಿನಲ್ಲಿ ಮುಳ್ಳು, ಕಲ್ಲು, ಕ್ರೂರ ಪ್ರಾಣಿಗಳಿಂದ, ವಿಷಸರ್ಪಗಳಿಂದ ತಪ್ಪಿಸಿಕೊಂಡು.

ಶಿಕ್ಷಕ ವೃತ್ತಿಗೆ ಗೌರವ ತಂದು. ಶಾಲೆಯ ಮಕ್ಕಳು ನನ್ನ ಮಕ್ಕಳೆಂದು ಜೀವನಸಾಗಿಸುತ್ತ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಾಗಿರುವ ಈ ಗುರುಮಾತೆಗೆ ಸಾವಿರದ ಶರಣು. ಮಕ್ಕಳಿಲ್ಲವೆಂದು ಗುಡಿ ಗುಂಡಾರಗಳಿಗೆ, ಮಠಮಾನ್ಯಗಳಿಗೆ, ದೇವಮಾನವರೆಗೆ, ಆಸ್ಪತ್ರೆಗಳಿಗೆ ಅಲೆದು ಲಕ್ಷಾಂತರ ಹಣಖರ್ಚು ಮಾಡುವವರಿಗೆ ಇವರು ಮಾದರಿ ಎನಿಸಿದ್ದಾರೆ ಎನಿಸುತ್ತದೆ.

ಎಲ್ಲರೂ ಈ ಗುರುಮಾತೆಯ ತರಹ ಇದ್ದರೆ ಶಿಕ್ಷಣರಂಗ ರಂಗು ಕಳೆದುಕೊಂಡು ಒಣಗಿದ ಮರವಾಗುತ್ತಿರಲಿಲ್ಲ. ಭಾರತ ದೇಶದಲ್ಲಿ ಎನ್ನುವ ವಿಚಾರ ಸಹಜ. ಒಣಗಿದ ಮರ ಚಿಗಿಯುವ ಯಾವ ಲಕ್ಷಣವೂ ಇಲ್ಲ. ಇಂಥ ಗುರುಮಾತೆ ಅಂಥವರು ಕೋಟಿಗೊಬ್ಬರು ಇಂಥವರು ಇರುವದು ಅದು ನಾಡಿನ ಪುಣ್ಯ.ಅಂದ ಹಾಗೆ ಗುರುಮಾತೆಯ ಕುರಿತು ವೈ. ಬಿ. ಕಡಕೋಳ ಹೊರತಂದ ‘ಕತೆಯಲ್ಲ ಜೀವನ’ ಕೃತಿಯನ್ನು ನವರಸ ವೇದಿಕೆ ಸ್ನೇಹಿತರ ಬಳಗದ ಮೂಲಕ ಬಾಬಾಜಾನ್ ಮುಲ್ಲಾ ಕಥೆ ಚಿತ್ರ ಕಥೆ ಬರೆದು ನಿರ್ದೇಶನ ಮಾಡುವ ಮೂಲಕ “ಬದುಕು ಬಂಡಿ” ಚಲನಚಿತ್ರ ವಾಗಿ ಸಿದ್ದು. ನಂದಕುಮಾರ್ ದ್ಯಾಂಪುರ ಸಹ ನಿರ್ದೇಶಕ ರಾಗಿ ಕಾರ್ಯ ನಿರ್ವಹಿಸುವ ಮೂಲಕ ಇವರ ಬದುಕು ಚಲನಚಿತ್ರವಾಗಿದ್ದು ಇದೇ ಅಕ್ಟೋಬರ್ ತಿಂಗಳಲ್ಲಿ ಚಲನಚಿತ್ರ ಹಾಗೂ ವೈ. ಬಿ. ಕಡಕೋಳ ರ ಸಂಪಾದಿಸಿದ ಕೃತಿ ಬಿಡುಗಡೆ ಸಮಾರಂಭದ ಜರುಗಲಿದ್ದು ಈ ಕೃತಿಯ ಲ್ಲಿ ಈ ಇಬ್ಬರು ಮಹನೀಯರ ಬದುಕಿನ ಕತೆಯನ್ನು ವೈ. ಬಿ. ಕಡಕೋಳ ಬರಹ ರೂಪದಲ್ಲಿ ದಾಖಲಿಸಿರುವರು.ಅಷ್ಟೇ ಅಲ್ಲ ಅವರ ಅಚ್ಚುಮೆಚ್ಚಿನ ಶಿಷ್ಯ ಎಲ್. ಐ. ಲಕ್ಕಮ್ಮನವರ ಗುರುಮಾತೆಯ ಕುರಿತು ಬರೆದ ಬರಹ. ಅವರು ಇದುವರೆಗೂ ದತ್ತಿ ಇಟ್ಟಿರುವ ಶಾಲೆಗಳ ಪಟ್ಟಿಯನ್ನು ದಾಖಲಿಸಿರುವರು.ಈ ಕೃತಿಗೆ ಮುನ್ನುಡಿ ಹೊನ್ನುಡಿ ಬರೆಯುವ ಸೌಭಾಗ್ಯ ಬಂದುದು ನನಗೆ ಆನಂದವನ್ನುಂಟು ಮಾಡಿದೆ ಎಂದು ಅಭಿಮಾನದಿಂದ ಹೇಳುವೆ ಹೆಮ್ಮೆಯಿಂದ. ಇಂಥಹ ಬೆಲೆವುಳ್ಳ ಕೃತಿಗಳನ್ನು ಮುಂದೆಯೂ ಶ್ರೀ ವೈ.ಬಿ.ಕಡಕೋಳ ಅವರು ನಾಡಿಗೆ ನೀಡಿ ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಲಿ ಎಂದು ಹಾರೈಸುವೆ ಅಭಿಮಾನದಿಂದ.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಯುವ ಸಾಹಿತಿ, ಬಾದಾಮಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!