ಮೂಡಲಗಿ: ಸಮೀಪದ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯ ಗುರ್ಲಾಪೂರ ಹೊರ ವಲಯದ ಮಾಳತೋಟ ಶಾಲೆ ಹತ್ತಿರ ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಸಾಯಂಕಾಲ 7.30 ಕ್ಕೆ ಸಂಭವಿಸಿದೆ.
ವೇಗ ನಿಯಂತ್ರಿಸಲಾಗದೆ ಲಾರಿಯು ಬೈಕ್ ಗೆ ಗುದ್ದಿ ರಸ್ತೆಯ ಪಕ್ಕ ಪಲ್ಟಿಯಾಗಿದೆ. ರಸ್ತೆಯ ಪಕ್ಕದಲ್ಲಿ ಮನೆಗಳು, ಜನರು ಇದ್ದರೆ ಇನ್ನೂ ಹೆಚ್ಚಿನ ಅನಾಹುತವಾಗುತ್ತಲಿತ್ತು ಎನ್ನಲಾಗಿದೆ.
ಮೂಡಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬೈಕ್ ಸವಾರರಾದ ಮೂಡಲಗಿಯ ಶ್ರೀಶೈಲ ಯುಹಾನ ಹಾದಿಮನಿ, ರಂಗಾಪೂರ ಗ್ರಾಮದ ಸುರೇಶ ಸತ್ಯಪ್ಪ ಮಾರಾಪೂರ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯು ಅಕ್ಷರಶಃ ಯಮರಾಜನ ವಾಸಸ್ಥಾನದಂತಾಗಿದ್ದು ರಸ್ತೆ ಅಪಘಾತಗಳಿಗೆ ಹೆಸರುವಾಸಿಯಾಗಿದೆ. ದಿನದಿನಕ್ಕೂ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯ ಅನುಗುಣವಾಗಿ ರಸ್ತೆ ಅಗಲೀಕರಣವಾಗಬೇಕಿದೆ ಆದರೆ ರಾಜ್ಯ ಹೆದ್ದಾರಿ ನಿರ್ವಹಣೆ ಮಾಡುವವರು ಬರೀ ಟೋಲ್ ವಸೂಲಿಯಲ್ಲೇ ತೊಡಗಿದ್ದಾರೆ ಹೊರತು ರಸ್ತೆ ಸುರಕ್ಷತೆಯತ್ತ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.