Homeಕವನಕವನ :ಅಪ್ಪ ಬದಲಾಗಿದ್ದಾರೆ !

ಕವನ :ಅಪ್ಪ ಬದಲಾಗಿದ್ದಾರೆ !

ಅಪ್ಪ ಬದಲಾಗಿದ್ದಾರೆ!

ಮೊದಲೆಲ್ಲ ದಣಿವಿರದೆ
ತೋಟದಿ ದುಡಿಯುತ್ತಿದ್ದ ಅಪ್ಪ
ಈಗೀಗ ದಣಿವಾರಿಸಿಕೊಳ್ಳಲು
ತೆಂಗಿನ ಮರದ ಆಶ್ರಯ ಪಡೆಯುತ್ತಾರೆ
ಆದರೂ ದುಡಿಮೆ ಬಿಡದೇ ಸಾಗುತ್ತಿದ್ದಾರೆ
ಇಂದೇಕೋ ಅಪ್ಪ ತುಸು ಬದಲಾಗಿದ್ದಾರೆ!

ಕಪ್ಪು ಕೂದಲಿಗೆ ಮೊರೆ ಹೋಗದೆ
ಇಳಿ ವಯಸ್ಸಿನ ಸವಾಲುಗಳನ್ನು
ಸ್ವೀಕರಿಸಿದ್ದಾರೆ, ಗರಿ ಗರಿ
ಇಸ್ತ್ರಿ ಅಂಗಿಯ ಮರೆತಿದ್ದಾರೆ
ತೋಳುದ್ದ ಒಳ ಅಂಗಿ ಕಪ್ಪಾಗಿ
ಬಣ್ಣ ಮಾಸಿದ್ದರೂ ಧರಿಸಿದ್ದಾರೆ
ಅದೇಕೋ ಅಪ್ಪ ತುಸು ಬದಲಾಗಿದ್ದಾರೆ!

ತನ್ನದೇ ಹಠ ನಡೆಯಬೇಕು ಎಂಬುವರು
ನಸು ನಗುವಿಗೆ ಶರಣಾಗಿದ್ದಾರೆ,
ಈಗೀಗಷ್ಟೇ ಅವ್ವನನ್ನು
ಅರ್ಥಮಾಡಿಕೊಳ್ಳುತ್ತಿದ್ದಾರೆ
ಮುಂಚೆಗಿಂತ ಅಪ್ಪ ತುಸು ಬದಲಾಗಿದ್ದಾರೆ!

ಹೆಣ್ಮಕ್ಕಳಿಗ್ಯಾಕೆ ಜಾಸ್ತಿ ಓದು ಬರಹ
ಅಂತಿದ್ದವರು, ನೀವೂ ಜಾಸ್ತಿ ಓದಿ
ಏನಾದರೂ ಸಾಧಿಸಬೇಕು ಅಂತ
ಹುರಿದುಂಬಿಸುತ್ತಿದ್ದಾರೆ
ಇತ್ತೀಚೆಗೆ ಅಪ್ಪ ತುಸು ಬದಲಾಗಿದ್ದಾರೆ!

ಪಟ್ಟ ಕಷ್ಟಗಳೆಲ್ಲ ಕಥೆ ಮಾಡಿ
ಹೇಳುತ್ತಾರೆ ಸೋಲು ಗೆಲುವಿನ
ಮಂದಹಾಸ ಬೀರುತ್ತಾರೆ, ಕನ್ನಡಕದ
ಕಣ್ಣೊಳಗಿನ ಕಂಬನಿ ಮರೆಮಾಚುತ್ತಾರೆ
ಯಾಕೋ ಅಪ್ಪ ತುಸು ಬದಲಾಗಿದ್ದಾರೆ!

✍️ಸರೋಜಾ ಶ್ರೀಕಾಂತ್ ಅಮಾತಿ, ಮುಂಬೈ

RELATED ARTICLES

Most Popular

error: Content is protected !!
Join WhatsApp Group