ಹುನಗುಂದ: ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎನ್ನುವದು ಮುಖ್ಯ. ಸತತ ಪ್ರಯತ್ನ ಇದ್ದಾಗಲೇ ವ್ಯಕ್ತಿ ಶಕ್ತಿಯಾಗಿ ಮಾರ್ಪಟ್ಟು ಯಶಸ್ಸು ನಮ್ಮದಾಗಬಹುದು ಎಂದು ಹುನಗುಂದ ತಾಲೂಕಾ ಆಸ್ಪತ್ರೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಾನಂದ ಕಂಠಿ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನವೀಕರಣಗೊಂಡ ಸಿ.ಡಿ.ಸಿ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಎಂಬುದು ದೀರ್ಘ ಅನುಭವದ ಹಾದಿ. ಸಾಧಿಸುವ ದೃಢ ಸಂಕಲ್ಪ ಇದ್ದವರು ಮಾತ್ರ ಸಾಧಕರೆನ್ನಿಸಿಕೊಳ್ಳಲು ಸಾಧ್ಯ. ಆಶಾವಾದದ ಬದುಕು, ಸಾಧಿಸಲೇಬೇಕೆಂಬ ಹಠ, ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸುವ ಮನೋಭಾವದ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಗುಣವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದರು.
ಶಿಕ್ಷಕ ಎಸ್ಕೆ ಕೊನೆಸಾಗರ ಮಾತನಾಡಿ, ವಿದ್ಯಾರ್ಥಿ ಜೀವನದ ಅವಧಿ ತುಂಬ ಮಹತ್ವದ್ದಾಗಿದ್ದು ಗಟ್ಟಿಯಾದ ಗುರಿ, ಆದರ್ಶ ಗುರುವಿನ ಮಾರ್ಗದರ್ಶನದೊಂದಿಗೆ ಇಂದಿನ ಅಂಕಪ್ರಧಾನ, ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಬದುಕು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳಾದ ನಿಮ್ಮ ಕೈಯಲ್ಲಿಯೇ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮಹಾಂತೇಶ ಪರೂತಿಯವರು ಸಾಧನೆ ಸಾಧಕನ ಸ್ವತ್ತಾಗಿದ್ದು ವಿಶಾಲವಾದ ಜಗತ್ತಿನಲ್ಲಿರುವ ವಿಪುಲವಾದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವವರು ಮಾತ್ರ ಜೀವನದಲ್ಲಿ ಏನನ್ನಾದರೂ ಹೊಸತನ್ನು ಮಾಡಬಲ್ಲರು ಎಂದರು.
ವಿದ್ಯಾರ್ಥಿಗ ಪರವಾಗಿ ಮಂಜುನಾಥ ಹುಲಸಗೇರಿ, ಮಾನಸ ಗಾಣಿಗೇರ, ಪೂಜಾ ಹೂಗಾರ ಮತ್ತು ಉಪನ್ಯಾಸಕರ ಪರವಾಗಿ ಸಿದ್ದಲಿಂಗಪ್ಪ ಬೀಳಗಿ ಕಾಲೇಜು ಅಭಿವೃದ್ಧಿ ಸಮಿತಿ ಪರವಾಗಿ ಸದಸ್ಯರಾದ ಅಶ್ವಿನಿ ರವಿ ಹುಚನೂರ, ಪ್ರಿಯಾಂಕ ಚಲವಾದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ ಆಯ್ಕೆಗೊಂಡ ಉಪಾಧ್ಯಕ್ಷರು, ಸದಸ್ಯರನ್ನು ಮತ್ತು ಕಾಲೇಜಿಗೆ ಸಾಮಗ್ರಿ ದೇಣಿಗೆ ನೀಡಿದ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಮತ್ತು ಎಚ್.ಟಿ.ಅಗಸಿಮುಂದಿನ ಅವರನ್ನು ಕಾಲೇಜಿನ ಪರವಾಗಿ ಸತ್ಕರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಕ್ಷ್ಮಿ ಉಕ್ಕಲಿ ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಎಚ್.ಟಿ.ಅಗಸಿಮುಂದಿನ ವಂದಿಸಿದರು. ಡಾ.ಎನ್.ವಾಯ್ ನದಾಫ್ ನಿರೂಪಿಸಿದರು.
ಹುನಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ‘ನೆನಪಿನಂಗಳ’ ಭಿತ್ತಿಪತ್ರವನ್ನು ಗಣ್ಯರು ಅನಾವರಣಗೊಳಿಸಿದರು.