ಮಣ್ಣೆತ್ತಿನ ಅಮವಾಸ್ಯೆ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಇಂದು ಮಣ್ಣೆತ್ತಿನ ಅಮವಾಸ್ಯೆ. ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ.ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು

  1. ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ
  2. ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ.
  3. ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ.

ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ ಆಚರಣೆಯನ್ನು ವಿಧಿಸಿರುವುದು ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಾಗಿಯೇ.

ನಮ್ಮ ಪ್ರಾಚೀನ ಮಹರ್ಷಿಗಳು ನಮ್ಮ ಪ್ರತಿಯೊಂದು ಹಬ್ಬಕ್ಕೂ ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಸಮ್ಮಿಲಿತಗೊಳಿಸಿದ್ದಾರೆ ಇದರಿಂದ ಚರಾಚರ ಜಗತ್ತಿನ ಸೂತ್ರದ ಕೊಂಡಿಯನ್ನು ಸುಂದರವಾಗಿ ಹೆಣೆದಿದ್ದಾರೆ ಎನ್ನಬಹುದು.

- Advertisement -

ಕನ್ನಡದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳಿರುವರು.

ತಂತಿಗಳಲ್ಲಿ ಸುನಾದವಿದೆ
ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ
ಚರ್ಮದಲ್ಲಿ ಸುನಾದವಿದೆ
ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ
ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ
ನಾರಿನಿಂದ ಬಿಗಿದಾಗ ಮಾತ್ರ
ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ
ನಿನ್ನಡಿಗಳಿಗೆ ನನ್ನ ಬಿಗಿದಾಗ ಮಾತ್ರ

ಹೀಗೆ ಪರಮಾತ್ಮನ ಪಾದಾರವಿಂದಗಳಲ್ಲಿ ನಮ್ಮನ್ನು ನಾವು ಬಿಗಿದುಕೊಂಡು ಆರಾಧಿಸಲು ಹಬ್ಬ ಹರಿದಿನಗಳೂ ಅತ್ಯಂತ ಸಹಾಯಕವಾಗಿವೆ ಎನ್ನಬಹುದು.

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ.ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು.

ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮವಾಸ್ಯೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ(ಮೇವು-ನೀರು ಹಾಕಲು) ಮಾಡಿ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸೆ.

ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು

ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸ್ಯೆ.

ಈ ಅಮವಾಸ್ಯೆ ಮೊದಲು ಕಾರಹುಣ್ಣಿಮೆ ಸಡಗರದಿಂದ ಆಚರಿಸುವ ರೈತರು.ತಮ್ಮ ರಾಸುಗಳಿಗೆ ಮಳೆಯಿಂದ ಕೆಲವು ಸಮಯ ಬಿಡುವು ಕೊಟ್ಟು ಅವುಗಳನ್ನು ಪೂಜ್ಯನೀಯವಾಗಿ ಗೌರವಿಸುವ ಸಂಪ್ರದಾಯ ಮಣ್ಣೆತ್ತಿನ ಅಮವಾಸ್ಯೆ.ಈ ಅಮವಾಸ್ಯೆ ಗೆ ತಮ್ಮ ಮನೆಯ ಎತ್ತುಗಳನ್ನು ಸಿಂಗರಿಸುವುದಷ್ಟೇ ಅಲ್ಲ. ಎತ್ತುಗಳು ಇರಲಿ ಇಲ್ಲದಿರಲಿ ಎಲ್ಲರೂ ಗೌರವಿಸುವರು,. ಮಣ್ಣಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಮನೆಯಲ್ಲಿ ಇಟ್ಟು ಅಮವಾಸ್ಯೆಯಂದು ಪೂಜಿಸುವರು.

ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿಯ ನಂತರದ ದಿನ ತಮ್ಮ ಹೊಲಗಳಿಗೆ ತಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುವ ಅಮವಾಸ್ಯೆಯಿದು.

ರೈತರು ಎತ್ತುಗಳನ್ನು ಎಷ್ಟರ ಮಟ್ಟಿಗೆ ನಂಬಿರುವರೆಂದರೆ ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸವರೋ ಆ ಎಲ್ಲ ಧಾನ್ಯಗಳನ್ನು ಮನೆಯ ಎತ್ತು ಹಾದು ಹೋಗುವ ಬಾಗಿಲಲ್ಲಿ ಇಡುತ್ತಾರೆ ಆಗ ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿದ್ದ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ತಮ್ಮ ಹೊಲಕ್ಕೆ ಹಾಕುವ ಮಟ್ಟಿಗೆ ಎತ್ತುಗಳ ಮೇಲೆ ಭಕ್ತಿಯನ್ನು ಹೊಂದಿರುವರು.

ಕಾರಹುಣ್ಣಿಮೆಗೆ ಮಳೆ ಬಿದ್ದು ತಮ್ಮ ಹೊಲಗಳಿಗೆ ಬಿತ್ತನೆ ತಯಾರಿ ಮಾಡಿದ ರೈತ ಮಣ್ಣೆತ್ತು ಅಮವಾಸೆ ದಿನ ಎತ್ತುಗಳನ್ನು ಸಿಂಗರಿಸಿ ಅವುಗಳಿಗೂ ಕೂಡ ವಿಶ್ರಾಂತಿ ನೀಡುವ ಜೊತೆಗೆ ಪೂಜ್ಯನೀಯವಾಗಿ ಪೂಜಿಸುವನು.ಅವುಗಳಿಗೆ ಉತ್ತಮ ಆಹಾರ ನೀಡುವುದು. ಚೆನ್ನಾಗಿ ನೋಡಿಕೊಳ್ಳುವುದು. ಮುಂದೆ ಶ್ರಾವಣ ಆರಂಭವಾಗುವ ಹೊತ್ತಿಗೆ ಅವು ವಿಶ್ರಾಂತಿಯಿಂದ ಮತ್ತೆ ಹೊಲ-ಗದ್ದೆಗಳ ಕೆಲಸಕ್ಕೆ ಅಣಿಯಾಗಲೆಂದು ಪೂಜಿಸುವನು.

ಅಷ್ಟೇ ಅಲ್ಲ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಕೂಡ ಜಗುಲಿಯ ಮೇಲಿಟ್ಟು ನಾಗರ ಪಂಚಮಿಯವರೆಗೂ ಬರುವ ಎಲ್ಲ ಮಂಗಳವಾರದಂದು ಪೂಜೆ ಸಲ್ಲಿಸುವುದನ್ನು ತಪ್ಪದೇ ಮಾಡುತ್ತಾರೆ.
ಇನ್ನು ಕೆಲವು ಕಡೆ ಸೋಮವಾರದಂದು ಪೂಜಿಸುವರು.ಸೋಮವಾರ ಬಸವಣ್ಣನ ವಾರವೆಂದು ಪ್ರತೀತಿ. ನಾಗರ ಪಂಚಮಿ ನಂತರದ ದಿನ ಕೆರೆಕಟ್ಟಂಬಲಿ ಅಂತಾ ಆಚರಿಸುವರು.

ಈ ದಿನ ಮಣ್ಣೆತ್ತಿನ ಅಮವಾಸೆ ಪೂಜಿಸಿದ ಎತ್ತಿನ ಮೂರ್ತಿಗಳನ್ನು ಮನೆಯಲ್ಲಿ ಅಂಬಲಿ ಮಾಡಿಕೊಂಡು ಹೊಲಕ್ಕೆ ಒಯ್ದು ಒಂದೆಡೆ ಆಲದ ಮರ ಅಥವ ಬೇವಿನ ಮರವಿದ್ದರೆ ಅವುಗಳ ಕೆಳಗೆ ಪೂರ್ವಾಭಿಮುಖವಾಗಿ ಇಟ್ಟು ಮನೆಯಿಂದ ತಂದ ಹಂಗನೂಲು ಕೊಕ್ಕಾಬತ್ತಿ ಕೋಡಾಬತ್ತಿ ಹಾಕಿ ಪೂಜೆ ಮಾಡುವರು. ಪಂಚಮಿಗೆಂದು ಮಾಡಿದ್ದ ಉಂಡಿಗಳು, ಕಡಲೆ ಬೇಳೆಯ ಉಸುಳಿಯ ಜೊತೆಗೆ ಅಂಬಲಿ ಎಡೆ ಹಿಡಿಯುವರು.

ಅಂಬಲಿಯನ್ನು ಹೊಲದ ತುಂಬೆಲ್ಲ ಚರಗ ಚೆಲ್ಲುವರು. ಅಂಬಲಿ ಮನಸಿಗೆ ತಣಿವು. ಅಂಬಲಿ ಕುಡಿದ ಮನಸು ಹೇಗೆ ತಣಿದು ಮತ್ತೆ ಚೇತನಗೊಳ್ಳುವುದೋ ಹಾಗೆ ತನ್ನ ಜಾನುವಾರಗಳ ಬದುಕು ಕೂಡ ತಣಿವಿನಿಂದ ವರ್ಷವಿಡೀ ಕೂಡಿರಲಿ ಎಂಬ ಭಕ್ತಿ ಭಾವ.ಇದನ್ನು ಜನಪದರು ಕೆರೆಕಟ್ಟಂಬಲಿ ಎಂದು ಕರೆಯುವರು.

ಹೀಗೆ ಮಣ್ಣನ್ನೇ ನಂಬಿದ ಬದುಕು ಮಣ್ಣಿಂದಲೇ ಕೊನೆಗೊಳ್ಳುವ ಜೀವದ ಜೊತೆಗೆ ಜೀವಂತ ಎತ್ತುಗಳ ಪೂಜಿಸುವ ಜೊತೆಗೆ ಮಣ್ಣೆತ್ತುಗಳನ್ನು ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.

ಹೆಣ್ಣು ಮಕ್ಕಳಿಗೆ ಇದು ವಿಶೇಷ

ಮಣ್ಣೆತ್ತಿನ ಅಮವಾಸ್ಯೆ ಆಷಾಢ ಮಾಸ ಆರಂಭದ ಪ್ರತೀಕ. ಆಷಾಢ ಮಾಸದಾಗ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಅತ್ತೆ ಮಾವನ ಮುಖ ನೋಡಬಾರದು ಎಂಬ ಸಂಪ್ರದಾಯವಿದೆ. ಹೀಗಾಗಿ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಮಣ್ಣೆತ್ತಿನ ಅಮವಾಸೆಯ ಹಿಂದಿನ ದಿನವೇ ಬರುವುದು ವಾಡಿಕೆ. ಈ ರೀತಿ ಬಂದ ಹೆಣ್ಣು ಮಕ್ಕಳು ಮಣ್ಣೆತ್ತಿನ ಅಮವಾಸೆ.ಗುಳ್ಳವ್ವನ ಪೂಜೆ. ನಾಗರ ಅಮವಾಸ್ಯೆಯವರೆಗೂ ತವರು ಮನೆಯಲ್ಲಿ ಹಬ್ಬಗಳನ್ನು ಆಚರಿಸಿ ಮುಂದೆ ಶ್ರಾವಣದಲ್ಲಿ ಗಂಡನ ಮನೆಗೆ ಹೋಗುವುದು ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.


ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!