spot_img
spot_img

ಮಂತ್ರಗೋಪ್ಯ ಸಾಹಿತ್ಯ ಸಂಪುಟ

Must Read

- Advertisement -

ಆತ್ಮಸಾಕ್ಷಾತ್ಕಾರಕ್ಕಾಗಿ ಅನೇಕ ಆಧ್ಯಾತ್ಮವಾದಿಗಳು. ಅನುಭಾವಿಗಳು ಪುರಾತನ ಕಾಲದಿಂದಲೂ ವಿಭಿನ್ನ ಸಾಧನ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಯೋಗಮಾರ್ಗವೂ ಒಂದು. ಇದರಲ್ಲಿ ಕಾಲದಿಂದ ಕಾಲಕ್ಕೆ ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ-ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ಅವುಗಳ ಮೂಲಕ ಜೀವಿ ಸಿದ್ಧಿಯನ್ನು ಪಡೆಯಲು ನಡೆಸಿದ ಸಾಧನೆಯ ಮಾರ್ಗದಲ್ಲಿ ಅನೇಕ ಅಡೆ-ತಡೆ, ತೊಂದರೆ-ತಾಪತ್ರಯಗಳು ಉದ್ಭವಿಸಿದವು. ದೇಹದಂಡನೆ, ಶ್ವಾಸನಿರೋಧ ಮೊದಲಾದ ಕಠಿಣ ಉಪಕ್ರಮಗಳಿಂದಾಗಿ ಮಹಾನುಭಾವಿಗಳಿಗೂ ಕೂಡ ಇಚ್ಛಿತ ಫಲದೊರಕದೇ ಹೋಯಿತು. ಜನಸಾಮಾನ್ಯನಿಗಂತೂ ಇದು ಕೈಗೆ ನಿಲುಕದ ಗಗನ ಕುಸುಮವೆನಿಸಿತು. ಈ ಯೋಗಗಳ ರೀತಿ-ನೀತಿ, ಲಾಭ-ಹಾನಿಗಳನ್ನು ಗುರುತಿಸಿದ ಶಿವಶರಣರು ಅದರಲ್ಲಿಯೂ ಒಂದು ಹೊಸ ಮಾರ್ಗವನ್ನು ಹುಡುಕಿದರು. ತಮ್ಮ ಷಟ್‍ಸ್ಥಲ ಸಿದ್ಧಾಂತದ ಸುಲಭ ಹಾದಿಯಲ್ಲಿಯೇ ನಡೆದು ಸರ್ವರೂ ಸಿದ್ಧಿಯನ್ನು ಪಡೆಯಲು ಸಾಧ್ಯವಾಗುವಂಥ ಶಿವಯೋಗ ಎಂಬ ನೂತನ ಸಾಧನಾ ಪಥವನ್ನು ರೂಪಿಸಿಕೊಂಡರು. ಈ ಶಿವಯೋಗದ ರಹಸ್ಯವನ್ನು ತಿಳಿಸಲೆಂದೇ ಹುಟ್ಟಿಕೊಂಡುದೇ ಮಂತ್ರಗೋಪ್ಯ ಸಾಹಿತ್ಯ ಸಂಪುಟ ಎಂಬ ಮಹತ್ವದ ಕೃತಿ.

ಇದನ್ನು ಶುದ್ದ ಶಾಸ್ತ್ರೀಯ ನೆಲೆಯಲ್ಲಿ ಪರಿಷ್ಕರಿಸಿದವರು ಡಾ. ವೀರಣ್ಣ ರಾಜೂರ ಅವರು. ಇದು 2016ರಲ್ಲಿ ಶ್ರೀಮುರುಘಾಮಠ ಧಾರವಾಡದಿಂದ ಬೆಳಕು ಕಂಡಿದೆ. 154 ಪುಟದ ಹರವು ಪಡೆದಿದೆ.

ಈ ಕೃತಿಯ ಪರಿವಿಡಿ ಪರಿಮಳ ಹೀಗೆ ಅರಳಿದೆ. ಪ್ರಭುದೇವರು ನಿರೂಪಿಸಿದ ಮಂತ್ರಗೋಪ್ಯ, ಚೆನ್ನಬಸವೇಶ್ವರರು ನಿರೂಪಿಸಿದ ಹಿರಿಯ ಮಂತ್ರಗೋಪ್ಯ, ಚೆನ್ನಬಸವೇಶ್ವರ ದೇವರು ನಿರೂಪಿಸಿದ ಪದಮಂತ್ರಗೋಪ್ಯ, ಚನ್ನಬಸವೇಶ್ವರರರು ನಿರೂಪಿಸಿದ ಶೂನ್ಯ ಮಂತ್ರಗೋಪ್ಯ, ಹಡಪದ ಅಪ್ಪಣ್ಣಗಳು ನಿರೂಪಿಸಿದ ಮಂತ್ರಗೋಪ್ಯ, ಹಡಪದ ಅಪ್ಪಣ್ಣರ ರಾಣಿ ಲಿಂಗಮ್ಮ ನಿರೂಪಿಸಿದ ಮಂತ್ರಗೋಪ್ಯ.
ಇದು ಶಿವಶರಣರು ರಚಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರ. ಶರಣ ಸಾಹಿತ್ಯ ಪರಂಪರೆಯಲ್ಲಿ ಮಾತ್ರ ಕಾಣಸಿಗುವ ಹಾಡಗಬ್ಬರೂಪದ ಅನನ್ಯ ರಚನೆ.

- Advertisement -

ಮಂತ್ರಗೋಪ್ಯ ಎಂಬುದು ಮಂತ್ರ ಮತ್ತು ಗೌಪ್ಯ ಎಂಬ ಎರಡು ಘಟಕಗಳಿಂದ ಕೂಡಿದ ಸಮಾನಪದ. ಮಂತ್ರ ಎಂದರೆ ಇಷ್ಟದೇವತೆಯನ್ನು ಕುರಿತು ಹೇಳುವ ಶ್ಲೋಕ, ಪವಿತ್ರವಾದ-ಅರ್ಥಹೀನಹಿತವಾದ ವಾಕ್ಯ, ರಹಸ್ಯವಾದ ಆಲೋಚನೆ ಎಂಬ ಅರ್ಥಗಳೂ, ಗೌಪ್ಯ ಎಂದರೆ ಗುಟ್ಟು, ರಹಸ್ಯ ಎಂಬ ಅರ್ಥಗಳೂ ಉಂಟು. ಎರಡೂ ಪದಗಳನ್ನು ಸೇರಿಸಿದಾಗ, ರಹಸ್ಯವಾಗಿ ಹೇಳಿದ ಪವಿತ್ರವಾದ ಇಷ್ಟದೇವತಾ ಸ್ತುತಿಪರವಾದ ಶ್ಲೋಕ ಅಥವಾ ಗುಟ್ಟಾದ ಬೋಧೆ ಎಂಬ ಅರ್ಥಗಳು ಹೊರಡುತ್ತವೆ. ಶರಣರ ಪರಿಭಾಷೆಯಲ್ಲಿ ಗುರು ಶಿಷ್ಯನಿಗೆ ರಹಸ್ಯವಾಗಿ ಬೋಧಿಸಿದ ಶಿವತತ್ವ ಎಂದೂ, ಬಾಹ್ಯಜಗತ್ತಿನಲ್ಲಿ ಕಾಣದೆ ತನ್ನ ಅಂತರಂಗದಲ್ಲಿಯೇ ಗೋಪ್ಯವಾಗಿ ಪ್ರಕಾಶಮಾನವಾಗಿ ಥಳಥಳಿಸಿ ಹೊಳೆಯುವ ಮಂತ್ರಮಯಮೂರ್ತಿಯಾದ ಪರವಸ್ತುವನ್ನು ಗುರುಬೋಧೆಯಿಂದ ಪಡೆದು ಭಕ್ತಿ, ಜ್ಞಾನ, ವೈರಾಗ್ಯಗಳ ಮೂಲಕ ಭಕ್ತ ತಾನೇ ಕಂಡುಕೊಳ್ಳುವುದು ಎಂದೂ ಅರ್ಥೈಸಲಾಗುತ್ತದೆ ಎಂದು ಈ ಪದಗಳ ಅರ್ಥ ವಿವರಣೆಯನ್ನು ಆಧಾರಸಹಿತ ನಿರೂಪಿಸಿದ್ದಾರೆ.

ಉನ್ಮನದ ಸಾಧಕರು ಅಂತರ್‍ಬಾಹ್ಯ ಇಂದ್ರಿಯಗಳಲ್ಲಿ ಲಿಂಗಭಾವನೆಯನ್ನು ತುಂಬಿ ಅಲ್ಲಲ್ಲಿ ಮಂತ್ರದ ನೆನಹನ್ನು ದೃಢಗೊಳಿಸುತ್ತಾನೆ. ಲಿಂಗಾಯತದ ಷಟ್‍ಸ್ಥಲ ಭಕ್ತಿಯ ಅನುಭವದಿಂದ ಆಧಾರದಿಂದ ಆಜ್ಞೆಯವರೆಗಿನ ಶಕ್ತಿಯ ಕೇಂದ್ರಗಳಲ್ಲಿ ಹುದುಗಿದ ಅಸಾಮಾನ್ಯವಾದ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು, ಸಾಧಕರು ಸಹಸ್ರಾರ, ಶಿಖಾಮತ್ತು ಪಶ್ಚಿಮ ಎಂಬ ಕೇಂದ್ರಗಳಲ್ಲಿ (ಚಕ್ರಗಳಲ್ಲಿ) ನಿಗೂಢವಾದ ಸಾಮರ್ಥ್ಯದತ್ತ ಗಮನವಿರಿಸಿಕೊಳ್ಳುವನು. ಅದನ್ನು ಲಿಂಗವಿಸಿಕೊಳ್ಳಲು ಆ ಸಾಧಕನು ನಿರವಯ ಸ್ಥಲದ ಕೇವಲ ಜ್ಞಾನವಸ್ಥೆಯ ಮೆಟ್ಟಿಲಿನಲ್ಲಿ ಸಾಧನೆ ಗೈಯ್ಯವನು. ಈ ನಿರವಯದ ಸಾಧನೆಯು ಸುಲಭವಾಗಲೆಂದು ಪರಂಜ್ಯೋತಿ ಸ್ವರೂಪವಾದ ಲಿಂಗಭಾವನೆ ಬೆರಸಿ ಉನ್ಮನಿಯ ಉನ್ನತವಾದ ನಿಲವನ್ನು ಆತನು ಕಾಣುತ್ತಾನೆ. ಅಲ್ಲಿ ಯಾವ ವಿಧವಾದ ಉಲುಹಿಗೂ ಅವಕಾಶವಿಲ್ಲದೆ ನಾನು ನೀನು ಎಂಬುದಕ್ಕೆ ತೆರಹಿಲ್ಲದೆ. ಕೇವಲ ತಾನೆ ತಾನಾದ ಆವಸ್ಥೆಯ ಬೆಳಗುವುದು. ಒಳಹೊರಗು ಸುತ್ತೆಲ್ಲ ಸ್ವಯಂ ಪ್ರಭೆಯೇ ತೋರುವುದು, ಆ ಸಿದ್ದನಿಗೆ ಸಾಧನೆಯ ಅಂತಿಮ ಆವಸ್ಥೆಯಲ್ಲಿ. ಮಂತ್ರಗೋಪ್ಯವ ಸಾಧಿಸುವಲ್ಲಿ ಸಾಧಕನಿಗೆ ಲಿಂಗಾನುಭವ ಮತ್ತು ಲಿಂಗೈಕ್ಯ ಈ ಎರಡೂ ಅವಸ್ಥೆಗಳು ಬಹಳ ಪ್ರಾಮುಖ್ಯವಾಗಿರುತ್ತವೆ; ಮಹತ್ವವುಳ್ಳವುಗಳೂ ಆಗಿರುತ್ತವೆ.

ಇವುಗಳಲ್ಲಿ ಮೊದಲಿನದು ಷಟ್‍ಸ್ಥಲದ ಆಚರಣೆಯಲ್ಲಿ ಉತ್ತರೋತ್ತರವಾಗಿ ಬೆಳೆಯುವ ಭಕ್ತಿಯ ಅನುಭವದಲ್ಲಿ, ಇನ್ನೊಂದು ನಿರವಯಸ್ಥಲದ ನಿಲವಿನಲ್ಲಿ ಅವ್ಯಾಹತವಾಗಿ ಬೆಳಗುವ ಜ್ಞಾನಾನುಭೂತಿಯಲ್ಲಿ, ಆನಂದದ ಪರಮ ಪ್ರಕಾಶದಲ್ಲಿ ಕಾಣಿಸಿಕೊಳ್ಳುತ್ತದೆ. ಸನ್ನಿವೇಶದ ಸಮಗ್ರತೆ, ಸಾಧಕನ ಪಾತ್ರತೆ-ಸಾಧನೆಯ ತೀಕ್ಷ್ಣತೆ ಇವನ್ನು ಅವಲಂಬಿಸಿ ಲಿಂಗಾನುಭವ-ಲಿಂಗೈಕ್ಯ ಆವಸ್ಥೆಗಳಲ್ಲಿ ತರತಮಗಳನ್ನು ಗುರುತಿಸಬಹುದು. ಈ ಕಾರಣದಿಂದದಾಗಿ ಷಟ್‍ಸ್ಥಲದ ವಿವರಣೆಯಾಗಲೀ, ಲಿಂಗೈಕ್ಯ ಇಲ್ಲವೆ ನಿರವಯದ ವರ್ಣನೆಯಾಗಲೀ ಒಬ್ಬರದು ಇನ್ನೊಬ್ಬರದಕ್ಕಿಂತ ಭಿನ್ನವಾಗಿರಬಹುದು.

- Advertisement -

ಆದರೂ ಅಲ್ಲಿ ಒಂದು ವಿಧವಾದ ಸಮನ್ವಯವನ್ನು, ಒಂದು ವಿಧವಾದ ಸುಸಂಬದ್ಧತೆಯನ್ನು ಗುರುತಿಸಬಹುದು. ಇವೆಲ್ಲ ಪರಿಪೂರ್ಣವಾದ ಆ ಆವಸ್ಥೆ ಆ ನಿಲವುಗಳನ್ನು ಅಂಶಮಾತ್ರವಾಗಿಯಾದರೂ ತಿಳಿಸಲೆತ್ತಿಸುತ್ತವೆ. ಗೌಪ್ಯವಾಗಿದ್ದ, ಮಂತ್ರಮಯವಾದ ಇಂತಹ ಅನುಭವವು ಅಡಗಿರುವುದು ಮಂತ್ರಗೋಪ್ಯಗಳಲ್ಲಿ. ಇಂತಹ ಅನುಭವ ತೆರೆದು ತೋರುವುದು ಮಂತ್ರಗೋಪ್ಯದ ಸಾಧಕನಿಗೆ. ಈ ದೃಷ್ಟಿಯಿಂದ ಈ ಗ್ರಂಥಗಳಿಗೆ ಮಂತ್ರಗೋಪ್ಯ ಎಂದು ಕರೆದಿರುವದು ಉಚಿತವಾಗಿ; ಅರ್ಥಪೂರ್ಣ ಎಂದು ಕೃತಿಯ ಒಟ್ಟು ನೋಟವನ್ನು ಸುಂದರವಾಗಿ ನಿವೇದಿಸಿದ್ದಾರೆ.

ಸಂಪಾದಕರು ಈ ಸಂಪುಟದಲ್ಲಿ ಅಳವಡಿಸಿದ ಮಂತ್ರಗೋಪ್ಯಗಳನ್ನು ಈ ಹಿಂದೆ ಪ್ರಕಟವಾದ ಮುದ್ರಿತ ಕೃತಿಗಳು ಹಾಗೂ ಹೊಸದಾಗಿ ದೊರೆತ ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಣೆ ಮಾಡಿರುವರು.

ಮಂತ್ರಗೋಪ್ಯಗಳು ಲಿಂಗಾಯತರಿಗೆ ಅತ್ಯಂತ ಪವಿತ್ರ ಹಾಗೂ ಪೂಜ್ಯವಾದ ಗ್ರಂಥಗಳು. ಹೀಗಾಗಿ ಇವುಗಳ ಅನೇಕ ಹಸ್ತಪ್ರತಿಗಳು ಮಠಮಾನ್ಯಗಳಲ್ಲಿ, ಸಂಘ ಸಂಸ್ಥೆಗಳ ಹಸ್ತಪ್ರತಿ ಭಾಂಡಾರಗಳಲ್ಲಿ ದೊರಕುತ್ತವೆ. ಅವುಗಳನ್ನೂ ಆಧರಿಸಿ ಈ ಕೃತಿಗಳು ಈಗಾಗಲೇ ಅನೇಕ ಬಾರಿ ಪ್ರಕಟವಾಗಿ ಪ್ರಚಾರವನ್ನು ಪಡೆದಿವೆ.

ಅದರಲ್ಲಿಯೇ ಹೆಚ್ಚು ಪ್ರಚಾರದಲ್ಲಿರುವ ಕೃತಿಗಳೆಂದರೆ ಪ್ರಭುದೇವರ ಪರಮಯೋಗ ಮಂತ್ರಗೋಪ್ಯ ಮತ್ತು ಚೆನ್ನಬಸವಣ್ಣನವರ ಹಿರಿಯ ಮಂತ್ರಗೋಪ್ಯ ಹಾಗೂ ಪದ ಮಂತ್ರಗೋಪ್ಯಗಳು. ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಮಂತ್ರಗೋಪ್ಯಗಳು ಕೇವಲ ಒಂದೆರಡು ಬಾರಿ ಮಾತ್ರ ಪ್ರಕಟವಾಗಿವೆ, ಅಷ್ಟಾಗಿ ಓದುಗರ ಗಮನಕ್ಕೆ ಬಂದಿಲ್ಲ. ಪ್ರಭುದೇವರವ ಸದ್ಧರ್ಮದೀಪಿಕೆ ಸಂಪಾದಕರಾದ ಶ್ರೀ ಚನ್ನಮಲ್ಲಿಕಾರ್ಜುನ ಅವರಿಂದ ಮೊದಲಬಾರಿಗೆ ಸ್ವತಂತ್ರವಾಗಿ ಎರಡು ವ್ಯಾಖ್ಯಾನಸಹಿತ ಪ್ರಕಟವಾಗಿದೆ. ಮುಂದೆ ಉತ್ತಂಗಿ ಚೆನ್ನಪ್ಪನವರು ಸಿದ್ಧರಾಮ ಸಾಹಿತ್ಯ ಸಂಗ್ರಹದಲ್ಲಿ ಅದನ್ನು ಅಳವಡಿಸಿಕೊಂಡಿದ್ದಾರೆ. ಆಮೇಲೆ ಎಲ್.ಬಸವರಾಜು ಅಲ್ಲಮನ ವಚನ ಚಂದ್ರಿಕೆ ಮತ್ತು ಶಿವದಾಸ ಗೀತಾಂಜಲಿಯಲ್ಲಿ, ಆರ್.ಸಿ.ಹಿರೇಮಠ ಅವರು ವ್ಯೋಮ ಮೂರುತಿ ಅಲ್ಲಮ ಪ್ರಭು ದೇವರ ವಚನಗಳು ಕೃತಿಗಳ ಅನುಬಂಧದಲ್ಲಿ ಸೇರಿಸಿಕೊಂಡಿದ್ದಾರೆ. ಅನಂತರ ನನ್ನಿಂದ ಕಲ್ಲಮಠದ ಪ್ರಭುದೇವರ ಟೀಕೆಯೊಂದಿಗೆ ಸ್ವತಂತ್ರವಾಗಿ (1984) ಪ್ರಕಟವಾಯಿತು. ಇದಕ್ಕೆ ಇನ್ನೊಂದು ಅಧ್ಯಯಪೀಠದ 327ನೆಯ ಕ್ರಮಾಂಕ ತಾಳೆಗರಿ ಪ್ರತಿಯನ್ನು ಆಕರವಾಗಿ ಬಳಸಿಕೊಂಡಿದ್ದಾರೆ. ಇದೇ ಕೃತಿಯನ್ನು ಉತ್ತಂಗಿ ಚೆನ್ನಪ್ಪನವರ ಕೃತಿಯಲ್ಲಿನ ಶಬ್ದಾರ್ಥ ರೂಪದ ಟೀಕೆ ಸಹಿತವಾಗಿ ಈ ಸಂಪುಟದಲ್ಲಿ ಅಳವಡಿಸಿಕೊಂಡಿದ್ದಾರೆ.

ಚೆನ್ನಬಸವಣ್ಣನವರ ಹಿರಿಯ ಮಂತ್ರಗೋಪ್ಯ ಮತ್ತು ಪದಮಂತ್ರ ಮಂತ್ರಗೋಪ್ಯಗಳು ಟೀಕೆ ರಹಿತವಾಗಿ ಮತ್ತು ಟೀಕೆಸಹಿತವಾಗಿ ಅನೇಕ ಬಾರಿ ಪ್ರಕಟವಾಗಿವೆ. ಹಿರಿಯ ಮಂತ್ರಗೋಪ್ಯವನ್ನು ಅಜ್ಞಾತ ಕರ್ತೃವಿನ ಟೀಕೆಯೊಂದಿಗೆ ಮೊದಲು ಪ್ರಕಟಿಸಿದವರು ಚಂದ್ರದಹಳ್ಳಿಯ ಪಂ.ಚಂದ್ರಶೇಖರಶಾಸ್ತ್ರೀಗಳು. ಪದಮಂತ್ರಗೋಪ್ಯವನ್ನು ಫ.ಗು.ಹಳಕಟ್ಟಿಯವರು ಟೀಕೆರಹಿತವಾಗಿ ಮೊದಲು ಶಿವಾನುಭವ ಪತ್ರಿಕೆಯಲ್ಲಿ ಪ್ರಕಟಿಸಿದರೆ. ಉತ್ತಂಗಿ ಚೆನ್ನಪ್ಪನವರು ಟೀಕೆ ಸಹಿತವಾಗಿ ಸಿದ್ಧರಾಮ ಸಾಹಿತ್ಯ ಸಂಗ್ರಹ ಎಂಬ ಗ್ರಂಥದಲ್ಲಿ ಪ್ರಕಾಶಪಡಿಸಿದರು.

ಅನಂತರ ಆರ್.ಸಿ.ಹಿರೇಮಠ ಅವರು ಚೆನ್ನಬಸವಣ್ಣನವರ ವಚನಗಳು ಸಂಪುಟದ ಅನುಬಂಧದಲ್ಲಿ, ಎಲ್.ಬಸವರಾಜು ಶಿವದಾಸ ಗೀತಾಂಜಲಿಯಲ್ಲಿ ಈ ಎರಡೂ ಮಂತ್ರಗೋಪ್ಯಗಳನ್ನು ಟೀಕಾರಹಿತವಾಗಿ ಅಳವಡಿಸಿಕೊಂಡರು. ನಾನು 1979ರಲ್ಲಿ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಗಳಲ್ಲಿ (ತಾ.ಪ್ರ.3141). ದೊರೆತ ಒರತೆರಾಮಯ್ಯ ರಚಿಸಿದ ವ್ಯಾಖ್ಯಾನದೊಂದಿಗೆ ಹಿರಿಯ ಮಂತ್ರಗೋಪ್ಯವನ್ನು ಪ್ರಕಟಿಸಿದರು (ಬ.ಪ.1-2, 4, 19, 79). ಹಾಗೆಯೇ ಚನ್ನಬಸವಣ್ಣನವರ ಶೂನ್ಯ ಮಂತ್ರಗೋಪ್ಯವನ್ನು ಕನ್ನಡ ಅಧ್ಯಯನಪೀಠದ 203 ಸಂಖ್ಯೆಯ ಹಸ್ತಪ್ರತಿಯಿಂದ ಸಂಪಾದಕರು ಮೊದಲಬಾರಿಗೆ ಪ್ರಕಟಿಸಿದ್ದಾರೆ.

ಈ ಎರಡನ್ನೂ (ಹಿರಿಯ ಮಂತ್ರಗೋಪ್ಯ ಮತ್ತು ಶೂನ್ಯ ಮಂತ್ರಗೋಪ್ಯ) ಈ ಸಂಪುಟದಲ್ಲಿ ಅಳವಡಿಸಿಕೊಂಡಿದ್ದಾರೆ. ಪದ ಮಂತ್ರಗೋಪ್ಯವನ್ನು ಉತ್ತಂಗಿ ಚೆನ್ನಬಸಪ್ಪನವರು ಪ್ರಕಟಿಸಿದ ಸಿದ್ಧರಾಮ ಸಾಹಿತ್ಯ ಸಂಗ್ರಹ ದಿಂದ ಎತ್ತಿಕೊಂಡಿದ್ದಾರೆ.

ಹಡಪದಪ್ಪಣ್ಣನ 27 ನುಡಿಗಳಿರುವ ಮಂತ್ರಗೋಪ್ಯವನ್ನು ಮೊದಲು ಪ್ರಕಟಿಸಿದವರು ಡಾ.ಫ.ಗು.ಹಳಕಟ್ಟಿಯವರು. ಹಡಪದ ಅಪ್ಪಣ್ಣನ ಸ್ವರವಚನಗಳು ಎಂಬ ಶೀರ್ಷಿಕೆಯಲ್ಲಿ ಅದು ಶಿವಾನುಭವ ಗ್ರಂಥಮಾಲೆಯಿಂದ ಪ್ರಕಟವಾಗಿದೆ. ಈತನ ಇನ್ನೊಂದು ಮಂತ್ರಗೋಪ್ಯ (33 ನುಡಿಗಳಿರುವುದು) ವನ್ನು ಈತನ ಸತಿ ಲಿಂಗಮ್ಮನ ಮಂತ್ರಗೋಪ್ಯದ ಜೊತೆ ಸೇರಿಸಿ ಡಾ.ಬಿ.ಎಸ್.ಗದ್ದಗಿಮಠ ಅವರು ಜಯಕರ್ನಾಟಕ-ಬಸವಜಯಂತಿ ವಿಶೇಷ ಸಂಚಿಕೆಯಲ್ಲಿ (ಮೇ1959) ಪ್ರಕಟಿಸಿದ್ದಾರೆ. ಈ ಮೂರು ಕೃತಿಗಳನ್ನು ಮೇಲೆ ಹೇಳಿದ ಆಕರಗಳಿಂದಲೇ ತೆಗೆದುಕೊಂಡು ಈ ಸಂಪುಟದಲ್ಲಿ ಅಳವಡಿಸಿದ್ದಾರೆ.

ಇಲ್ಲಿನ ಕೃತಿಗಳನ್ನು ಮುದ್ರಿತಗ್ರಂಥ ಹಾಗೂ ಹಸ್ತಪ್ರತಿಗಳ ಆಧಾರದಿಂದ ಪರಿಷ್ಕರಿಸಿದ್ದರೂ ಶುದ್ದಪಾಠವನ್ನು ಮಾತ್ರ ಸ್ವೀಕರಿಸಿ. ಪಾಠಾಂತರಗಳನ್ನು ಕೊಡದೆ ಕೈಬಿಟ್ಟಿರುವರು. ಪದ್ಯಗಳಲ್ಲಿ ಬಳಕೆಯಾದ ¾ ಕಾರವನ್ನು ರವಾಗಿ ಪರಿವರ್ತಿಸಿದ್ದಾರೆ.

ಈ ಮೊದಲು ಬಿಡಿಬಿಡಿಯಾಗಿ ಬೇರೆ ಬೇರೆ ಕೃತಿಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಇವುಗಳನ್ನು ಪ್ರಥಮ ಬಾರಿಗೆ ಒಂದೆಡೆ ಸೇರಿಸಿದ ಶ್ರಮ ಸಂಪಾದಕರದು. ಇಲ್ಲಿ ಒಟ್ಟಾಗಿ ಮಂತ್ರಗೋಪ್ಯ ಸಾಹಿತ್ಯದ ಸ್ವರೂಪ-ಮಹತ್ವ-ಪ್ರಯೋಜನ ಎಲ್ಲ ಓದುಗರಿಗೆ ದೊರಕುವಂತಾಗಲಿ ಎಂಬ ಉದ್ದೇಶದಿಂದ ಈ ಸಂಪುಟವನ್ನು ಡಾ.ವೀರಣ್ಣ ರಾಜೂರ ಅವರು ಪರಿಷ್ಕರಿಸಿ ಸಂಪಾದಿಸಿಕೊಟ್ಟಿರುವದು ಔಚಿತ್ಯಪೂರ್ಣವೆನಿಸಿದೆ.

ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group