ಮೂರ್ತಿಯನೆ ಪೂಜಿಸುತ ಕಾಲಕಳೆಯುವುದೇಕೆ ?
ಮಣಿಯನೆಣೆಸುತ ವೇಳೆ ವ್ಯಯಿಸಲೇಕೆ ?
ಒಂದರ್ಧ ನಿಮಿಷ ನೀ ನಿಜವ ನೆನೆದರೆ ಸಾಕು
ಕಣ್ಮುಂದೆ ಕೈಲಾಸ – ಎಮ್ಮೆತಮ್ಮ
ಶಬ್ಧಾರ್ಥ
ಮಣಿ = ಜಪಮಣಿ. ವೇಳೆ = ಸಮಯ, ಕಾಲ
ತಾತ್ಪರ್ಯ
ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ದೇವರ ಮೂರ್ತಿಯನ್ನು
ಬರಿದೆ ಭಕ್ತಿಯಿಲ್ಲದೆ ಪೂಜಿಸಿದರೆ ಫಲವಿಲ್ಲ. ಅದರಿಂದ
ಸಮಯ ವ್ಯರ್ಥವಾಗಿ ಹೋಗುತ್ತದೆ. ಅದಕ್ಕಾಗಿ ಸರ್ವಜ್ಞ
ಚಿತ್ತವಿಲ್ಲದೆ ಗುಡಿಯಯ ಸುತ್ತಿದರೆ ಫಲವೇನು ಎಂದು
ಪ್ರಶ್ನಿಸುತ್ತಾನೆ. ಮತ್ತೆ ಕೈಯಲ್ಲಿ ಜಪಮಣಿ ಹಿಡಿದು ಬರಿದೆ ಜಪಿಸಿದರೆ ಫಲವಿಲ್ಲ. ಸುಮ್ಮನೆ ಮಂತ್ರ ಜಪಿಸುತ್ತ ಕಾಲ ಕಳೆಯುವುದರಿಂದ ಲಾಭವಿಲ್ಲ. ಸಾವಿರಾರು ಮನದ
ಆಲೋಚನೆಯಿಂದ ಮಂತ್ರದ ಒಂದು ಆಲೋಚನೆಗೆ ಬರುವುದೆ ಜಪ. ಆಲೋಚನಾರಹಿತ ಸ್ಥಿತಿಬಂದ ಮೇಲೆ ಮೂರ್ತಿಯಾಗಲಿ ಮಂತ್ರವಾಗಲಿ ಬೇಕಾಗಿಲ್ಲ. ಅಜಪದಲ್ಲಿ ಮನಸು ನಿಂತು ಪ್ರತಿಯೊಂದು ಉಸಿರಾಟ ಜಪವಾಗಿ ಪರಿಣಮಿಸುತ್ತದೆ. ಅಂದರೆ ಉಸಿರಾಟ ಮೇಲ್ಮುಖವಾಗಿ ನಡೆಯುತ್ತದೆ. ಆಗ ಕಣ್ಣಿನ ಹುಬ್ಬಿನ ಮಧ್ಯದಲ್ಲಿಯ ಮೂರನೆ ಕಣ್ಣು ತೆರೆಯುತ್ತದೆ.
ಅಂಥ ಸಂದರ್ಭದಲ್ಲಿ ನಿಜದ ನೆನಹು ಒಂದು ಅರ್ಧ ನಿಮಿಷ ನೆನೆದರೆ ಸಾಕು ಪರಮಾನಂದ ಲಭಿಸುತ್ತದೆ. ಅದರಿಂದ ಅಮೃತದ ಬಿಂದು ಬಿಡುಗಡೆಯಾಗುತ್ತದೆ. ಅಂಬರದ ಮೇಲಣ ತುಂಬಿದ ಕೊಡನುಕ್ಕಿ ಕುಂಭಿನಿಯ ಮೇಲೆ ಸುರಿಯಲು ಮಾನವರು ಶಂಭುಲೋಕಕ್ಕೆ ತೆರಳಿದರೆಂದು ಅಕ್ಕಮಹಾದೇವಿ ಹೇಳುತ್ತಾಳೆ. ಶಿರವೆ ಕೈಲಾಸಪರ್ವತವಲ್ಲದೆ ಬೇರೆಯಿಲ್ಲ. ಅದೆ
ಅಂಬರದ ತುಂಬಿದ ಕೊಡ ಶಂಭುಲೋಕ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099