ಪಟ್ಟಣಕೆ ದಾರಿಯಿದೆ ತೋರಿಸುವ ಫಲಕವಿದೆ
ನಡೆದುಹೋದರೆ ಮಾತ್ರ ತಲುಪಬಹುದು
ದೇವಪಥ ತೋರಿಸುವ ಗುರುದೇವನಿದ್ದರೂ
ಸಾಧಿಸುವ ಛಲಬೇಕು – ಎಮ್ಮೆತಮ್ಮ
ಶಬ್ಧಾರ್ಥ
ಫಲಕ = ದಾರಿ ತೋರಿಸುವ ಹಲಗೆ. ಮಾರ್ಗಸೂಚಿ
ತಾತ್ಪರ್ಯ
ಒಂದು ನಗರಕ್ಕೆ ಹೋಗುವ ಮಾರ್ಗವನ್ನು ತೋರಿಸಲು
ಒಂದು ಹಲಗೆಯಲ್ಲಿ ಅಥವಾ ಬಂಡೆಗಲ್ಲಿನಲ್ಲಿ ಬರೆದು ನಿಲ್ಲಿಸಿರುತ್ತಾರೆ. ಅದನ್ನು ನೋಡಿ ತಿಳಿದುಕೊಂಡು ತೋರಿದ
ದಾರಿಯಲ್ಲಿ ಚಲಿಸಿದರೆ ನಾವು ಮುಟ್ಟಬೇಕಾದ ಪಟ್ಟಣವನ್ನು
ತಲುಪಬಹುದು. ಹಾಗೆ ದೇವರನ್ನು ಕಾಣುವ ಮಾರ್ಗವನ್ನು
ತಿಳಿಸುವ ಗುರುದೇವನೊಬ್ಬನಿದ್ದರೂ ಕೂಡ ನಾವು ಸತತ
ಸಾಧನೆಮಾಡುವ ದೃಢ ನಿರ್ಧಾರ ಮಾಡಬೇಕು. ಹಾಗಾದರೆ
ಮಾತ್ರ ಸಾಧನೆಯ ಸಿದ್ಧಿ ಶಿಖರವನ್ನು ಏರಬಹುದು.ಗುರು
ತಿಳಿಸಿದ ಧರ್ಮಬೋಧೆಯನ್ನು ಅರಿತುಕೊಂಡು ಅವರು
ಹೇಳಿದ ವ್ರತನಿಯಮಗಳನ್ನು ಚಾಚೂ ತಪ್ಪದೆ ಪರಿಪಾಲಿಸಿ
ನಡೆದುಕೊಂಡರೆ ಮಾತ್ರ ಗುರಿ ತಲುಪಬಹುದು. ಗುರುವಿನಲ್ಲಿ
ದೃಢ ವಿಶ್ವಾಸ ನಂಬಿಗೆ ಇರಬೇಕು. ಗುರು ಕೊಟ್ಟ ಬೋಧೆಗೆ
ದೀಕ್ಷೆ ಎನ್ನುತ್ತಾರೆ. ದೀಕ್ಷೆ ಎಂದರೆ ದೀಯತೇ ಪರಮಂ ಜ್ಞಾನಂ ಕ್ಷೀಯತೆ ಪಾಪಸಂಚಯಂ ಎಂದು ಹೇಳುತ್ತಾರೆ. ದೀಕ್ಷೆ ಎಂದರೆ
ಬದ್ಧಕಂಕಣನಾಗಿ ವ್ರತನೇಮಗಳನ್ನು ಬಿಡದೆ ಮಾಡುವುದು.
ಶಿಷ್ಯನಾದವನಿಗೆ ಆ ಬದ್ಧತೆ, ಛಲ ಬೇಕಾಗುತ್ತದೆ.ಪರಧನವ , ಪರಸತಿಯ,ಪರದೈವವನೊಲ್ಲೆನೆಂಬ; ಲಿಂಗ ಜಂಗಮ ಒಂದೇ, ಪ್ರಸಾದ ದಿಟವೆಂಬ ಛಲಬೇಕು ಶರಣನಿಗೆ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ ಎಂದು ಬಸವಣ್ಣ ಸಾಧಕನಿಗಿರಬೇಕಾದ ಛಲವನ್ನು ಹೇಳುತ್ತಾನೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990