HomeUncategorizedದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 

ಶಿಶುಗಳಿಗೆ ಹಾಲುಕೊಡು ಹಸಿದವನಿಗನ್ನವಿಡು
ನೀರುಕೊಡು ನೀರಡಿಸಿಬಂದವರಿಗೆ
ಬಿಸಿಲಲ್ಲಿ ನಿಂತವರ ನೆರಳಡಿಗೆ ಕರೆದುಬಿಡು
ಧರ್ಮದಾಚರಣೆಯಿದು – ಎಮ್ಮೆತಮ್ಮ

ಶಬ್ಧಾರ್ಥ
ಶಿಶು = ಕೂಸು

ತಾತ್ಪರ್ಯ
ಹಸುಗೂಸು ಮತ್ತು ಬಾಣಂತಿಯರಿಗೆ ಹಾಲು ತುಪ್ಪ ಎಣ್ಣೆ ಬೆಣ್ಣೆ ಕೊಡಬೇಕು.ಏಕೆಂದರೆ ಬಾಣಂತಿ ಮತ್ತು ಹಸುಗೂಸು ಅಂಥ ಸ್ಥಿತಿಯಲ್ಲಿ ದುಡಿಯಲು ಹೋಗುವುದಿಲ್ಲ. ಅಂಥ ಸಮಯದಲ್ಲಿ ಅವರಿಗೆ ಅನ್ನ ಆಹಾರ ಕೊಟ್ಟು ಬದುಕಿಸಬೇಕಾಗುತ್ತದೆ. ಇನ್ನು ಭಯಂಕರವಾದ ಹಸಿವಿನಿಂದ ಬಳಲುವವರಿಗೆ ಅನ್ನ ಕೊಟ್ಟರೆ ಅದನುಂಡು ಅವರು ಬದುಕುತ್ತಾರೆ. ಅದೇ ರೀತಿ ಪೂರ ನೀರಡಿಸಿಕೊಂಡವರಿಗೆ ನೀರು ಕೊಟ್ಟು ದಾಹ ತಣಿಸಿ ಅವರು ಬದುಕುವಂತೆ ಮಾಡಬೇಕಾಗುತ್ತದೆ. ಅನ್ನ ನೀರು ಇಲ್ಲದೆ
ಹೋದರೆ ಸಾವು ಸಂಭವಿಸುತ್ತದೆ. ಅನ್ನ ನೀರು‌ ಕೊಟ್ಟು
ಅವರನ್ನು ಬದುಕಿಸಿದ ಪುಣ್ಯ ದೊರಕುತ್ತದೆ. ಅವರಿಗೆ
ಉಣಿಸಿ ತಿನಿಸಿ ತಣಿಸಿದರೆ ಅವರು ಉಂಡು ಸಂತಸಪಟ್ಟರೆ
ಅವರಿಂದ ಆಶೀರ್ವಾದ ದೊರಕುತ್ತದೆ.ಬಿಸಿಲಿನಲ್ಲಿ ಬಳಲಿ
ಬೆಂಡಾದವರನ್ನು ಸೂರಿನಡಿಗೆ ಕರೆದು ವಿಶ್ರಾಂತಿ ಪಡೆಯಲು
ಅನುವು ಮಾಡಿಕೊಟ್ಟರೆ ಅವರು ದಣಿವಾರಿಸಿಕೊಂಡು
ಸಂತೋಷಪಡುತ್ತಾರೆ. ಅದರಿಂದ ಪುಣ್ಯ ದೊರಕುತ್ತದೆ.
ಇದುವೆ ನಿಜವಾದ ಧರ್ಮದಾಚರಣೆ ಎನಿಸುತ್ತದೆ. ಧರ್ಮ‌ಎಂದರೆ ಕರ್ತವ್ಯ, ದಾನ ಎಂಬ ಅರ್ಥಗಳಿವೆ.ಅದನ್ನೆ ಜನಪದ ತಾಯಿಯೊಬ್ಬಳು ಈ ರೀತಿ ಹಾಡುತ್ತಾಳೆ.

ಹಸುವೀಗೆ ಹಾಲ್ಕೊಟ್ಟು ಶಿಶುವೀಗೆ ಬೆಣ್ಣೆಕೊಟ್ಟು| ಬಿಸಿಲೀಗೆ ನಿಂತವರ ನೆರಳಿಗೆ| ಕರೆದರೆ|ಅಸವಲ್ಲ‌ದ ಪುಣ್ಯ ಮಗನಿಗೆ|

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ

RELATED ARTICLES

Most Popular

error: Content is protected !!
Join WhatsApp Group