ಆರುದಿನದಲಿ ಜಗವ ಸೃಷ್ಟಿಮಾಡಿದನೇನು?
ಏಳನೆಯ ದಿನ ದೇವ ವಿರಮಿಸಿದನೆ ?
ಆರುಚಕ್ರದಲಿರುವ ಹೂವನರಳಿಸಿ ದೇವ
ನೆತ್ತಿಯಲಿ ನಿದ್ರಿಸಿದ – ಎಮ್ಮೆತಮ್ಮ
ಶಬ್ಧಾರ್ಥ
ವಿರಮಿಸು = ವಿಶ್ರಾಂತಿ ಪಡೆ
ತಾತ್ಪರ್ಯ
ಬೈಬಲ್ಲಿನ ಹಳೆಯ ಒಡಂಬಡಿಕೆಯ ಆದಿಕಾಂಡದಲ್ಲಿ ದೇವರು
ಭೂಮಿಯನ್ನು ಉಂಟುಮಾಡಿ ಹಗಲುರಾತ್ರಿ, ನೀರಿನ ಸಮುದ್ರ, ಹುಲ್ಲುಬೀಜ, ಕಾಯಿಪಲ್ಯೆ ಹಣ್ಣುಹಂಪಲು, ಸೂರ್ಯ ನಕ್ಷತ್ರ ಚಂದ್ರ,ಜಲಜಂತು ಪಕ್ಷಿ, ಜೀವಜಂತು,ಪಶು ಕಾಡುಮೃಗ,ಕ್ರಿಮಿಕೀಟ, ತನ್ನಸ್ವರೂಪದ ಮಾನವನನ್ನು ಹೀಗೆ
ಆರು ದಿನದಲ್ಲಿ ಸೃಷ್ಟಿಮಾಡಿ ಏಳನೆಯದಿನ ವಿಶ್ರಮಿಸಿದನೆಂದು ಹೇಳಲ್ಪಟ್ಟಿದೆ. ಆದರೆ ಇದು ಸೃಷ್ಟಿಯಾಗಲು ಕೋಟಿಕೋಟಿ ವರ್ಷಗಳು ಬೇಕಾಯ್ತೆಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಗೂಢಾರ್ಥವನ್ನು ನಾವು ತಿಳಿಯಬೇಕಾಗಿದೆ. ನಮ್ಮ ದೇಹದಲ್ಲಿ ಆಧಾರ ಚಕ್ರವು ಪೃಥ್ವಿತತ್ತ್ವದಿಂದಾಗಿದೆ. ಸ್ವಾಧಿಷ್ಠಾನ ಚಕ್ರ
ಜಲತತ್ತ್ವದಿಂದಾಗಿದೆ. ಮಣಿಪೂರಕ ಅಗ್ನಿತತ್ತ್ವದಿಂದಾಗಿದೆ.
ಅನಾಹತ ಚಕ್ರ ವಾಯುತತ್ತ್ವದಿಂದಾಗಿದೆ. ವಿಶುದ್ಧಿಚಕ್ರವು
ಆಕಾಶತತ್ತ್ವದಿಂದಾಗಿದೆ. ಹಾಗೆ ಆಜ್ಞಾ ಚಕ್ರ ಜೀವಾತ್ಮನ
ತತ್ತ್ವದಿಂದಾಗಿದೆ.ಕೊನೆಯದಾಗಿ ಸಹಸ್ರದಳ ಚಕ್ರ ಪರಮಾತ್ಮನ ತತ್ತ್ವದಿಂದಾಗಿದೆ.
ಸಹಸ್ರದಳ ಕಮಲವು ನೆತ್ತಿಯಲ್ಲಿದ್ದು ಅಲ್ಲಿ ದೇವನು ವಾಸಮಾಡಿ ವಿರಮಿಸಿದ್ದಾನೆ. ಈ ಆರುಚಕ್ರದಲ್ಲಿರುವ ಆರು ಕಮಲ ಹೂವರಳಸಿ ಅಂದರೆ ಕ್ರಿಯಾಶೀಲಗೊಳಿಸಿ ಸಹಸ್ರದಳದಲ್ಲಿ ವಿಶ್ರಾಂತಿಯಲ್ಲಿದ್ದಾನೆ. ಜೀವಾತ್ಮ ಪರಮಾತ್ಮನಲ್ಲಿ ಸೇರಿ ಆನಂದಸ್ವರೂಪನಾಗಿದ್ದಾನೆ
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ