ಬರಿಯುಸುಕು ಬರಿಬಿಸಿಲು ನೀರಿಲ್ಲ ನೆರಳಿಲ್ಲ
ಹುರುಳಿಲ್ಲ ಸಂಸಾರ ಮರಳುಗಾಡು
ಮೃಗಜಲವ ಬೆನ್ನತ್ತಿ ಹೋಗದಿರು, ನೀ ಹುಡುಕು
ಶಾಂತಿಯೋಯಾಸಿಸ್ಸು – ಎಮ್ಮೆತಮ್ಮ
ಶಬ್ಧಾರ್ಥ
ಮೃಗಜಲ – ಬಿಸಿಲುಗುದುರೆ,ಮರಳುಗಾಡಿನಲ್ಲಿ ನೀರಿದೆ ಎಂದು ಬಿಸಿಲಿನಲ್ಲಿ ಕಾಣಿಸುತ್ತದೆ. ಆದರೆ ಅದು ಭ್ರಮೆ.
ಓಯಾಸಿಸ್(Oasis) – ಮರುಳುಗಾಡಿನಲ್ಲಿ ನೀರಿರುವ ಹಸುರಿನ ತಾಣ ಅಥವಾ ತೋಟ.
ತಾತ್ಪರ್ಯ
ಸಂಸಾರವೆಂಬುವುದು ಮರಳು,ಬಿಸಿಲು ತುಂಬಿದ ಮತ್ತು
ನೀರು ನೆರಳುಗಳಿಲ್ಲದ ಮರುಭೂಮಿ. ಅಲ್ಲಿ ದೂರದಲ್ಲಿ
ಬಿಸಿಲುಗುದುರೆ ತೋರಿ ನೀರಿದೆ ಎಂದು ಭ್ರಮೆ ಉಂಟಾಗುತ್ತದೆ. ಅದನ್ನು ನಂಬಿ ಹೋಗಬೇಡ. ಅಲ್ಲಿ ಎಲ್ಲೋ
ಒಂದು ಕಡೆ ಹಸುರಿನ ತೋಟ ಇದೆ. ಅದನ್ನು ಹುಡುಕಿ ದಣಿವಾರಿಸಿಕೊಳ್ಳು. ಸಂಸಾರದ ತಾಪದಿಂದ ಆಸೆಯೆಂಬ
ನೀರಡಿಕೆ ಉಂಟಾಗುತ್ತದೆ. ಅದನ್ನು ಪರಿಹರಿಸಿಕೊಳ್ಳಲು
ಭ್ರಮಾಧೀನಾಗಿ ಏನೇನೋ ಹುಡುಕಲು ಹೊರಡದೆ
ಶಾಂತಿಯೆಂಬ ಮರುವನವನ್ನು ಹುಡುಕಿ ಆಶ್ರಯ ಪಡೆ.
ಮಾಯೆ ಎಂಬುವ ಬಿಸಿಲುಗುದುರೆಗೆ ಮರುಳಾಗಿ ಹೋದರೆ
ಅಲ್ಲಿ ಬರಿ ನಿರಾಶೆ. ಶಾಂತಿಯ ಮರುವನ ನಿನ್ನ ಅಂತರಂಗದಲ್ಲಿ ನೆಲೆಸಿದೆ. ಅದನ್ನು ಹುಡುಕುವುದು ಬಿಟ್ಟು ಬಾಹ್ಯ ಜಗತ್ತಿನಲ್ಲಿ ಹುಡುಕುಲು ಹೋದರೆ ಸಿಕ್ಕುವುದಿಲ್ಲ ನೆನಪಿರಲಿ.
ಆತ್ಯಚೈತನ್ಯವೆ ನಿಜವಾದ ಮರುವನ. ಅಲ್ಲಿ ತೃಪ್ತಿ, ಶಾಂತಿ, ಸಂತೋಷ ಸಮಾಧಾನಗಳು ನೆಲಸಿವೆ. ಅಲ್ಲಿ ಆಶ್ರಯ
ಪಡೆದರೆ ಸಾಕು ಸದಾಸುಖಿಯಾಗಿ ಪರಮಾನಂದದಿಂದ
ಜೀವಿಸಬಹುದು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ