ನೀನೆತ್ತಕಡೆಯಿಂದ ಬೆಟ್ಟವನ್ನೇರಿದರು
ತುಟ್ಟತುದಿ ಶಿಖರವನು ಮುಟ್ಟಬಹುದು
ಅವರಿವರ ದಾರಿಗಳ ಗೊಡವೆ ನಿನಗೇತಕ್ಕೆ
ನಿನ್ನ ಪಥದಲಿ ಚಲಿಸು – ಎಮ್ಮೆತಮ್ಮ
ಶಬ್ಧಾರ್ಥ
ಬೆಟ್ಟ = ಗುಡ್ಡ. ಶಿಖರ = ಬೆಟ್ಟದ ತುದಿ. ಗೊಡವೆ =ಉಸಾಬರಿ
ಪಥ = ಮಾರ್ಗ, ದಾರಿ, ಹಾದಿ
ತಾತ್ಪರ್ಯ
ಗುಡ್ಡವನ್ನು ಯಾವ ದಿಕ್ಕಿನಿಂದ ಹತ್ತಿದರು ಅದರ ತುದಿಯನ್ನು ಸೇರಬಹುದು. ಏಕೆಂದರೆ ಗುಡ್ಡಕ್ಕೆ ಏರಲು ಸುತ್ತುಕಡೆ ದಾರಿಗಳಿವೆ. ಗುಡ್ಡ ಏರುವಾಗ ನಿನ್ನ ದಾರಿಯನ್ನು ಹಿಡಿದು
ಏರಬೇಕು. ಅದು ಬಿಟ್ಟು ಬೇರೆಯವರು ಏರುವ ದಾರಿಯ
ಬಗ್ಗೆ ಚಿಂತಿಸಬಾರದು. ಅವರ ದಾರಿ ಅವರಿಗೆ ನಿನ್ನ ದಾರಿ
ನಿನಗೆ. ಅವರಿವರ ದಾರಿಯ ಬಗ್ಗೆ ಚಿಂತಿಸುತ್ತ ಇದ್ದರೆ ನಿನ್ನ
ದಾರಿಯಲ್ಲಿ ನಡೆಯಲು ದಾರಿ ಸಾಗುವುದಿಲ್ಲ. ಆದಕಾರಣ
ನಿನ್ನ ದಾರಿ ಹಿಡಿದು ಸತತ ನಡೆದರೆ ಕೊನೆಗೆ ನಿನ್ನ ಗುರಿ
ತಲುಪಬಹುದು. ಹಾಗೆ ಅಧ್ಯಾತ್ಮ ಸಾಧನೆಯಲ್ಲಿ ಹಲವು
ಮಾರ್ಗಗಳಿವೆ. ರಾಜಯೋಗ, ಭಕ್ತಿಯೋಗ, ಜ್ಞಾನಯೋಗ,
ಕರ್ಮಯೋಗ, ಧ್ಯಾನಯೋಗ, ಅಮನಸ್ಕಯೋಗ, ಅಂಬಿಕಾಯೋಗ, ಶಿವಯೋಗ, ತ್ರಾಟಕಯೋಗ,ಹಠಯೋಗ, ಮಂತ್ರಯೋಗ, ತಂತ್ರಯೋಗ, ಸಿದ್ಧಯೋಗ , ಕ್ರಿಯಾಯೋಗ ಹೀಗೆ ಐವತ್ತಕ್ಕು ಮೀರಿ ಯೋಗಗಳಿವೆ. ಇದರಲ್ಲಿ ನೀನು ಯಾವುದಾದರು ಒಂದು ಯೋಗ ಮಾರ್ಗವನ್ನು ಹಿಡಿದು ಸಾಧನೆಮಾಡಬೇಕು. ಬೇರೆ ಯೋಗಗಳ ಬಗ್ಗೆ ಚಿಂತಿಸಬಾರದು. ಹಾಗಾದರೆ ಮಾತ್ರ ಸಾಧನೆಯ ಸಿದ್ಧಿ ಶಿಖರವನ್ನು ಸುಲಭವಾಗಿ ಏರಿ ನಿನ್ನ ಗುರಿಯನ್ನು ಮುಟ್ಟಬಹುದು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990