ಹಸುಗೂಸು ಯಾರನ್ನು ದ್ವೇಷಿಸದು ದೂಷಿಸದು
ನಸುನಗುತಲೆಲ್ಲರನು ನೋಡುತಿಹುದು
ಇಂಥ ಮಗುವನು ಕಂಡು ದೇವರೆಂದೆನ್ನುವರು
ಶಿಶುವಂತೆ ಋಷಿಯಾಗು- ಎಮ್ಮೆತಮ್ಮ
ಶಬ್ಧಾರ್ಥ
ಹಸುಗೂಸು = ಎಳೆಯ ಮಗು. ದೂಷಿಸು = ನಿಂದಿಸು.
ನಸುನಗು = ತಿಳಿನಗು. ಶಿಶು= ಕೂಸು, ಮಗು. ಋಷಿ = ತಪಸ್ವಿ
ತಾತ್ಪರ್ಯ
ಎಳೆಯ ಕೂಸು ಯಾರನ್ನು ದ್ವೇಷ ಮಾಡುವುದಿಲ್ಲ ಮತ್ತು
ನಿಂದೆ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಂಡು
ಮುದ್ದಾದ ಬೊಚ್ಚು ಬಾಯಿಂದ ನಗುತ್ತದೆ. ಹೀಗೆ ಇರುವ
ಮಗು ದೇವರ ಸ್ವರೂಪ ಎಂದು ಭಾವಿಸುತ್ತಾರೆ. ಆ ಮಗು
ಒಬ್ಬ ಸ್ಥಿತಪ್ರಜ್ಞ ತಪಸ್ವಿಯಂತೆ ಕಾಣುತ್ತದೆ. ಅಂಥ ಮಗುವನ್ನು
ಕಂಡು ಎಲ್ಲರೂ ಆಕರ್ಷಿತರಾಗಿ ಮುದ್ದು ಮಾಡುತ್ತಾರೆ.
ಮೂರು ತಿಂಗಳ ಹಸುಗೂಸು ಸದಾ ಯೋಗಸ್ಥಿತಿಯಲ್ಲಿ ಇರುತ್ತದೆ. ಯೋಗಿಗಳು ಹೇಗೆ ಬ್ರಹ್ಮಾನಂದದಲ್ಲಿರುತ್ತಾರೋ ಹಾಗೆ ಕೂಸು ಆನಂದ ಸ್ಥಿತಿಯಲ್ಲಿರುತ್ತದೆ. ಹಾಗೆ ನಾವು ಯಾರನ್ನು ದ್ವೇಷಮಾಡದೆ ಮತ್ತು ದೂಷಣೆ ಮಾಡದೆ ಪ್ರೀತಿಯಿಂದ ಕಾಣಬೇಕು. ಪ್ರತಿಯೊಬ್ಬರಲ್ಲಿ ದೇವರ ರೂಪವನ್ನು ಕಂಡು ಆತ್ಮೀಯತೆಯಿಂದ ಇದ್ದರೆ
ಅವರೆಲ್ಲರು ನಿನ್ನನ್ನು ಪ್ರೀತಿಮಾಡುತ್ತಾರೆ. ಕೂಸಿನಂತೆ
ಎಲ್ಲ ಸದ್ಗುಣಗಳನ್ನು ಅಳವಡಿಸಿಕೊಂಡು ನೀನು ಸದಾನಂದ ತುಂಬಿರುವ ಯೋಗಿಯಾಗು. ಮಕ್ಕಳಿಲ್ಲದವರಿಗೆ
ಮೋಕ್ಷವಿಲ್ಲ ಎಂಬ ಗಾದೆ ಮಾತಿದೆ. ಅಂದರೆ ಮಗುವಿನಂತೆ
ನೀನಾಗದ ಹೊರತು ನಿನಗೆ ಮೋಕ್ಷವಿಲ್ಲ . ಮಗುವಿನ ಮನದವನಾದರೆ ಸಾಕು ಜಗವೆಲ್ಲ ನಿನಗೆ ಶರಣಾಗುತ್ತದೆ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990