ಕ್ಷುಧೆಯಾಗ್ನಿ ತೃಷೆಯಾಗ್ನಿ ನಿದ್ರಾಗ್ನಿ ಶೋಕಾಗ್ನಿ
ಕಾಮಾಗ್ನಿ ಕ್ರೋಧಾಗ್ನಿ ಮತ್ಸರಾಗ್ನಿ
ಹೀಗೆ ಸಪ್ತಾಗ್ನಿಗಳು ದಹಿಸುತಿವೆ ದೇಹವನು
ಶಾಂತಿಜಲ ಸಿಂಪಡಿಸು – ಎಮ್ಮೆತಮ್ಮ
ಶಬ್ಧಾರ್ಥ
ಕ್ಷುದೆ – ಹಸಿವು. ತೃಷೆ – ದಾಹ, ನೀರಡಿಕೆ. ಶೋಕ – ದುಃಖ
ಕ್ರೋಧ – ಕೋಪ. ಮತ್ಸರ – ಹೊಟ್ಟೆಕಿಚ್ಚು.ದಹಿಸು – ಸುಡು
ತಾತ್ಪರ್ಯ
ಮನುಷ್ಯನ ದೇಹದಲ್ಲಿ ಹಲವಾರು ಅಗ್ನಿಗಳಿವೆ. ಹಸಿವು, ತೃಷೆನಿದ್ದೆ, ಶೋಕ, ಕಾಮ,ಕ್ರೋಧ ಮತ್ತು ಮತ್ಸರವೆಂಬ ಏಳುಅಗ್ನಿಗಳಿವೆ. ಅವುಗಳು ಮನುಷ್ಯನನ್ನು ಸುಟ್ಟು ಸುಟ್ಟು
ಬೂದಿಮಾಡುತ್ತವೆ. ಅದಕ್ಕೆ ಸಂಸಾರ ಎಂಬುದು ಕೆಂಡದಗಿರಿ ಎಂದು ಅಲ್ಲಮ ಪ್ರಭುಗಳು ಹೇಳಿದ್ದಾರೆ. ಆ ಕೆಂಡದ ಗಿರಿಯಲ್ಲಿ ದೇಹವೆಂಬ ಅರಗಿನ ಕಂಬ ಬೆಂದು ಕರಗಿ ಹೋಗುತ್ತದೆ. ಆದರೆ ಅದರಲ್ಲಿರುವ ಆತ್ಮವೆಂಬ ಹಂಸ
ಪಕ್ಷಿ ಹಾರಿ ಹೊಗುತ್ತದೆ. ಅಂದರೆ ಸಂಸಾರವು ಭಯಾನಕ,
ದೇಹ ನಶ್ವರ ಆದರೆ ಆತ್ಮ ಶಾಶ್ವತ ಎಂದು ಅರಿಯಬೇಕು.
ಈ ಎಲ್ಲ ಅಗ್ನಿಗಳ ನಿವಾರಣೆಗಾಗಿ ಶಾಂತಿಸೈರಣೆ ಎಂಬ ತಂಪು ಜಲವನ್ನು ಸುರಿಯಬೇಕು. ಆಗ ಆ ಅಗ್ನಿಗಳ ಉಪಟಳ ತಪ್ಪುತ್ತದೆ. ಜ್ಞಾನದಿಂದ ಸಪ್ತಾಗ್ನಿಗಳನ್ನು ನಾಶಮಾಡಬೇಕು ಅಂದರೆ ಧ್ಯಾನಾಸಕ್ತರಾಗಬೇಕು. ಆಗ ಶಿರದಲ್ಲಿ ಹಿಮದಂತೆ ತಣ್ಣನೆಯ ಅನುಭವವಾಗುತ್ತದೆ. ಅದುವೆ ನಿಜವಾದ ಶಾಂತಿಜಲ. ಅದು ಶಿರದಲ್ಲಿ ಸುರಿಯಿತೆಂದರೆ ಎಲ್ಲ ಸಂಕಟಗಳು ದೂರಸಾಗುತ್ತವೆ. ಅದನ್ನೆ ಶರಣರು ಪಾದೋದಕವೆಂದರು. ಪರಮಾನಂದವನ್ನು ಪ್ರಸಾದ (ಪ್ರಸನ್ನತೆ) ಎಂದರು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990