ಅಂತಪ್ಪುದಿಂತಪ್ಪುದೆಂತಪ್ಪುದೆನಬೇಡ
ಚಿಂತಿಸುತ ಕಾಲವನು ಕಳೆಯಬೇಡ
ಎಂತಾದರೇನಂತೆ ಸಿದ್ಧನಿರು ಸಹಿಸಲಿಕೆ
ಸಂತೈಸುತಾತ್ಮವನು – ಎಮ್ಮೆತಮ್ಮ
ಶಬ್ಧಾರ್ಥ
ಅಂತಪ್ಪುದು = ಹಾಗೆ ಆಗುವುದು. ಇಂತಪ್ಪುದು = ಹೀಗೆ ಆಗುವುದು.ಎಂತಪ್ಪುದು = ಹೇಗಾಗುವುದು.ಎಂತು = ಹೇಗೆ
ನಾಳೆ ಹಾಗಾವುದು , ಹೀಗಾವುದು, ಹೇಗಾಗುವುದು ಎಂದು
ಕಳವಳಪಡಬೇಡ. ಅದೇ ಚಿಂತೆಯಲಿ ಸಮಯವನ್ನು ಹಾಳುಮಾಡಬೇಡ. ಮುಂದೆ ಹೇಗಾವುದೆನ್ನುವುದನ್ನು ಯಾರು ತಿಳಿದಿದ್ದಾರೆ. ಏನೇ ಬರಲಿ ಅದನ್ನು ಎದುರಿಸಲು ತಯಾರು ಇರಬೇಕು. ಬಂದದ್ದನ್ನು ಒಪ್ಪಿಕೊಂಡು ಸಹನೆಯಿಂದ ಆತ್ಮಕ್ಕೆಸಾಂತ್ವನ ಹೇಳಬೇಕು. ಭವಿತವ್ಯ ಹೀಗಾದರೆ ಹೇಗೆ ಎಂದುಯೋಚಿಸಿದರೆ ಅದು ಅದೇ ತರಹ ಘಟಿಸುತ್ತದೆ. ಮುಂದೆ ಆಗುವುದನ್ನು ನೀನು ಋಣಾತ್ಮಕವಾಗಿ ಯೋಚಿಸಿದರೆ ಹಾಗೆ ಆಗುತ್ತದೆ. ಆದಕಾರಣ ಮುಂದೆ ಉತ್ತಮ ಕನಸನ್ನು ಕಂಡು ಅದನ್ನು ಧನಾತ್ಮಕವಾಗಿ ಯೋಚಿಸಿದರೆ ಅದು ಕೂಡ ಘಟಿಸುತ್ತದೆ. ಅದಕ್ಕೆ ಸಂಕಲ್ಪ ಶಕ್ತಿ ಎನ್ನುತ್ತಾರೆ. ನೀನು ಮುಂದಿನ ಕನಸನ್ನು ಕಂಡರೆ ಅದು ನನಸಾಗಿ ಬಿಡುತ್ತದೆ.
ಆತಂಕ ಪಡದೆ ಅಥವಾ ಕಳವಳ ಪಡದೆ ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿಯಬೇಕು. ನಮ್ಮ ಆತ್ಮದಲ್ಲಿ ಅದ್ಭುತ ಶಕ್ತಿಯಿದೆ. ಅದು ಕೇಳಿದ್ದನ್ನು ಕೊಡುವ ಚಿಂತಾಮಣಿ, ಕಾಮಧೇನು, ಕಲ್ಪವೃಕ್ಷ. ನೀನು ಕೆಟ್ಡದ್ದನ್ನು ಚಿಂತಿಸಿದರೆ ಕೆಟ್ಟದ್ದನ್ನು, ಒಳ್ಳೆಯದನ್ನು ಚಿಂತಿಸಿದರೆ ಒಳ್ಳೆಯದನ್ನು ಕೊಡುತ್ತದೆ.ಅದಕ್ಕೆ ಒಳ್ಳೆಯದು ಕೆಟ್ಟದು ಎಂದು ವಿಚಾರಿಸುವ ವಿವೇಕವಿಲ್ಲ. ಯದ್ಭಾವಂ ತದ್ಭವತಿ. ನೀನು ಭಾವಿಸಿದ್ದನ್ನು ಕೊಡುತ್ತದೆ. ಅದಕ್ಕೆ ಆತ್ಮವನ್ನು ಸಮಾಧಾನಪಡಿಸಬೇಕು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990