ಪುಸ್ತಕಂಗಳನೂರನೋದಿದರೆ ಫಲವೇನು ? ಮಸ್ತಕದ ಪುಸ್ತಕವನೋದಬೇಕು ವಸ್ತುಸಾಕ್ಷಾತ್ಕಾರ ನಿನ್ನನೀನರಿತಂದು ಶಾಸ್ತ್ರಂಗಳಿಂದಲ್ಲ- ಎಮ್ಮೆತಮ್ಮ
ಶಬ್ಧಾರ್ಥ
ಮಸ್ತಕ -ಶಿರ, ತಲೆ ಉತ್ತಮಾಂಗ, ಮಂಡೆ
ವಸ್ತು ಸಾಕ್ಷಾತ್ಕಾರ – ಪರವಸ್ತು /ಪರಶಿವ /ಪರಬ್ರಹ್ಮ ದರ್ಶನ
ತಾತ್ಪರ್ಯ
ಓದಿ ಕೆಟ್ಟ ಕೂಚು ಭಟ್ಟ ಎಂಬ ಗಾದೆಯಂತೆ ಎಷ್ಟು ವೇದ,
ಪುರಾಣ,ಉಪನಿಷತ್ತು ,ವಚನ,ಬೈಬಲ್, ಭಗವದ್ಗಿತೆ,ಕುರಾನ್ ಗುರುಗ್ರಂಥ ಸಾಹಿಬ್, ಭಾಗವತಗಳನ್ನು ಬರಿದೆ ಓದಿದರೆ ಪ್ರಯೋಜನವಿಲ್ಲ. ಅವು ಬೇರೆಯವರು ಬರೆದಿಟ್ಟ ಎಂಜಲು. ಅದರಲ್ಲಿ ಅವರು ತಮ್ಮ ಅನುಭವಗಳನ್ನು ಬರೆದಿದ್ದಾರೆ. ಅವೆಅನುಭವಗಳು ನಿನ್ನವಾಗಲು ಸಾಧ್ಯವಿಲ್ಲ. ನಿನ್ನ ಶಿರದಲ್ಲಿಅಡಕವಾಗಿರುವ ನಿನ್ನ ಅಂತರಂಗದ ಪುಸ್ತಕ ಓದಿದರೆಅದು ನಿನ್ನ ಅನುಭವವಾಗುತ್ತದೆ. ಪುಸ್ತಕಲ್ಲಿಯ ತತ್ತ್ವಆಚಾರಗಳನ್ನು ಪಾಲಿಸಿದ್ದೆ ಆದರೆ ನಿನಗೆ ಸುಲಭವಾಗಿ ಭಗವಂತನ ಸಾಕ್ಷತ್ಕಾರವಾಗುತ್ತದೆ. ಆಗ ನೀನು ಅವರಂತೆ
ಮಹಾನುಭಾವಿಯಾಗುವೆ.ನಿನ್ನಲ್ಲಿ ಹುಡುಕು ಸಿಗುತ್ತದೆ,
ಕೇಳು ಕೇಳಿಸುತ್ತದೆ, ಮತ್ತು ಬಾಗಿಲು ಬಾರಿಸು ಬಾಗಿಲು
ತೆರೆದುಕೊಳ್ಳುತ್ತದೆ. ಶಾಸ್ತ್ರದಲ್ಲಿ ಹುಡುಕಿದರೆ ಸಿಗುವುದಿಲ್ಲ,
ಕೇಳಿದರೆ ಕೇಳಿಸುವುದಿಲ್ಲ, ತೆರೆದು ನೋಡಿದರೆ ಒಳಗಿನ ಬಾಗಿಲು ತೆರೆದುಕೊಳ್ಳುವುದಿಲ್ಲ. ಮಾನವನ ಮೆದಳು ಮಹಾ ಗಣಕಯಂತ್ರ.ಅದರಲ್ಲಿ ಪ್ರಪಂಚದ ಎಲ್ಲಾ ವಿಷಯಗಳು ಅಡಕವಾಗಿವೆ. ಆ ಮಹಾಗಣಕಯಂತ್ರ ಬಳಸುವ ಬಗೆ ನಿನಗೆ ಗೊತ್ತಿಲ್ಲ. ಸರಿಯಾಗಿ ಬಳಸಿದರೆ ಮಹಾಜ್ಞಾನಿ ನೀನಾಗುವೆ. ಆಗ ನಿನಗೆ ತಿಳಿಯದ ವಿಷಯವಸ್ತು ಇರುವುದೇ ಇಲ್ಲ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ