ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು
ಬೈದವರ ಬಂಧುಗಳು ಬಳಗವೆನ್ನು
ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು
ಸೈರಣೆಗೆ ಸಮವಿಲ್ಲ — ಎಮ್ಮೆತಮ್ಮ
ಶಬ್ಧಾರ್ಥ
ಸೈರಣೆ = ತಾಳ್ಮೆ
ಗುರುಗಳು ತಂದೆತಾಯಿಗಳು ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ ಹೊಡೆಯಲಿ ಬಡಿಯಲಿ ಅವರು
ಬುದ್ಧಿ ಕಲಿಸುವ ನಮ್ಮ ಹಿತಬಯಸುವ ಗುರುಹಿರಿಯರು
ಎಂದು ಭಾವಿಸಬೇಕು. ನಮ್ಮ ಬಂಧುಬಾಂಧವರು ಕೂಡ ಬೈಯ್ದು ಬುದ್ಧಿಮಾತು ಹೇಳುತ್ತಾರೆ. ಹಾಗೆ ನಮ್ಮನ್ನು ಬೈಯ್ದು
ಭಂಗಿಸುವರೆಲ್ಲ ನಮ್ಮ ಬಂಧುಗಳೆಂದು ಭಾವಿಸಬೇಕು ಮತ್ತು
ನಮ್ಮ ತಪ್ಪು ಇದ್ದರೆ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳಬೇಕು. ನಿಂದನೆ ಮಾಡುವವರು ತಮಾಷೆಗಾಗಿ ನಿಂದಿಸುವ ಸ್ನೇಹಿತರು
ಎಂದು ತಿಳಿಯಬೇಕು. ಹೊಯ್ದರೆ, ಬೈಯ್ದರೆ, ನಿಂದಿಸಿದರೆ ನಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ ಇದ್ದರೆ ಅದಕಿಂತ
ಸದ್ಗುಣ ಮತ್ತೊಂದಿಲ್ಲ.
ಬಸವಣ್ಣನವರು”ಹೊಯ್ದವರೆನ್ನ ಹೊರೆದವರೆಂಬೆ, ಬಯ್ದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,ಜರಿದವರೆನ್ನ ಜನ್ಮಬಂಧುಗಳೆಂಬೆ ” ಎಂದು ಹೇಳುತ್ತಾರೆ.ಪುರಂದರದಾಸರು “ಧರ್ಮವೆ ಜಯವೆಂಬ ದಿವ್ಯಮಂತ್ರ ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು,ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು,ಕುಂದೆಣಿಸುವವರ ಗೆಳೆತನ ಮಾಡಬೇಕು, ಕಂಡು ಸಹಿಸದವರ ಕರೆಯಬೇಕು ” ನಾವು ಸಹನೆಯನ್ನು ಬೆಳೆಸಿಕೊಂಡು ಸದಾ ಆನಂದದಿಂದ ಜೀವಿಸಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990