ಗರ್ವದಲಿ ಹೋರಾಡಿ ದಶಕಂಠ ಹತನಾದ
ವಿನಯದಿಂದವನನುಜ ರಾಜ್ಯಪಡೆದ
ಗರ್ವವಿದ್ದರೆ ದುಃಖ ಗರ್ವ ತೊರೆದರೆ ಸೌಖ್ಯ
ಸದುವಿನಯ ಸಂಪತ್ತು – ಎಮ್ಮೆತಮ್ಮ
ಶಬ್ಧಾರ್ಥ
ದಶಕಂಠ = ರಾವಣ.ಅವನನುಜ = ಅವನ ತಮ್ಮ(ವಿಭೀಷಣ)
ತಾತ್ಪರ್ಯ
Egoism is root for all evils (ಅಹಂಕಾರ ಎಲ್ಲ ಕೇಡಿಗೆ
ಮೂಲಬೇರು) ಎಂದು ಇಂಗ್ಲೀಷ್ ಗಾದೆ ಹೇಳುತ್ತದೆ. ಇದು
ಸತ್ಯವಾದ ಮಾತು .ಏಕೆಂದರೆ ಅಹಂಭಾವವಿದ್ದರೆ ನಮ್ಮನ್ನು
ಯಾರು ಗಮನಿಸುವುದಿಲ್ಲ ಮತ್ತು ಸಹಕಾರ ಕೊಡುವುದಿಲ್ಲ.
ಅದೆ ವಿನಯವಂತನಾಗಿದ್ದರೆ ಎಲ್ಲರು ಪ್ರೀತಿಯಿಂದ
ಮಾತನಾಡಿಸುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ. ಗರ್ವದಿಂದ
ಹತ್ತು ತಲೆಗಳ ರಾವಣ ರಾಮನ ಜೊತೆಗೆ ಹೋರಾಡಿ
ನಾಶವಾದ. ಆದರೆ ಅವನ ತಮ್ಮ ವಿಭೀಷಣ ವಿನಯದಿಂದ
ರಾಮನ ಜೊತೆಗೆ ವರ್ತಿಸಿದ ಕಾರಣ ಆತನಿಗೆ ಲಂಕಾರಾಜ್ಯದ
ಅಧಿಕಾರ ದೊರಕಿತು.ಆದಕಾರಣ ಗರ್ವದಿಂದ ನಮಗೆ
ಕಷ್ಟನಷ್ಟ ದುಃಖಗಳು ಬಂದೊದಗುತ್ತವೆ. ನಾವು ವಿನಯದಿಂದ ನಡೆದುಕೊಂಡರೆ ಸುಖಸಂತೋಷಗಳು ದೊರಕುತ್ತವೆ. ಜೊತೆಗೆ ಅನೇಕ ಲಾಭಗಳುಂಟು. ಗುರುಗಳ ಜೊತೆಗೆ ವಿನಯದಿಂದ ವರ್ತಿಸಿದರೆ ಎಲ್ಲ ವಿದ್ಯೆ ಕಲಿಸಿ ಹರಸಿ ಹಾರೈಸುತ್ತಾರೆ.ಅಹಂ ತೊರೆದು ಕಿಂಕರನಾದವನೆ ಶಂಕರನಾಗುತ್ತಾನೆ. ಅದನ್ನೆ ಬಸವಣ್ಣನವರು ಸದುವಿನಯವೆ ಸದಾಶಿವನೊಲುಮೆಯಯ್ಯ ಎಂದಿದ್ದಾರೆ. ಸದುವಿನಯವಿದ್ದವನಲ್ಲಿ ಸಂಪತ್ತು ತಂತಾನೆ
ಬರತೊಡಗುತ್ತದೆ.ಅದೆ ಗರ್ವದಿಂದದ್ದವನು ಜಗಳ ಮಾಡಿ ಕೋರ್ಟು ಕಚೇರಿಗೆ ಅಲೆದು ಹಣ ಹಾಳುಮಾಡಿಕೊಳ್ಳುತ್ತಾನೆ.
ಆದಕಾರಣ ಸದ್ಗುಣವೇ ನಿಜವಾದ ಸಂಪತ್ತು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990