ಗರ್ವವನು ಬಿಟ್ಟವನು ಸರ್ವೇಶನಾಗುವನು
ಗರ್ವದಿಂದಾಗುವುದು ಸರ್ವನಾಶ
ಹಮ್ಮಿನಿಂದಳಿದಿತ್ತು ದಕ್ಷಬ್ರಹ್ಮನ ಶಿರವು
ಹಮ್ಮನಳಿ ಬ್ರಹ್ಮನರಿ – ಎಮ್ಮೆತಮ್ಮ
ಶಬ್ಧಾರ್ಥ
ಸರ್ವೇಶ = ಪರಮೇಶ, ಶಿವ. ದಕ್ಷಬ್ರಹ್ಮ = ಶಿವನಿಗೆ ಹೆಣ್ಣು ಕೊಟ್ಟ ಮಾವ, ದಾಕ್ಷಾಯಣಿಯ ತಂದೆ.
ಅಹಂಕಾರ ಬಿಟ್ಟವನು ಮತ್ತು ಕಿಂಕರತೆಯುಳ್ಳವನು
ಶಂಕರನಾಗುತ್ತಾನೆ. ಅಹಂಕಾರದಿಂದ ಜೀವನ ಸರ್ವ
ನಾಶವಾಗುವುದು. ಅದಕ್ಕೆ ಪುರಾಣ ಕತೆಯಲ್ಲಿಯ ದಕ್ಷಬ್ರಹ್ಮನ ಕಥೆಯೆ ಉದಾಹರಣೆ.ದಕ್ಷಬ್ರಹ್ಮ ತನ್ನ ಮಗಳಾದ ಸತಿ ಅಥವಾ ದಾಕ್ಷಾಯಣಿಯನ್ನು ಶಿವನಿಗೆ ಮದುವೆ ಮಾಡಿಕೊಟ್ಟಿದ್ದನು. ಒಂದು ಯಜ್ಞಮಾಡಲು ಎಲ್ಲ ದೇವತೆಗಳನ್ನು ಕರೆದು ಅಳಿಯ ಶಿವ ಮತ್ತು ಮಗಳು ಸತಿಯನ್ನು ಕರೆಯಲಿಲ್ಲ. ಆದರೆ ತವರುಮನೆಯ ವ್ಯಾಮೋಹದಿಂದ ಸತಿ ಅಲ್ಲಿಗೆ ಹೋದಳು.ಆಗ ಆಕೆಯ
ಅಕ್ಕತಂಗಿಯರು ತಂದೆತಾಯಿಯರು ಆಕೆಯನ್ನು ಮಾತಾಡಿಸಲಿಲ್ಲ. ಇದರಿಂದ ಅವಮಾನಿತಳಾದ ಸತಿ
ಯಜ್ಞದಲ್ಲಿ ಹಾರಿ ಪ್ರಾಣಾರ್ಪಣೆಮಾಡಿದಳು. ಇದರಿಂದ
ಕುಪಿತಗೊಂಡ ಶಿವ ತನ್ನ ವೀರಭದ್ರನನ್ನು ಅಲ್ಲಿಗೆ ಕಳಿಸಿದನು.
ವೀರಭದ್ರ ಬಂದು ಯಜ್ಞವನ್ನು ಹಾಳುಮಾಡಿ ದೇವತೆಗಳನ್ಮು
ಭಂಗಿಸಿ ದಕ್ಷನ ಶಿರವನ್ನು ತೆಗೆದನು. ಆತನ ಹೆಂಡತಿ ಪ್ರಸೂತಿಯ ಬದುಕಿಸಲು ಬೇಡಿದಳು.ಆಗ ಆತನಿಗೆ
ಮೇಕೆಯ ಶಿರವನ್ನು ವೀರಭದ್ರ ಅಂಟಿಸಿ ಬದುಕಿಸಿದನು.
ಈ ಕಥೆಯಿಂದ ಗರ್ವದಿಂದ ಸರ್ವನಾಶ ಮತ್ತು ಬುದ್ಧಿಶೂನ್ಯ
ಆಗುತ್ತದೆ.ಮೇಕೆತಲೆ ಅಜ್ಞಾನದ ಸಂಕೇತ. ಆದಕಾರಣ
ಹಮ್ಮು ಬಿಟ್ಟು ಪರಬ್ರಹ್ಮವನ್ನು ಅರಿಯಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990