ಜಾತಿಮತಪಂಥಗಳು ಕುಲಧರ್ಮವರ್ಣಗಳು
ಗೋಡೆಗಳ ನಿರ್ಮಿಸಿವೆ ನರರ ನಡುವೆ
ಈ ಗೋಡೆಗಳ ಕೆಡವಿ ಬಯಲಲ್ಲಿ ಬಯಲಾಗಿ
ವಿಶ್ವದೊಳಗೊಂದಾಗು – ಎಮ್ಮೆತಮ್ಮ
ಶಬ್ಧಾರ್ಥ
ನರ = ಮಾನವ
ತಾತ್ಪರ್ಯ
ಒಬ್ಬರ ಮುಖ ಒಬ್ಬರು ನೋಡದಂತೆ ನಾವು ಅನೇಕ
ಗೋಡೆಗಳ ಕಟ್ಟಿ ಸನಿಹದಲ್ಲಿದ್ದರು ಮರೆಯಾಗಿ ಬೇರಾಗಿ
ನಿಂತಿದ್ದೇವೆ. ಅವು ಕಲ್ಲುಮಣ್ಣಿನ ಗೋಡೆಗಳಲ್ಲ. ನಮ್ಮ
ಭಾವದಲ್ಲಿ ಕಟ್ಟಿದ ಅಸಮಾನತೆಯನ್ನುಂಟು ಮಾಡುವ
ಕುಲಜಾತಿಗಳ ಗೋಡೆ, ಪಂಥಪಂಗಡಗಳ ಗೋಡೆ, ಮತಧರ್ಮಗಳ ಗೋಡೆ, ವರ್ಗವರ್ಣಗಳ ಗೋಡೆ, ದೇಶಭಾಷೆಗಳ ಗೋಡೆ, ಹೆಣ್ಣುಗಂಡುಗಳ ಗೋಡೆ ಹೀಗೆ ನೂರಾರು ಗೋಡೆಗಳ ಕಟ್ಟಿಕೊಂಡಿದ್ದೇವೆ. ಇದರಿಂದ ನಮ್ಮ ನಮ್ಮಲ್ಲಿ ಘರ್ಷಣೆಗಳು, ಯುದ್ಧಹೋರಾಟಗಳು, ಕಲಹಗಳು ಕೊಲೆಸುಲಿಗೆಗಳು ಉಂಟಾಗಿ ಜಗತ್ತಿನಲ್ಲಿ ಅಶಾಂತಿ ತಲೆದೋರುತ್ತಿದೆ. ಆದಕಾರಣ ಇಂಥ ಗೋಡೆಗಳನ್ನು ಒಡೆದು ಬಯಲುಮಾಡಬೇಕು.ಎಲ್ಲರಲ್ಲಿ ವಿಶ್ವಮಾನವನ ಪ್ರಜ್ಞೆ ಬರಬೇಕು. ನಮ್ಮಲ್ಲಿ ತಾರತಮ್ಯ ತೊಲಗಬೇಕು. ನಮ್ಮಲ್ಲಿಯ
ಸಂಕುಚಿತ ಮನೋಭಾವನೆ ತೊಲಗಿ ವಿಶಾಲ ಮನೋಭಾವನೆ ಬರಬೇಕು. ಮಾನವರೆಲ್ಲ ನಮ್ಮವರು ನಾವೆಲ್ಲ ಒಂದೆಂಬ ಭಾವ ಮೂಡಬೇಕು. ಪ್ರೀತಿ, ಪ್ರೇಮ, ಕರುಣೆ, ಕನಿಕರ, ಸಹಾಯ, ಸಹಕಾರ, ಸಹಬಾಳ್ವೆ, ಸೌಹಾರ್ದ,ಸಮಭಾವ ಸಹೋದರತ್ವ , ವಿಶ್ವಾಸ, ನಂಬಿಕೆ ಮುಂತಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ವಿಶ್ವದೊಳಗೆ ನಾವೆಲ್ಲ
ವಿಶ್ವಮಾನವರಾಗಬೇಕು. ಆಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990