ವಿಷಯ ಫಲಗಳನುಂಡು ದೇಹ ಪಂಜರದೊಳಗೆ
ಬಂಧಿಯಾಗಿದೆ ಜೀವಪಕ್ಷಿಯಾಗಿ
ಗರಿಬಿಚ್ಚಿ ಗಗನದಲಿ ಸ್ವಚ್ಛಂದ ವಿಹರಿಸಲು
ಬಿಡುಗಡೆಯ ಪಡೆದುಕೋ – ಎಮ್ಮೆತಮ್ಮ
ಶಬ್ಧಾರ್ಥ
ವಿಷಯಫಲ = ಇಂದ್ರಿಯ ಸುಖ, ರೂಪ ರಸ ಗಂಧ ಶಬ್ಧ ಸ್ಪರ್ಶ
ಸ್ವಚ್ಛಂದ = ಮುಕ್ತವಾಗಿ, ಸ್ವತಂತ್ರವಾಗಿ
ದೇಹದಲ್ಲಿರುವ ಪಂಚೇಂದ್ರಿಯಗಳಾದ ಕಣ್ಣು,ನಾಲಿಗೆ, ಮೂಗು ಕಿವಿ ಚರ್ಮಗಳಿಂದ ರೂಪ,ರಸ,ಗಂಧ,ಶಬ್ಧ, ಸ್ಪರ್ಶಗಳ ವಿಷಯ ಸುಖವನುಭವಿಸಲು ದೇಹದ ಪಂಜರದಲ್ಲಿ ಜೀವಾತ್ಮವೆಂಬ ಪಕ್ಷಿ ಬಂಧಿಯಾಗಿದೆ. ಇವುಗಳಿಗಾಗಿ ಹಾತೊರೆದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಸರ್ವಜ್ಞ ತನ್ನದೊಂದು ವಚನದಲ್ಲಿ
ಕಣ್ಣು ನಾಲಗೆ ಮೂಗು ನಿನ್ನವೆಂದೆನಬೇಡ| ಅನ್ಯರು
ಕೊಂದರೆನಬೇಡ | ಇವುಮೂರು ನಿನ್ನನೇ ಕೊಲ್ಗು ಸರ್ವಜ್ಞ|
ಎಂದು ಹೇಳಿದ್ದಾನೆ. ಈ ಇಂದ್ರಿಯಗಳನ್ನು ನಿಗ್ರಹಿಸಿದರೆ
ಶಕ್ತಿ ಸಂಚಯವಾಗುವುದು. ಆದ್ದರಿಂದ ಅವುಗಳಿಂದ
ಬಿಡುಗಡೆ ಪಡೆಯಲು ಧ್ಯಾನ ಮಾಡಬೇಕು. ಆಗ ಆ
ಆತ್ಮಪಕ್ಷಿಗೆ ಅಧ್ಯಾತ್ಮದ ಮೇಲಕ್ಕೆ ಹಾರಲು ಸಾಧ್ಯವಾಗುತ್ತದೆ.
ಹಾಗೆ ಅಧ್ಯಾತ್ಮ ಸಾಧಿಸಿ ಶಿರವೆಂಬ ಆಕಾಶದಲ್ಲಿ ಮುಕ್ತವಾಗಿ
ಹಾರಾಡಿ ಮೋಕ್ಷವನ್ನು ಪಡೆದುಕೊಳ್ಳಬಹುದು. ಮೋಕ್ಷ
ಎಂದರೆ ಬಿಡುಗಡೆ. ಯಾವುದರಿಂದ ಬಿಡುಗಡೆಯೆಂದರೆ
ಮನಸನ್ನು ಚಂಚಲಗೊಳಿಸುವ ಇಂದ್ರಿಯಗಳಿಂದ ಹೊರಬರುವುದು. ಮನವು ಏಕಾಗ್ರವಾದಾಗಲೆ ಬಿಡುಗಡೆ
ಸಿಗುತ್ತದೆ. ಅಂಥ ಬಿಡುಗಡೆಯನ್ನು ಪಡೆದು ಭವಬಂಧನದಿಂದ ಪಾರಾಗಿ ಹೋಗುವುದನ್ನು ನಾವು ಸಾಧಿಸಬೇಕು. ಅದುವೆ ನಿಜವಾದ ಮೋಕ್ಷ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990