ಬಿಸಿಲು ಚಳಿ ಮಳೆ ಗಾಳಿ ಯಾವುದಕು ಜಗ್ಗದೆಯೆ ಮೌನದಲಿ ಕಷ್ಟಗಳನೆಲ್ಲ ಸಹಿಸಿನೆರಳಂಟು ಹೂಹಣ್ಣು ಸೌಧೆಯನು ಕೊಡುವಂಥತರುತಪಸಿ ನೋಡಿ ಕಲಿ – ಎಮ್ಮೆತಮ್ಮ
ಶಬ್ಧಾರ್ಥ
ಜಗ್ಗದೆ – ಕುಗ್ಗದೆ .ಸೌಧೆ – ಉರುವಲು ಕಟ್ಟಿಗೆ
ತರು – ಗಿಡ , ವೃಕ್ಷ , ಮರ. ತಪಸಿ – ತಪಸ್ವಿ, ಯೋಗಿ,
ತಾತ್ಪರ್ಯ
ಬಿರುಬಿಸುಲು ಹೊಡೆದರು, ಕೆಟ್ಟಚಳಿಯಾದರು, ಜೋರು
ಮಳೆ ಬಿದ್ದರು, ಬಿರುಗಾಳಿ ಬೀಸಿದರು ಯಾವುದಕ್ಕು ಹೆದರದೆ ಬೆದರದೆ ಮೌನದಿಂದ ಬಂದ ಕಷ್ಟಗಳನೆಲ್ಲ ಭೂಮಿ ಮೇಲೆ ನಿಂತ ಮರ ಸಹಿಸಿಕೊಳ್ಳುತ್ತದೆ. ಆದರು ದಣಿದು ಆಶ್ರಯಿಸಿ ಬಂದವರಿಗೆ ನೆರಳು ಕೊಡುತ್ತದೆ. ಔಷಧವಾಗಿ ಬಳಸಲು ಅಂಟು ಕೊಡುತ್ತದೆ.ಪಶುಪಕ್ಷಿಮನುಷ್ಯರಿಗೆ ಹೂವು ಹಣ್ಣುಗಳನ್ನು ಕೊಡುತ್ತದೆ.ಮನುಷ್ಯರು ಅಡಿಗೆಮಾಡಿಕೊಳ್ಳಲು ಉರುವಲು ಕಟ್ಟಿಗೆಯನ್ನು ಕೊಡುತ್ತದೆ.ಹೀಗೆ ಪರೋಪಕಾರಕ್ಕಾಗಿ ಬದುಕಿರುವ ಮರವೆಂಬ ಮಹರ್ಷಿಯನ್ನು ನೋಡಿ ನಾವು ಕಲಿಯಬೇಕು. ಅದರಂತೆ ನಾವು ಜೀವನದಲ್ಲಿ ಎಷ್ಟೇ ಕಷ್ಟಕಾರ್ಪಣ್ಯಗಳು,ಸಮಸ್ಯೆ ಸಂಕಟಗಳು, ದುಃಖದುಮ್ಮಾನಗಳು,ಚಿಂತೆವೆತೆಗಳು ಬಂದರು ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಅಲ್ಲದೆ ನಾಲ್ಕುಜನರಿಗೆ
ಉಪಯೋಗವಾಗುವ ಸೇವೆ ಮಾಡಬೇಕು.ನಿನ್ನಲ್ಲಿರುವ
ಧನಧಾನ್ಯ, ಬಟ್ಟೆಬರೆ, ಅನ್ನರೊಟ್ಟಿ ದಾನಮಾಡಬೇಕು. ಪರೋಪಾರಕಾರ್ಥಮಿದಂ ಶರೀರಂ ಎಂದು ಶುಭಾಷಿತ
ಹೇಳುತ್ತದೆ.ಜನಸೇವೆಯೆ ಜನಾರ್ಧನ ಸೇವೆ ಎಂಬ ಗಾದೆ
ಮಾತಿನಂತೆ ತ್ಯಾಗಿಯಾಗಿ ಯೋಗಿಯಾಗಿ ಬದುಕಿದರೆ
ಜನ್ಮ ಸಾರ್ಥಕವಾಗುತ್ತದೆ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ