ಕಾರ್ತಿಕ ಮಾಸದ ಪ್ರಯುಕ್ತವಾಗಿ ಸೋಮವಾರ ದಿ.02-12-2024 ರಂದು ಸಾಯಂಕಾಲ 6.00 ಗಂಟೆಗೆ ಕಿಲ್ಲಾ ತೊರಗಲ್ಲ ಸಂಸ್ಥಾನ ಗಚ್ಚೀನ ಹಿರೇಮಠದಲ್ಲಿ ಕಾರ್ತಿಕೋತ್ಸವ ಆಚರಣೆ ಜರುಗಲಿದೆ
” ನೋವು ಇಲ್ಲದೇ ನಲಿವಿಲ್ಲ , ಕತ್ತಲಿಲ್ಲದೇ ಬೆಳಕಿನ ಮಹತ್ವದ ಅರ್ಥ ಆಗೊಲ್ಲ ,ಸಾಧನೆಯಡೆಗೆ ಹೊರಟು ನಿಂತವಗೆ ಅಡೆ ತಡೆಗಳು ಬಾರದೇ ಹೋದರೆ ‘ ಸಾಧನೆಗೆ ಅರ್ಥ ಬರೋದಿಲ್ಲ…”
ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಸಂಸ್ಥಾನ ಗಚ್ಚಿನಹಿರೇಮಠದಲ್ಲಿ ಜರುಗಲಿರುವ ಬೆಳಕಿನ ಹಬ್ಬ ಕಾರ್ತಿಕೋತ್ಸವ ತಮಗೆ ಸುಖ ,ಶಾಂತಿ , ನೆಮ್ಮದಿ ,ಸಂತೋಷ ಹಾಗೂ ಸಂಪತ್ತನ್ನು ಕರುಣಿಸಲಿ. ನಿಮ್ಮೆಲ್ಲರ ಜೀವನವು ಸಮೃದ್ಧಿಯ ಹಾದಿಯಲ್ಲಿ ಸಾಗಲಿ , ಬೆಳಗುವ ದೀಪದಂತೆ ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಜೀವನವು ಉಜ್ವಲಮಾನವಾಗಿ ಪ್ರಕಾಶಿಸುವಲ್ಲಿ ಆ ದಯಾಮಯನಾದ ಶ್ರೀ ರಾಚೋಟೇಶ್ವರ ಶಿವಯೋಗಿಗಳವರು ಕರುಣಿಸಲೆಂದು ಶ್ರೀ ಮಠದ ಸದ್ಭಕ್ತಾದಿಗಳ ಪರವಾಗಿ ಪ್ರಾರ್ಥಿಸುವೆ…
💐ಕಾರ್ತಿಕ ಮಾಸದ ಆಚರಣೆಯ ಮಹತ್ವ; 💐
ಕಾರ್ತಿಕ ಮಾಸದ ಆಚರಣೆ ಇಂದು ನಿನ್ನೆಯದಲ್ಲ. ಕಾರ್ತಿಕ ಮಾಸವೆಂದರೆ ಅಧ್ಯಾತ್ಮ ಸಾಧಕರ ಮಾಸ. ಈ ಮಾಸದಲ್ಲಿ ಕೈಗೊಳ್ಳುವ ಪೂಜೆ ಮತ್ತು ವೃತಗಳಲ್ಲಿ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ಕೆಲವು ವಿಶೇಷ ದಿನಗಳನ್ನು ಆಚರಿಸುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನಲಾಗುತ್ತದೆ.
ವರ್ಷ ಋತುವಿನ ಮಳೆಯ ಅಬ್ಬರ ತಗ್ಗಿ ,ಆಕಾಶವೆಲ್ಲಾ ನಿರಭ್ರ ನೀಲವಾಗಿ ಸೃಷ್ಟಿ ಸೌಂದರ್ಯವು ಹೇಮಂತ ಋತುವಿನೊಂದಿಗೆ ಕೂಡಿ ಪೃಕೃತಿಯಲ್ಲಿ ನವ ಚೈತನ್ಯ ತುಂಬಿಕೊಂಡು ನವೋಲ್ಲಾಸ ಉದಯಿಸಿದ ಹೊತ್ತು. ನೀಲಿ ಮುಗಿಲಲ್ಲಿ ಮೋಡಗಳು ಹೊಗೆಯಂತೆ ತೇಲಿ ಕಣ್ಮರೆಯಾಗುವಂತೆ ಮಳೆಗಾಲದ ಕೊನೆ , ಚಳಿಗಾಲದ ಆರಂಭ. ಈ ಎರಡೂ ಕಾಲ ಸೇರುವ ಹಂತದಲ್ಲಿ ಶರದೃತು ಕಳೆದು ಪ್ರಬಲಗೊಳ್ಳುತ್ತಿರುವ ಚಳಿಯಲ್ಲಿ ಕಾರ್ತಿಕ ಮಾಸವು ಲಕ್ಷ ದೀಪದ ಶೃದ್ದಾ ಭಕ್ತಿಯನ್ನು ಹೊತ್ತು ತರುವ ಶೀತಲ ಕಾಲ.
ಅಶ್ವಯುಜ ಮಾಸದ ಅಂತ್ಯ ಕಾಲ ಸಮೀಪಿಸಿತೆಂದರೆ ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಕಂಡು ಬರುತ್ತದೆ. ಹೊಸತೊಂದು ಬೆಳಕು ಹರಿಯುತ್ತಿದ್ದಂತೆ ಭಾಸವಾಗುತ್ತದೆ. ಎಲ್ಲೆಡೆ ದೀಪಗಳ ಸಾಲು..ಸಾಲು… ದೀಪಗಳ ಹಾವಳಿ ; ಇದೀಗ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ದೀಪೋತ್ಸವದ ಸಂಬ್ರಮ.
ಬೆಳಕಿನ ಕಾರ್ತಿಕ ದೀಪೋತ್ಸವವು ನಮ್ಮೊಳಗೆ ಹೊಸ ಹುಮ್ಮಸ್ಸು ತುಂಬಿ ಬದುಕನ್ನು ಸಮೃದ್ದಿಗೊಳಿಸಿ ಉತ್ತಮ ಆಶಯಗಳನ್ನು ಈಡೇರಿಸಲಿ. ಪ್ರೀತಿಯಿಂದ ತನ್ನ ಪೊಡಮಟ್ಟು ಬರುವ ಸರ್ವ ಭಕ್ತಾದಿಗಳಿಗೆ ಸನ್ಮಂಗಲವನ್ನು ಕರುಣಿಸುವ ತೊರಗಲ್ಲದ ಲಿಂ. ಶ್ರೀ ರಾಚೋಟೇಶ್ವರ ಶಿವಯೋಗಿಗಳವರು ಯಥೇಚ್ಛ ಸಂತಸವೆಂಬ ಬೆಳಕನ್ನು ಬದುಕಿನಲ್ಲಿ ಕಲ್ಪಿಸಿಕೊಟ್ಟು ಸದಾಕಾಲ ಅವರ ಸೇವೆಯನ್ನು ಮಾಡುವ ಸೌಭಾಗ್ಯವನ್ನು ಅನುಗ್ರಹಿಸಲೆಂದು ಪ್ರಾರ್ಥಿಸುವೆ.
ಸೋಮವಾರ ದಿ.02-12-2024 ರಂದು ಶ್ರೀಮಠದ ಸಮಸ್ತ ಸದ್ಭಕ್ತರು ” ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳುವಂತೆ ಈ ಮೂಲಕ ಕೋರುತ್ತೇವೆ.