ನಮ್ಮ ಭಾರತದಲ್ಲಿ ಆಚರಿಸುವ ಪ್ರತಿ ಹಬ್ಬದ ಹಿಂದೆ ಶೃತಿ ಸ್ಮೃತಿಗಳ ಹಿನ್ನೆಲೆ ಇರುವುದರ ಜೊತೆ ವೈಜ್ಞಾನಿಕ ಹಿನ್ನೆಲೆಯೂ ಸೇರಿದೆ.
ಭಗವಂತ ಅಣುತೃಣಾದಿಗಳನ್ನು ಸೃಷ್ಟಿಸಬೇಕಾದರೆ, ಸೃಷ್ಟಿಯಲ್ಲಿರುವಂತಹುದೆ ಮಾನವಕುಲದಲ್ಲಿ ತಂದನು. ಅಂದರೆ ಸೃಷ್ಟಿಯಲ್ಲಿನ ಬದಲಾವಣೆ ಪ್ರತಿ ಮಾಸದ ಋತುಮಾನದತಕ್ಕಂತೆ ನಾವು ಕಾಣಬಹುದು. ಹಾಗೇ ನಮ್ಮ ಜೀವನದಲ್ಲಿ ಕಾಣಬಹುದು. ಯುಗಾದಿ ಹಬ್ಬ ದೇವರ ಪೂಜೆ ಮಾಡಿ ಭಕ್ಷ್ಯ ಭೋಜ್ಯ , ಬೇವು ಬೆಲ್ಲ ನೈವೇದ್ಯ ತೋರಿಸಿ ಸ್ವೀಕರಿಸಬೇಕು.
ಅಮಾವಾಸ್ಯೆಯ ನಂತರ ಚಂದ್ರನು ಮೇಷ ಮತ್ತು ಅಶ್ವಿನಿ ರಾಶಿಗಳಲ್ಲಿ ಕಾಣಿಸಿಕೊಂಡು 15ನೇ ದಿನ ಚಿತ್ರಾ ನಕ್ಷತ್ರದಲ್ಲಿ ಪರಿಪೂರ್ಣತೆಯನ್ನು ಹೊಂದಿ, ಪ್ರತಿದಿನವೂ ಹೆಚ್ಚಾಗುವುದರಿಂದ ಆ ಮಾಸಕ್ಕೆ ‘ಚೈತ್ರ’ ಎಂದು ಹೆಸರು. ಇದನ್ನು ಸಂವತ್ಸರ ಎಂದು ಕರೆಯಲಾಗುತ್ತದೆ ಅಂದರೆ ಅದರಲ್ಲಿ ಹನ್ನೆರಡು ತಿಂಗಳುಗಳಿವೆ.
ಮಾಸದ ಪ್ರಮುಖ ಹಬ್ಬಗಳು
ಯುಗಾದಿ, ಶ್ವೇತ ವರಾಹ ಕಲ್ಪಾರಂಭ
(ಶುಕ್ಲ ಪಾಡ್ಯ )
ಶ್ರೀ ರಾಮ ನವಮಿ (ಶುಕ್ಲ ನವಮಿ)
ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
ವರಾಹ ಜಯಂತಿ (ಕೃಷ್ಣ ತ್ರಯೋದಶಿ)
ಮೊದಲ ವರ್ಷರಂಭವಾಗುವುದೇ “ಯುಗಾದಿ” ಹಬ್ಬದಲ್ಲಿ ಮನೆಯನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು.
ಅಭ್ಯಂಜನ ಸ್ನಾನ ಮಾಡಿ ,ದೇವರ ಪೂಜೆ, ದೇವಸ್ಥಾನಗಳಿಗೆ ಹೋಗುವುದು, ಗುರುಹಿರಿಯರ ಆಶೀರ್ವಾದ ಪಡೆಯುವುದು. ಭಕ್ಷ್ಯ ಭೋಜನ ಮತ್ತು ಬೇವು ಬೆಲ್ಲ ಎಲ್ಲವನ್ನು ದೇವರಿಗೆ ನೈವೀದ್ಯೆ ತೋರಿಸಿ ನಾವುಗಳು ಸ್ವೀಕಾರ ಮಾಡುವಾಗ
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎಂದು ಪ್ರಾರ್ಥಿಸಬೇಕು.
ಬೇವು ಬೆಲ್ಲಕ್ಕೆ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖವಿದೆ.. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಈ ಮಾತೇ ಈ ಸ್ತೋತ್ರದಲ್ಲಿ ಹೇಳಲಾಗಿದೆ
ಉತ್ತರ ಕರ್ನಾಟಕದ ಹಬ್ಬಗಳಲ್ಲಿ ಯುಗಾದಿ ಮುಗಿದ ನಂತರ ತೃತೀಯ(ತದಿಗೆ) ಅಂದರೆ ಮೂರನೇ ದಿನ.ಚೈತ್ರ ಗೌರಿ ವಿಶೇಷವೇನೆಂದರೆ, ಗೌರಿಯ ಹಿತ್ತಾಳೆ, ಕಂಚು ಅಥವಾ ಮರದ ಪ್ರತಿಮೆಯ ಜೋಕಾಲಿಯಲ್ಲಿರುವ ಗೌರಿಯನ್ನು ಪೂಜಿಸುವುದು.
ಗೌರಿಗೆ ಹಸಿರು ಖಣದ ಸೀರೆ ಉಡಿಸಿ, ಮಾಂಗಲ್ಯ, ಮುತ್ತಿನ ಸರ, ಗಾಜಿನ ಬಳೆ ಅಲಂಕಾರ ಮಾಡಿ ಪ್ರತಿಷ್ಟಾಪಿಸುವುದು ಜೊತೆಗೆ ಗಂಗೆಯನ್ನು ಪ್ರತಿಷ್ಟಾಪಿಸಬೇಕು ಹಾಗು ಮಣ್ಣಿನ ಕೊಂತಿ ಮಾಡಿ ಕೂರಿಸುವುದು. ಗೋಧಿ ಅಥವಾ ಹಸಿರು ಬೆಳೆ ಸಸಿ ಹಾಕಿರುತ್ತಾರೆ.
ಗಂಧ ಹರಿದ್ರ ಕುಂಕುಮ ಗೆಜ್ಜೆ ವಸ್ತ್ರ ಹೂಗಳಿಂದ ಪೂಜೆ ಮಾಡಿ ಅನ್ನ ಪಾಯಸ ನೇವಿದ್ಯೆ ತೋರಿಸಿ ಸಾಯಂಕಾಲ ಮತ್ತೊಮೆ ಕೋಸಂಬರಿ ಮತ್ತು ಪಾನಕ ನೈವೀದ್ಯೆ ತೋರಿಸಬೇಕು.
ಸುಹಾಸಿನಿಯರನ್ನು ಮನೆಗೆ ಕರೆದು, ಅರಿಶಿಣ ಕುಂಕುಮ, ಹೂವು, ಎಲೆ ಅಡಿಕೆ ಊಡಿ ತುಂಬುವುದು.ಜೊತೆಗೆ ಕೋಸಂಬರಿ ಪಾನಕ ಕೊಡುವ ಪದ್ಧತಿ.
ಹಿರಿಯರಿಂದ ತಿಳಿದು ಬಂದ ಕೆಥೆ ಎಂದರೆ, ಪಾರ್ವತಿ ದೇವಿಯು ಚೈತ್ರ ಮಾಸ ಒಂದು ತಿಂಗಳು ತನ್ನ ಎರಡು ಮಕ್ಕಳಾದ ಗಣೇಶ ಹಾಗು ಷಣ್ಮುಖನನ್ನು ಕರೆದುಕೊಂಡು ತವರುಮನೆಗೆ ಬಂದು ಸುಖವಾಗಿ ಕಾಲ ಕಳೆಯುತ್ತಾಳೆ. ಅಕ್ಷಯ ತೃತೀಯಾದಂದು ಪೂಜೆ ಕೊನೆಗೊಳ್ಳಿಸುವುದು. ಆ ದಿನ ಭಕ್ತರ ಭಕ್ತಿಗೆ ಮೆಚ್ಚಿ, ಧನ ಧನ್ಯ ಸಮೃದ್ಧಿ, ಜ್ಞಾನ ಭಕ್ತಿ ವೈರಾಗ್ಯ ಅಕ್ಷಯವಾಗಲಿ ಎಂದು ಆಶೀರ್ವಾದ ಕೊಟ್ಟು, ತನ್ನ ಪತಿಯಾದ ಶಿವನ ಮನೆಗೆ ಹಿಂದಿರುಗುತ್ತಾಳೆ.
ಹಾಗೇ ಹೊಸದಾಗಿ ಮದುವೆಯಾದ ಮದುಮಗಳ ಕಡೆಯಿಂದ ಚೈತ್ರ ಗೌರಿ ಪೂಜೆ ಮಾಡಿ, ಸುಹಾಸಿನಿಯರನ್ನು ಮನೆಗೆ ಕರೆದು ಕಾಲು ತೊಳೆದು, ಅರಿಶಿನ ಕುಂಕುಮ, ಗಂಧ, ಹೂವು ಎಲೆ ಅಡಿಕೆ ಕೊಡಿಸಿ ಬಂದ ಮುತ್ತೈದೆಯರಿಗೆ ಊಡಿ ತುಂಬಿಸುತ್ತಾರೆ. ಹಾಗು ಕೋಸಂಬರಿ ಪಾನಕ ಕೊಡುತ್ತಾರೆ.
ಇನ್ನು ರಾಮನವಮಿಯಂದು ಶ್ರೀ ರಾಮಚಂದ್ರನು ಚೈತ್ರ ಶು|| ನವಮಿ ಮಧ್ಯಾಹ್ನ ಸರಿಯಾಗಿ 12 ಘಂಟೆಗೆ ಅವತರಿಸಿದರೆ ಚೈತ್ರ ಹುಣ್ಣಿಮೆ ಸೂರ್ಯೋದಯಕ್ಕೆ ಸರಿಯಾಗಿ ಹನುಮಂತನ ಅವತಾರವಾಗುತ್ತದೆ. ಈ ವೇಳೆಗೆ ಭಕ್ತರೆಲ್ಲರೂ ಸ್ನಾನ ಮಾಡಿ ಮಡಿಯಿಂದ ದೇವರನ್ನು ತೊಟ್ಟಿಲಲ್ಲಿ ಹಾಕಿ ಆರತಿ ಮಾಡಿ ವಿವಿಧ ವಾದ್ಯ ವೈಭವಗಳೊಂದಿಗೆ ಆಚರಿಸುತ್ತಾರೆ.
ಶ್ರೀರಾಮಚಂದ್ರನು ಪರಮಾತ್ಮನೇ ಆದರೂ ಸಾಮಾನ್ಯ ವೀರ ಪುರುಷನಂತೆ ಧರೆಯ ಜನರ ಜೀವನದಲ್ಲಿ ಬರುವ ಕಷ್ಟ ಸುಖವನ್ನು ಎದುರಿಸುವ ರೀತಿ ನೀತಿಗಳನ್ನು ತಾನು ಎದುರಿಸಿ ಸಮಾಜಕ್ಕೆ ತೋರಿಸಿದ್ದಾನೆ.
ಅದರಂತೆ ರಾಮದೂತನಾದ ಹನುಮಂತ ದೇವರ ಉತ್ಸವವು ದೇಶಾದ್ಯಂತ ವಿಜೃಂಬಣೆಯಿಂದ ನಡೆಯುತ್ತದೆ. ಹನುಮಂತ ದೇವರನ್ನು ಸೂರ್ಯೋದಯಕ್ಕೆ ಸರಿಯಾಗಿ ತೊಟ್ಟಿಲಲ್ಲಿ ಹಾಕಿ ಆರಾಧಿಸುವರು.
ಪಾನಕ ಕುಡಿಯಲು ಮತ್ತು ಕೋಸಂಬರಿ ತಿಂದಾಗ ದೇಹದ ಆರೋಗ್ಯಕ್ಕೆ ಒಳ್ಳೆಯದು.ತುಂಬಾ ರುಚಿ ಹಾಗು ಬೇಸಿಗೆಗೆ ಒಳ್ಳೆಯ ಸ್ವಾದಿಷ್ಟ ಇರುತ್ತದೆ. ಇದರಲ್ಲಿ ‘ಸಿ ‘ ಜೀವನ ಸತ್ವ ಹೆರಳವಾಗಿ ಇರುತ್ತದೆ, ಕ್ಯಾಲ್ಸಿಯಂ ಹಾಗು ಮೆಗ್ನೀಷಿಯಂ ಕೂಡ ಇರುತ್ತದೆ. ಬೇಸಿಗೆಯಲ್ಲಿ ಉಷ್ಣವಾಗದಂತೆ ನೋಡಿಕೊಳ್ಳುತ್ತದೆ, ಜೊತೆಗೆ ನೆಗಡಿ ಕೆಮ್ಮು, ಅಲರ್ಜಿ ಹಾಗು ನಿರ್ಜಲೀಕರಣವಾಗದಂತೆ ತಡೆಯುತ್ತದೆ.
ನಮ್ಮ ಸಂಪ್ರದಾಯಗಳು ಸಾಮಾಜಿಕ ಹಾಗು ವೈಜ್ಞಾನಿಕ ತಳಹದಿಯ ಮೇಲೆ ಬೆಳೆದು ಬಂದಿವೆ, ನೆರೆಹೊರೆಯವರನ್ನು, ಭೇಟಿಯಾಗಲು ಇದೊಂದು ಸದಾವಕಾಶ, ಸಮರಸದಿಂದ ಇರುವುದೇ ಈ ಹಬ್ಬಗಳ ಪ್ರಮುಖ ಉದ್ದೇಶಗಳಲ್ಲಿ ಒಂದು.
ನಮ್ಮ ನಮ್ಮ ಭಾರತ ಸಂಸ್ಕೃತಿಯ ಆಚರಣೆಯಲ್ಲಿನ ಪ್ರತಿ ಹಬ್ಬವು ನಮಗೆ ಒಂದೊಂದು ಪಾಠ ಪಾಠ ಹೇಳುತ್ತದೆ.
ನಾವುಗಳೆಲ್ಲರೂ ಹಬ್ಬಗಳ ಮಹತ್ವ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಹೋಗೋಣ
✍️ಪ್ರಿಯಾ ಪ್ರಾಣೇಶ ಹರಿದಾಸ
(8050436752)