ಅಣಕವಾಡು : ಕಾಮನಬಿಲ್ಲು

Must Read

  ಕಾಮನಬಿಲ್ಲು

ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!
ಖುಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?

ಕಣ್ಣಾಗ ಮಿಣುಕೇನ ಮಾರ್ಯಾಗ ಬೆಳಕೇನ
ಮಾತ್ನ್ಯಾಗ ಖಡಕೇನ !
ಭಾರಿ ರುಮಾಲೇನ ಬಣ್ಣ ಬಾಸಿಂಗೇನ
ಜರತಾರಿ ದೋತ್ರೇನ !

ನಿಂತಲ್ಲಿ ನಿಲ್ಲಲಿಲ್ಲ ಕುಂತಲ್ಲಿ ಕೂಡಲಿಲ್ಲ
ಜಿಂಕ್ಹಾಂಗ ಜಿಗಿದೆಲ್ಲಾ !
ಕಡಗದ ಕೈಯಾಕಿ ಕೈಹಿಡಿದು ಬಂದಾಗ
ಭೂಮ್ಯಾಗ ಇರಲಿಲ್ಲಾ !

ಬಾಳೀನ ಬವಣೆಯ ಸಾವಿರದಲೆಗಳು
ಮಾರಿಗೆ ಬಡಿದಾಗ
ಸೊರಸೊರಗಿ ಸಣ್ಣಾದಿ ಬಡತನದ ಭೂತವು
ಬೆನ್ನತ್ತಿ ಬಂದಾಗ !

ಸರಸೀರೆ ತರದಾಗ ಮೂದಲಿಸಿ ನುಡಿದಾಗ
ಚಿಂತ್ಯಾಗ ಸೋತೇನ ?
ಕಾಮನಬಿಲ್ಲಿನ ಬಣ್ಣಕ ಮಳ್ಳಾಗಿ
ಹಿಡಿಯಾಕ ಹೋದೇನ ?

ಹಂಗಾಮು ಬಂದಾಗ ಹ್ಯಾಂಗಿತ್ತು ನಿನಚಿತ್ತ
ನವಿಲ್ಹಾಂಗ ಕುಣಿತಿತ್ತ ?
ಸುಟ್ಟ ಗೆಣಸಿನ್ಹಾಂಗ ಸಪ್ಪಗ ನಿನಮಾರಿ
ಕಾಂಬುದು ಈ ಹೊತ್ತ ?

ಋಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?
ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!

ಎನ್.ಶರಣಪ್ಪ ಮೆಟ್ರಿ

(ದ.ರಾ. ಬೇಂದ್ರೆ ಕವನ
ಹಳ್ಳದ ದಂಡ್ಯಾಗ‌ಮೊದಲಿಗೆ ಕಂಡಾಗ ಧಾಟಿಯಲ್ಲಿ)

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group