spot_img
spot_img

ಆಧುನಿಕ ಭಗೀರಥ ಎಮ್.ಸಿ.ಮನಗೂಳಿ ಅವರ ನೆನಪು ಚಿರಸ್ಮರಣೀಯ

Must Read

- Advertisement -

(ದಿನಾಂಕ 28.01.2024 ರಂದು ದಿ. ಶ್ರೀ ಎಮ್.ಸಿ ಮನಗೂಳಿ ಅವರ ಮೂರನೇ ಪುಣ್ಯ ಸ್ಮರಣೆಯ ನಿಮಿತ್ತ ಲೇಖನ.)

ಸಿಂದಗಿ: “ಶಕ್ತಿ ಇದ್ದಾಗ ದುಡಿಯಬೇಕು, ರೊಕ್ಕ ಇದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರ ಇದ್ದಾಗ ಕೆಲಸ ಮಾಡಬೇಕು”. ಎಂದು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಮಾಜಿ ಸಚಿವ ಆಧುನಿಕ ಭಗೀರಥ, ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಮ್.ಸಿ. ಮನಗೂಳಿಯವರು ನಮ್ಮನ್ನಗಲಿ ಇಂದಿಗೆ ಮೂರು ವರ್ಷವಾಯಿತು ಆದರೂ ಅವರು ಮಾಡಿದ ಸೇವೆ, ಕೆಲಸ-ಕಾರ್ಯಗಳಿಂದಾಗಿ ಜನಮಾನಸದಲ್ಲಿ ಅವರ ನೆನಪು ಸದಾ ಹಚ್ಚ ಹಸಿರಾಗಿದೆ. ಆದರ್ಶವಾಗಿ ಬಾಳಿ ಬದುಕಿ ತಮ್ಮ ಸ್ವ ಸಾಮರ್ಥ್ಯ ಮತ್ತು ಪ್ರಯತ್ನಗಳಿಂದ ಶೂನ್ಯದಿಂದ ಶಿಖರಕ್ಕೇರಿದ ಮನಗೂಳಿಯವರ ಜೀವನ ಯುವ ಜನಾಂಗಕ್ಕೆ  ಸ್ಪೂರ್ತಿಯಾಗಬಲ್ಲದು. ಶ್ರಮ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡ ಅವರ ಮಾನವೀಯ ಅನುಕಂಪ, ಸಾಮಾಜಿಕ ಕಳಕಳಿ, ರೈತಪರ ಕಾಳಜಿ, ಧೈರ್ಯ, ಸಾಹಸ, ಆತ್ಮವಿಶ್ವಾಸ, ಪರಿಶ್ರಮಗಳು, ಗಟ್ಟಿಬಾಳಿನ ದಿಟ್ಟವ್ಯಕ್ತಿತ್ವ ನಮ್ಮೆಲ್ಲರಿಗೆ ಆದರ್ಶ ಮತ್ತು ಅನುಕರಣೀಯ, ಹೋರಾಟವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಮನಗೂಳಿಯವರು ಗ್ರಾಮ ಸೇವಕನಿಂದ ಗ್ರಾಮೀಣಾಭಿವೃದ್ಧಿ ಸಚಿವರಾದದ್ದು ಸಾಮಾನ್ಯ ಸಾಧನೆಯೇನಲ್ಲ! ಪಾದರಸದಂತೆ ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದ ಅವರದು ಮೃದುಮಾತು, ತೀಕ್ಷ್ಣಮತಿ, ತ್ವರಿತ ನಿರ್ಧಾರಗಳೇ ಅವರ ಯಶಸ್ಸಿನ ಗುಟ್ಟು. ಮನಗೂಳಿಯವರು ಸಮಾಜ ಸೇವಕರಾಗಿ, ಶಿಕ್ಷಣ ಪ್ರೇಮಿಯಾಗಿ, ಸಹಕಾರಿ ಧುರೀಣರಾಗಿ, ಕ್ರಿಯಾಶೀಲ, ರಾಜಕಾರಣಿಯಾಗಿ ಮಾಡಿದ ಅನುಪಮ ಸೇವೆ ಮತ್ತು ಅವರ ಬಹುಮುಖ ವ್ಯಕ್ತಿತ್ವ ಯುವ ಜನಾಂಗಕ್ಕೆ ಪ್ರೇರಕವಾಗಿದೆ. ಹಲವಾರು ಗುಣಗಳ ಗ(ಧ)ಣಿಯಾಗಿದ್ದ ಮನಗೂಳಿಯವರ ಮೂರನೇ ಪುಣ್ಯಸ್ಮರಣೆಯ ಅವಿಸ್ಮರಣಿಯ.

ಪ್ರತಿಯೊಬ್ಬ ಪುರುಷ ಸಾಧಕನ ಹಿಂದೆ ಓರ್ವ ಸ್ತ್ರೀ ಇರುತ್ತಾಳೆ ಎಂಬಂತೆ ಮನಗೂಳಿಯವರ ಸಾಧನೆಯ ಹಿಂದಿನ ಶಕ್ತಿ ಅವರ ಧರ್ಮಪತ್ನಿ ಸಿದ್ದಮ್ಮಗೌಡ್ತಿಯೆಂದರೆ ತಪ್ಪಾಗಲಾರದು. ಧಾರ್ಮಿಕ ಮನೋಭಾವದ ಸಿದ್ದಮ್ಮಗೌಡ್ತಿ ಸದಾಭಕ್ತಿಯಿಂದ ಪೂಜೆ ಪುನಸ್ಕಾರಗಳಲ್ಲೇ ತಮ್ಮನ್ನು ತೊಡಗಿಸಿಕೊಂಡು ಪತಿಗೆ ಯಾವುದೇ ತೊಂದರೆಯಾಗದಂತೆ ಸದಾ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. ಬಡತನವಿದ್ದಾಗ ಕುಗ್ಗದೇ ಸಿರಿತನ ಬಂದಾಗ ಹಿಗ್ಗದೇ ಸದಾ ಶಿವಧ್ಯಾನದಲ್ಲಿರುತ್ತಿದ್ದರು. ಮನಗೂಳಿಯವರದು ನಾಲ್ಕು ಜನ ಗಂಡು ಮಕ್ಕಳು ಓರ್ವ ಹೆಣ್ಣು ಮಗಳನ್ನು ಹೊಂದಿದ ಸಂತೃಪ್ತ ಕುಟುಂಬ. ಅವರು ನೌಕರಿಯೊಂದಿಗೆ ವ್ಯಾಪಾರೊದ್ಯೋಗ ಮಾಡಿ ರೈತರ ಅಭಿವೃದ್ಧಿಗೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ..

- Advertisement -

ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿ ಅದರ ಅಧ್ಯಕ್ಷರಾಗುವುದರ ಮೂಲಕ ಮನಗೂಳಿಯವರ ರಾಜಕೀಯ ಹೆಜ್ಜೆ ಆರಂಭಿಸಿ. ಸಣ್ಣ ಗುರಿ ಅಪರಾಧ ಎಂಬಂತೆ ಮನಗೂಳಿಯವರದು ಸದಾ ದೊಡ್ಡ ಗುರಿ. ಮಹತ್ವಕಾಂಕ್ಷಿಯಾಗಿದ್ದ ಅವರ ಚಿತ್ತ ವಿಧಾನಸೌಧದತ್ತ ಇತ್ತು. ಅವರು ತಮ್ಮ ಆ ಕನಸನ್ನು ನಿರಂತರ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ನನಸಾಗಿಸಿಕೊಂಡರು. 1989ರಲ್ಲಿ ವಿಧಾನಸಭೆಯ ಚುನಾವಣೆಗೆ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿ ಸೋತರು. ಸೋಲು ಗೆಲುವಿನ ಸೋಪಾನ ಎಂದು ತಿಳಿದ ಅವರು 1994ರಲ್ಲಿ ಪುನಃ ವಿಧಾನಸಭೆಗೆ ಸ್ಪರ್ಧಿಸಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಮೊದಲ ಬಾರಿಗೆ ಶಾಸಕರಾದರು. ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದಂತೆ ಶಾಸಕರಾಗಿ ಸಿಂದಗಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿ ಕೆರೆ ನಿರ್ಮಾಣ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವವರೆಗೆ ಬರಿಗಾಲಿನಿಂದ ನಡೆದು ಬರದ ನಾಡಿಗೆ ನೀರು ಹರಿಸಿ ಆಧುನಿಕ ಭಗೀರಥ ರೆಂಬ ಅಭಿದಾನಕ್ಕೆ ಪಾತ್ರರಾದರು. ಶಾಸಕ ಮನಗೂಳಿಯವರ ಕ್ರಿಯಾಶೀಲ ವ್ಯಕ್ತಿತ್ವ ಜನಪರ ರೈತಪರ ಕಾಳಜಿಯ ಫಲವಾಗಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರಾಗಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. 1999 ರಿಂದ 2018ರವರೆಗೆ ಮನಗೂಳಿಯವರು ರಾಜಕೀಯ ಅಜ್ಞಾತವಾಸ ಅನುಭವಿಸಿದರು. ಆದರೂ ನಿರಾಸೆಗೊಳ್ಳದೆ ಜನಸೇವೆಯೇ ಜನಾರ್ಧನ ಸೇವೆಯೆಂದು ತಿಳಿದು ಸದಾ ಜನಸೇವೆಯಲ್ಲಿ ತೊಡಗಿದರು.

2018ರಲ್ಲಿ ವಿಧಾನಸಭಾ ಚುನವಾಣೆಗೆ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿ “ಇದು ನನ್ನ ಕೊನೆಯ ಚುನಾವಣೆ, ಮನಗೂಳಿ ಬಿದ್ದ ಸತ್ತ ಅನಿಸಬ್ಯಾಡರಿ. ಗೆದ್ದ ಸತ್ತ ಅಂತ ಅನಸಿರಿ. ಸತ್ತ ಮ್ಯಾಲ ಹಾರ ಹಾಕುವುದಕ್ಕಿಂತ ಗೆಲ್ಲಿಸಿ ಹಾರ ಹಾಕರಿ” ಎಂದು ಮತದಾರ ಪ್ರಭುವಿನಲ್ಲಿ ವಿನಂತಿಸಿದಾಗ ಸಿಂದಗಿಯ ಮತಕ್ಷೇತ್ರದ ಮತದಾರರು ಜಾತ್ಯಾತೀತವಾಗಿ ಬೆಂಬಲಿಸಿ ಮತ್ತೊಮ್ಮೆ ಶಾಸಕರನ್ನಾಗಿಸಿದರು. ಶಾಸಕರಾದ ಮನಗೂಳಿಯವರು ಸಮ್ಮಿಶ್ರ ಸರಕಾರದಲ್ಲಿ ಎರಡನೇ ಬಾರಿಗೆ ತೋಟಗಾರಿಕಾ ಸಚಿವರಾದರು. ಹಾಗೆಯೇ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಸಚಿವರಾಗಿ ಆಲಮೇಲನ್ನು ತಾಲೂಕಾ ಕೇಂದ್ರವಾಗಿಸಿದರು. ಆಲಮೇಲಕ್ಕೆ ತೋಟಗಾರಿಕಾ ಕಾಲೇಜನ್ನು ಮಂಜೂರು ಮಾಡಿಸಿದರು. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಲು ರೂ 19 ಕೋಟಿ ಮಂಜುರಾತಿ ತಂದರು. ಸಿಂದಗಿ ಪಟ್ಟಣದ ಒಳಚರಂಡಿ ಕಾಮಗಾರಿಗಾಗಿ ರೂ. 92 ಕೋಟಿ ಹಣ ಬಿಡುಗಡೆಗೊಳಿಸಿದರು. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ರೂ. 9.75 ಕೋಟಿ ಹಣ ಬಿಡುಗಡೆ ಮಾಡಿಸಿದರು. ಸಿಂದಗಿ ಪಟ್ಟಣದ ಪ್ರತಿ ವಾರ್ಡಿಗೆ ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಪಡಿಸಿದರು. ರಸ್ತೆಗಳ ಅಗಲೀಕರಣ ಮತ್ತು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿದರು. ರೂ 53 ಕೋಟಿ ವೆಚ್ಚದ ಕಡಣಿ ಬ್ಯಾರೇಜ್ ಮಂಜೂರಾತಿ ತಂದರು.  ಇನ್ನು ಅನೇಕ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ ಮನಗೂಳಿಯವರು ಅಕಾಲಿಕವಾಗಿ ನಮ್ಮನ್ನು ಅಗಲಿದರೂ ಸಹ ಅವರ ಅಭಿವೃದ್ಧಿ ಕೆಲಸಗಳ ಮೂಲಕ ಸದಾ ನೆನಪಿನಲ್ಲಿದ್ದಾರೆ.

ಜಾತ್ಯತೀತ ಮನೋಭಾವ ಹೊಂದಿದ್ದ ಮನಗೂಳಿಯವರು ಜಾತಿಗಿಂತ ನೀತಿಯೇ ಮುಖ್ಯ ಎನ್ನುತ್ತಿದ್ದರು. ಸರ್ವಧರ್ಮದವರೊಂದಿಗೆ ಸೌಹಾರ್ದತೆಯ ಮನೋಭಾವನೆ ಹೊಂದಿದ್ದರು. ಧಾರ್ಮಿಕ ಸೇವಾ ಮನೋಭಾವ ಹೊಂದಿದ್ದ ಅವರು ಪೂಜ್ಯಶ್ರೀ ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ 21 ಜೋಡಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿ ಜನಮೆಚ್ಚುಗೆ ಪಡೆದರು. ಮನಗೂಳಿಯವರು ಜೆ.ಡಿ.ಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರೊಬ್ಬ ಚತುರ ಮುತ್ಸದ್ಧಿ ರಾಜಕಾರಣಿ. ರಾಜಕೀಯವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದ ಅವರು ರಾಜಕೀಯ ಏಳುಬೀಳುಗಳಲ್ಲಿ ಎದ್ದು ಬಿದ್ದು ಗೆದ್ದು ಎಲ್ಲ ವರಸೆಗಳನ್ನು ಕರತಲಾಮಲಕ ಮಾಡಿಕೊಂಡವರು ಶಾಸಕರಾಗಿ, ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು.

- Advertisement -

ಮನಗೂಳಿಯವರದು ಆಕರ್ಷಕ ವ್ಯಕ್ತಿತ್ವ. ಹಸನ್ಮುಖಿ ಸದಾ ಸುಖಿ ಎಂಬಂತೆ ಅವರು ನಗುನಗುತ್ತಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಗ್ರಾಮೀಣ ಸೊಗಡು ದೇಸಿಯ ಸಂಸ್ಕೃತಿ ಪ್ರತೀಕ ಅವರ ವ್ಯಕ್ತಿತ್ವ. ಧಣಿಯವರೆಯದ ದುಡಿಮೆಗಾರ, ಜನಪರ ಕಾಳಜಿಯ ನಾಯಕ, ಬರದ ನಾಡಿನ ಭಗೀರಥ, ಛಲದಂಕ ಮಲ್ಲ, ರೈತ ಮಿತ್ರ. ಹುಟ್ಟು ಹೋರಾಟಗಾರ, ಬಹುಮುಖ ವ್ಯಕ್ತಿತ್ವದ ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಮ್.ಸಿ. ಮನಗೂಳಿಯವರು ಇಂದಿಗೆ ನಮ್ಮನ್ನಗಲಿ ಮೂರು ವರ್ಷವಾಯಿತು. ಇಂದು ಅವರ  ಮೂರನೇ ಪುಣ್ಯಸ್ಮರಣೆಯನ್ನು ಆಚರಿಸುತ್ತಿದ್ದೇವೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ಸಿಂದಗಿ ಮತಕ್ಷೇತ್ರಕ್ಕೆ ಅವರು ಮಾಡಿದ ಜನಪರ ಸೇವಾಕಾರ್ಯಗಳ ಮೂಲಕ ಜನಮಾನಸದಲ್ಲಿ ಅವರ ನೆನಪು ಸದಾ ಹಚ್ಚಹಸಿರಾಗಿದೆ. ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ಅವರು ಅನನ್ಯ ಕೊಡುಗೆ ನೀಡಿದ್ದಾರೆ. ಅವರೊಬ್ಬ ನಾಡು ಕಂಡ ಅಪರೂಪದ ರಾಜಕಾರಣಿ. ಸಿಂದಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದ ಕನಸುಗಾರ ಮನಗೂಳಿಯವರ ಅಕಾಲಿಕ ಅಗಲಿಕೆ ಅವರ ಅಭಿಮಾನಿಗಳಿಗೆ ದುಃಖವಾದರೂ ಅವರು ಮಾಡಿದ ಕಾರ್ಯಸಾಧನೆಗಳು ಸಿಂದಗಿ ತಾಲೂಕಿನ ಜನಮಾನಸದಲ್ಲಿ ಜೀವಂತವಾಗಿವೆ ಎಂದು ಹೇಳಿದರೆ ತಪ್ಪಾಗಲಾರದು.


ಪಂಡಿತ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group