spot_img
spot_img

ಬಹುಶ್ರುತ ವಿದ್ವಾಂಸ ಡಾ. ವೀರಣ್ಣ ರಾಜೂರ

Must Read

- Advertisement -
[ನಾಳೆ ದಿನಾಂಕ: ೩-೮-೨೦೨೪ರಂದು ದಾವಣಗೆರೆಯಲ್ಲಿ ಡಾ. ವೀರಣ್ಣ ರಾಜೂರ ಗುರುಗಳಿಗೆ ‘ಆರೂಢ ದಾಸೋಹಿ ಮಾಗನೂರ ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಈ ನಿಮಿತ್ತ ಡಾ. ರಾಜೂರ ಗುರುಗಳಿಗೆ ಅಭಿನಂದನ ನುಡಿಗಳು]

ಡಾ. ವೀರಣ್ಣ ರಾಜೂರ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ವಚನ ಸಾಹಿತ್ಯ ಸಂಪಾದನಕಾರರಾಗಿ ಸೇವೆ ಸಲ್ಲಿಸಿದ ಅಪರೂಪದ ವಿದ್ವಾಂಸರು. ನಿಸ್ಪೃಹ-ನಿರಾಡಂಬರ ಜೀವಿಗಳು. ವೃತ್ತಿ ಬದುಕಿನಲ್ಲಿ ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಚಿಂತನಶೀಲ-ಸೋಪಜ್ಞತೆಯುಳ್ಳ ಡಾ. ರಾಜೂರ ಅವರು ಗುಣಗ್ರಾಹಿಗಳು. ಶಿಷ್ಯ ಸಂಕುಲಕ್ಕೆ ನಿರಪೇಕ್ಷ ಮನೋಭಾವದಿಂದ ವಿದ್ಯಾದಾನಗೈದ ಸೌಜನ್ಯಶೀಲ ವ್ಯಕ್ತಿಗಳು. ಅವರ ಪುಸ್ತಕ ಪ್ರೀತಿ-ಶಿಷ್ಯ ವಾತ್ಸಲ್ಯ, ಶೈಕ್ಷಣಿಕ ಶಿಸ್ತು ಅನನ್ಯವಾದುದು.

ಪ್ರತಿಭೆ ಮತ್ತು ಪಾಂಡಿತ್ಯಗಳ ಸಂಗಮವಾಗಿರುವ ಡಾ. ವೀರಣ್ಣ ರಾಜೂರ ಅವರು ಕನ್ನಡ ಸಾರಸ್ವತ ಪ್ರಪಂಚಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಸ್ಮರಣೀಯ. ಕನ್ನಡ ಪ್ರಾಧ್ಯಾಪಕ ಮತ್ತು ಸಂಶೋಧಕ ವಿದ್ವಾಂಸ ಎನ್ನುವ ಸಾಂಸ್ಕೃತಿಕ ಧ್ವನಿ ತರಂಗಕ್ಕೆ ಸಂವೇದನಾಶೀಲರಾದವರು. ತಮ್ಮ ಸವ್ಯಸಾಚಿ ವ್ಯಕ್ತಿತ್ವ ಕಾರಣವಾಗಿ ಆತ್ಮೀಯ ವಲಯದಲ್ಲಿ ‘ಅಜಾತ ಶತ್ರು’ ಎಂದೇ ಹೆಸರಾದವರು. ಕನ್ನಡ ಸಾಹಿತ್ಯದ ಅಪೂರ್ವ ಅಂತಃಸತ್ವವಾಗಿರುವ ವಚನ ಸಾಹಿತ್ಯವನ್ನು ಕುರಿತು ಆಳವಾದ ಅಧ್ಯಯನ ಮಾಡಿದ ಡಾ. ವೀರಣ್ಣ ರಾಜೂರ ಅವರು ರಚಿಸಿದ ಕೃತಿಗಳು ನಾಡವರ ಗಮನ ಸೆಳೆದಿವೆ. ಅವರ ಬಹುಮುಖ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಬಹುದೊಡ್ಡ ವಿಶೇಷತೆಯೆಂದರೆ ವಿನಯ ಮತ್ತು ವಿದ್ವತ್ತು.

ವಚನ ಸಾಹಿತ್ಯವನ್ನು ಅಪಾರ ಪ್ರಮಾಣದಲ್ಲಿ ಬೆಳಕಿಗೆ ತಂದ ಡಾ. ಆರ್. ಸಿ. ಹಿರೇಮಠ ಅವರು ಡಾ. ಎಂ. ಎಂ. ಕಲಬುರ್ಗಿ ಅವರನ್ನು ತಮ್ಮ ‘ಉತ್ತರಾಧಿಕಾರಿ’ ಎಂದು ಕರೆದಿದ್ದರು. ಡಾ. ಕಲಬುರ್ಗಿಯವರು ತಮ್ಮ ಉತ್ತರಾಧಿಕಾರಿ ಡಾ. ವೀರಣ್ಣ ರಾಜೂರ ಎಂದು ಅತ್ಯಂತ ಅಭಿಮಾನದಿಂದ ಹೇಳಿದ್ದರು. ಡಾ. ಕಲಬುರ್ಗಿ ಅವರ ಸಂಶೋಧನೆ, ವಚನ ಸಾಹಿತ್ಯ ಸಂಪಾದನೆ ಕ್ಷೇತ್ರವನ್ನು ಇನ್ನಷ್ಟು ಸಮೃದ್ಧಗೊಳಿಸಿದ ಕೀರ್ತಿ ಡಾ. ರಾಜೂರ ಅವರದು.

- Advertisement -

೧೯೪೭, ಭಾರತೀಯರ ಪಾಲಿಗೆ ಒಂದು ಸುವರ್ಣ ಪರ್ವಕಾಲ. ಭಾರತಕ್ಕೆ ಸ್ವಾತಂತ್ರ್ಯಸೂರ್ಯ ಉದಯಿಸುತ್ತಿರುವ ಸಂಕ್ರಮಣ ಸಂದರ್ಭ. ಇದೇ ವರ್ಷ ಜೂನ ೪ ರಂದು ವೀರಣ್ಣ ರಾಜೂರ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಜನಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಅಸ್ತಿತ್ವಕ್ಕೆ ತಂದು, ಕನ್ನಡ ಭಾಷೆ-ಸಾಹಿತ್ಯ ಸಂಸ್ಕೃತಿಗಳ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸಿದ ಡಾ. ಆರ್. ಸಿ. ಹಿರೇಮಠ ಅವರಂಥ ಶ್ರೇಷ್ಠ ವಿದ್ವಾಂಸರ ಸಮರ್ಥ ಮಾರ್ಗದರ್ಶನದಲ್ಲಿ ‘ಕನ್ನಡ ಸಾಂಗತ್ಯ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ ಪಿಎಚ್.ಡಿ. ಪದವಿ ಪಡೆದರು. (೧೯೭೭)

ಡಾ. ಆರ್. ಸಿ. ಹಿರೇಮಠರು ವಚನ ಸಾಹಿತ್ಯ ಪ್ರಕಟನ ಯೋಜನೆಯನ್ನು ಯು.ಜಿ.ಸಿ ನೆರವಿನಿಂದ ರೂಪಿಸಿದ್ದರು. ಈ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ (೧೯೭೩) ವೃತ್ತಿ ಬದುಕನ್ನು ಆರಂಭಿಸಿದ ಡಾ. ವೀರಣ್ಣ ರಾಜೂರ ಅವರು ಇಂದಿಗೂ ವಚನ ಸಾಹಿತ್ಯದ ಕುರಿತು ಸಂಶೋಧನೆ-ಸಂಗ್ರಹ-ಸಂಪಾದನಾ ಆಯಾಮಗಳಲ್ಲಿ ದಣಿವರಿಯದೆ ದುಡಿಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ನಂತರ ಕನ್ನಡ ಅಧ್ಯಯನಪೀಠದಲ್ಲಿ ಪ್ರಾಧ್ಯಾಪಕರಾಗಿ(೧೯೭೬), ಪ್ರವಾಚಕರಾಗಿ, ವಿಭಾಗ ಮುಖ್ಯಸ್ಥರಾಗಿ ಬಹುಮುಖ ಸೇವೆ ಸಲ್ಲಿಸಿದರು. ಕನ್ನಡ ಪ್ರಾಧ್ಯಾಪಕರಾಗಿ ಡಾ. ರಾಜೂರ ಅವರು ಕನ್ನಡ ಸಾಹಿತ್ಯದ ಉಳಿವಿಗಾಗಿ ಅಪರೂಪದ ಶಿಷ್ಯ ಪಡೆಯನ್ನು ನಿರ್ಮಿಸಿದರು. ಕನ್ನಡ ಸಾಹಿತ್ಯಕ್ಕೆ ಒಂದು ಘನತೆ ಗೌರವವನ್ನು ತಂದು ಕೊಡುವ ಕಾರ್ಯವನ್ನು ಮಾಡುವುದರ ಜೊತೆಗೆ ಶಿಷ್ಯರಿಂದಲೂ ಮುಂದುವರಿಸಿದವರು. ಪಿಎಚ್.ಡಿ. ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯದ ಅನೇಕ ಉಪೇಕ್ಷಿತ ಕ್ಷೇತ್ರಗಳನ್ನು ಬೆಳಕಿಗೆ ತಂದರು. ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಬಸವೇಶ್ವರ ಪೀಠದ ಮುಖ್ಯಸ್ಥರಾಗಿಯೂ ಅವರು ಮಾಡಿದ ಸೇವೆ ಸ್ಮರಣೀಯವಾದುದು.

- Advertisement -

ಡಾ. ವೀರಣ್ಣ ರಾಜೂರ ಅವರದು ಮೂಲತಃ ಸೃಜನಶೀಲ ಮನಸ್ಸು. ಪ್ರಾರಂಭದಲ್ಲಿ ಅವರು ಕವನ-ನಾಟಕ ರಚನೆಯಲ್ಲಿ ತೊಡಗಿದ್ದರು. ಆದರೆ ಡಾ. ಆರ್. ಸಿ. ಹಿರೇಮಠ, ಡಾ. ಎಂ. ಎಂ. ಕಲಬುರ್ಗಿ ಅವರಂಥ ವಿದ್ವಜ್ಜನರ ಒಡನಾಟ ಕಾರಣವಾಗಿ ವಚನ ಸಾಹಿತ್ಯ ಸಂಶೋಧನೆಯತ್ತ ಮನಸ್ಸು ಮಾಡಿದರು. ಅದಕ್ಕೆ ಅವರು ಬೆಳೆದ ಪರಿಸರವೂ ಕಾರಣವಾಯಿತು.

‘ಯೋಜಕಸ್ತತ್ರ ದುರ್ಲಭಃ’ ಎಂಬ ಮಾತೊಂದಿದೆ. ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಅನುಷ್ಠಾನಕ್ಕೆ ತರುವುದು ತುಂಬ ಕಷ್ಟದ ಕೆಲಸ. ಡಾ. ವೀರಣ್ಣ ರಾಜೂರ ಅವರು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವ ಅನೇಕ ಯೋಜನೆಗಳನ್ನು ರೂಪಿಸಿ, ಅತ್ಯಂತ ಶ್ರಮವಹಿಸಿ ಅನುಷ್ಠಾನಕ್ಕೆ ತಂದವರು. ಯು.ಜಿ.ಸಿ ಪ್ರಧಾನ ಸಂಶೋಧನ ಯೋಜನೆಯಲ್ಲಿ ‘ಸ್ವರವಚನ ಸಾಹಿತ್ಯ ಪರಿವೀಕ್ಷಣೆ ಮತ್ತು ಪರಿಷ್ಕರಣೆ’ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ಕಾಲಮಿತಿಯಲ್ಲಿ ಪೂರೈಸಿದವರು. ತೋಂಟದ ಸಿದ್ಧಲಿಂಗೇಶ್ವರ ಸಮಗ್ರ ಸಾಹಿತ್ಯವನ್ನು ೧೧ ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದರು. ಬಸವೇಶ್ವರ ಪೀಠದ ಬೆಳ್ಳಿಹಬ್ಬದ ನಿಮಿತ್ಯ ಇಪ್ಪತ್ತೈದು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದರು. ಎಲ್ಲಕ್ಕೂ ಮಿಗಿಲಾಗಿ ಡಾ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಸಮಗ್ರ ವಚನ ಸಾಹಿತ್ಯ ಪ್ರಕಟನ ಯೋಜನೆಯ ಸದಸ್ಯರಾಗಿ, ಐದು ವಚನ ಸಂಪುಟಗಳನ್ನು ಸಂಪಾದಿಸುವ ಮೂಲಕ ಈ ಯೋಜನೆಯ ಪರಿಪೂರ್ಣತೆಗೆ ಸಾಕ್ಷಿಯಾದರು. ಡಾ. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ, ಡಾ. ಜ.ಚ.ನಿ. ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ ಸಂಪಾದಕ ಮಂಡಳಿ ಸದಸ್ಯರಾಗಿ ಡಾ. ರಾಜೂರ ಅವರು ಮಾಡಿದ ಕಾರ್ಯ ಅತ್ಯಂತ ಬದ್ಧತೆಯುಳ್ಳದ್ದು. ಇತ್ತೀಚೆಗೆ ಮುರುಘಾಮಠದ ಪ್ರಸಾದ ನಿಲಯ ಶತಮಾನೋತ್ಸವ ಸವಿನೆನಪಿಗಾಗಿ ನೂರೊಂದು ಪುಸ್ತಕಗಳ ಪ್ರಕಟಣ ಯೋಜನೆಯ ಪ್ರಧಾನ ಸಂಪಾದಕರಾಗಿ ದುಡಿಯುತ್ತಿರುವುದು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಡಾ. ರಾಜೂರ ಅವರ ಸಾಹಿತ್ಯ ಸೇವೆ ಬಹುಮುಖವಾಗಿದ್ದರೂ ಅವರನ್ನು ಪ್ರಧಾನವಾಗಿ ಗುರುತಿಸುವುದು ವಚನ ಸಾಹಿತ್ಯ ಸಂಶೋಧಕರೆAದು. ಸಾವಿರಾರು ವಚನಗಳನ್ನು ಮೊದಲ ಬಾರಿಗೆ ಶೋಧಿಸಿದ ಶ್ರೇಯಸ್ಸು ಅವರದು. ಅವರು ‘ನೂರು ಶೋಧ’ ಎಂಬ ಬೃಹತ್ ಸಂಪುಟವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಬಿಡಿಬಿಡಿಯಾಗಿ ಅವರು ಹಸ್ತಪ್ರತಿಗಳಿಂದ ಮೊದಲ ಬಾರಿಗೆ ಶೋಧಿಸಿ ಪ್ರಕಟಿಸಿದ ಕಿರು ಸಾಹಿತ್ಯ ಕೃತಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ವಚನ, ಸ್ವರವಚನಗಳಲ್ಲದೆ, ಶತಕ, ಅಷ್ಟಕ, ದಂಡಕ, ತಾರಾವಳಿ ಮೊದಲಾದ ಉಪೇಕ್ಷೆಗೆ ಒಳಗಾದ ಸಾಹಿತ್ಯ ಪ್ರಕಾರವಿದೆ. ಇಂಥ ಅಪರೂಪದ ಸಾಹಿತ್ಯವನ್ನು ಮೊದಲ ಬಾರಿಗೆ ಕನ್ನಡಿಗರ ಕೈಗೆ ಕೊಟ್ಟವರು ಡಾ. ವೀರಣ್ಣ ರಾಜೂರ ಅವರು.

‘ಉರಿಲಿಂಗದೇವರು ವಚನಗಳು’ ‘ಶಿವಯೋಗ ಪ್ರದೀಪಿಕೆ’, ‘ಶೀಲಸಂಪಾದನೆ’, ‘ಭಕ್ತಾö್ಯನಂದ ಸುಧಾರ್ಣವ’, ‘ಎಲೆಮಲೆಯ ಗುರುಶಾಂತದೇವರ ವಚನ ಸಂಕಲನಗಳು’, ‘ಸರ್ವಜ್ಞನ ವೀರಗಣಸ್ತೋತ್ರದ ವಚನಗಳು’, ‘ಸೂಕ್ಷ್ಮಮಿಶ್ರ ಷಟ್ಸ್ಥಲ’, ‘ಎಲ್ಲ ಪುರಾತನ ಸ್ತೋತ್ರದ ವಚನಗಳು’, ‘ಜ್ಞಾನ ಷಟ್ಸ್ಥಲ ಸಾರ’ ಮೊದಲಾದ ಅಪರೂಪದ ಕೃತಿಗಳನ್ನು ಅನೇಕ ಹಸ್ತಪ್ರತಿ ಆಕರಗಳಿಂದ ಸಂಶೋಧಿಸಿ ಪ್ರಕಟಿಸಿ ವಚನ ಸಾಹಿತ್ಯದ ಅಧ್ಯಯನ ಸಂಶೋಧನೆಗಳಿಗೆ ಅದ್ಭುತವಾದ ಆಕರ ಸಾಮಗ್ರಿಯನ್ನು ಒದಗಿಸಿಕೊಟ್ಟರು. ಕನ್ನಡ ಕವಿ ಚರಿತ್ರೆ ಬರೆದ ಡಾ. ಆರ್. ನರಸಿಂಹಾಚಾರ್ಯರು ಕೇವಲ ೫೭ ಜನ ವಚನಕಾರರನ್ನು ಗುರುತಿಸಿದ್ದರು. ನಂತರ ಡಾ. ಫ.ಗು.ಹಳಕಟ್ಟಿ, ಡಾ. ಆರ್.ಸಿ.ಹಿರೇಮಠ, ಡಾ. ಎಂ. ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರ ಅವರ ಪರಿಶ್ರಮ-ಪರಿಶೋಧನೆ ಕಾರಣವಾಗಿ ಮೂರನೂರಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರು. ಕನ್ನಡ ಸಾಹಿತ್ಯದ ಸಮೃದ್ಧ ಬೆಳೆಯಾದ ವಚನ ಸಾಹಿತ್ಯ ಒಂದು ಪರಿಪೂರ್ಣತೆಯ ಘಟ್ಟ ತಲುಪಿದ್ದು ಡಾ. ಕಲಬುರ್ಗಿ ಮತ್ತು ಡಾ. ರಾಜೂರ ಅವರ ಪ್ರಾಮಾಣಿಕ ಪ್ರಯತ್ನದಿಂದ ಎಂದರೆ ಅತ್ಯುಕ್ತಿ ಎನಿಸಲಾರದು.

ವಚನ ಸಾಹಿತ್ಯ ಸಂಪಾದನೆಯ ಜೊತೆಗೆ ಅದರ ಆಳ-ವಿಸ್ತಾರಗಳನ್ನು ಕುರಿತು ಮೌಲಿಕ ಸಂಶೋಧನಾತ್ಮಕ ಕೃತಿಗಳನ್ನು ಡಾ. ವೀರಣ್ಣ ರಾಜೂರ ಅವರು ಬರೆದರು. ‘ವಚನ ಅಧ್ಯಯನ’, ‘ವಚನ ಸಂಶೋಧನೆ’, ‘ಶರಣ ಸಂಚಯ’, ‘ಬಸವೋತ್ತರ ಯುಗದ ವಚನಕಾರರು’, ‘ಸ್ವರವಚನಗಳು’ ಮೊದಲಾದ ಕೃತಿಗಳು ಅವರ ವಿಚಕ್ಷಣಾ ದೃಷ್ಟಿಗೆ ಸಾಕ್ಷಿಯಾಗಿವೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಯಾರೇ ಆಗಲಿ ಈ ಕೃತಿಗಳನ್ನು ಗಮನಿಸಲಾರದೆ ಮುಂದೆ ಹೋಗಲಾರರು. ಅಷ್ಟರ ಮಟ್ಟಿಗೆ ಅವರು ಅಧಿಕೃತ ಆಕರ ಕೃತಿಗಳಾಗಿವೆ.

ಡಾ. ಹಳಕಟ್ಟಿ ಅವರ ‘ವಚನಶಾಸ್ತ್ರಸಾರ’ ಡಾ. ಭೂಸನೂರಮಠರ ‘ಶೂನ್ಯಸಂಪಾದನೆ’ ಮತ್ತು ‘ಏಕೋತ್ತರ ಶತಸ್ಥಲ’ ಕೃತಿಗಳನ್ನು ಆಧುನಿಕ ಗ್ರಂಥ ಸಂಪಾದನ ದೃಷ್ಟಿಯಿಂದ ಮರುಪರಿಷ್ಕರಣೆ ಮಾಡಿ, ಸಂಪಾದಿಸಿ ಪ್ರಕಟಿಸಿದ ಡಾ. ರಾಜೂರ ಅವರು ಶರಣ ಸಾಹಿತ್ಯದ ವಚನೇತರ ಸಾಹಿತ್ಯ ಪ್ರಕಾರವನ್ನು ಕುರಿತು ಅನೇಕ ಕೃತಿಗಳನ್ನು ಪ್ರಕಟಿಸಿ ಪ್ರಾಚೀನ ಕನ್ನಡ ಸಾಹಿತ್ಯದ ಎತ್ತರ ಬಿತ್ತರಗಳನ್ನು ಗುರುತಿಸಿದ್ದಾರೆ.

ಡಾ. ವೀರಣ್ಣ ರಾಜೂರ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ, ‘ರಂಗಭೂಮಿ’. ತಮ್ಮೂರಿನಲ್ಲಿ ನಡೆಯುತ್ತಿದ್ದ ಜಾತ್ರೆ ಉತ್ಸವಗಳ ಕಾಲಕ್ಕೆ ಪ್ರತಿ ವರ್ಷ ಒಂದು ಹೊಸ ನಾಟಕ ಬರೆದು, ಗ್ರಾಮೀಣ ಜನರಿಂದ ಪ್ರದರ್ಶನಕ್ಕೆ ನಿರ್ದೇಶನ ಮಾಡುತ್ತಿದ್ದ ಡಾ. ರಾಜೂರ ಅವರು ೧೮ಕ್ಕೂ ಮಿಕ್ಕಿ ನಾಟಕಗಳನ್ನು ರಚಿಸಿದ್ದಾರೆ. ವೃತ್ತಿರಂಗ ಸ್ವರೂಪದ ನಾಟಕಗಳು, ಬಾನುಲಿ ನಾಟಕಗಳು, ರೂಪಕಗಳು ಅವರ ಸೃಜನಶೀಲ ಲೇಖನಿಯಿಂದ ಮೂಡಿ ಬಂದಿವೆ. ಅಂತೆಯೆ ಅವರ ಒಟ್ಟು ರಂಗಭೂಮಿ ಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಫ್ ನೀಡಿ ಗೌರವಿಸಿದೆ.

ಡಾ. ವೀರಣ್ಣ ರಾಜೂರ ಅವರು ನಿರಾಡಂಬರ ಸರಳ ವ್ಯಕ್ತಿತ್ವದವರು. ಎಲೆಯ ಮರೆಯ ಕಾಯಿಯಂತೆ ಬದುಕಿದವರು. ಪ್ರಶಸ್ತಿ ಪುರಸ್ಕಾರಗಳಿಗಾಗಿ ನಾನು ಈ ಕೆಲಸವನ್ನು ಮಾಡಿಲ್ಲ ಎಂಬ ವಿನಯವಂತಿಕೆ ನುಡಿ ಅವರದು. ನೂರ ಇಪ್ಪತ್ತೈದಕ್ಕೂ ಮಿಕ್ಕಿ ಕೃತಿಗಳನ್ನು ಪ್ರಕಟಿಸಿ, ಆರು ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರ ಸಾಧನೆ ಗೌರಿಶಂಕರದಷ್ಟು ವಿಶಾಲವಾದುದು. ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಘನ ಸರಕಾರದ ರಾಷ್ಟ್ರೀಯ ಬಸವ ಪುರಸ್ಕಾರ, ಚಿದಾನಂದ ಪ್ರಶಸ್ತಿ, ಡಾ. ಎಂ. ಎಂ. ಕಲಬುರ್ಗಿ ಪ್ರಶಸ್ತಿ, ಡಾ. ಗೊ.ರು.ಚ ಶರಣ ಪ್ರಶಸ್ತಿಗಳು ಪ್ರಾಪ್ತವಾಗಿವೆ.

ಸೌಜನ್ಯಶೀಲ ಬದುಕಿನಿಂದ ವಿನಯ ವಿದ್ವತ್ತು ತುಂಬಿದ ಹಿರಿಯ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ಅವರು ಸಾರ್ಥಕ ೭೦ ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ, ಅವರ ಶಿಷ್ಯರು-ಅಭಿಮಾನಿಗಳು ಕೂಡಿ ‘ರಾಜಮಾರ್ಗ’ ಎಂಬ ಮೌಲಿಕ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.

ನಾಳೆ ದಿನಾಂಕ ೩-೮-೨೦೨೪ರಂದು ದಾವಣಗೆರೆಯಲ್ಲಿ ಡಾ. ವೀರಣ್ಣ ರಾಜೂರ ಅವರಿಗೆ ‘ಆರೂಢ ದಾಸೋಹಿ ಮಾಗನೂರ ಬಸಪ್ಪ ಪ್ರಶಸ್ತಿ’ ಪ್ರದಾನ ಸಮಾರಂಭ ಜರುಗುತ್ತಿದೆ. ವಚನ ಸಾಹಿತ್ಯವನ್ನು ಶಾಸ್ತ್ರಶುದ್ಧವಾಗಿ ಸಂಪಾದಿಸಿ, ಲೋಕಕ್ಕೆ ನೀಡಿದ ಡಾ. ವೀರಣ್ಣ ರಾಜೂರ ಗುರುಗಳಿಗೆ ಇನ್ನೂ ಇಂತಹ ಹತ್ತಾರು ಮಹತ್ವದ ಪ್ರಶಸ್ತಿಗಳು ದೊರಕಲಿ, ಅವರಿಂದ ವಚನ ಸಾಹಿತ್ಯದ ಪುನರುತ್ಥಾನದ ಕಾರ್ಯಗಳು ನಿತ್ಯ ನಿರಂತರ ನಡೆಯುತ್ತಿರಲಿ ಎಂದು ಆಶಿಸುವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
೯೯೦೨೧೩೦೦೪೧

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group