spot_img
spot_img

ನವರಾತ್ರಿ

Must Read

- Advertisement -

ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುವ ಹಬ್ಬದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ಇಲ್ಲಿ ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಈ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

ನವರಾತ್ರಿಯ ವೈಶಿಷ್ಟ್ಯಗಳು

ಹಿಂದೆ ಐದು ನವರಾತ್ರಿ ಆಚರಣೆ ವಿಶೇಷವಾಗಿತ್ತು. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. ಮಂಗಳವಾರದಿಂದ 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. ಪ್ರತಿದಿನ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

- Advertisement -

ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.

ಎರಡನೇ ದಿನ ಅಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ.

ತದಿಗೆ – ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.

- Advertisement -

ಚತುರ್ದಶಿ – ಶೈಲ ಜಾತಾ ದುರ್ಗಾಪೂಜಾ.

ಪಂಚಮಿ – ದೂಮೃಹಾ ದುರ್ಗಾಪೂಜಾ.

ಷಷ್ಠಿ – ಚಂಡ-ಮುಂಡ ಹಾ ದುರ್ಗಾಪೂಜಾ.

ಸಪ್ತಮಿ – ರಕ್ತ ಬೀಜ ಹಾ ದುರ್ಗಾಪೂಜಾ.

ಅಷ್ಟಮಿ – ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಟಮಿ)

ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.

ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿಯನ್ನೂ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.

ಪುರಾಣಗಳಲ್ಲಿ ನವರಾತ್ರಿ:

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ.. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ದಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ ವಿಜಯದಶಮಿ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ವಿಜಯದಶಮಿ ದಿನ ಸಂಹಾರ ಮಾಡಿದನು ಎಂಬ ನಂಬಿಕೆ ಇದೆ.

ದ್ವಾಪರಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಈ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ್ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ್ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ.

ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ

ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರನ್ನವರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.
ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ

ಜಗತ್ತಿನಲ್ಲಿ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರಾದಾಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ

ಅಖಂಡ ದೀಪ ಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

ದಸರಾ ಹಬ್ಬದ ಮಹತ್ವ:

ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ದಸರಾ ಶಬ್ದದ ವ್ಯುತ್ಪತ್ತಿ:

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

ಆಯುಧಪೂಜೆ (ಶಸ್ತ್ರಪೂಜೆ)

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

  • ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನುು.

ಸಂಗ್ರಹ: ಎಮ್ ವೈ ಮೆಣಸಿನಕಾಯಿ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group