ಮ ಠಗಳು ಆಶ್ರಮಗಳು ಮಂಟಪ ಪ್ರತಿಷ್ಠಾನ ಇಂದು ವ್ಯಾಪಾರಿ ಕೇಂದ್ರಗಳಾಗಿವೆ . ಬಸವಣ್ಣ ಬಂಡವಾಳ – ಜನರಿಗೆ ಧರ್ಮವೆಂಬ ಹುಸಿ ಮಾದಕ ನಶೆ ಕೊಟ್ಟು ಅವರನ್ನು ಪೊಳ್ಳು ಆಚರಣೆಗೆ ಹಚ್ಚಿ ಲಿಂಗಾಯತ ಧರ್ಮದ ನಿಜ ಸತ್ವವನ್ನು ವಿರೂಪಗೊಳಿಸಿ ತಮ್ಮ ತಮ್ಮ ಪಾರುಪತ್ಯ ಮೆರೆಯಲು ಮುಗ್ಧ ಭಕ್ತರನ್ನು, ಕಾಳ ಧನಿಕರನ್ನು ಏಕಕಾಲಕ್ಕೆ ಬಳಸಿಕೊಂಡು ಭ್ರಮೆ ಭ್ರಾಂತಿ ಹುಟ್ಟಿಸುವ ವ್ಯವಹಾರವೇ ಮೇಳ ಉತ್ಸವ ಜಾತ್ರೆ ಪರ್ವ ವಿಜಯೋತ್ಸವ ಸಂಸ್ಕೃತಿ.
ಹೀಗೆ ಜನರಿಂದ ಹಣ ಸುಲಿಗೆ ಮಾಡಿ ಅತ್ಯಂತ ಸರಳವಾದ ಶರಣ ಧರ್ಮವನ್ನು ಕಠಿಣ ಮಾಡಿ ಆಚರಣೆಯ ನೆಪದಲ್ಲಿ ಶೋಷಿಸುವ ,ನವ ಪೌರೋಹಿತ್ಯ ಪೋಷಿಸುವ ,ದುಡಿಯದ ಕ್ರೂರ ವ್ಯಕ್ತಿಗಳು ಸ್ವಾಮಿ, ಅಕ್ಕ, ಮಾತೆ ಎಂಬ ಮುಖವಾಡ ಹಾಕಿಕೊಂಡು ಸಿಂಹಾಸನ ಪೀಠಾರೋಹಣ ಮಾಡುತ್ತಿದ್ದಾರೆ.
ಶೂನ್ಯ ಸಿಂಹಾಸನ ಎಂಬುದು ಒಂದು ವಿಲಕ್ಷಣ ಪದಗಳಿಂದ ಕೂಡಿದ ಚಿಂತನೆ ಶೂನ್ಯಸಂಪಾದನೆ ಎನ್ನುವುದು ಉದಾತ್ತೀಕರಣದ ಪರಿಕಲ್ಪನೆ ಬಚ್ಚ ಬರಿಯ ಬಸವ ಪೀಠ. 1705 ರ ವರೆಗೆ ಮಠಗಳು ಆಶ್ರಮಗಳ ವ್ಯವಸ್ಥೆ ಲಿಂಗಾಯತರಲ್ಲಿ ಇರಲಿಲ್ಲ. ಕಟ್ಟಿಗೆ ಹಳ್ಳಿ ಶ್ರೀ ಚೆನ್ನವೀರ ಸ್ವಾಮಿಗಳು ಮೊದಲ ಬಾರಿಗೆ ಲಿಂಗಾಯತರ ಮನೋಭೂಮಿಕೆಯನ್ನು ಅರ್ಥ ಮಾಡಿಕೊಂಡು ಲಿಂಗಾಯತ ತತ್ವಗಳ ಮೇಲೆ ಕಾಳಾಮುಖಿ ಶೈವರು ,ಆರಾಧ್ಯ ಶೈವರು ಸವಾರಿ ಮಾಡಿಕೊಂಡು ಕಾಳಾಮುಖಿ ಶೈವರು ವಿರಕ್ತ ಪೀಠ ಮಾಡಿಕೊಂಡರು ಅದರಲ್ಲಿಯೂ ಸಮಯ ಭೇದ ಇಟ್ಟುಕೊಂಡಿದ್ದರು.
ಆರಾಧ್ಯ ಶೈವರು ಆಗಮಿಕ ಮೂಲದಿಂದ ಬಂದವರು ಅವರು ವೀರಶೈವ ಆಚರಣೆಯನ್ನು ಧರ್ಮವೆಂದು ಸೇರಿಸಿಕೊಂಡು ಪಂಚ ಪೀಠ ಸ್ಥಾಪಿಸಿದರು,. ಪಂಚ ಪೀಠದವರಿಗೆ ಯಾರಿಗೂ ಕನ್ನಡಿಗರ ಸಂಬಂಧವಿಲ್ಲ. ಕೊಲ್ಲಿಪಾಕಿ ಕಾಶಿ ಶ್ರೀಶೈಲ ಉಜ್ಜಯಿನಿ ಕೇದಾರ ಇವರೆಲ್ಲ ಕರ್ನಾಟಕದಿಂದ ಹೊರಗಿನಿಂದ ಬಂದವರು.ವಿರಕ್ತ ಪರಂಪರೆಯವರು ಬಸವಣ್ಣ ಮತ್ತು ಪಂಚ ಪೀಠ ದವರು ರೇಣುಕರನ್ನು ಬಂಡವಾಳಮಾಡಿಕೊಂಡರು.ಆದರೆ ಸರ್ಪ ಭೂಷಣ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಮತ್ತು ಮುರುಗೋಡ ಮಹಾಂತಪ್ಪನವರು ಹೀಗೆ ಶತಮಾನಕ್ಕೆ ಕೆಲವರು ನಿಷ್ಠೆಯಿಂದ ಬಸವ ತತ್ವ ಪ್ರಚಾರ ಮಾಡ ಹತ್ತಿದರು.
ಇತ್ತೀಚೆಗೆ ಮಠಗಳು ಸ್ವಾರ್ಥ ಸ್ವಜಾತಿ ಮೋಹ ,ಗುಂಪುಗಾರಿಕೆ ,ವ್ಯಕ್ತಿ ಪ್ರತಿಷ್ಠೆ ಪ್ರದರ್ಶನ ಇವುಗಳ ಮಧ್ಯೆ ಪ್ರವಚನ ಪುರಾಣ ಮಾಡಿ ಜನರ ಮುಗ್ಧ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ.
ಸಾಕು ಸಾಕು ಇವರ ಸಹವಾಸ ಶತಮಾನಗಳು ಕಳೆದು ಹೋಗಿವೆ ಪಾಶ್ಚಿಮಾತ್ಯರಿಗೆ ಅರ್ಥವಾದ ಬಸವಣ್ಣ ನಮಗೆ ಇನ್ನು ಗುಡಿಯೊಳಗಿನ ವಿಗ್ರಹ ಅಥವಾ ಮಠದೊಳಗಿನ ಬಂಧಿಯು. ಸಮಾನ ಮನಸ್ಕರು ನಿಷ್ಠುರವಾಗಿ ಶರಣ ತತ್ವ ಸಿದ್ಧಾಂತಗಳನ್ನು ರಕ್ಷಿಸದೇ ಹೋದರೆ ಮುಂದೊಂದು ದಿನ ಬಸವಣ್ಣ ಕೇವಲ ಪಠ್ಯಕ್ಕೆ ಚರ್ಚೆಗೆ ಭಾಷಣಕ್ಕೆ ಲೇಖನಕ್ಕೆ ಮಾತ್ರ ಸೀಮಿತವಾಗುತ್ತಾನೆ. ಬಸವಣ್ಣ ಕಂಡ ಸಾರ್ವಕಾಲಿಕ ಸಮತೆ ಕಾಯಕ ದಾಸೋಹ ಲಿಂಗ ತತ್ವವನ್ನರಿತು ಬಸವಾದಿ ಪ್ರಮಥರು ಕಟ್ಟಿದ ಕಲ್ಯಾಣ ರಾಜ್ಯವ ಮತ್ತೆ ಪಡೆಯೋಣ ಸಹಸ್ರ ಸಹಸ್ರ ಕೈಗಳು ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಜನರು ಬೇಕು.ಜೈ ಬಸವಣ್ಣ .
ಡಾ.ಶಶಿಕಾಂತ.ಪಟ್ಟಣ ಪುಣೆ ರಾಮದುರ್ಗ