ವ್ಯಕ್ತಿ ತನ್ನ ಜೀವನದ ವೃತ್ತಾಂತವನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ, ಆತ್ಮಚರಿತ್ರೆ ಎನ್ನುವರು. ವ್ಯಕ್ತಿ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ ಸಾಹಿತ್ಯದಲ್ಲಿ ಕಾಣಬಹುದು. ತನ್ನ ಜೀವನದ ಸಿಹಿಯಾದ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಕಹಿ ನೆನಪುಗಳನ್ನು ಕಳೆದುಕೊಳ್ಳುವುದಕ್ಕಾಗಿ, ಕಲಾಮಯವಾದ ಜೀವನ ಚಿತ್ರವನ್ನು ಕೊಡುವುದಕ್ಕಾಗಿ ಬರೆದಿಡುವುದು ಸಹ ಒಂದು ಉದ್ದೇಶ ಎನಿಸುವದು.
ಆತ್ಮಕಥೆ ಬರವಣಿಗೆ ಎಂದರೆ ಸತ್ಯಶೋಧನೆಯ ಹಾದಿ ಜೀವನದ ಹಾದಿಯಲ್ಲಿ ಕಂಡದ್ದನ್ನು ಕಂಡ ಹಾಗೆ ದಾಖಲಿಸಬೇಕು. ಕಲಾತ್ಮಕವಾಗಿ, ನೈಜವಾಗಿ ರಚಿಸಿದ ವ್ಯಕ್ತಿಯ ಜೀವನ ಚಿತ್ರದ ಕೃತಿ ಓದುವಾಗ ಆ ವ್ಯಕ್ತಿಯೊಡನೆ ಸಂಭಾಷಣೆ ಮಾಡುತ್ತಿದ್ದೇವೆ, ವ್ಯಕ್ತಿಯೊಡನೆ ಇದ್ದೇವೆ ಎಂಬ ಭಾವನೆ ಬಂದರೆ ಉತ್ತಮ ಆತ್ಮಕಥೆ ಎನಿಸುವದು.
ಬೆಳಗಾವಿ ಜಿಲ್ಲೆಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಕವಯಿತ್ರಿ, ವಿಶ್ರಾಂತ ಪ್ರಾಚಾರ್ಯೆ, ಸಮಾಜಮುಖಿ ಚಿಂತಕಿ, ಪಂಚಭಾಷಾ ಪ್ರವೀಣೆ, ಸಂಘಟಕಿ ಡಾ. ಹೇಮಾವತಿ ಸೊನೊಳ್ಳಿ ಅವರ ಆತ್ಮಚರಿತ್ರೆ ‘ಹೇಮಸಿರಿ’ ಪ್ರಕಟವಾಗಿದೆ. ಅವರ ಬಹುಮುಖ ವ್ಯಕ್ತಿತ್ವವನ್ನು ಆತ್ಮಕಥೆಯಲ್ಲಿ ಕಾಣಬಹುದು ಇದಕ್ಕೆ ಸಾಕ್ಷಿಯಾಗಿ ಬೆಳಗಾವಿ ಜಿಲ್ಲೆಯ ಅನೇಕ ಲೇಖಕಿಯರು ಅವರನ್ನು ಅಪರೂಪದ ಸ್ನೇಹಜೀವಿ, ಸವಿಮಾತಿನ ಸರಸಗಾತಿ, ಕ್ರಿಯಾಶೀಲೆ, ಸಂಘಟನಾ ಚತುರೆ, ಶಿಕ್ಷಣ ತಜ್ಞೆ, ಬಂಗಾರದ ಸ್ವಭಾವ, ಮಹಾದಾನಿ ಎಂದಿದ್ದಾರೆ. ಹೇಮಸಿರಿಯ ಹೇಮಕ್ಕಳಿಗೆ ಕವಯತ್ರಿ ಶ್ರೀಮತಿ. ಹೀರಾ ಚೌಗಲೆ ಅವರು ಡಾ|| ಹೇಮಾವತಿ ಅವರ ಬಗ್ಗೆ ‘ಒಡತಿ’ ಎಂಬ ಪ್ರಾಸಬದ್ಧ ಕವನ ರಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಜನಿಸಿ, 1984 ರಲ್ಲಿ ರಾಜ್ಯಶಾಸ್ತ್ರ ಎಂ.ಎ ಪದವಿ ಹೊಂದಿ ನಂದಗಡದ ಎನ್.ಆರ್.ಇ ಸಂಸ್ಥೆಯ ಮಹಾತ್ಮಾಗಾಂಧಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಪ್ರಾರಂಭಿಸಿ 2014 ರಲ್ಲಿ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತಿ ಹೊಂದಿದರು. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಬೋಧಕರಾದರು. ನಂತರ ಎರಡು ಮಹಾ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರ ಜೀವನಾದರ್ಶಗಳು ಶರಣರ ತತ್ವಗಳು. ತಾಳ್ಮೆ, ಸಹನೆ ಅವರ ಮಿತ್ರರು ಕೀಳರಿಮೆಯ ತೊರೆದು ಅತ್ಮ ವಿಶ್ವಾಸದಿಂದ ಕಾರ್ಯಗಳಲ್ಲಿ ತೊಡಗಿರುತ್ತಾರೆ. ‘ನಾಮಾಡಿದೆ. ಎಂಬ ಭಾವನೆ ಇರಬಾರದು’ ‘ಎನಗಿಂತ ಕಿರಿಯರಿಲ್ಲ’ ‘ ಉಪಕಾರಸ್ಮತಿ’ ‘ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ’ ಇರುವ ಸ್ಥಿತಪ್ರಜ್ಞತೆ ‘ಪ್ರತ್ಯುಪಕಾರ ಬಯಸದಿರುವದು: ಅವರ ಜೀವನದ ಮೌಲ್ಯಗಳು.
‘ಮಹಿಳಾ ಸಬಲೀಕರಣ’ ‘ಏಡ್ಸ್ ಜಾಗೃತಿ’ ‘ಮಹಿಳೆಯರಲ್ಲಿ ಕಾನೂನಿನ ಅರಿವು’ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಸಾಮಾಜಿಕ ಕಳಕಳಿಯ ‘ಪ್ರಥ್ವಿ ಪೌಂಡೇಶನ್’ ಸ್ಥಾಪಿಸಿದ್ದಾರೆ. ಕೊರೊನಾ ಸಮಯದಲ್ಲಿ ಜನ ಜಾಗೃತಿಯನ್ನು ಮಾಧ್ಯಮಗಳ ಮೂಲಕ ಕೈಗೊಂಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿ ಸರಕಾರದಿಂದ ಪರಿಹಾರ ಒದಗಿಸಿದ್ದಾರೆ.
ಹೇಮಾವತಿ ಅವರ ಹವ್ಯಾಸಗಳೆಂದರೆ ಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸುವದು, ಭಾಷಣ, ಕಾರ್ಯಕ್ರಮ ನಿರೂಪಣೆ, ನಿರ್ಣಾಯಕಿ, ಬಡವರಿಗೆ. ಅಸಹಾಯಕರಿಗೆ ಸಹಾಯ ಹಸ್ತ, ಬಡ ಮಕ್ಕಳಿಗೆ ಸಹಾಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಕೊಡುವುದು.
ವೈಚಾರಿಕ ಲೇಖನಗಳು, ಪ್ರಬಂಧಗಳು, ಕವನ, ಚುಟುಕು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕವನ ಸಂಕಲನಗಳು, ಕಥಾ ಸಂಕಲನ, ವೈಚಾರಿಕ ಲೇಖನಗಳ ಸಂಕಲನಗಳು, ಸಂಪಾದನಾ ಕೃತಿಗಳು ಪ್ರಕಟವಾಗಿದೆ.
ಡಾ|| ಹೇಮಾವತಿಯವರದು ಸಂತೃಪ್ತ ಕುಟುಂಬ ಪತಿ ಇನ್ಸೂರನ್ಸ್ ಕಂಪನಿ ನಿವೃತ್ತ ಶಾಖಾಧಿಕಾರಿಗಳು ಇಬ್ಬರು ಪುತ್ರಿಯರು, ಡಾಕ್ಟರ್ ಮತ್ತು ಇಂಜನೀಯರ್ ಆಗಿದ್ದಾರೆ. ಪುತ್ರ ದೆಹಲಿ ಸುಪ್ರೀಂ ಕೋರ್ಟನಲ್ಲಿ ವಕೀಲರು.
ಇವರ ಸಾಹಿತ್ಯ ರಚನೆಗೆ ಪ್ರೇರಣೆ ಜನಪದದ ಹಾಡುಗಳು, ಶರಣರ ವಚನಗಳು, ಸರ್ವಜ್ಞನ ತ್ರಿಪದಿಗಳು ಮತ್ತು ದಾಸರ ಪದಗಳು.
ತಮಗೆ ಸಹಾಯ-ಸಹಕಾರ-ಸೌಹಾರ್ದತೆಯನ್ನು ನೀಡಿದ ಕುಟುಂಬದ ఎల్ల ಸದಸ್ಯರನ್ನು ಗೆಳತಿಯರನ್ನು, ಮಾರ್ಗದರ್ಶಕರನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಜನ್ಮ ಕ್ಷೇತ್ರ. ಕಾರ್ಯ ಕ್ಷೇತ್ರ ಖಾನಾಪೂರ ತಾಲೂಕು, ಶಿಕ್ಷಣ ಕ್ಷೇತ್ರ ಕಿತ್ತೂರ. ಪತಿಯ ಊರು ಗೋಕಾಕ, ಸದ್ಯದ ವಾಸಸ್ಥಳ ಬೆಳಗಾವಿ ಹೀಗೆ ನಾಲ್ಕು ತಾಲುಕೂಗಳ ನಂಟನ್ನು ಹೊಂದಿದ್ದಾರೆ.
ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ರಾಜ್ಯ ಮಟ್ಟದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ರಾಜ್ಯ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಖಾನಾಪೂರ ತಾಲೂಕ 7 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಈ ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ಒಳಗೊಂಡ ಅವರ ‘ಹೇಮಸಿರಿ’ ಡಾ|| ಹೇಮಾವತಿ ಅವರ ಸಮಗ್ರ ಪಾರದರ್ಶಕ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ನಿರೂಪಣೆ ಸರಳ ಆತ್ಮೀಯವಾಗಿದೆ.
ಯು ಎನ್ ಸಂಗನಾಳಮಠ
ವಿಶ್ರಾಂತ ಪ್ರಾಚಾರ್ಯರು
ಸಾಹಿತಿಗಳು ಹೊನ್ನಾಳಿ
ಜಿ ದಾವಣಗೆರೆ