spot_img
spot_img

ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ನಿಡಸೋಸಿ ಜಗದ್ಗುರುಗಳು

Must Read

- Advertisement -

ನೂರೈವತ್ತು ವರ್ಷಗಳ ಹಿಂದೆ ಅಥಣಿ ಗಚ್ಚಿನಮಠಕ್ಕೆ ಪೀಠಾಧಿಪತಿಯಾಗುವ ಯೋಗ ಶ್ರೀ ಮುರುಘೇಂದ್ರ ಶಿವಯೋಗಿಗಳಿಗೆ ಒಲಿದು ಬಂದಿತ್ತು. ಆದರೆ ಅವರು ಮಠಾಧಿಕಾರ ಬಯಸಲಿಲ್ಲ. ಭಕ್ತವರ್ಗದ ಒಬ್ಬ ವ್ಯಕ್ತಿಗೆ ಮಠಾಧಿಕಾರ ಒಪ್ಪಿಸಿ ತಾವು ಶಿವಯೋಗ ಸಾಧನೆಯಲ್ಲಿ ನಿರತರಾದರು. ಭಕ್ತವರ್ಗದಿಂದ ಬಂದ ಆ ವ್ಯಕ್ತಿ ತಮ್ಮ ತ್ರಿಕಾಲ ಲಿಂಗಪೂಜಾನುಷ್ಠಾನ ಶಕ್ತಿಯಿಂದ ಪರಮ ತಪಸ್ವಿಗಳಾದರು. ‘ಸಿದ್ಧಲಿಂಗ ಚರವರೇಣ್ಯರು’ ಎಂಬ ಕೀರ್ತಿಗೆ ಭಾಜನರಾದರು. ಅವರಿಂದ ಅನುಗ್ರಹಿತರಾಗಲು ನಾಡಿನ ಲಿಂಗಾಯತ ಮಠಾಧೀಶರು ಹಾತೊರೆಯುತ್ತಿದ್ದರು. ಚಿತ್ರದುರ್ಗ ಮುರುಘಾಮಠದ ಧವಳಕೀರ್ತಿಯನ್ನು ಲೋಕಕ್ಕೆ ಬೆಳಗಿದ ಜಯದೇವ ಜಗದ್ಗುರುಗಳು ೧೯೦೩ರಲ್ಲಿ ಸಿದ್ಧಲಿಂಗ ಚರವರೇಣ್ಯರಿಂದ ಚಿನ್ಮಯಾನುಗ್ರಹದೀಕ್ಷೆ ಪಡೆದು ಲೋಕಸೇವಾಕಾರ್ಯದಲ್ಲಿ ಮುನ್ನಡೆದರು. ಧಾರವಾಡ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯಪ್ಪಗಳು, ನಿಡಸೋಸಿ ಜಗದ್ಗುರು ತೃತೀಯ ನಿಜಲಿಂಗೇಶ್ವರ ಮಹಾಸ್ವಾಮಿಗಳು ಮೊದಲಾದ ೨೦೦ಕ್ಕೂ ಹೆಚ್ಚು ಜನ ಲಿಂಗಾಯತ ಮಠಾಧೀಶರು ಗಚ್ಚಿನಮಠದ ಸಿದ್ಧಲಿಂಗ ಚರವರೇಣ್ಯರಿಂದ ಅನುಗ್ರಹ ದೀಕ್ಷೆಯನ್ನು ಪಡೆದರು. ನೂರು ವರ್ಷಗಳ ಹಿಂದೆ ಇದೊಂದು ಸಹಜ ಕ್ರಿಯೆಯೆಂಬಂತೆ ನಡೆದು ಹೋಗಿತ್ತು.

ಅಂತಹದೇ ಒಂದು ಘಟನೆ ಈಗ ಮತ್ತೆ ಪುರನಾವರ್ತನೆಯಾಗುತ್ತಿದೆ. ನಿಡಸೋಸಿ ಜಗದ್ಗುರು ದುರದುಂಡೀಶ್ವರಮಠದ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಭಕ್ತವರ್ಗದಿಂದ ಬಂದ ಪೂಜ್ಯ ಶ್ರೀ ಏಕಗಮ್ಯಾನಂದರನ್ನು ಆಯ್ಕೆಮಾಡಿಕೊಂಡಿರುವುದು ನಿಜಕ್ಕೂ ಕ್ರಾಂತಿಕಾರಿ ಬದಲಾವಣೆಯೆ ಆಗಿದೆ.

 ನಿಡಸೋಸಿ ದುರದುಂಡೀಶ್ವರಮಠದ ಪರಂಪರೆಯಲ್ಲಿ ಈವರೆಗೆ ಮಠಾಧೀಶರಾಗುವ ಪದ್ಧತಿ ಹೇಗಿತ್ತು ಎಂದರೆ- ಮಠದ ಅಧಿಪತಿಗಳಾದವರು ಲಿಂಗೈಕ್ಯರಾದ ತಕ್ಷಣ ಭಕ್ತರು ಒಬ್ಬ ಯೋಗ್ಯ ಸಾಧಕರನ್ನು ಹುಡುಕಿ, ಕರೆದುಕೊಂಡು ಬಂದು, ಲಿಂಗೈಕ್ಯರಾದ ಶ್ರೀಗಳ ಸಮಾಧಿಕ್ರಿಯೆ ಜೊತೆ ಜೊತೆಗೆ ನೂತನ ಮಠಾಧೀಶರ ಅಧಿಕಾರಗ್ರಹಣ ಸಮಾರಂಭ ಮಾಡುತ್ತಿದ್ದರು. ಭಕ್ತ ಸಮುದಾಯ ಹೀಗೆ ಮಠದ ಮಠಾಧಿಕಾರದ ವಿಷಯದಲ್ಲಿ ಕೆಲವು ಅಲಿಖಿತ ನಿಯಮಗಳನ್ನು ಪಾಲಿಸುತ್ತಿತ್ತು. 

- Advertisement -

ಈ ಸಂಪ್ರದಾಯವನ್ನು ಮುರಿದು ಈಗಿರುವ ಜಗದ್ಗುರು ಮಹಾಸನ್ನಿಧಿಯವರು ಉತ್ತರಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಇತ್ತೀಚೆಗೆ ಶ್ರೀಗಳ ಕಾರು ಅಪಘಾತವಾಯಿತು. ಆ ಸಂದರ್ಭದಲ್ಲಿ ಅವರು ಬದುಕಿ ಉಳಿದಿದ್ದು ದುರದುಂಡೀಶ್ವರರ ಲೀಲಾಮಹಿಮೆಯೆ ಆಗಿದೆ. ಈ ಸಂದರ್ಭವನ್ನು ಮೆಲುಕು ಹಾಕುತ್ತ ಭಕ್ತ ಸಮುದಾಯಕ್ಕೆ ಉತ್ತರಾಧಿಕಾರಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಶ್ರೀಗಳು ಎಂದೂ ಇದು ನಮ್ಮ ಮಠ ಎನ್ನಲಿಲ್ಲ. ಇದು ಭಕ್ತರ ಮಠ. ಭಕ್ತರ ತೀರ್ಮಾನವೇ ತಮ್ಮ ತೀರ್ಮಾನ ಎಂದು ನಡೆದುಕೊಂಡವರು. ನಾನು ಅವರನ್ನು ಕುರಿತು ‘ದಾಸೋಹ ಜಗದ್ಗುರು’ ಎಂಬ ಪುಸ್ತಕವನ್ನು ಬರೆಯುವ ಸಂದರ್ಭದಲ್ಲಿ ಅವರೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸುವ ಸಂದರ್ಭ ಬಂದಿತು. ಅವರು ಎಂದು ಈ ಮಠ ನನ್ನದು, ಈ ಎಲ್ಲ ಮಠದ ಸಂಪತ್ತಿನ ಮಾಲೀಕರು ನಾವೇ ಎಂಬ ಅಹಂಮಿಕೆ ಅವರಲ್ಲಿ ಇರಲಿಲ್ಲ. ಇದೆಲ್ಲವೂ ಭಕ್ತರ ಆಧೀನ ಎಂಬ ವಿನಮ್ರ ಭಾವ ಅವರಲ್ಲಿತ್ತು. 

೨೦೧೭ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಜೋರಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕೆಲವರು ನಿಡಸೋಸಿ ಪೂಜ್ಯರು ಬಸವನಿಷ್ಠರಲ್ಲ, ಸಂಪ್ರದಾಯವಾದಿಗಳು ಹೀಗಾಗಿ ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಆಪಾದಿಸುತ್ತಿದ್ದರು. ಆದರೆ ಶ್ರೀಗಳ ಒಳಮನಸ್ಸೆಲ್ಲವೂ ಬಸವತತ್ವನಿಷ್ಠಮಯವಾಗಿದೆ ಎಂಬುದರ ಅರಿವು ಈಗ ಅವರಿಗಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಶ್ರೀಗಳು ಇಳಕಲ್ಲ ಮಹಾಂತ ಶಿವಯೋಗಿಗಳ ಸಂಪರ್ಕದಲ್ಲಿದ್ದವರು. ಬಸವತತ್ವ ನಿಜಾಚರಣೆಯ ಕಷ್ಟನಷ್ಟಗಳನ್ನು ಸಮೀಪದಿಂದ ಕಂಡವರಾಗಿದ್ದರು. ತಥಾಕಥಿತ ಸ್ಥಾಪಿತ ಸಂಪ್ರದಾಯಬದ್ಧ ಮನಸ್ಸುಗಳು ಇಳಕಲ್ ಶ್ರೀಗಳಿಗೆ ನೀಡಿದ ನೋವುಗಳನ್ನು ಕಂಡವರಾಗಿದ್ದರು. ಆದರೆ ಇಳಕಲ್ ಶ್ರೀಗಳ ಮಾದರಿಯನ್ನೇ ಇಂದು ಶ್ರೀಗಳು ಅನುಸರಿಸಿ ತಮ್ಮ ಮಠಕ್ಕೆ ಭಕ್ತವರ್ಗದ ಸಾಧಕರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಕ್ರಾಂತಿಕಾರಿ ಬದಲಾವಣೆಯೇ ಆಗಿದೆ. ನಿಜವಾಗಿಯೂ ತಮ್ಮ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿ ಶ್ರೀಗಳು ತೆಗೆದುಕೊಂಡ ನಿರ್ಣಯ ಅನನ್ಯವಾದುದು. ಜಂಗಮತ್ವ ಎನ್ನುವುದು ಜಾತಿಯಿಂದ ಬರುವುದಿಲ್ಲ, ಸಾಧನೆಯಿಂದ ಸಾಧ್ಯ ಎಂಬುದನ್ನು ಅರ್ಥಮಾಡಿಕೊಂಡ ಶ್ರೀಗಳು ಭಕ್ತವರ್ಗದ ಸಾಧಕರನ್ನು ಆಯ್ಕೆ ಮಾಡಿರುವುದು ಕೆಲವರಲ್ಲಿ ಅಸಮಾಧಾನವನ್ನುಂಟು ಮಾಡಿರುವುದು ಸಹಜವಾದರೂ, ಅವರ ನಿರ್ಧಾರ ಅಪ್ಪಟ ಬಸವತತ್ವಮಯವಾಗಿದೆ ಎಂಬುದನ್ನು ಗಮನಿಸಬೇಕು. 

ಈಗ ಉತ್ತರಾಧಿಕಾರಿಗಳಾಗಿ ಆಯ್ಕೆ ಆಗಿರುವ ಪೂಜ್ಯ ಶ್ರೀ ಏಕಗಮ್ಯಾನಂದರು ಮೂಲತಃ ನಿಡಸೋಸಿ ಗ್ರಾಮದಲ್ಲಿ ಜನಿಸಿದವರು. ಎಳೆಯ ವಯಸ್ಸಿನಲ್ಲಿಯೇ ವೈರಾಗ್ಯದತ್ತ ಮನಸ್ಸು ಮಾಡಿದ ಅವರು ರಾಮಕೃಷ್ಣ ಆಶ್ರಮದಲ್ಲಿ ಸಾಧಕರಾಗಿ ತಮ್ಮ ಬದುಕನ್ನು ರೂಪಿಸಿಕೊಂಡವರು. ಮಂಗಳೂರಿನಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯದಲ್ಲಿ ತಮ್ಮನ್ನು ತಾವು ಸರ್ವಾರ್ಪಣ ಮನೋಭಾವದಿಂದ ತೊಡಗಿಸಿಕೊಂಡಿದ್ದ ಶ್ರೀಗಳ ಅತುಲ ಸಮಾಜಸೇವಾ ಕಾರ್ಯಗಳು ರಾಷ್ಟçನಾಯಕರಾದ ಶ್ರೀ ನರೇಂದ್ರ ಮೋದಿ, ಅಮಿತ ಶಾ ಅವರ ಗಮನ ಸೆಳೆದಿವೆ ಎನ್ನುವುದು ಗಮನಾರ್ಹ ಸಂಗತಿ. ಈ ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಹುಮ್ಮಸ್ಸು ಉತ್ಸಾಹ ಇರುವ ಶ್ರೀಗಳು ಗಡಿಭಾಗದಲ್ಲಿ ತಮ್ಮ ಸಮಾಜಸೇವಾ ಕಾರ್ಯಗಳ ಮೂಲಕ ಒಂದು ಆಮೂಲಾಗ್ರ ಬದಲಾವಣೆ ತರಬಲ್ಲರು ಎಂಬ ಆಶಯ ನನ್ನದು. 

- Advertisement -

ಉತ್ತರಾಧಿಕಾರಿಗಳಾಗಿ ಆಗಮಿಸುತ್ತಿರುವ ಪೂಜ್ಯ ಶ್ರೀ ಏಕಗಮ್ಯಾನಂದರು ಕೆಲವು ಸವಾಲುಗಳನ್ನು ಎದುರಿಸುವ ಪ್ರಸಂಗವೂ ಬರಬಹುದು. ಮುಖ್ಯವಾಗಿ ಅವರು ಭಕ್ತವರ್ಗದಿಂದ ಬಂದವರಾಗಿರುವುದರಿಂದ ಕೆಲವು ತಥಾಕಥಿತ ಸ್ಥಾಪಿತ ಸಾಂಸ್ಥೀಕರಣಗೊಂಡ ಸಂಪ್ರದಾಯ ಬದ್ಧ ಮನಸ್ಸು ಉಳ್ಳವರ ಹೃದಯವನ್ನು ಗೆಲ್ಲಬೇಕಾಗಿರುವುದು.

ಆ ಸಂಪ್ರದಾಯಬದ್ಧ ಮನಸ್ಸುಗಳು ಇವರನ್ನು ಯಾವ ರೀತಿ ಸ್ವೀಕರಿಸುವರೋ ಕಾದು ನೋಡಬೇಕಾಗಿದೆ. ಇನ್ನೂ ಮುಖ್ಯವಾಗಿ ಬದಲಾವಣೆಗೆ ಹೊರಟಾಗ ವಿರೋಧಗಳು ಬರುವುದು ಅನಿವರ್ಯ. ಅವುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು ಸಾಧ್ಯ.

ಪೂಜ್ಯ ಶ್ರೀ ಏಕಗಮ್ಯಾನಂದರು ಈವರೆಗೆ ರಾಮಕೃಷ್ಣ ಆಶ್ರಮದಲ್ಲಿ ಬೆಳೆದು ಬಂದವರು. ಈಗ ಅವರು ಶರಣ ಸಂಸ್ಕೃತಿಯನ್ನು ತಮ್ಮಲ್ಲಿಯೂ ಅಳವಡಿಸಿಕೊಂಡು, ಶರಣ ಧರ್ಮದ ತಳಹದಿಯ ಮೇಲೆ ಸಮಾಜ ಕಟ್ಟುವ ಮಹಾಮಣಿಹ ಪೂರೈಸಬೇಕಾದ ಅನಿವರ್ಯತೆ ಇದೆ. 

ನೂತನ ಉತ್ತರಾಧಿಕಾರಿಗಳಾಗಿ ನಮ್ಮ ಭಾಗದ ಪ್ರತಿಷ್ಠಿತದ ಪೀಠಕ್ಕೆ ದಯಮಾಡಿಸುತ್ತಿರುವ ಪೂಜ್ಯ ಶ್ರೀ ಏಕಗಮ್ಯಾನಂದ ಶ್ರೀಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

9902130041

- Advertisement -
- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group