ಬೀದರ – ವಿವಿಧ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ, ಪಾನಮಸಾಲಾ,ತಂಬಾಕು ತಯಾರಿಸಿ ಸಾಗಿಸುತ್ತಿದ್ದ ಅನಧಿಕೃತ ಅಡ್ಡೆಯೊಂದನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬೀದರನ ಕೋಳಾರ ಕೈಗಾರಿಕೆ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಕಲಿ ಕಳಪೆ ಗುಟ್ಕಾ ಪಾನ ಮಸಾಲಾ ಹಾಗೂ ತಯಾರಿಸುವ ಕಚ್ಚಾವಸ್ತುಗಳು ಪತ್ತೆಯಾಗಿವೆ.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ್ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಲಾರಿ ಚಾಲಕ ಹಾಗೂ ಕೆಲ ಸಿಬ್ಬಂದಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಅಡ್ಡೆಯಲ್ಲಿ ತಮಿಳು, ಮರಾಠಿ, ತೆಲುಗು, ಹಿಂದಿ, ಕನ್ನಡ , ಉರ್ದು,ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಯಲ್ಲಿ ಸುಮಾರು 40 ನಮೂನೆಯ ಕಳಪೆ ಗುಟ್ಕಾ, ಪಾನಮಸಾಲಾ ತಂಬಾಕು ತಯಾರಿಸಿ ವಿವಿಧ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು.
ಮಧ್ಯರಾತ್ರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ
ಸುಮಾರು 1 ಕೋಟಿ ಮೌಲ್ಯದ ಕಚ್ಚಾವಸ್ತುಗಳು ಹಾಗೂ ಗುಟ್ಕಾ ಹಾಗೂ ಪಾನಮಸಾಲಾ ಪತ್ತೆಯಾಗಿವೆ. ಬೀದರ್ ದಕ್ಷಿಣ ಭಾರತದ ಅಕ್ರಮ ತಾಣವಾಗಿ ಬದಲಾಗುತ್ತಿದೆಯಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ದಾಳಿಯಲ್ಲಿ ಆಹಾರ ಸುರಕ್ಷತಾಧಿಕಾರಿ, ನ್ಯೂಟೌನ್ ಠಾಣೆ ಸಿಪಿಐ ವಿಜಯಕುಮಾರ್ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಪಾಟೀಲ್ ಹಾಗೂ ಶಿವಕುಮಾರ್ ಸ್ವಾಮಿ, ಅಶೋಕ ಹಾಗೂ ಮಹೇಶ ಮಾಶೆಟ್ಟೆ ಸೇರಿದಂತೆ ಅಧಿಕಾರಿಗಳ ತಂಡ ಭಾಗವಹಿಸಿ ಗೋದಾಮಿನಲ್ಲಿ ಠಿಕಾಣಿ ಹೂಡಿ ಪರಿಶೀಲನೆ ನಡೆಸಿತು.
ವರದಿ : ನಂದಕುಮಾರ ಕರಂಜೆ, ಬೀದರ