ಮೂಡಲಗಿ: ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಮುಂದಿನ ವರ್ಷದಿಂದ ಕಣ್ಣಿನ ತಪಾಸಣೆ ಜೊತೆಗೆ ಹೃದಯ ರೋಗ ಮತ್ತು ಮಧು ಮೇಹ ಕಾಯಿಲೆಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಶ್ರೀನಿವಾಸ ಶಾಲೆಯ ಚೇರಮನ್ ಡಾ. ರಂಗಣ್ಣಾ ಸೋನವಾಲ್ಕರ ಹೇಳಿದರು.
ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ದಿ.ನಿಂಗಪ್ಪ ರ.ಸೋನವಾಲಕರ ಅವರ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪ್ರೇಮಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ನಮ್ಮ ತಂದೆಯವರ ಕನಸಿನಂತೆ ಮೂಡಲಗಿ ಪಟ್ಟಣದಲ್ಲಿ ಸುಸಜ್ಜಿತ ಶಾಲೆಯನ್ನು ತೆರೆಯುವ ಮೂಲಕ ಈ ಶಾಲೆಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿರುವ ಉಚಿತ ತಪಾಸಣಾ ಶಿಬಿರವನ್ನು ಮೂಡಲಗಿ ಮತ್ತು ಸುತ್ತಮುತ್ತಲಿನ ಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮನುಷ್ಯನ ಜೀವನದಲ್ಲಿ ಕಣ್ಣು ಬಹಳ ಮುಖ್ಯವಾಗಿದ್ದು, ಕಣ್ಣಿನ ರಕ್ಷಣೆಯ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ದೃಷ್ಟಿ ದೋಷವಿರುವ ಮಕ್ಕಳನ್ನು ಗುರತಿಸಿ ತಪಾಸಣೆ ಮಾಡಿಸಬೇಕು, ಪ್ರತಿಯೊಬ್ಬರು ಆಗಾಗ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕು. ಹಸಿರು ಸೊಪ್ಪು ಮತ್ತು ಮಿಟಮಿನ್-ಎ ಇರುವ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು-ಹೆಚ್ಚು ನೀರು ಕುಡಿದು ಕಣ್ಣನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕೆಂದರು.
ಶಾಲೆಯ ಪ್ರಾಚಾರ್ಯ ಮನೋಜ ಭಟ್ ಮಾತನಾಡಿ, ಡಾ.ರಂಗಣ್ಣ ನಿಂಗಪ್ಪ ಸೋನವಾಲ್ಕರ ವೃತ್ತಿಯಿಂದ ವೈದ್ಯರಾದರೂ ಕೂಡಾ ಅವರು ತಮ್ಮ ತಂದೆಯ ಕನಸಿನಂತೆ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು.
ವಿಜಯಪೂರದ ಬಿ.ಎಂ.ಪಾಟೀಲ ಆಸ್ಪತ್ರೆಯ ಕಣ್ಣಿನ ತಜ್ಞರಾದ ಡಾ. ಗಾಯತ್ರಿ ಎಂ, ಡಾ.ಬಿಹಾಗ್, ಡಾ ವೈಷ್ಣವಿ ಪಾಟೀಲ, ಡಾ.ಅಮೀತ್ ಗುಪ್ತಾ, ಡಾ.ಅಮನಕುಮಾರ ಅವರು ಕಣ್ಣು ತಪಾಸಿಸಿದರು.
ಶಿಕ್ಷಕಿ ಸ್ಮಿತಾ ಪತ್ತಾರ ನಿರೂಪಿಸಿದರು, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ ವಂದಿಸಿದರು.