ಸಿಂದಗಿ: ಈ ಉಪಚುನಾವಣೆಯಲ್ಲಿ ಮೂರು ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಬಹುದು ಎಂದು ಗೋಚರಿಸಿದ್ದರೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಆ ಕಾರಣಕ್ಕೆ ಸೂರ್ಯಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವುದು ಅಷ್ಟೆ ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಪಟ್ಟಣದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕ್ಷೇತ್ರದಲ್ಲಿ 10 ಮಹಾಶಕ್ತಿ ಕೇಂದ್ರಗಳನ್ನು ರೂಪಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಅವರೊಂದಿಗೆ ಸಚಿವ ವಿ.ಸೋಮಣ್ಣ, ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೋಲ್ಲೆ ಅವರು 7 ಜಿಪಂ ಕ್ಷೇತ್ರಗಳಿಗೆ ಒಬ್ಬ ಸಚಿವರೊಂದಿಗೆ ಭೂತಮಟ್ಟಗಳಲ್ಲಿ ಒಂದು ಟೀಮ್ ಮಾಡಿ ಉಸ್ತುವಾರಿ ನೇಮಿಸಿ ಕಳೆದ ಬಸವಕಲ್ಯಾಣ ಉಪ ಚುನಾವಣೆಗೆ ಯಾವ ರೀತಿಯ ಸಮಿತಿ ರಚಿಸಲಾಗಿತ್ತೋ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್.ಯಡಿಯೂರಪ್ಪ ನವರೆಲ್ಲ ಕ್ಷೇತ್ರದ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಳವಾರ, ಪರಿವಾರ ಸಮುದಾಯಗಳಿಗೆ ಎಸ್.ಟಿ ಮೀಸಲಾತಿಗಾಗಿ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಚುನಾವಣೆ ಮುಗಿದ ನಂತರ ಕಾರ್ಯರೂಪಕ್ಕೆ ತಂದು ನ್ಯಾಯ ಒದಗಿಸಲಾಗುತ್ತದೆ ಎಂದು ಭರವಸೆ ಸಿಎಂ ಆ ಸಮುದಾಯದ ಮುಖಂಡರಿಗೆ ಮಾಹಿತಿ ನೀಡಿದ್ದು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿಸಿದ್ದಾದರೆ ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೈಕೊಳ್ಳಲು ಅನುಕೂಲವಾಗುತ್ತದೆ. ನಮ್ಮ ಗುರಿ 2 ಉಪಚುನಾವಣೆ ಗೆಲ್ಲುವುದಲ್ಲ. ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಸರಕಾರ ಅಧಿಕಾರಕ್ಕೆ ತರಲು ಎಲ್ಲ ಸಚಿವರು ಸೇರಿದಂತೆ ಎಲ್ಲರೂ ಒಂದು ಸಮಿತಿಯನ್ನು ರೂಪಿಸಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ರಮೇಶ ಭೂಸನೂರ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜು, ಎ.ಎಸ್.ಪಾಟೀಲ ನಡಹಳ್ಳಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಶ್ರೀಕಾಂತ ಕುಲಕರ್ಣಿ, ಚಂದ್ರಶೇಖರ ಕವಟಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಮಲ್ಲಿಕಾರ್ಜುನ ಜೋಗುರ ಸೇರಿದಂತೆ ಅನೇಕರಿದ್ದರು.