Homeಲೇಖನಆತ್ಮವಿಶ್ವಾಸವೊಂದಿದ್ದರೆ ಸಾಕು ಎಲ್ಲವನ್ನೂ ಗೆಲ್ಲಿಸುತ್ತದೆ

ಆತ್ಮವಿಶ್ವಾಸವೊಂದಿದ್ದರೆ ಸಾಕು ಎಲ್ಲವನ್ನೂ ಗೆಲ್ಲಿಸುತ್ತದೆ

ಆತ್ಮವಿಶ್ವಾಸವೊಂದಿದ್ದರೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಅದೊಂದಿದ್ದರೆ ನೂರಾನೆಯ ಬಲ ಇದ್ದ ಹಾಗೆ. ಕಠಿಣತಮವಾದದ್ದು ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತೆ. ಅದು ಗೈರಾದರೆ ಎಲ್ಲವೂ ಇದ್ದು ಏನೂ ಇಲ್ಲದಂತೆ. ಅದೊಂದು ತರ ಮಂತ್ರದಂಡ. ಬಯಸಿದ್ದನ್ನು ಪಡೆಯುವಂತೆ ಹುರಿದುಂಬಿಸುತ್ತದೆ. ನಡೆಯುವ ಕಾಲುಗಳಿಗೆ ಹಾರುವ ರೆಕ್ಕೆಗಳನ್ನು ಕಟ್ಟುವ ಅಗಾಧ ಶಕ್ತಿ ಅದಕ್ಕಿದೆ. ಅಂತ ಇನ್ನೂ ಏನೇನನ್ನೋ ಆತ್ಮ ವಿಶ್ವಾಸದ ವೈಶಿಷ್ಟ್ಯತೆಯ ಕುರಿತಾಗಿ ಮಾತನಾಡುವುದನ್ನು ಹೇಳುವುದನ್ನು ಎಷ್ಟೋ ಸಲ ಅಲ್ಲಲ್ಲಿ ಕೇಳಿರುತ್ತೇವೆ ಓದಿರುತ್ತೇವೆ.

ಆದರೆ ಅದು ನಮ್ಮ ವಿಷಯಕ್ಕೆ ಬಂದಾಗ ಆತ್ಮವಿಶ್ವಾಸದ ಕೊರತೆಯಿಂದ ಎಷ್ಟೆಲ್ಲವನ್ನು ಕಳೆದುಕೊಂಡಿದ್ದೇವೆ ಎಂಬ ನೋವು ತಲೆ ತಿನ್ನುತ್ತದೆ. ಭಿಕ್ಷುಕನನ್ನು ದೊರೆಯನ್ನಾಗಿಸುವ ಬಲ ಆತ್ಮವಿಶ್ವಾಸಕ್ಕಿದೆ. ಇಷ್ಟೊಂದು ಶಕ್ತಿದಾಯಕ ಆತ್ಮವಿಶ್ವಾಸವನ್ನು ಗಳಿಸುವುದು ಹೇಗೆ? ಅಂತ ಮನದಲ್ಲಿ ಎಷ್ಟೋ ಸಲ ಪ್ರಶ್ನೆಯೂ ಏಳುತ್ತದೆ.ಇದಕ್ಕೆ ಉತ್ತರ ಪಡೆಯಲು ಮುಂದಕ್ಕೆ ಓದಿ. ಅದಕ್ಕೂ ಮೊದಲು ಆತ್ಮವಿಶ್ವಾಸವೆಂದರೇನು ತಿಳಿಯೋಣ.

ಆತ್ಮವಿಶ್ವಾಸವೆಂದರೇನು?

‘ನಾವು ನಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳ ಬಗ್ಗೆ ಹೊಂದಿರುವ ಸಕಾರಾತ್ಮಕ ಮೌಲ್ಯಮಾಪನ.’ ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯಗಳ ಸಮರ್ಪಕ ಬಳಕೆಗೆ ಸಹಾಯಕವಾಗುವ ಮಹತ್ವದ ಅಂಶ. ನಮ್ಮ ಮೇಲೆ ನಮಗಿರುವ ವಿಶ್ವಾಸ. ಸ್ವ ನಂಬಿಕೆಯ ಪ್ರತಿರೂಪ. ಯಾವುದೇ ರೂಪದಲ್ಲಿ ಎದುರಾಗುವ ಸವಾಲುಗಳನ್ನು ಅಂಜಿಕೆಯಿಲ್ಲದೇ ಅಳುಕಿಲ್ಲದೇ ಧೈರ್ಯದಿಂದ ನಿಭಾಯಿಸುವಂತೆ ಮಾಡುವಂತಹದು. ಮನದ ಎಲ್ಲ ತಳಮಳಗಳಿಗೆ ತಾಕಲಾಟಗಳಿಗೆ ಹೊಯ್ದಾಟಗಳಿಗೆ ಮುಕ್ತಿ ನೀಡಿ ಪರಿಹರಿಸಬೇಕಾದ ಸಮಸ್ಯೆಗೆ ಶಕ್ತಿ ಕೊಡುವಂಥದು. ಕಷ್ಟವೆನ್ನುವುದನ್ನು ಸುಲಭವಾಗಿ ಸಾಧ್ಯವಾಗಿಸುವುದು. ನಮ್ಮ ಜಬಾಬ್ದಾರಿಯನ್ನು ನಾವೇ ಹೊರುವಂತೆ ಕಲಿಸುವ ಸ್ವ ಶಿಕ್ಷಕ. ಆಯ್ಕೆಗಳಿಗೆ ಪರಿಣಾಮಗಳಿಗೆ ಬದ್ಧನಾಗುವಂತೆ ನೆರವಾಗುವುದು. ಗೆಲುವಿನಲ್ಲಿ ಸಿಂಹಪಾಲು ಹೊಂದಿರುವಂಥದು. ವೈಶಿಷ್ಟ್ಯಪೂರ್ಣತೆಗೆ ಕಾರಣವಾಗುವಂಥದ್ದು. ಹೀಗೆ ಇನ್ನೂ ಸಾಕಷ್ಟಕ್ಕೆ ಪ್ರೇರಕದಾಯಕ.

ಅದೃಷ್ಟದಿಂದ ಲಭಿಸುವುದಿಲ್ಲ.

ಆತ್ಮವಿಶ್ವಾಸವೆನ್ನುವುದು ಅದೃಷ್ಟದಿಂದ ಲಭಿಸುವುದು ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಬಹುತೇಕರಿಗಿದೆ.ಆದರೆ ಆತ್ಮವಿಶ್ವಾಸ ಅಭ್ಯಾಸ ಬಲದಿಂದ ಪರಿಶ್ರಮದಿಂದ ಬಲಗೊಳ್ಳುವುದು. ಬಲಯುತವಾದ ಇಚ್ಛಾಶಕ್ತಿಯು ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿ ಆತ್ಮವಿಶ್ವಾಸಕ್ಕೆ ಮುನ್ನುಡಿ ಬರೆಯುವುದು. ಜ್ಞಾನ, ಕೌಶಲ, ಅನುಭವ, ಲೋಕ ಜ್ಞಾನಗಳ ಸದ್ಬಳಕೆಗೆ ಆತ್ಮವಿಶ್ವಾಸ ಒಲಿಯುವುದು. ಸಾಹಸ ಕೆಲಸ ಕಾರ್ಯಗಳಿಗೆ ಉತ್ತಮ ಪ್ರೇರಣೆ ನೀಡುವುದೇ ಈ ಆತ್ಮವಿಶ್ವಾಸ. ’ಉತ್ತಮ ಪ್ರೇರಣೆಯು ಒಂದು ಉತ್ತಮ ಕೆಲಸದ ಆರಂಭಕ್ಕೆ ನಾಂದಿಯಾಗುವುದು. ಉದ್ಯಮ, ಸಾಹಸ, ಬುದ್ಧಿ, ಶಕ್ತಿ, ಪರಾಕ್ರಮಗಳನ್ನು ಪಾಲಿಸಿದಾಗ ಗೆಲುವು ಜೊತೆ ನಡೆಯುವುದು. ಇದರ ಜತೆಗೆ ಪ್ರಾರ್ಥನೆಯನ್ನೂ ಆರಂಭಿಸಿದರೆ ದೇವರು ನಿವiಗೆ ಹಸ್ತಲಾಘವ ಮಾಡುತ್ತಾನೆ.’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಮಾರ್ಗದರ್ಶನ ಮಾಡಿದ್ದಾನೆ. ಬದುಕು ಆ ದೇವರು ನೀಡಿದ ಬಹು ದೊಡ್ಡ ಉಡುಗೊರೆ. ಆದರೆ ಮನಸ್ಸೆಂಬುದು ಮಂಗನಂತೆ ಆಡುವುದು ನಕಾರಾತ್ಮಕಗಳತ್ತ ಬಹು ಬೇಗ ಓಡವುದು. ಕೋಪ ಅಸೂಯೆ ಅಹಂಕಾರ ಹಮ್ಮು ಬಿಮ್ಮಗಳಿಂದ ತುಂಬಿರುವುದು. ಹೀಗಿರುವಾಗ ಆತ್ಮವಿಶ್ವಾಸ ನೆಲ ಕಚ್ಚುತ್ತದೆ. ಮನಸ್ಸೆಂಬ ಕೊಳವನ್ನು ತಿಳಿಯಾಗಿಸಿ ಸಕಾರಾತ್ಮಕ ಗುಣಗಳಾದ ಪ್ರೀತಿ ತಾಳ್ಮೆ ಔದಾರ್ಯತೆಗಳಿಂದ ತುಂಬಿಸಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವುದು ಒಂದು ಕಲೆಯೇ ಸರಿ. ಏಕೆಂದರೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಒಂದು ಸಂಕೀರ್ಣ ಪ್ರಕ್ರಿಯೆ ಎನ್ನಬಹುದು. ಬಾಲ್ಯದ ಅನುಭವಗಳು, ಬೆಳೆದ ವಾತಾವರಣ, ಸಾಮಾಜಿಕ,ಆರ್ಥಿಕ, ವ್ಯಕ್ತಿಗತ ಪರಿಸ್ಥಿತಿಗಳು, ಹಿಂದಿನ ಸೋಲು, ಗೆಲುವುಗಳು ಹೀಗೆ ಹತ್ತು ಹಲವು ಸಂಗತಿಗಳಿಂದ ಕೂಡಿದೆ.

ಸಣ್ಣ ಪುಟ್ಟ ಗುರಿ ಸಾಧಿಸಿ

ಸಣ್ಣ ಪುಟ್ಟ ಗುರಿ ಸಾಧಿಸಿ ಎಂದರೆ ಗುರಿ ಸಣ್ಣದಾಗಿರಲಿ ಎಂದರ್ಥವಲ್ಲ. ಗುರಿ ದೊಡ್ಡದೇ ಆಗಿರಲಿ.ಆದರೆ ಮೊದ ಮೊದಲು ಸರಳ ಸುಲಭ ಗುರಿ ಸಾಧಿಸಿ. ನಂತರ ಒಂದು ನಿಶ್ಚಿತ ಗುರಿಯನ್ನು ಗುರುತಿಸಿಕೊಂಡು ಅದನ್ನು ಬೆನ್ನು ಹತ್ತಿ. ಸಾಧಿಸಬೇಕಾದ ಗುರಿಯನ್ನು ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಎಂದು ವಿಂಗಡಿಸಿ. ನೀವು ನಿರ್ಧರಿಸಿರುವ ಗುರಿಯನ್ನು ಸಾಧಿಸುವ ಅರ್ಹತೆಯಿದೆಯೋ ಇಲ್ಲವೋ ತಿಳಿದುಕೊಳ್ಳಿ. ಸಣ್ಣ ಪುಟ್ಟ ಗುರಿಗಳನ್ನು ತಲುಪಿದಾಗಲೂ ಪ್ರಗತಿಯನ್ನು ಗುರುತಿಸಿ. ಸಂಭ್ರಮಿಸಿ. ಚಿಕ್ಕ ಪುಟ್ಟ ಗುರಿ ಸಾಧನೆಗಳೇ ನಿಮಗೆ ದೊಡ್ಡ ಮತ್ತು ದೀರ್ಘಾವಧಿ ಗುರಿಯತ್ತ ದೊಡ್ಡ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತವೆ. ಅರಿವಿಲ್ಲದಂತೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ವಜ್ರಾಸನ ಹಾಕಿ

ಪತಂಜಲಿ ಮಹರ್ಷಿಗಳು ಮನಸ್ಸಿನ ಯಾವುದೇ ಸಮಸ್ಯೆಗೂ ವಜ್ರಾಸನ ರಾಮಬಾಣ ಎಂದಿದ್ದಾರೆ. ಅದರಂತೆ ಪ್ರತಿದಿನ ಐದು ನಿಮಿಷ ಕುಳಿತುಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆಂದು ಹೇಳಿದ್ದಾರೆ. ಅಂದ ಹಾಗೆ ಈ ಆಸನವನ್ನು ದಿನದ ಯಾವುದೇ ಸಮಯದಲ್ಲೂ ಹಾಕಬಹುದು. ಚೀನಾ ಮತ್ತು ಜಪಾನದಲ್ಲಿರುವ ಬೌದ್ಧರು ವಜ್ರಾಸನದ ಸದುಪಯೋಗ ಪಡೆದು ರುಜುವಾತುಗೊಳಿಸಿದ್ದಾರೆ.

ಸರಿಯಾದುದನ್ನು ಮಾಡಿ

ಯಶಸ್ವಿ ವ್ಯಕ್ತಿಗಳು ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮೌಲ್ಯಯುತ ಕೆಲಸಗಳನ್ನೇ ಮಾಡುತ್ತಾರೆ. ಮೌಲ್ಯಗಳು ಕ್ರಿಯೆಗಳನ್ನು, ಕ್ರಿಯೆಗಳು ಚಾರಿತ್ರ್ಯವನ್ನು, ಚಾರಿತ್ರ್ಯ ಆತ್ಮವಿಶ್ವಾಸವನ್ನು ನಿರ್ಣಯಿಸುತ್ತದೆ. ಸೋಲು ಶತ್ರುವಲ್ಲ. ಸೊಲುವ ಭಯ ನಮ್ಮನ್ನು ಬೀಳಿಸುತ್ತದೆ. ಸಾಮರ್ಥ್ಯಕ್ಕೆ ತಕ್ಕದಾದ ಗುರಿ ಇರದಿದ್ದರೆ ವೈಫಲ್ಯ ಖಂಡಿತ ಎಂಬುದನ್ನು ನೆನಪಿಡಿ. ಗುರಿ ಯಾವಾಗಲೂ ವಾಸ್ತವಕ್ಕೆ ಹತ್ತಿರವಿರಬೇಕು. ಸಾಧಿಸುವಂಥದ್ದಾಗಿರಬೇಕು. ಸೋಲಿನ ಭಯವನ್ನು ಬಿಸಾಕಿ ಸಾಧಿಸಬಲ್ಲ ಮೌಲ್ಯಯುತ ಕಾರ್ಯಗಳತ್ತ ಹೆಜ್ಜೆ ಹಾಕಿ. ಇತರರು ನಿಮ್ಮ ಗುರಿ ಕಂಡು ನಗಬಹುದು ಆದರೆ ನೀವು ಮಾತ್ರ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.

ನೆಪೋಲಿಯನ್ ಹಿಲ್ ಹೇಳಿದಂತೆ,’ಮನಸ್ಸು ಅಂದುಕೊಂಡಿದ್ದನ್ನು ಮತ್ತು ನಂಬಿದ್ದನ್ನು ಸಾಧಿಸುತ್ತದೆ.’

ಹೇಳಿಕೆಗಳನ್ನು ಹೇಳಿ

ಸಕಾರಾತ್ಮಕ ಹೇಳಿಕೆಗಳನ್ನು ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಿ. ಇವು ತುಂಬಾ ಪರಿಣಾಮಕಾರಿ. ನಮಗೆ ನಾವೇ ಹೇಳಿಕೊಂಡಿದ್ದನ್ನು ನಂಬುತ್ತೇವೆ.ಯಾವುದಕ್ಕೆ ನೀನು ಹೆದರುತ್ತಿಯೋ ಅಂಥ ಕೆಲಸವೊಂದನ್ನು ಮಾಡಲು ಮುಂದಾಗು. ಪ್ರತಿನಿತ್ಯ ಅಂಜಿಕೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿ. ಇದು ನಿಮ್ಮ ಅರ್ಹತೆಯನ್ನು ಸ್ವ ಗೌರವವನ್ನು ಹೆಚ್ಚಿಸುತ್ತದೆ. ದೌರ್ಬಲ್ಯವನ್ನು ಮರೆಮಾಚಿಸಿ ಬಲದ ಕಡೆ ಹೊರಳುವಂತೆ ಮಾಡುತ್ತದೆ. ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸಿಕೊಳ್ಳಿ. ಸ್ವ ಕಾಳಜಿ ಸ್ವಾರ್ಥವಲ್ಲ. ಅದೊಂದು ಸರಳವಾದ ಉತ್ತಮ ಪಾರುಪತ್ಯ ಎಂದಿದ್ದಾನೆ ಪಾರ್ಕರ್ ಪಾಲ್ಮರ್ ಇತರರು ನಿಮ್ಮ ವೈಯಕ್ತಿಕ ಮಿತಿಗಳನ್ನು ಗೌರವಿಸುವಂತೆ ನೋಡಿಕೊಳ್ಳಿ. ಕೀಳರಿಮೆ ಕಿತ್ತು ಹಾಕಿ. ಸಮಾನತೆಯ ಮನಸ್ಥಿತಿಗೆ ಮನಸ್ಸನ್ನು ಹದಗೊಳಿಸಿ.

ನಿಮ್ಮ ಕೈಯಲ್ಲಿದೆ.

ಒಂದೂರಿಗೆ ಸಾಧುವೊಬ್ಬ ಬಂದ. ಆತನಲ್ಲಿ ಆ ಊರಿನ ಹೆಣ್ಮಕ್ಕಳು ತಮ್ಮ ಗಂಡಂದಿರ ಕುಡಿತವನ್ನು ಬಿಡಿಸುವಂತೆ ಕೇಳಿಕೊಂಡರು. ಸಾಧುವಿನ ಸತ್ವಭರಿತ ಮಾತುಗಳಿಗೆ ಪ್ರಭಾವಿತರಾದ ಗಂಡಸರು ಕುಡಿತ ಬಿಟ್ಟರು. ಇದರಿಂದ ಕೋಪೋದ್ರಿಕ್ತನಾದ ಸಾರಾಯಿ ಅಂಗಡಿಯವನು ಪೈಲ್ವಾನನಿಗೆ ಭೇಟಿಯಾಗಿ ಹೆದರಿಸಿಯೋ ಇಲ್ಲ ಯಾವುದಾದರೂ ಉಪಾಯದಿಂದಲೋ ಸಾಧುವನ್ನು ಊರು ಬಿಡಿಸು ಎಂದು ಅಂಗಲಾಚಿಕೊಂಡನು. ಪೈಲ್ವಾನ್ ಗಿಳಿಯೊಂದನ್ನು ಕೈಯಲ್ಲಿ ಬಚ್ಚಿಟ್ಟುಕೊಂಡು ಹೋದ. ತನ್ನ ಕೈಯಲ್ಲೇನಿದೆ ಎಂದು ಪ್ರಶ್ನಿಸಿದ. ಗಿಳಿ ಎಂದ ಸಾಧು. ಅದು ಸತ್ತಿದೆಯೋ ಬದುಕಿದೆಯೋ ಎಂದು ಮರು ಪ್ರಶ್ನಿಸಿದ ಪೈಲ್ವಾನ ತ್ರಿಕಾಲ ಜ್ಞಾನಿಯಾದ ಸಾಧು- ‘ಬದುಕಿದೆ ಎಂದರೆ ಹಿಸುಕಿ ಸಾಯಿಸುತ್ತಿಯಾ. ಸತ್ತಿದೆ ಎಂದರೆ ಹಾರಲು ಬಿಡುತ್ತಿಯಾ. ಒಟ್ಟಿನಲ್ಲಿ ಗಿಳಿಯ ಭವಿಷ್ಯ ನಿನ್ನ ಕೈಯಲ್ಲೇ ಇದೆ ಎಂದುತ್ತರಿಸಿದ ನಗುತ್ತ. ಈ ಕತೆಯಲ್ಲಿರುವಂತೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಗೆಲುವು ಇಲ್ಲದಿದ್ದರೆ ಸೋಲು. ಅದು ನಿಮ್ಮ ಕೈಯಲ್ಲಿದೆ. ‘ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆತ್ಮವಿಶ್ವಾಸವೊಂದಿದ್ದರೆ ಸಾಕು ಅದು ಎಲ್ಲವನ್ನೂ ಗೆಲ್ಲಿಸುತ್ತದೆ. ಇಲ್ಲದಿದ್ದರೆ ಮಣ್ಣು ಮುಕ್ಕಿಸುತ್ತದೆ. ಆತ್ಮವಿಶ್ವಾಸದ ನೆರವಿನಿಂದ ಬಾಳಿನ ದಾರಿ ಸುಗಮಗೊಳಿಸಿಕೊಳ್ಳೋಣ.


ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ
9449234142

RELATED ARTICLES

Most Popular

error: Content is protected !!
Join WhatsApp Group