spot_img
spot_img

ದಣಿವರಿಯದ ಬರಹಗಾರ,ಆದರ್ಶ ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ

Must Read

- Advertisement -

2006 ರಲ್ಲಿ ಧಾರವಾಡದಲ್ಲಿ ಶಂಕರ ಹಲಗತ್ತಿಯವರು ಗುಬ್ಬಚ್ಚಿ ಗೂಡು ಬಳಗದ ಬರಹಗಾರ ಸಭೆಯೊಂದನ್ನು ಧಾರವಾಡದಲ್ಲಿ ಆಯೋಜಿಸಿದ್ದರು. ಅಂದು ರಾಜ್ಯದ ವಿವಿಧೆಡೆಯಿಂದ ಶಿಕ್ಷಕ ಸಾಹಿತಿಗಳು ಆಗಮಿಸಿದ್ದರು. ಅದರಲ್ಲಿ ಮಿತ್ರ ಪರಮೇಶ್ವರಯ್ಯ ಬಂದಿದ್ದರು. ಪೋನ್ ಮೂಲಕ ಮಾತನಾಡುತ್ತಿದ್ದ ನಾವಿಬ್ಬರೂ ಅಂದು ಮುಖಾಮುಖಿ ಪರಿಚಿತರಾದೆವು. ಸದಾ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸ್ನೇಹಿತನ ಬರಹಗಳನ್ನು ಓದಿ ಆ ಬರಹಗಳ ಬಗ್ಗೆ ಚರ್ಚಿಸುತ್ತಿದ್ದ ನನಗೆ ಅಂದು ಮುಖಾಮುಖಿ ಸೇರಿದ್ದು ಬಹಳ ಸಂತೋಷ ತಂದಿತ್ತು. ನಂತರ ಅದು ಮುಂದುವರೆಯಿತು. ಆಗಾಗ ಶಂಕರ ಹಲಗತ್ತಿ ನಮ್ಮ ಕೂಡುವಿಕೆಗೆ ಗುಬ್ಬಚ್ಚಿ ಬಳಗದ ನೆಪದಲ್ಲಿ ಸೇರಿಸುತ್ತಿದ್ದರು. ನಂತರ 2008 ಬೆಳಗಾವಿಯಲ್ಲಿ ಸ.ಜ.ನಾಗಲೋಟಿಮಠ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಸವಿ ನೆನಪು.

ನನ್ನ ಈ ಮಿತ್ರ ಈ ವರ್ಷ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಪತ್ರಿಕೆಯಲ್ಲಿ ನೋಡಿ ಪೋನ್ ಮಾಡಿ ಅಭಿನಂದಿಸಿದೆ. ತುಂಬ ಸಂತೋಷಗೊಂಡನು. ನಾನು ಪೋನ್ ಮಾಡಿದಾಗಲು “ಹೇಳು ಅಣ್ಣ” ಎಂದೇ ಸಂಭೋದಿಸುವ ಸ್ನೇಹಿತ ಪರಮೇಶ್ವರಯ್ಯ ಸೊಪ್ಪಿಮಠ ಕುರಿತು ಬರಹ ರೂಪಿಸುವ ಯೋಚನೆ ಮಾಡಿ ಮಾತನಾಡಿದೆನು. ಅವನ ಕಿರಿಯ ಈ ವಯಸ್ಸಿನ ಹಿರಿಯ ಸಾಧನೆಗೆ ಹ್ಯಾಟ್ಸಪ್ ಹೇಳಲೇಬೇಕು. ಅಂತಹ ಬದುಕು ಆತನದು.

ಪಯಣದ ಹಾದಿ

ಹಗರಿಬೊಮ್ಮನಹಳ್ಳಿಯಲ್ಲಿಯ ಸಾಮಾನ್ಯ ಕುಟುಂಬದಲ್ಲಿ ಎಂ.ಸಂಗಯ್ಯ ಮತ್ತು ಎಂ.ಅನಸೂಯಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಸೆಪ್ಟೆಂಬರ್ 21, 1974 ರಂದು ಪರಮೇಶ್ವರಯ್ಯ ಜನಿಸಿದರು. ಪರಮೇಶ್ವರಯ್ಯ ಪಿ.ಯು.ಸಿವರೆಗೂ ಸ್ಥಳೀಯ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ನಂತರ ಟಿ.ಸಿ.ಹೆಚ್‍ನ್ನು ರಾಜ್ಯದ ಹೆಮ್ಮೆಯ ತುಮಕೂರಿನ ಸಿದ್ಧಗಂಗಾ ಮಠದಲ್ಲಿದ್ದುಕೊಂಡು ಶ್ರೀ ಸಿದ್ಧಗಂಗಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೂರೈಸಿದರು. ಆಗಸ್ಟ್ 24, 1998ರಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯ ಆರಂಭಿಸಿದರು. ಅಲ್ಲಿಂದ ರಾಯರಾಳತಾಂಡ, ಕೆಚ್ಚಿನಬಂಡಿ ಮತ್ತು ಪ್ರಸ್ತುತ ಈಗಿರುವ ಮಾಲವಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಶಾಲೆಯ ಭೌತಿಕ ಅಭಿವೃದ್ಧಿಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಕೊಂಡಿರುವರು.

- Advertisement -

 

ಬಿ.ಎ ಮತ್ತು ಎಂ.ಎ ಕನ್ನಡವನ್ನು ಕುವೆಂಪು ವಿಶ್ವವಿದ್ಯಾಲಯ, ಎಂ.ಎ. ಪತ್ರಿಕೋದ್ಯಮ ಹಂಪಿ ಕನ್ನಡ ವಿ.ವಿಯಲ್ಲಿ ಪೂರೈಸಿ, ಪ್ರಸ್ತುತ ಹಂಪಿ ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಎಚ್.ಡಿ. ಅಧ್ಯಯನ ಮಾಡುತ್ತಿರುವ ಪರಮೇಶ್ವರಯ್ಯ 2021ರ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.

ಮಾದರಿ ಶಾಲೆ ಕನಸು ನನಸು

ಹಗರಿಬೊಮ್ಮನಹಳ್ಳಿ ಮಾಲವಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನಗಳನ್ನು ಕಂಡು, ದೇಶಕ್ಕೆ ಪ್ರತಿಷ್ಠಿತ ಜನರನ್ನು ನೀಡಿದ ಹಿರಿಮೆ ಇದೆ. ಇಂತಹ ಶಾಲೆಗೆ ಐದು ವರ್ಷಗಳ ಹಿಂದೆ ಪರಮೇಶ್ವರಯ್ಯ ಕಾಲಿಟ್ಟರು. ಅಂದೇ ಶಾಲೆಗೆ ಮರು ಕಾಯಕಲ್ಪ ಕೊಡುವ ಗಟ್ಟಿ ಮನಸ್ಸು ಮಾಡಿದರು. ಆರಂಭದಲ್ಲಿ ಉತ್ತಮ ಸ್ಪಂದನೆ ಸಿಗದಿದ್ದರೂ, ಕ್ರಮೇಣ ಅಲ್ಲಿನ ಕೆಲ ಯುವ ಉತ್ಸಾಹಿ ಶಿಕ್ಷಕರು ಜೊತೆ ಇವರ ಯೋಚನೆ ಮತ್ತು ಯೋಜನೆಗಳಿಗೆ ಬೆಂಬಲ ನೀಡತೊಡಗಿದರು. ನಿಧಾನವಾಗಿ ಆರಂಭವಾದ ಕೆಲಸ ಕೆಲವೇ ವರ್ಷಗಳಲ್ಲಿ ಶಾಲೆಯ ಚಿತ್ರಣವೇ ಸಂಪೂರ್ಣ ಬದಲಾಯಿತು. ಖಾಸಗಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವ ಹಂತಕ್ಕೆ ಇಂದು ಬೆಳೆದು ನಿಂತಿದೆ.

- Advertisement -

ಕಂಪ್ಯೂಟರ್‍ನಲ್ಲಿ ಆಸಕ್ತರಾಗಿದ್ದ ಇವರಿಗೆ ಅದೇ ಮೊದಲ ಅಸ್ತ್ರವಾಯಿತು. ಧೂಳು ಹಿಡಿದು, ಸ್ಟಾಕ್ ರೂಮ್ ಆಗಿದ್ದ ಕಂಪ್ಯೂಟರ್ ಕೊಠಡಿ ತೆರೆದರು. ಅದಕ್ಕೆ ಬೆಂಬಲ ನೀಡಲು ಹಿರಿಯ ವಿದ್ಯಾರ್ಥಿಗಳ ತಂಡವೇ ಸಿದ್ಧಗೊಂಡು ಕೈ ಜೋಡಿಸಿತು. ಅದರ ಫಲವಾಗಿ ಮಕ್ಕಳ ಕಂಪ್ಯೂಟರ್ ಕಲಿಕೆ ಪ್ರಾರಂಭಗೊಂಡು ಹೊಸ ಬದಲಾವಣೆಗೆ ನಾಂದಿಯಾಯಿತು. ಅಲ್ಲಿಂದ ಪ್ರಾರಂಭವಾದ ಪಯಣ ನಂತರ ಹಿಂತಿರುಗಿ ನೋಡಲೇ ಇಲ್ಲ. ಒಂದರ ಮೇಲೊಂದರಂತೆ ಹಿರಿಯ ವಿದ್ಯಾರ್ಥಿಗಳು, ಗ್ರಾಮದ ದಾನಿಗಳ, ಬೇರೆ ಸ್ಥಳದ ದಾನಿಗಳು, ಎಸ್.ಡಿ.ಎಂ.ಸಿ, ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲರ ನೆರವಿನ ಮಹಾಪೂರವೇ ಹರಿದು ಬಂದು ಇಂದು ಮಾಲವಿ ಶಾಲೆಯೇ!.? ಎಂದು ಎಲ್ಲರೂ ಅಚ್ಚರಿ ಪಡುವಂತೆ ಆಕರ್ಷಮಯವಾಗಿದ್ದು ಈಗ ಇತಿಹಾಸ.

ಈ ಶಾಲೆಯ ಕಂಪ್ಯೂಟರ್ ಕೊಠಡಿ ನಂತರದ ಹಿರಿಯ ವಿದ್ಯಾರ್ಥಿಗಳ ನೆರವಿನಿಂದ 1.25ಲಕ್ಷ ರೂಗಳ ಸಹಾಯದಲ್ಲಿ ಪ್ರಾರಂಭವಾದ ‘ಅಬ್ದುಲ್ ಕಲಾಂ ಸ್ಮಾರ್ಟ್ ಕ್ಲಾಸ್. ಮಕ್ಕಳನ್ನು ಆಧುನಿಕತೆಗೆ ತಕ್ಕಂತೆ ರೂಪಿಸಲು ಮತ್ತು ನೂತನ ತಂತ್ರಜ್ಞಾನವನ್ನು ತರಗತಿ ಕೊಠಡಿಯೊಳಗೆ ತೆಗೆದುಕೊಂಡು ಹೋಗಲು ಇದು ನೆರವಾಗುತ್ತಿದೆ. ಇದನ್ನು ನೋಡಿ, ಇತರೆ ಶಾಲೆಯವರು ಸಂದರ್ಶನಮಾಡಿ, ಮಾದರಿಯಾಗಿಸಿಕೊಂಡು ಜಿಲ್ಲೆಯ ಹತ್ತಾರು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‍ಗಳು ಪ್ರಾರಂಭವಾಗಿವೆ.” ಎನ್ನುತ್ತಾರೆ ಆತ್ಮೀಯ ಸ್ನೇಹಿತ ಪರಮೇಶ್ವರಯ್ಯ.

ನಂತರ ನಮ್ಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರ ಜೊತೆಗೂಡಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ 80 ಸಾವಿರ ರೂಗಳ ಪ್ರೊ.ಯು.ಆರ್.ರಾವ್ ವಿಜ್ಞಾನ ಪ್ರಯೋಗಾಲಯ, ಮಕ್ಕಳಲ್ಲಿ ಉಳಿತಾಯ ಮನೋಭಾವ ನಿಟ್ಟಿನಲ್ಲಿ ಇವರ ಕನಸಿನ ‘ಚಿಗುರು ಶಾಲಾ ಮಕ್ಕಳ ಬ್ಯಾಂಕ್’ ಒಂದು ಲಕ್ಷ ರೂ.ಗಿಂತ ಅಧಿಕ ವ್ಯವಹಾರ ಮಾಡಿ ಟಿವಿ9 ನಲ್ಲಿ ಸುದ್ದಿ ಪ್ರಕಟವಾಗುವಂತಾಯಿತು. ಇವರ ಅಭಿರುಚಿ ಆಕಾಶವಾಣಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಕೊಡಿಸುವುದು. ಇದೂ ಕೂಡ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಇಮ್ಮಡಿ ಉತ್ಸಾಹ ಮೂಡಿಸುತ್ತಿತ್ತು, ರೇಡಿಯೋ ಬಳಕೆಗೆ ಇವರ ಕೊಡುಗೆ ಅಪಾರ.

“ಶತಮಾನ ಕಂಡ ಶಾಲೆಯಾದರೂ ಶಾಲಾ ಸ್ವಾಗತ ಕಮಾನು ಇರದಿದ್ದರಿಂದ ಇವರು ಹೊರಗಿನ ದಾನಿಗಳ 75 ಸಾವಿರ ರೂಗಳ ಸಹಕಾರದಿಂದ ಅದನ್ನು ಕೂಡ ನಿರ್ಮಿಸುವಲ್ಲಿ ಪರಿಶ್ರಮ ವಹಿಸಿದರು. ಶಾಲಾ ಕಾಂಪೌಂಡ್ ಇದ್ದರೆ ಸಾಲದು ಅದು ಸುಂದರವಾಗುವಂತೆ 25 ಸಾವಿರ ರೂಗಳಷ್ಟು ದಾನಿಗಳ ನೆರವಿನಿಂದ ಚಿತ್ರಗಳನ್ನು ಅದಕ್ಕೆ ತುಂಬಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶುದ್ಧ ಕುಡಿವ ನೀರಿನ ಸಮಸ್ಯೆ ಮನಗಂಡು ಬೆಂಗಳೂರಿನ ಶ್ರೀಮತಿ ಅಮಿತಾ ಮಧುರನಾಥರಿಂದ 1.25ಲಕ್ಷದಲ್ಲಿ ಅದು ಕೂಡ ಲಭ್ಯವಾಗುವಲ್ಲಿ ಪರಿಶ್ರಮ ಪಟ್ಟಿರುವರು. ಮಂಗಳೂರಿನ ದಾನಿಗಳಿಂದ ಒಂದು ಲಕ್ಷ ರೂ.ಗಳಷ್ಟು ಸಂಗ್ರಹಿಸಿ ಶಾಲಾ ಮಕ್ಕಳಿಗೆ ಆಕರ್ಷಕವಾಗಿ ಆಟವಾಟಲು ಇಳಿಜಾರು, ಜೋಕಾಲಿ, ಕಾಮನಬಿಲ್ಲಿನಂತಹ ಉಪಕರಣಗಳನ್ನು ನಿರ್ಮಿಸಿದ್ದು ಇವರ ಕಾಳಜಿಗೆ ಹಿಡಿದ ಕೈಗನ್ನಡಿ. ಶಾಲೆಯ ಸುಂದರೀಕರಣವನ್ನು ದಾನಿಗಳ ನೆರವು ಪಡೆದು 65ಸಾವಿರ ರೂ.ಗಳಲ್ಲಿ ಮಾಡಿಸಿದರು.

ಶಾಲಾ ವನವನ್ನು ತೋಟಗಾರಿಕೆ ಇಲಾಖೆ ಮತ್ತು ದಾನಿಗಳ ನೆರವಿನಿಂದ 2.15 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಲು ಕಾರಣಕರ್ತರಾದರು. ಕೋಲಾರ ಗೆಳೆಯರ ಬಳಗದಿಂದ ಮಕ್ಕಳಿಗೆ ಒಂದು ವರ್ಷಕ್ಕೆ ಅಗತ್ಯವಾದ 80ಸಾವಿರ ರೂ.ಗಳಷ್ಟು ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಂಡರು. ಶಾಲೆಯ ಇಂತಹ ವಿಶೇಷತೆಗಳು 10ಲಕ್ಷ ರೂಗಳಿಗಿಂತ ಹೆಚ್ಚಾಗಿದೆ. ಆದಾಗ್ಯೂ ಗೆಳೆಯ “ನನ್ನ ಪೂರ್ಣ ಕನಸು ನನಸಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವೆ.” ಎನ್ನುವುದು ಅವರ ಶೈಕ್ಷಣಿಕ ಕಾಳಜಿ ತೋರಿಸುತ್ತದೆ.

ಶಾಲಾ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ವಿಕಾಸ ಮತ್ತು ಶಾಲೆಯ ಸಮಗ್ರ ಅಭಿವೃದ್ದಿಗೆ ಗೆಳೆಯ ತನ್ನದೇ ಆದ ಕಾಣಿಕೆ ನೀಡುತ್ತಾ ಬೇರೆಯವರಿಗೆ ಮಾದರಿಯಾಗಿದ್ದಾನೆ. ಇಂಥಹ ಶಿಕ್ಷಕರು ಪ್ರತಿಯೊಂದು ಶಾಲೆಯಲ್ಲಿದ್ದರೆ ಅಂತಹ ಶಾಲೆ ಅಭಿವೃದ್ಧಿ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸಂಪನ್ಮೂಲ ವ್ಯಕ್ತಿಯಾಗಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಯುವ ಬರಹಗಾರರ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗುಲ್ಬರ್ಗಾ ವಿಭಾಗ ಮಟ್ಟದ ಮಕ್ಕಳ ಕಾವ್ಯ ಕಮ್ಮಟದ ಸಂಚಾಲಕನಾಗಿ ಕೆಲಸ ಮಾಡಿರುವ ಸ್ನೇಹಿತ ಪರಮೇಶ್ವರಯ್ಯ ಡಿ.ಪಿ.ಇ.ಪಿ.ಚಿಣ್ಣರಮೇಳ, ಕ್ರಿಯಾ ಸಂಶೋದನೆ ತರಬೇತಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಂಸೆ ಪಡೆದಿರುವರು. ಅಷ್ಟೇ ಅಲ್ಲ ಗಣಿತ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಬಾಲಕಿಯರ ಸಬಲೀಕರಣದ ‘ಮೀನಾ’ಸಾಹಿತ್ಯ ಮತ್ತು ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ, ಏಜುಸ್ಯಾಟ್ ಮತ್ತು ಗಣಿತ ರೇಡಿಯೋ ಪಾಠಗಳು ನನ್ನಂತಹ ಶಿಕ್ಷಕರ ಜೊತೆ ಮಕ್ಕಳ ಮನಸನ್ನು ಗೆದ್ದಿವೆ. ಕಲಿಕಾ ಸಾಮರ್ಥ್ಯಗಳ ನಿಗದಿಪಡಿಸುವ ಮತ್ತು ಮಗು- ಬಾಲ್ಯ ಮಾಡ್ಯೂಲ್ ಹಾಗೂ ಜಿಪಿಟಿ ಶಿಕ್ಷಕರ ಇಂಡಕ್ಷನ್ ತರಬೇತಿ ಹೀಗೆ ಹತ್ತಾರು ಕಾರ್ಯಕ್ರಮಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಗಳನ್ನು ನೀಡಿದ ಹೆಗ್ಗಳಿಕೆ ಇವರದು.

ಜಿಲ್ಲಾ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಅನೇಕ ವಿಷಯಗಳ ಮೇಲೆ ಪ್ರಬಂಧಗಳನ್ನೂ ಮಂಡಿಸಿರುವ ಇವರು. ಎಸ್.ಎಸ್.ಎಲ್.ಸಿ./ಪಿ.ಯು.ಸಿ. ನಂತರದ ಕೋರ್ಸ್ ಕುರಿತು ಆಕಾಶವಾಣಿ-ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಗಳನ್ನೂ ನೀಡಿ ಸೈ ಎನಿಸಿಕೊಂಡಿದ್ದಾರೆ. ಬಳ್ಳಾರಿ ಡಯಟ್ ವತಿಯಿಂದ ಅನೇಕ ಅಧ್ಯಯನಗಳನ್ನು ಕೈಗೊಂಡು, ಸಮಗ್ರ ವರದಿಯನ್ನು ಸಲ್ಲಿಸಿ, ಉತ್ತಮ ಸಂಶೋಧಕರೆಂದು ಪ್ರಶಂಸೆ ಪಡೆದಿದ್ದಾರೆ.

ಸಾಹಿತ್ಯದ ಒಲವು

ಹವ್ಯಾಸಿ ಬರವಣಿಗೆಯನ್ನು ಒಂದು ಪ್ರವೃತ್ತಿಯಾಗಿಸಿಕೊಂಡಿರುವ ಈ ಸ್ನೇಹಿತ. ಅದರಿಂದ ಪರಮೇಶ್ವರಯ್ಯ ಸೊಪ್ಪಿಮಠ ಎಂದು ನಾಡಿನ ಎಲ್ಲರಿಗೂ ಪರಿಚಿತನಾಗಿರುವರು ಎಂಬುದು ನನಗೂ ಹೆಮ್ಮೆಯ ಸಂಗತಿ. ಇವರು ಬರೆದ 650ಕ್ಕೂ ಹೆಚ್ಚು ಲೇಖನಗಳು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ- ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ದಿಕ್ಸೂಚಿ, ಕರ್ಮವೀರ, ಹೊಸತು, ಬಾಲವಿಜ್ಞಾನ, ಕನ್ನಡ ಪ್ರಭ, ಸುಧಾ, ವಿಜ್ಞಾನ ಸಂಗಾತಿ, ಯುವ ಕರ್ನಾಟಕ. ಟೀಚರ್, ಯೋಜನ, ಗುಬ್ಬಚ್ಚಿ ಗೂಡು, ಶಿಕ್ಷಣ ಶಿಲ್ಪಿ, ಜೀವನ ಶಿಕ್ಷಣ, ಜನಪದ, ಜೀವನ ವಿಕಾಸ, ಶಿಕ್ಷಣ ವಾರ್ತೆಯಂತಹ ಪತ್ರಿಕೆಗಳಲ್ಲಿ ಪ್ರಕಟವಾಗಿ ಗಮನ ಸೆಳೆದಿವೆ. ಅವನ್ನು ಸಾಧಕರು, ವಿಜ್ಞಾನ, ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳು, ಮಹಿಳೆ, ಕೃಷಿ ಯಂತ ಹಲವಾರು ವಿಭಾಗಗಳಲ್ಲಿ ಲೇಖನಗಳನ್ನು ಬರೆದಿದ್ದು. ಅವುಗಳನ್ನು ತಮ್ಮ ಬ್ಲಾಗನಲ್ಲಿ, ಯೂಟ್ಯೂಬ್‍ಗಳಲ್ಲಿ ಕೂಡ ಅಳವಡಿಸಿರುವರು.

ಇವರು ಬರೆದ ‘ಎಜುಸ್ಯಾಟ್- ಒಂದು ಶಿಕ್ಷಣ ಕ್ರಾಂತಿ’ ಲೇಖನ ಗುಲ್ಬರ್ಗಾ ವಿ.ವಿ. ಕನ್ನಡ ಪಠ್ಯದಲ್ಲಿ ಮತ್ತು ‘ರವೀಂದ್ರನಾಥ್ ಟ್ಯಾಗೋರ್’ ಲೇಖನ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಪ್ರಕಟಿಸಿರುವ 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದವು. ಇದುವರೆಗೂ 15 ಕೃತಿಗಳನ್ನು ಬರೆದಿದ್ದಾರೆ. ‘ಹಗರಿಬೊಮ್ಮನಹಳ್ಳಿ ತಾಲೂಕು ದರ್ಶನ, ಎಂ.ವಿ.ಚಕ್ರಪಾಣಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಎಣೆಯಿಲ್ಲದಾಗಸಕೆ ಕೃತಿಗಳ ಜೊತೆಗೆ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 2009ನೇ ಸಾಲಿನಲ್ಲಿ ‘ತರಗತಿ ನಿರ್ವಹಣಾ ತಂತ್ರಗಳು’, ಕರ್ನಾಟಕ ಬಾಲ ವಿಕಾಸ ಅಕಾಡೆಮಿಗಾಗಿ “ಶಿಕ್ಷಣ ವಿಕಾಸ-2009, ಶೈಕ್ಷಣಿಕ ಲೇಖನಗಳನ್ನೆಲ್ಲಾ ಸಂಗ್ರಹಿಸಿ ‘ತಿಳಿವಿನ ತುತ್ತು’, ‘ಶಿಕ್ಷಣ ದೀವಿಗೆ, ‘ಅರಿವಿನ ಹರಿಗೋಲು’ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ವಿ.ವಿ.ಯಿಂದ ‘ಅಕ್ಕ ಮಹಾದೇವಿ ಕಂಡಂತೆ ಬಸವಣ್ಣ ಪುಸ್ತಕ ಪ್ರಕಟವಾಗಿದೆ. ಕನ್ನಡದ ಹೋರಾಟಗಾರರ ರೋಚಕ ಬದುಕನ್ನು ಆಧರಿಸಿದ “ಕನ್ನಡ ಕಹಳೆ” ಕೃತಿಯು 2020ರಲ್ಲಿ ಸಾಕಷ್ಟು ಹೆಸರು ಮಾಡಿದೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವ ‘ಹಸಿರುಡುಗೆ’ಕಾದಂಬರಿಯೂ ಮಕ್ಕಳ ಮನಸ್ಸನ್ನು ಗೆದ್ದಿದೆ. ದಿಕ್ಸೂಚಿ, ಗುಬ್ಬಚ್ಚಿಗೂಡು, ಟೀಚರ್ ಮಾಸ ಪತ್ರಿಕೆಗಳ ಸಂಪಾದಕ ಮಂಡಳಿ ಸದಸ್ಯನಾಗಿಯೂ ಕೆಲಸ ನಿರ್ವಹಿಸಿರುವ ಪರಮೇಶ್ವರಯ್ಯ ಹಂಪಿ ಉತ್ಸವದ ಕವಿ ಕಾವ್ಯ ಗಾಯನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಗಡಿನಾಡ ಉತ್ಸವದಲ್ಲಿ ಕವನ ವಾಚಿಸಿ ಮೆಚ್ಚುಗೆ ಪಡೆದಿರುವರು. ಇವರು ಅನೇಕ ಗೋಷ್ಠಿಗಳು, ಕಮ್ಮಟಗಳಲ್ಲಿ ಭಾಗವಹಿಸದ್ದಲ್ಲದೇ ಆಯೋಜನೆಯನ್ನೂ ಮಾಡಿರುವರು.

ಹಂಪಿ ಉತ್ಸವದ ನಿರೂಪಣೆಯನ್ನು ಕಳೆದ ಆರು ವರ್ಷಗಳಿಂದ ಮಾಡುತ್ತಿರುವುದು ಇವರ ನಿರೂಪಣಾ ಕೌಶಲ್ಯಕ್ಕೆ ಕೈಗನ್ನಡಿ.ಇತ್ತೀಚೆಗೆ ಕೋಲಾರದ ಶಿಕ್ಷಕರ ಗೆಳೆಯರ ಬಳಗವು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುತ್ತಿರುವುದನ್ನು ಗಮನಿಸಿ, ಆ ಕುರಿತಾಗಿ ಪ್ರಜಾವಾಣಿಯಲ್ಲಿ “ಶಿಕ್ಷಕರ ಬಳಗಕ್ಕೆ ಶಹಬ್ಬಾಸ್”ಎನ್ನುವ ಇವರ ಲೇಖನವು ಡಿಸೆಂಬರ್31, 2019 ರಂದು ಪ್ರಕಟವಾಯಿತು. ಇದನ್ನು ಗಮನಿಸಿದ ಅಂದಿನ ಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶಕುಮಾರ್ ಅವರು ಅಂದೇ ಇವರಿಗೆ ಖುದ್ದು ಕರೆ ಮಾಡಿ ಅಭಿನಂದಿಸಿದರು. ಬೆಂಗಳೂರಿಗೆ ಇವರನ್ನು ಕರೆಸಿಕೊಂಡು ಆ ಕುರಿತು ಚರ್ಚೆ ಮಾಡಿದರು. ನಂತರ ಕೋಲಾರ ಜಿಲ್ಲೆಗೆ ಸಂದರ್ಶನ ನೀಡುವಾಗ ಇವರನ್ನು ಕರೆಸಿಕೊಂಡು ಆ ಶಾಲೆಗಳಿಗೆ ಭೇಟಿ ನೀಡಿದರು. ಇದು ಒಬ್ಬ ಬರಹಗಾರನಿಗೆ ಸಲ್ಲುವ ಬಹು ದೊಡ್ಡ ಪ್ರಶಂಸೆ ಎಂದು ನನ್ನ ಅನಿಸಿಕೆ.

ಸಮಾಜಮುಖಿಯಾಗಿ..

ಶಾಲಾ ಅವಧಿ ನಂತರ ಸಮಾಜ ಸೇವೆಯಲ್ಲಿ ತೂಡಗಿಕೂಳ್ಳುವ ತುಡಿತವಿದ್ದುದ್ದರಿಂದ ಅನೇಕ ಸಂಸ್ಥೆಗಳ ಭಾಂಧವ್ಯವನ್ನು ಪರಮೇಶ್ವರಯ್ಯ ಹೊಂದಿರುವರು. ಇತಿಹಾಸ ಅಕಾಡೆಮಿಯ ಸಂಚಾಲಕರಾಗಿ ಕೆಲ ವರ್ಷ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ. ಅದರ ಮೂಲಕ ಪ್ರೌಢಶಾಲಾ ಮಕ್ಕಳಿಗೆ ವಾರಪೂರ್ತಿ ಕಾರ್ಯಕ್ರಮ ಆಯೋಜಿಸಿರುವ ಇವರು 21ನೇ ರಾಜ್ಯ ಇತಿಹಾಸ ಸಮ್ಮೇಳನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೈತ್ರಿ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್. ರಿ ಕಾರ್ಯದರ್ಶಿಯಾಗಿ 2400ಕ್ಕೂ ಹೆಚ್ಚು ಉಚಿತ ನೇತ್ರ ಚಿಕಿತ್ಸೆ ನಡೆಸಲು ನೆರವಾಗಿದ್ದು. ಫ್ರೆಂಡ್ಸ ಸ್ಪೋಟ್ಸ ಕ್ಲಬ್‍ನಿಂದ ಟೂರ್ನಾಮೆಂಟ್, ಸತ್ಸಂಗ ಸಮಿತಿ ಅಡಿಯಲ್ಲಿ ಜ್ಞಾನಮುಖಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ.

ಭಾರತ ಜ್ಞಾನ ವಿಜ್ಞಾನ ಸಮಿತಿ ಅಡಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಸರಕಾರಿ ಶಾಲಾ ಮಕ್ಕಳ ಕಣ್ಣು ಪರೀಕ್ಷೆ ಮತ್ತು ಉಚಿತವಾಗಿ ಕನ್ನಡಕ ವಿತರಣೆ ಹಾಗೂ ಸರಕಾರಿ ಶಾಲಾ ಮಕ್ಕಳ ರಕ್ತ ಪರೀಕ್ಷೆಯನ್ನು ಉಚಿತವಾಗಿ ಆಯೋಜಿಸಿರುವರು. ಸದ್ಯ “ವಿಜ್ಞಾನ ಭವನ” ನಿರ್ಮಿಸಲು ಶ್ರಮಿಸುತ್ತಿರುವ ಪರಮೇಶ್ವರಯ್ಯ ತಕ್ಷಶಿಲಾ ಹೆಲ್ತ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿಯೂ ಕೂಡ ಉಚಿತ ಆರೋಗ್ಯ ಶಿಬಿರ ಮತ್ತು ದೈಹಿಕ ಸದೃಢತಾ ಶಿಬಿರಗಳು, ರಜಾ ಅವಧಿಯಲ್ಲಿ ಮಕ್ಕಳಿಗೆ ಉಚಿತವಾಗಿ ಅಡ್ವೆಂಚರ್ ಕ್ಯಾಂಪ್, ಸ್ಕೇಟಿಂಗ್ ಶಿಬಿರಗಳು, ಕರಾಟೆ ಶಿಬಿರಗಳುನ್ನು ಆಯೋಜಿಸಿದ್ದಾರೆ. ಕ್ಲಬ್ ವತಿಯಿಂದ ತಾಲೂಕ ಸಾರ್ವಜನಿಕ ಗ್ರಂಥಾಲಯಕ್ಕೆ ಯು.ಪಿ.ಎಸ್. ದೇಣಿಗೆ ನೀಡಿರುವರು ಈ ರೀತಿ ಸಮಾಜಮುಖಿಯಾಗಿ ಜನ ಸಾಮಾನ್ಯರ ಬದುಕಿಗೆ ನೆರವಾಗಲು ಪ್ರಯತ್ನಿಸುತ್ತಿರುವ ಪರಮೇಶ್ವರಯ್ಯ ಬಹುಮುಖಿ ವ್ಯಕ್ತಿತ್ವವುಳ್ಳವರು.

ಗೌರವ ಸನ್ಮಾನಗಳು:

ಗೆಳೆಯನ ಸಾಧನೆಯ ಹಾದಿಯನ್ನು ಗಮನಿಸಿರುವ ವಿವಿಧ ಸಂಸ್ಥೆಗಳು ಅವರನ್ನು ಗೌರವಿಸಿವೆ. ಜೆ.ಸಿ. ಬೆಂಗಳೂರು ಅವರ ರಾಜ್ಯ ಗುರು ಪುರಸ್ಕಾರ, ಗುಲ್ಬರ್ಗದ ಉದಯೋನ್ಮುಖ ಬರಹಗಾರರ ಸಂಘ 2007ರ ವರ್ಷದ ಉದಯೋನ್ಮುಖ ಬರಹಗಾರ, 2006-07 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ, ಬೆಳಗಾವಿಯ ಸ.ಜ. ನಾಗಲೋಟಿಮಠ ಅಂತರಾಷ್ಟ್ರೀಯ ಪ್ರತಿಷ್ಠಾನದ ರಾಜ್ಯ ಆದರ್ಶ ಶಿಕ್ಷಕ, ರಾಯಚೂರು ವಿಜ್ಞಾನ ಕೇಂದ್ರದಿಂದ ಉತ್ತಮ ಶಿಕ್ಷಕ, ಧಾರವಾಡದ ಗುಬ್ಬಚ್ಚಿಗೂಡು ಮಾಸಪತ್ರಿಕೆಯ 6ನೇ ರಾಜ್ಯ ಮಕ್ಕಳ ಸಮ್ಮೇಳನದಲ್ಲಿ ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಕನ್ನಡ ಕಹಳೆ ಕೃತಿಗೆ 2020ರ ಪ್ರತಿಷ್ಠಿತ ಆಜೂರು ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ. ಈಗ 2021ನೇ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿ, ಆ ಪ್ರಶಸ್ತಿಯು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಕೌಟುಂಬಿಕ ಬದುಕು

ರಾಜ್ಯದೆಲ್ಲೆಡೆ ಅಪಾರ ಗೆಳೆಯರ ಬಳಗವನ್ನು ಸಂಪಾದಿಸಿರುವ ಸೊಪ್ಪಿಮಠರ ಕೌಟಂಬಿಕ ಬದುಕು ಆದರ್ಶಮಯವಾಗಿದೆ. ಸತಿಪತಿಯರಿಬ್ಬರೂ ಶಿಕ್ಷಕರು. ಇವರ ಪತ್ನಿ ಹೆಚ್.ಎಂ.ವನಿತಾ ಸರಕಾರಿ ಪ್ರೌಢಶಾಲೆ ಬನ್ನಿಗೋಳದಲ್ಲಿ ಆಂಗ್ಲಭಾಷಾ ಶಿಕ್ಷಕಿ. ಇವರ ಯಶಸ್ಸಿನ ಹಿಂದಿರುವ ಪ್ರೇರಣಾ ಶಕ್ತಿ ವನಿತಾ ಮೇಡಂ ಎನ್ನಬಹುದು. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ನೇಹ ಪಿ.ಯು.ಸಿ ಓದುತ್ತಿದ್ದಾಳೆ. ಅನು ಏಳನೇ ತರಗತಿ ಓದುತ್ತಿರುವಳು. ಚಿಕ್ಕ ಚೊಕ್ಕ ಕುಟುಂಬದ ಸ್ನೇಹಿತ ಮುಂಬರುವ ವರ್ಷಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆಯುವಂತಾಗಲಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಪತಿ ಪತ್ನಿಯರಿಬ್ಬರೂ ಉತ್ತಮ ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದು ಬಂದು ಮಕ್ಕಳ ಬದುಕಿನಲ್ಲಿಯೂ ಕೂಡ ನೈತಿಕ ಜೀವನವನ್ನು ರೂಢಿಸುತ್ತಿರುವರು. ಇವರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group