“ರಂಗಭೂಮಿ ಕಲೆಗೆ ಪ್ರೋತ್ಸಾಹಿಸುವದರ ಜೊತೆಗೆ ಪಟ್ಟಣದಲ್ಲಿ ಉತ್ತಮ ರಂಗಮಂದಿರ ನಿರ್ಮಿಸುವ ಗುರಿ ಹೊಂದಲಾಗಿದ್ದು, ರಂಗ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ದೇಸಾಯಿ ಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ -೨೦೨೨ ರ ೨೫ ನೇ ವರ್ಷಾಚರಣೆ ನಾಟಕೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸವದತ್ತಿ ದೇಸಾಯಿ ಕೋಟೆಯ ಅಭಿವೃದ್ದಿಗೆ ೨೫ ಕೋಟಿ ರೂ.ಗಳ ಅನುದಾನ ನೀಡಬೇಕೆಂದು ಬರುವಂತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದರು. ರಸ್ತೆಗಳ ಅಭಿವೃದ್ದಿಯ ಜೊತೆಗೆ ಪಟ್ಟಣದಲ್ಲಿ ೨೪/೭ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಮುಖ್ಯಮಂತ್ರಿಗಳು ಸವದತ್ತಿ ಯಲ್ಲಮ್ಮಾ ಕ್ಷೇತ್ರಕ್ಕೆ ೧೨೫ ಕೋಟಿ ರೂ.ಗಳ ಅನುದಾನವನ್ನು ನೀಡಿದ್ದು, ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ವಿಧಾನಸಭೆ ಮಾಜಿ ಉಪಸಭಾಧ್ಯಕ್ಷರಾದ ದಿ.ಚಂದ್ರಶೇಖರ ಮಾಮನಿಯವರ ಸ್ಮರಣಾರ್ಥವಾಗಿ ರಂಗ “ಚಂದ್ರಮ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲುರವರಿಗೆ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಪತಿ ಮಂಜನಬೈಲುರವರು ರಾಜ್ಯದ ಯಾವುದೇ ತಾಲೂಕಿನಲ್ಲಿ ಹವ್ಯಾಸಿ ರಂಗ ಕಲಾವಿದರ ಸಂಘಟನೆ ೨೫ ವರ್ಷ ಜರುಗಿದ ಇತಿಹಾಸವಿಲ್ಲದಾಗಿದ್ದು, ಅದು ಇದ್ದರೆ ಸವದತ್ತಿಯಲ್ಲಿ ಮಾತ್ರ ಎಂದರು. ಇಂತಹ ಸಂಘಟನೆಗೆ ಶಾಸಕರಿಂದ ಹಿಡಿದು ಸಹೃದಯ ಹಿರಿಯರು ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಸಂಘಟನೆಯ ಎಲ್ಲ ಕಲಾವಿದರೂ ಕೂಡ ಉತ್ತಮ ಹವ್ಯಾಸಿ ನಾಟಕಗಳನ್ನು ಜರುಗಿಸುವ ಮೂಲಕ ರಂಗ ಆರಾಧನಾ ಸಂಸ್ಥೆಯನ್ನು ಉಳಿಸಿಕೊಂಡು ಬಂದಿದ್ದಾರೆ. ನನಗೆ ನೀಡಿದ ರಂಗ ಚಂದ್ರಮ ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.
ಡಾ.ಅಭಿನಂದನ ಕಬ್ಬಿಣ ರಂಗ ಆರಾಧನಾ ಸಂಸ್ಥೆಯ ೨೫ ವರ್ಷದ ಬೆಳವಣಿಗೆ ಕುರಿತು ಚುಟುಕು ವಾಚನ ಮಾಡಿ ಚುಟುಕು ಹೊಂದಿದ ಸ್ಮರಣಿಕೆಯನ್ನು ನೀಡಿದರು.
ರೇಣುಕಾತಾಯಿ ಪಾಟೀಲಪದಕಿ, ಮೌನೇಶ ಸುಳ್ಳದ, ಬಸವರಾಜ ಕಾರದಗಿ, ಡಾ.ಅಭಿನಂದನ ಕಬ್ಬಿಣ, ಸಿದ್ದಯ್ಯ ವಡಿಯರ ಪುಂಡಲೀಕ ಬಾಳೋಜಿ ಉಪಸ್ಥಿತರಿದ್ದರು.
ಝಕೀರ ನದಾಫ ಪ್ರಾಸ್ತಾವಿಕವಾಗಿ ಮಾತನಾಡುತ್ತ “ರಂಗಕಲಾವಿದನಾಗಿ ತಮ್ಮ ಬದುಕು ಕಟ್ಟಿಕೊಂಡ ರೀತಿ.ಸಂಘಟನೆಗೆ ನೆರವಾದ ಮಹನೀಯರನ್ನು ನೆನೆಯುತ್ತ ಇಂದಿನವರೆಗೂ ರಂಗ ಆಋಆಧನಾ ಸಂಸ್ಥೆ ಬೆಳೆದು ಬರಲು ಕಾರಣವಾದವರನ್ನು ಸ್ಮರಿಸುತ್ತ, ಪುನೀತ ರಾಜಕುಮಾರ.ಲತಾ ಮಂಗೇಶ್ಕರ, ಇಬ್ರಾಹಿಂ ಸುತಾರ, ನಟ ರಾಜೇಶರನ್ನು ಮೊದಲುಗೊಂಡು ಕೋರೋನಾ ಕಾಲಘಟ್ಟದಲ್ಲಿ ನಿಧನರಾದ ಮಹನೀಯರನ್ನು ನೆನಯುತ್ತ ಮೊಟ್ಟ ಮೊದಲಿಗೆ ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುವ ಜೊತೆಗೆ ಮೌನ ಆಚರಿಸಲಾಯಿತು. ಶಿವಾನಂದ ತಾರೀಹಾಳ ನಿರೂಪಿಸಿದರು. ಹುಸೇನಸಾಬ ನದಾಫ ವಂದಿಸಿದರು.
ಮೂರು ಹಂತಗಳಲ್ಲಿ ನಡೆಯುವ ನಾಟಕೋತ್ಸವದ ಮೊದಲ ಪ್ರದರ್ಶನವಾಗಿ ಧಾರವಾಡದ ಸಮುದಾಯ ತಂಡದಿಂದ ವಾಸುದೇವ ಗಂಗೇರ ನಿರ್ದೇಶನದ ಶ್ರೀಶೈಲ ಹುದ್ದಾರ ರಚಿಸಿದ ಬುದ್ದ ಪ್ರಬುದ್ದ ನಾಟಕ ಪ್ರದರ್ಶನಗೊಂಡಿತು.
ಬುದ್ದ ಪ್ರಬುದ್ದ
ಬುದ್ದ ಪ್ರಬುದ್ದ ನಾಟಕ ಡಾ.ಶ್ರೀಶೈಲ ಹುದ್ದಾರ ರಚಿಸಿದ್ದು ವಾಸುದೇವ ಗಂಗೇರ ನಿರ್ದೇಶನದಲ್ಲಿ ಧಾರವಾಡದ ಸಮುದಾಯ ತಂಡದಿಂದ ನಾಟಕೋತ್ಸವದ ಮೊದಲ ಪ್ರದರ್ಶನವಾಯಿತು. ಅಪರೂಪದ ರಂಗ ಜಂಗಮ ಎಂದೇ ಖ್ಯಾತರಾದ ಡಾ.ಶ್ರೀಶೈಲ ಹುದ್ದಾರ ನವಲಗುಂದ ತಾಲೂಕಿನ ಶಲವಡಿ ಗ್ರಾಮದವರು. ೧-೬-೧೯೬೫ರಲ್ಲಿ ಸುಶೀಲಮ್ಮ ವೀರಣ್ಣ ದಂಪತಿಗಳ ಏಕಮೇವ ಪುತ್ರರಾಗಿ ಜನಿಸಿದ ಇವರು ಬಾಲ್ಯದಲ್ಲಿಯೇ ನಾಟಕಗಳನ್ನು ನೋಡುತ್ತ ಬೆಳೆದ ಇವರು ತಮ್ಮ ವ್ಯಾಸಂಗದುದ್ದಕ್ಕೂ ಬರವಣಿಗೆಯನ್ನು ರೂಢಿಸಿಕೊಂಡವರು. ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಎರಡನೆಯ ಸೆಮಿಸ್ಟರ್ ವರ್ಷದ ವಿದ್ಯಾರ್ಥಿಗಳಿಗೆ ಇವರ ನಾಟಕ “ಬಸವ ವಿಜಯ”ವನ್ನು ಪಠ್ಯವಾಗಿಸಿದ್ದು ಇತಿಹಾಸ. ಇವರು ನಾಟಕಗಳ ರಚನೆಯಷ್ಟೇ ಅಲ್ಲ ರಂಗ ಕಲಾವಿದರಾಗಿ ರಂಗ ತಂಡವನ್ನು ಕಟ್ಟಿ ನಾಟಕಗಳನ್ನುವಿನೂತನ ಪ್ರಯೋಗಗಳನ್ನು ಮಾಡಿದವರು. ಇವರ ನಾಟಕ “ಬುದ್ಧ ಪ್ರಬುದ್ಧ” ನಿಜಕ್ಕೂ ಬುದ್ಧನ ವ್ಯಕ್ತಿತ್ವವನ್ನು ಹಿಡಿದಿಟ್ಟಿರುವ ರೀತಿ ನಿಜಕ್ಕೂ ಅದ್ಬುತ. ಕನ್ನಡ ರಂಗಭೂಮಿಯಲ್ಲಿ ಹೊಸ ಚಲನೆ ಉಂಟು ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಧಾರವಾಡದ “ಸಮುದಾಯ” ಕಲಾವಿದರ ಬಳಗದ ಈ ನಾಟಕ ವಾಸುದೇವ ಗಂಗೇರ ಅವರ ನಿರ್ದೇಶನದ ಬಗ್ಗೆ ಎರಡು ಮಾತು ಹೇಳಲೇಬೇಕು. ರಂಗಾಯಣ ಮತ್ತು ನೀನಾಸಂ ಪದವೀಧರ ಗಂಗೇರ ಅವರು ಇತಿಹಾಸದ ವಿಷಯವನ್ನು ರಂಗಸಜ್ಜಿಕೆಗೆ ತಂದಿರುವ ರೀತಿ ವರ್ಣನೆಗೆ ಶಬ್ದಗಳು ಸಾಲದು.ಬುದ್ಧನ ವ್ಯಕ್ತಿತ್ವವನ್ನು ನಿರೂಪಿಸುವ ರೀತಿ.ಸಾರಥಿ ಪಾತ್ರದ ಹಾಸ್ಯದ ಹೊನಲು. ಉತ್ತರ ಕರ್ನಾಟಕದ ಆಡು ಮಾತಿನ ಸೊಗಡಿನ ಹಾಸ್ಯ.ಅಂಗುಲೀಮಾಲನನ್ನು ಚಿತ್ರಿಸಿರುವ ರೀತಿ. ಆರಂಭದಿಂದ ಅಂತ್ಯದವರೆಗೂ ಪಾತ್ರಗಳು ಮತ್ತು ವಸ್ತ್ರಾಲಂಕಾರ ಒಂದಕ್ಕಿಂತ ಒಂದು ಗಮನ ಸೆಳೆದವು. ನನ್ನೊಂದಿಗೆ ಹಿರಿಯರಾದ ಸಾಹಿತಿ ಯ. ರು. ಪಾಟೀಲ ಉಪನ್ಯಾಸಕ ರಾದ ಡಾ. ವಗ್ಗರ.ಕೂಡ ನಾಟಕದ ವಿಶ್ಲೇಷಣೆ ಮಾಡುತ್ತಿದ್ದ ನ್ನು ಕಂಡು ನನ್ನ ವೀಕ್ಷಣೆಗೆ ತೊಡಗಿದ್ದೆ.ಹಿರಿಯ ಸ್ನೇಹಿತ ಚಿದಾನಂದ ಬಾರ್ಕಿ.ಅಳಿಯ ಅಭಿಷೇಕ ಬಟಕುರ್ಕಿ. ನನ್ನ ಜೊತೆಯಲ್ಲಿ ನಾಟಕದ ಬೆಳಕಿನ ವಿನ್ಯಾಸ ಕುರಿತು ಹೆಮ್ಮೆಯ ಮಾತುಗಳನ್ನು ಹೇಳುವುದನ್ನು ಕಂಡಾಗ ಈ ನಾಟಕ ಕುರಿತು ನಾಲ್ಕು ಮಾತು ಬರೆಯುವ ಆಲೋಚನೆ ಹೊರಬಂದಿತು.
ಮನರಂಜನೆ ಮತ್ತು ಚಿಂತನೆ ಒಟ್ಟಿಗೆ ರಂಗದಲ್ಲಿ ಅಳವಡಿಸುವಲ್ಲಿ ನಿರ್ದೇಶಕನ ಜಾಣ್ಮೆ ನಾಟಕ ನೋಡಿದ ಪ್ರೇಕ್ಷಕನ ಮನದಾಳದಲ್ಲಿ ಉಳಿಯುವ ಮೌಲ್ಯವನ್ನು ಈ ನಾಟಕ ಕಟ್ಟಿಕೊಟ್ಟಿದೆ. ಉಡುಪಯ ರಂಗಭೂಮಿ ಸಂಸ್ಥೆ ೪೨ ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ “ಬುದ್ಧ ಪ್ರಬುದ್ಧ” ನಾಟಕ ಹಲವು ಪ್ರಶಸ್ತಿಗೆ ಭಾಜನವಾಗಿದ್ದನ್ನು ಇಲ್ಲಿ ನೆನಪಿಸುವೆನು. ಇಲ್ಲಿ ಜರುಗಿದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನದೊಂದಿಗೆ ೨೫೦೦೦ ರೂ.ನಗದು ಮತ್ತು ಸ್ಮರಣಿಕೆ ಹಾಗೂ ಡಾ.ಆರ್.ಪಿ.ಕೊಪ್ಪಿಕರ್. ಸ್ಮಾರಕ ಫಲಕ ಮತ್ತು ಯು.ಪಿ.ಶಣೈ ಸ್ಮಾರಕ ಸ್ಮರಣಿಕೆಯನ್ನು ಈ ನಾಟಕ ತನ್ನ ಮಡಿಲಿಗೇರಿಸಿಕೊಂಡಿದೆ.
ಶ್ರೇಷ್ಠ ನಿರ್ದೇಶನದಲ್ಲಿ ವಾಸುದೇವ ಗಂಗೇರ ತೃತೀಯ ಸ್ಥಾನ.ಶ್ರೇಷ್ಠನಟ ಪ್ರಶಸ್ತಿಯನ್ನು ಅಂಗೂಲಿಮಾಲಾ ಪಾತ್ರಧಾರಿ ಈರಣ್ಣ ಐನಾಪೂರ.ಶ್ರೇಷ್ಠ ಸಂಗೀತ ಕ್ಕೆ ದ್ವಿತೀಯ ಸ್ಥಾನ.ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರಕ್ಕಾಗಿ ತೃತೀಯ ಸ್ಥಾನ.ಶ್ರೇಷ್ಠ ಪ್ರಸಾದನಕ್ಕಾಗಿ ದ್ವಿತೀಯ ಸ್ಥಾನ, ಶ್ರೇಷ್ಠ ರಂಗಬೆಳಕಿಗಾಗಿ ದ್ವಿತೀಯ ಸ್ಥಾನವನ್ನು ಈ ನಾಟಕ ಪಡೆದುಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ ಇಂತಹ ನಾಟಕವನ್ನು ರಂಗ ಆರಾಧನಾ ಸಂಸ್ಥೆಯ ಪರಸಗಡ ನಾಟಕೋತ್ಸವ ೨೦೨೨ ರ ಮೊದಲ ನಾಟಕವಾಗಿ ಪ್ರದರ್ಶನಕ್ಕೆ ಅವಕಾಶ ನೀಡಿದ ರಂಗ ಆರಾಧನಾ ಸಂಸ್ಥೆಯವರಿಗೆ ಮೊಟ್ಟ ಮೊದಲ ಅಭಿನಂದನೆ ಸಲ್ಲಿಸುವೆನು. ನನಗಂತೂ ವೈಯುಕ್ತಿಕವಾಗಿ ಕಲಾವಿದರ ವಸ್ತ್ರವಿನ್ಯಾಸ ಮತ್ತು ರಂಗ ಬೆಳಕು.ಪಾತ್ರಗಳ ಸಂಭಾಷಣೆ. ಹಿನ್ನಲೆ ಸಂಗೀತ. ಎಲ್ಲವೂ ಹಿಡಿಸಿದವು. ಇಲ್ಲಿ ನಿರ್ದೇಶಕ ನಾಟಕ ರಚನೆಕಾರ.ಮತ್ತು ವಿವಿಧ ತಂತ್ರಜ್ಞರ ಪರಿಶ್ರಮ ಎದ್ದು ಕಾಣುತ್ತಿತ್ತು.
ವಾಸುದೇವ ಗಂಗೇರ ಅವರ ವಿನ್ಯಾಸಕ್ಕೆ ಹ್ಯಾಟ್ಸಪ್.ಇವತ್ತಿನ ಕಾಲಮಾನಕ್ಕೆ ತಕ್ಕಂತೆ ವಾಸ್ತವಿಕ ನೆಲೆಗಟ್ಟಿನ ಕತೆಯನ್ನು ರಂಗಕ್ಕೆ ಅಳವಡಿಸಿರುವ ರೀತಿ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದವು. ನಮ್ಮ ಸುತ್ತ ವಾತಾವರಣದಲ್ಲಿ ಹಿಂಸೆ, ಕ್ರೌರ್ಯ, ದ್ವೇಷದ ಕರಾಳತೆ, ಆತಂಕ, ದುಗುಡ, ಹಾಗೂ ನಿರಾಶೆಗಳು ಸೃಷ್ಟಿಯಾದ ಸಮಕಾಲೀನ ಸಂದರ್ಭದಲ್ಲಿ ಬುದ್ಧನ ಅಹಿಂಸೆ ವ್ಯಾಖ್ಯಾನ ಇಲ್ಲಿ ಮುಖ್ಯವಾಗಿದೆ. ಸತ್ತ ಶವ, ರೋಗ ಪೀಡಿತ ವ್ಯಕ್ತಿ, ಮುದುಕ,ಈ ಮೂರನ್ನು ಕಾಣುವ ಬುದ್ಧ ಓ ಬದುಕೇ ನೀನೆಷ್ಟು ಕ್ರೂರಿ ಎಂದು ಹೇಳುವುದು. ನಂತರ ಬರುವ ಅಂಗುಲಿಮಾಲಾನ ಹಿಂಸಾ ಪ್ರವೃತ್ತಿ, ಬುದ್ಧ ಪ್ರಬುದ್ಧನಾಗುವ ಬಗೆ ಎಲ್ಲವೂ ೯೦ ನಿಮಿಷದ ಅವಧಿಯಲ್ಲಿ ಮೂಡಿ ಬಂದ ರೀತಿ ಅಭಿನಂದನಾರ್ಹ ಇಂತಹ ನಾಟಕಗಳ ಅವಶ್ಯಕತೆ ಇಂದಿನ ಪೀಳಿಗೆಗೆ ಇದೆ.
ರಂಗ ಆರಾಧನಾ ಕಲಾವಿದರ ಹುಮ್ಮಸ್ಸು
ಈ ವರ್ಷ 25ನೇ ವರ್ಷಾಚರಣೆ ಯಲ್ಲಿ ಎಲ್ಲಾ ಕಲಾವಿದರು ತಂತ್ರಜ್ಞರು ಹೆಮ್ಮೆ ಮತ್ತು ಅಭಿಮಾನದಿಂದ 25 ನಾಟಕಗಳನ್ನು ಸವದತ್ತಿ ಜನತೆಗೆ ಹೊತ್ತು ತರುವ ಜೊತೆಗೆ ಎಲ್ಲರೂ ವೈಶಿಷ್ಟ್ಯವಾಗಿ ಕಾಣಬೇಕು ಎಂದು ಕೊಂಡು ಧರಿಸಿಕೊಂಡು ಬಂದಿದ್ದ ಸಮವಸ್ತ್ರ ಗಮನ ಸೆಳೆದಿದೆಯಲ್ಲದೆ ಎಲ್ಲರ ಮುಖದಲ್ಲಿ ಮಂದಹಾಸ 25 ವರ್ಷದ ಸಾರ್ಥಕತೆ ಯನ್ನು ಹೊತ್ತು ತಂದಿತ್ತು. ಎಲ್ಲರೂ ಲವಲವಿಕೆಯಿಂದ ಓಡಾಡುತ್ತಿದ್ದ ದೃಶ್ಯ ಸಂತಸ ತಂದಿತು. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು. ನಿಮ್ಮ ಕಲೆ ನಿರಂತರವಾಗಿ ಸಾಗಲಿ. ಈ ಸಂಘಟನೆ ನೂರ್ಕಾಲ ಹೀಗೆ ಸಾಗಲಿ ಮುಂದಿನ ಪೀಳಿಗೆಗೆ ಕೂಡ ಮಾದರಿಯಾಗಿ ತನ್ನ ಇತಿಹಾಸ ನಿರ್ಮಿಸುವಂತಾಗಲೆಂದು ಆಶಿಸುವೆನು.
ವೈ.ಬಿ.ಕಡಕೋಳ.
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭