- Advertisement -
ಒಳಿತನ್ನೇ ಹಾರೈಸು
ದುಃಖ ದುಮ್ಮಾನವನ್ನೆಲ್ಲ ಬದಿಗಿರಿಸಿ
ಕಪಟವಿಲ್ಲದ ಮುಗುಳ್ನಗೆಯ ಚೆಲ್ಲಿ
ಒಳಿತನ್ನೇ ಮತ್ತೆಲ್ಲರಿಗೂ ಹಾರೈಸಿ
ಸಂಭ್ರಮಿಸು ಹೊಸ ವರುಷವನ್ನಿಲ್ಲಿ!
ಸಮಯಕ್ಕೆ ಮಳೆ ಬೆಳೆಯು ಪಲ್ಲವಿಸಿ
ಹೊತ್ತೊತ್ತಿಗೆಲ್ಲರಿಗೂ ತುತ್ತೆರಡು ಸಿಗಲಿ
ಮರದ ಮರೆಯಲಿ ಚಿಲಿಪಿಲಿ ಕೇಳಿಸಿ
ಸಡಗರದಿ ಹಕ್ಕಿಯು ಗರಿಗೆದರಿ ಹಾರಲಿ
- Advertisement -
ಜೊತೆಯಾದ ಬಂಧನಗಳೆಲ್ಲವ ಗಟ್ಟಿಗೊಳಿಸಿ
ಮೆಟ್ಟಿದ ಮನೆಯೂ ಮನವರಿವ ತವರಾಗಲಿ
ಹೊರದಿದ್ದರೂ ತಾಯಾಗುವಾಸೆಯು ಫಲಿಸಿ
ಅಮ್ಮ ಸಿಕ್ಕ ಕಂದನೂ ತುಸು, ನಕ್ಕು ನಗಿಸಲಿ!
ಸರ್ವಾಂತರ್ಯಾಮಿ ಸಕಲರನ್ನೂ ಹರಸಿ
ಕಾಯುವ ದೊರೆ ಮರೆಯದೇ ಕರುಣಿಸಲಿ
ಜಗವ ಕಾಣುವ ಹಂಬಲವನು ನೆರವೇರಿಸಿ
ಬಣ್ಣಗಳಂದದ ಬೆಳಕು ಕಂಗಳಲಿ ಮೂಡಲಿ!
ಬಂದುದೆಲ್ಲವ ಸದುವಿನಯದಿ ಸ್ವಾಗತಿಸಿ
ನಿನ್ನ ನೀನರಿಯುತಲಿ ಬದುಕು ಈ ಜಗದಿ
ಬರುವ ನಿಮಿಷ, ವರುಷ ದೈವದ ಕೈಗಿರಿಸಿ
ನೋವೊ,ನಲಿವೋ ಸ್ವೀಕರಿಸು ಹರುಷದಿ!!
- Advertisement -
ಸರೋಜಾ ಶ್ರೀಕಾಂತ್ ಅಮಾತಿ,
ಮುಂಬೈ