ಕವನ : ಒಡನಾಟ

Must Read

ಒಡನಾಟ

ಈಗೀಗ ಏಕೋ ಬೇಡವಾಗಿದೆ
ಒಡನಾಟದ ಸವಿ
ಕಾಲ ಒಂದಿತ್ತು
ನನ್ನವರೆಂಬ ಭಾವ ಭಂಗಿ
ಮರೆಯಾಯಿತು ನಡೆ ನುಡಿಯ ಬದಲಾವಣೆಗೆ.

ಗೂಡಿನ ಹಕ್ಕಿಯ ಗರಿ ಬಲಿತಿದೆ
ಹೊರಟಿದೆ ದಾಹ ತಣಿಸಲು
ಮೋಹದ ಬಲೆ ಕಟ್ಟಿ ಕೊಂಡು
ಜಗ ಜಟ್ಟಿಯಂತೆ ಅಖಾಡಕ್ಕಿಳಿದು
ತನ್ನತನವ ಸಾಬೀತು ಪಡಿಸಲು.

ಅನುಬಂಧದ ಗುಟುಕು ಹೀರಿದ್ದು
ಸಂಬಂಧದ ಸವಿ ಉಂಡಿದ್ದು
ಜೀವ ರಕ್ಷಕರಂತೆ ನಿಂತಿದ್ದು
ಎಲ್ಲವೂ ಮುಸುಕಿನ ಗುಡ್ಡಾಟದಿ
ಒದ್ದಾಡಿ ಒದ್ದಾಡಿ ನಲುಗಿದೆ.

ಬಂಧ ಅನುರಾಗದ ಮುಸುಕಿನಲಿ
ಬೆಳೆಸಿದ್ದು ಹೌದಾದರೂ
ಕರ್ತವ್ಯ ನಿರ್ವಹಣೆ ಎಂದು
ಕೈ ಚೆಲ್ಲಿ ಕುಳಿತು
ಮುಂದೊಂದು ದಿನ ತನಗೂ ಹೀಗೆ ಆಗಬಹುದಲ್ಲವೇ.

ಹೊಟ್ಟೆ ತುಂಬಿಸಿ
ಪೊರೆದ ಬಗೆ ನೆನಪಿಗೆ ಬರಲಿಲ್ಲವೇ
ನಡೆ ನುಡಿ ಕಲಿಸಿದ್ದು
ಪಕ್ಕೆಲುಬಿಗೆ ಶಕ್ತಿ ಬರಿಸಿದ್ದು
ನೆನಪಿನಿಂದ ದೂರ ತಳ್ಳಿದ್ದು ಏಕೆ?

ಕಾಲ ಮರುಕಳಿಸೀತು ಜೋಕೆ
ಒಡನಾಟದ ಹಂಬಲ ಬೇಕೆನಿಸೀತು
ಇದ್ದಾಗ ಉಳಿಸಿಕೊಳ್ಳು
ಬದ್ಧತೆಗೆ ಸಿದ್ಧನಾಗು
ಬುದ್ಧನಂತೆ ನಸು ನಕ್ಕು ಆಲಂಗಿಸಿ.

ಬಿರುಕಿಗೆ ಗಾರೆ ತುಂಬಿಸಿಬಿಡು
ಪರಿಸ್ಥಿತಿ ಪರಾಮರ್ಶಿಸಿ
ಪಟ್ಟು ಬಿಗಿಯಾಗಿಸಿ ಫಲವಿಲ್ಲ
ಪೆಟ್ಟು ತಿಂದ ಮೇಲೆ ಹಪಾಹಪಿ ಬೇಡ
ಒಡನಾಟದ ಹಂಬಲ ಹೆಚ್ಚಾದೀತು.

ಕಾಲ ಕಳೆದಂತೆ ಬದಲಾದೀತು
ಸಾಮೀಪ್ಯ ಬೇಕೆಂದು ತಡಕಾಡಿದರೇನು
ಇರುವಾಗ ಸಂಧಿಸು
ತೆರೆ ಮರೆ ಕಸರತ್ತು
ಪರದೆ ಮೇಲೆ ಬಂದಾಗ ದಂಗಾಗ ಬೇಡ.

ಆಲಂಗಿಸಿ ನಡೆದುಬಿಡಿ
ರೆಕ್ಕೆ ಬಲಿತರು ನಾನಾಗಿದ್ದೆ ಹಕ್ಕಿ ಮರಿ
ಬಿಕ್ಕುವ ಬದಲು
ಮುಕ್ಕಿ ತಿನ್ನುವ ಬದಲು
ಹೊಂಚು ಹಾಕುವದು ಬಿಟ್ಟು ಹಂಚುತ ಸಾಗು.

ಒಡನಾಟ ಹೊಂದು
ಬಡಿದಾಟ ಸಾಕಿನ್ನು
ಮದ್ದು ತುಪಾಕಿ ಬಿಸಾಕು
ಮದ್ದು ಮಾಡುತ
ಹತಾಶೆಗೆ ಮದ್ದಾಗು ಒಡನಾಟದಿ.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

Latest News

 ಯಾದವಾಡದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಆಚರಣೆ

   ಮೂಡಲಗಿ:- ಯಾದವಾಡ  ಗ್ರಾಮದಲ್ಲಿ ಶಿರಸಂಗಿ ತ್ಯಾಗವೀರ ಲಿಂಗರಾಜ ದೇಸಾಯಿ ಅವರ ಮೂರ್ತಿಗೆ ಪೂಜೆಮಾಡಿ 165ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.   ಶ್ರೀ ಅಭಿನವ ಚೌಕೇಶ್ವರ ದೇವರು...

More Articles Like This

error: Content is protected !!
Join WhatsApp Group