ಕವನ : ನಿಮ್ಮೂರ ಹಾದಿ ಬದಿಯಾಗ

Must Read

ನಿಮ್ಮೂರ ಹಾದಿ ಬದಿಯಾಗ

ಬಾಳೆ ತಲಿಬಾಗ್ಯಾವೆ ನೆಲ್ಲು ತಲಿತೂಗ್ಯಾವೆ
ತೆಂಗು ಕೈಮಾಡಿ ಕರೆದಾವೆ
ತೆಂಗು ಕೈಮಾಡಿ ಕರೆದಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ನಿಂಬೆ ಹಣ್ಣಾಗ್ಯಾವೆ ತೊಂಡೆ ಕೆಂಪಾಗ್ಯಾವೆ
ದಾಳಿಂಬೆ ಹಣ್ಣು ಬಿರಿದಾವೆ
ದಾಳಿಂಬೆ ಹಣ್ಣು ಬಿರಿದಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ನವಿಲು ಕುಣಿದಾಡ್ಯಾವೆ ಗಿಣಿಯು ನಲಿದಾಡ್ಯಾವೆ
ಕೋಗಿಲೆ ಹಾಡು ಹಾಡ್ಯಾವೆ
ಕೋಗಿಲೆ ಹಾಡು ಹಾಡ್ಯಾವೆ -‌ ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಚಿಗರೆಗಳು ಬೆದರ್ಯಾವೆ ಮೊಲಗಳು ಹೆದರ್ಯಾವೆ
ಪಾತರಗಿತ್ತಿ ಸುಳಿದಾವೆ
ಪಾತರಗಿತ್ತಿ ಸುಳಿದಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಮಲ್ಲಿಗೆ ಬಿರಿದಾವೆ ಪರಿಮಳ ಬೀರ್ಯಾವೆ
ದುಂಬಿಯ ದಂಡು ಹಾರ್ಯಾವೆ
ದುಂಬಿಯ ದಂಡು ಹಾರ್ಯಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಗಿಡಬಳ್ಳಿ ನಲುಗ್ಯಾವೆ ಗಿರಿಬೆಟ್ಟ ಮಲಗ್ಯಾವೆ
ಹೊಲಗದ್ದೆ ಹಸಿರು ತೊಟ್ಟಾವೆ
ಹೊಲಗದ್ದೆ ಹಸಿರು ತೊಟ್ಟಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ತಾವರೆ ಅರಳ್ಯಾವೆ ಕಲಹಂಸ ತೇಲ್ಯಾವೆ
ಮಾವಿನತೋಪು ಚಿಗಿತಾವೆ
ಮಾವಿನತೋಪು ಚಿಗಿತಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಕೆರೆತೊರೆ ತುಂಬ್ಯಾವೆ ನೊರೆತೆರೆಯೆದ್ದಾವೆ
ತಂಗಾಳಿ ಸುಳಿದು ಸೂಸ್ಯಾದೆ
ತಂಗಾಳಿ ಸುಳಿದು ಸೂಸ್ಯಾದೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಆಲ ಬೇರಿಳಿದಾವೆ ಬೇಲ ಕಾಯಾಗ್ಯಾವೆ
ಬೆಳ್ಳಕ್ಕಿ ಸಾಲು ಸಾಗ್ಯಾವೆ
ಬೆಳ್ಳಕ್ಕಿ ಸಾಲು ಸಾಗ್ಯಾವೆ – ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗ

ಎನ್.ಶರಣಪ್ಪ ಮೆಟ್ರಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group