ಮಳೆರಾಯನಿಗೆ ಕೈ ಮುಗಿಯುತ್ತ
ಎಲ್ಲಿದ್ದೋ ಮಳಿರಾಯ??
ಬಾ ಅಂದಾಗ ಬರಲೆ ಇಲ್ಲ.
ಸುರಿ ಅಂದಾಗ ಸುರಿಲೇ ಇಲ್ಲ.
ರೈತರ ಕಣ್ಣು ಆಕಾಶದಾಗ
ಬಿತ್ತಿದ ಬೀಜ ಭೂಮಿ ಒಳಗ..
ಎಲ್ಲಿದ್ದೋ ಮಳೆರಾಯ??
ಬಾ ಅಂದಾಗ ಬರಲೇ ಇಲ್ಲ
ಕಾದ ಕುಂತಾಗ ನಾಡೆಲ್ಲ.
ಖಾಲಿ ಕೊಡಗೋಳ ಸಾಲ ಎಲ್ಲ.
ಹಗ್ಗಕ್ ಬಿದ್ದು ಹರದಾವ ಕುಣಿಕಿ ಸತ್ತವರ ಲೆಕ್ಕ ಸಿಗಲಿಲ್ಲ ಎಣಿಕಿ.
ಎಲ್ಲಿದ್ದೋ ಮಳಿರಾಯ??
ಈಗ್ಯಾಕ್ ಆದೋ ನೀ ಜವರಾಯ.
ದನಾ ಕರಗೋಳ ಮೇವಿಲ್ಲ.
ಮಕ್ಕಳ ಮೈ ಮ್ಯಾಲ ಅರವಿ ಇಲ್ಲ.
ಉಪವಾಸ ವನವಾಸ ತಪ್ಪಿದ್ದಲ್ಲ.
ಎಲ್ಲಿದ್ದೋ ಮಳಿರಾಯ??
ತಡದ ಬಂದಿ ಪರವಾಗಿಲ್ಲ
ಜಡದ ಬಂದಿ ಯಾಕ ಹಿಂಗೆಲ್ಲ
ಕೈಗೆ ಬಂದಿದ್ ಬಾಯಿಗಿ ಇಲ್ಲ
ನಿನಗೂ ಯಾರೂ ಹೇಳವರಿಲ್ಲ
ನಮ್ಮ ಗೋಳು ಕೇಳವರಿಲ್ಲ..
ಎಲ್ಲಿದ್ದೋ ಮಳಿರಾಯ??
ಬಾ ಅಂದಾಗ ಬರಲೆ ಇಲ್ಲ.
ಈಗೂ ಎನೂ ಬದಲಾಗಿಲ್ಲ
ಜನರು ಯಾರೂ ಸುಧಾರಿಸಿಲ್ಲ.
ಗಿಡಾ ಮರಾ ಕಡಿತಾರೆಲ್ಲ
ಗುಡ್ಡಾ ಮಡ್ಡಿ ಒಡಿತಾರೆಲ್ಲ.
ಎಲ್ಲಿದ್ದೊ ಮಳಿರಾಯ??
ಬಾ ಅಂದಾಗ ಬರಲೇ ಇಲ್ಲ
ಬಿದ್ದ ಮನಿ ಊರಾಗೈತಿ.
ಅರ್ಧ ಬಾಳೇ ನೀರಾಗೈತಿ
ಕೈ ಮುಗಿತಿವ್ ನಿಲ್ಲಿಸಿಬಿಡು
ತಪ್ಪಾಗಿದ್ರ ಕ್ಷಮಿಸಿಬಿಡು
ಬಡವರನಾದ್ರು ಬದಕಾಕ ಬಿಡು…ಇದ್ದಷ್ಟ ದಿನಾ ಇರಲಾಕ ಬಿಡು
ಎಲ್ಲಿದ್ದೊ ಮಳಿರಾಯ ??
ಬಾ ಅಂದಾಗ ಬರಲೇ ಇಲ್ಲ
ಹಳ್ಳ ಕೆರಿ ಒಡದಾವ ಖೋಡಿ
ತುಂಬಿ ಬಂದಾವ ಕಣ್ಣೀರ ಜೋಡಿ
ನಿನಗೆನ ಬಿಡು ಎಲ್ಲೋ ಬಿದ್ದಿ
ಎಲ್ಲೋ ಎದ್ದಿ
ಟಿವಿ ಪೆಪರದಾಗ ನಿಂದ ಸುದ್ದಿ
ನಮಗಂತು ಹತ್ತಿಲ್ಲ ನಿದ್ದಿ.
ಎಲ್ಲಿದ್ದೊ ಮಳಿರಾಯ??
ಊರ ಮಂದಿಗ ಉಪಕಾರ ಮಾಡು ಬಾ ಅಂದಾಗ ಬಂದಿಲ್ಲ ನೋಡು
ಅದಕ ಹೋಗ ಅಂದಾಗ ಹೋಗಿಬಿಡು.
ಶಪಿಸಾಕ ಹತ್ಯಾರ ಅಜ್ಜ ಅಜ್ಜಿ
ತುಂಬಿದ ಬಸುರಿ,ದಿನದ ಬಾಣಂತಿ.
ಎಲ್ಲಿದ್ದೋ ಮಳಿರಾಯ ಬಾ ಅಂದಾಗ ಬರಲೇ ಇಲ್ಲ
ದೀಪಕ ಶಿಂಧೇ
9482766018