ಬಸವಣ್ಣ ಬಿಟ್ಟು ಹೋಗಲಿಲ್ಲ
ಅಗಲಲಿಲ್ಲ ಬಯಲಾಗಲಿಲ್ಲ
ಲೀನವಾಗಲಿಲ್ಲ ಬಸವಣ್ಣ ,
ನಮ್ಮನು ಬಿಟ್ಟು ಹೋಗಲಿಲ್ಲ.
ಇದ್ದಾನೆ ಬಸವಣ್ಣ ನನ್ನೊಳಗೆ
ನಿಮ್ಮೊಳಗೆ ನಮ್ಮೊಳಗೆ .
ಶತಮಾನದಿಂದ ಮೌನ ಹೊತ್ತು
ಉಸಿರುತ್ತಿದ್ದಾನೆ ವಚನವ ಜಪಿಸುತ್ತ
ಗುರು ವಿರಕ್ತರ ಗುದ್ದಾಟ
ಕಾವಿಗಳ ಕಾದಾಟ
ಭಕ್ತರ ಹುಚ್ಚಾಟಕ್ಕೆ ಮರುಗಿದ್ದಾನೆ
ಜಗದ್ಗುರುಗಳ ಅಡ್ಡ ಪಲ್ಲಕ್ಕಿಗೆ
ಹೆಗಲು ಕೊಟ್ಟಿದ್ದಾನೆ.
ಯಜ್ಞ ಹವನ ಹೋಮಕ್ಕೆ
ಎಣ್ಣೆ ತುಪ್ಪ ಹಾಕುತ್ತಿದ್ದಾನೆ .
ಮುಗಿಲೆತ್ತರದ ಬಸವ ಮೂರ್ತಿಗೆ
ಕಲ್ಲು ಮರಳು ಹೊರುತ್ತಿದ್ದಾನೆ.
ಜಂಗಮರ ಪಾದಪೂಜೆಗೆ ಸಿದ್ಧ
ಪುರಾಣ ಪ್ರವಚನದ ಶಬ್ದ ಮಾಲಿನ್ಯ
ತುಲಾಭಾರ ವರ್ಧಂತಿ ಆಡಂಬರ
ಝಣ ಝಣ ಸಪ್ಪಳ ಕಾಂಚಾಣ
ವಚನ ಉತ್ಸವ ಮೇಳ ಕಲ್ಯಾಣ ಪರ್ವ
ದುಡ್ದುಮಾಡುವ ವ್ಯವಹಾರಕ್ಕೆ
ಬಸವಣ್ಣ ಪಾವತಿ ಹರಿಯುತ್ತಿದ್ದಾನೆ
ವಚನಾಂಕಿತ ತಿದ್ದಿದವರ ಗುರುವಚನ ಕದ್ದವರ
ತಲೆ ಮೇಲೆ ಹೊತ್ತು ಕುಣಿಯುತ್ತಿದ್ದಾನೆ.
ಅಕ್ಕ ಮಾತೆ ಶರಣರ ಅಣತಿಯಾಗಿದ್ದಾನೆ.
ಬಸವಣ್ಣ ಬದುಕಿದ್ದಾನೆ ಭ್ರಷ್ಟರ ಮಠಗಳಲ್ಲಿ
ಅಕ್ಕನ ಅಂಗಳದಲಿ ,ಮಾತೆಯ ಮಡಿಲಲ್ಲಿ
ಜಂಗಮ ಬಸವಣ್ಣ ಸ್ಥಾವರವಾಗಿದ್ದಾನೆ
ವೇದಘೋಷ ರುದ್ರಪೂಜೆಯ ನಿರಂತರ
ಸದ್ದಿಲ್ಲದ ಶರಣ ಅರಿವಿನ ಗುರು
ಅಗಲಲಿಲ್ಲ ಬಯಲಾಗಲಿಲ್ಲ
ಲೀನವಾಗಲಿಲ್ಲ ಬಸವಣ್ಣ,
ನಮ್ಮನು ಬಿಟ್ಟು ಹೋಗಲಿಲ್ಲ.
————————————
ಡಾ ಶಶಿಕಾಂತ .ಪಟ್ಟಣ -ರಾಮದುರ್ಗ