ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು
ಸೇರಿದರೆ ಬಹಳರುಚಿ ಮಾಡಿದಡಿಗೆ
ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ
ಅನುಭಾವದಡಿಗೆ ರುಚಿ – ಎಮ್ಮೆತಮ್ಮ
ಶಬ್ಧಾರ್ಥ
ಅನುಭಾವ = ಅತೀಂದ್ರಿಯವಾದ ಅನುಭವ
ತಾತ್ಪರ್ಯ
ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು ,ಹುಳಿ,
ಸಿಹಿ, ಕಹಿ, ಖಾರ, ಒಗರು ಇದ್ದರೆ ಊಟ ಬಹಳ ರುಚಿಯಾಗಿ
ಇರುತ್ತದೆ. ಜೊತೆಗೆ ಹಾಲು, ಮೊಸರು, ತುಪ್ಪ ಇದ್ದರೆ ಇನ್ನೂ
ರುಚಿಯಾಗಿರುತ್ತದೆ.ನೈವೇದ್ಯಂ ಷಡ್ರಸೋಪೇತೇ| ನಾನಾಭಕ್ಷಂ
ಸಮನ್ವಿತಂ|| ದಧೀಕ್ಷೀರಘೃತೋಪೇತಂ| ನೈವೇದ್ಯಂ ಪ್ರತಿಗೃಹ್ಯತಾಂ|| ಎಂಬ ಮಂತ್ರ ದೇವರಿಗೆ ನೈವೇದ್ಯ ಅರ್ಪಣೆ
ಮಾಡುವಾಗ ಹೇಳುತ್ತೇವೆ. ಹೀಗೆ ನೈವೇದ್ಯ ದೇವರಿಗೆ ಅರ್ಪಿಸಿ
ಪ್ರಸಾದವೆಂದು ತಿನ್ನುತ್ತೇವೆ. ಇವೆಲ್ಲ ಕೂಡಿದ ಪ್ರಸಾದ ಬಹಳ
ರುಚಿಯಾಗಿರುತ್ತದೆ. ಹಾಗೆ ನಮ್ಮ ಜೀವನದಲ್ಲಿ ಅಳುವಿದೆ,
ನಗುವಿದೆ,ಸುಖವಿದೆ, ದುಃಖವಿದೆ, ನಲಿವಿದೆ ಮತ್ತು ನೋವಿದೆ.
ಇವೆಲ್ಲವನ್ನು ಅನುಭವಿಸಿದಾಗ ಜೀವನಾನುಭವ ಉಂಟಾಗಿ
ಮನಸ್ಸು ಆಧ್ಯಾತ್ಮದ ಕಡೆಗೆ ತಿರುಗುತ್ತದೆ. ಇವೆಲ್ಲ ನಮ್ಮ ಇಂದ್ರಿಯಗಳಿಂದ ಉಂಟಾದರೆ ಮನಸ್ಸು ಪಕ್ವವಾಗಿ
ಇಂದ್ರಿಯಾತೀತವಾದ ದೇವರ ಅನುಭವ ಉಂಟಾಗುತ್ತದೆ.
ಆಗ ಜೀವನ ಆನಂದಮಯವಾಗಿ ಬದುಕುವ ವಿಧಾನ
ಬದಲಾಗುತ್ತದೆ. ನಿಜವಾಗಿ ಹೇಗೆ ಬದುಕಬೇಕೆಂಬ ಆಶಾ
ಕಿರಣ ಮೂಡುತ್ತದೆ. ಅಂಥ ಅನುಭಾವಿಯಾಗಿ ಬದುಕುವುದೆ
ಜೀವನದ ಸಾಫಲ್ಯ. ನಾವು ಭೂಮಿಗೆ ಬಂದಿರುವುದು ಪರಮಾನಂದ ಅನುಭವಿಸಿ ಬದುಕಿಬಾಳಲಿಕ್ಕಾಗಿಯೆ ಹೊರತು ದುಃಖಿಯಾಗಿ ಸಾಯಲಿಕ್ಕಾಗಿ ಅಲ್ಲ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990