ಕವನ: ಮಹಾತ್ಮನಾತ್ಮ ಮರುಗುತಿದೆ

0
425

ಮಹಾತ್ಮನಾತ್ಮ ಮರುಗುತಿದೆ

ಮಹಾತ್ಮಾ ಗಾಂಧೀಜಿ ಆತ್ಮ ಮಮ್ಮಲ ಮರುಗುತಿದೆ..!
ಭಾರತ ದೇಶದ ಸ್ಥಿತಿಯ ಕಂಡು ಆತ್ಮ ಅತ್ತಿಂದಿತ್ತ ಓಡಾಡುತಿದೆ..!
ಸತ್ಯ,ಅಹಿಂಸೆ,ಶಾಂತಿ ತತ್ವಗಳನು ಗಾಳಿಗೆ ತೂರುವುದ ನೋಡಲಾಗದೆ..!
ಜಾತಿ,ಮತ,ಪಂಥಗಳ ಜಗಳ,ಅಶಾಂತಿಗಳ ಹೊಡೆದೋಡಿಸಲು ಆತ್ಮ ಚಡಪಡಿಸುತಿದೆ..!

ಸಹನೆಯಿಂದ ಬ್ರಿಟಿಷ್ ರಿಗೆ..ಬುದ್ದಿ ಕಲಿಸಿದ ಮಹಾತ್ಮನಾತ್ಮ ಆತಂಕಪಡುತಿದೆ..!
ಮತ್ತೆ ಭಾರತಾಂಬೆ ದುಃಖದಲ್ಲಿರುವುದು ಕಂಡು ನೋಯುತಿದೆ..!
ಸ್ವಾರ್ಥ,ಭ್ರಷ್ಟಾಚಾರ,ಭಯೋತ್ಪಾದನೆಯ ರೌದ್ರಾವತಾರ ಕಂಡು ಆತ್ಮ ಸಿಡಿದೆದ್ದಿದೆ..!
ವಯಸ್ಸಿನ ಮಿತಿಯಿಲ್ಲದೆ ಹೆಣ್ಣು ಅತ್ಯಾಚಾರಕ್ಕೊಳಗಾಗುವುದ ಕಂಡಾತ್ಮ ಹೇಸಿಗೊಂಡಿದೆ..!

ಸ್ವತಃ ಚರಕದಿ ನೇಯ್ದು,ಬಡಕಲು ದೇಹ ಖಾದಿ ಬಟ್ಟೆ ತೊಟ್ಟ ಆತ್ಮ ಚಿಂತೆಗೊಂಡಿದೆ..!
ಆಧುನಿಕತೆಯ ವಸ್ತ್ರಾಭರಣಗಳ ಒಳ್ಳೆ ಬಟ್ಟೆ ಹರಿದು ತೊಡುವುದ ಕಂಡು ಬೇಸರಗೊಂಡಿದೆ..!
ರಾಮರಾಜ್ಯದ ಕನಸು ಮಣ್ಣು ಪಾಲಾಗುವುದ ಕಂಡು ಮರ ಮರ ಮರುಗುತಿದೆ..!
ಸತ್ಯಾಗ್ರಹ ಚಳವಳಿಗಳಿಗಾಗಿ ಸವೆದ ಬಡಕಲು ದೇಹದಾತ್ಮ ಸೋತು ನಿಂತಿದೆ..!

ವಿವಿಧತೆಯಲಿ ಏಕತೆಯ ಭಾವೈಕ್ಯತೆಯ ಜ್ಯೋತಿ ಬೆಂಕಿಯಂತೆ ಕಂಡು ಭೀತಿಗೊಂಡಿದೆ..!
ಅಧಿಕಾರದಾಸೆಗೆ ಏನನ್ನೂ ಮಾಡಲು ಹೇಸದ ದುರ್ಜನರ ಕಂಡು ಕೋಪಗೊಂಡಿದೆ..!
ಮಹಾತ್ಮಾ ಗಾಂಧೀಜಿಯಾತ್ಮ ಭಾರತ ದೇಶದ ಸುತ್ತ ಮರುಗುತ್ತಾ ಸುತ್ತಿದೆ..!
ಶಾಂತಿದೂತನ,ಗಾಂಧಿ ತಾತನಾತ್ಮ ಕೂಗಿ ಕೂಗಿ ಭಾರತೀಯರ ಕರೆಯುತಿದೆ..!

ಭಾರತೀಯರೇ ಬನ್ನಿ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ..!
ಹಳ್ಳಿಯಿಂದ ದಿಲ್ಲಿಯವರೆಗೂ ಭಾವೈಕ್ಯತೆ ಬೀಜ ಬಿತ್ತಬೇಕಿದೆ..!
ಏಕತೆಯ ಪೈರು ಬೆಳೆದು ಸಮೃದ್ಧಿ ದೇಶ ಕಟ್ಟಬೇಕಿದೆ..!
ಕನ್ನಡಾಂಬೆಯ ಸೇವೆ ಮಾಡುತಾ ಮಹಾತ್ಮಾ ಗಾಂಧೀಜಿ ಆತ್ಮಕೆ ಶಾಂತಿ ನೀಡಬೇಕಿದೆ..!


ಶ್ರೀಮತಿ ಕಸ್ತೂರಿ ಎಸ್. ಬೀರಪ್ಪನವರ.