ಪೌಷ್ಟಿಕಾಂಶಗಳ ದೊರೆ
‘ಅಕ್ಕಿ ಇದ್ದರೆ ಲಕ್ಕಿ’
ಹಣ ಇದ್ದರೆ ಸಂಪತ್ತಣ್ಣ,
ಆ ಕಾಲ ಮುಗಿದ ಕಥೆಯಣ್ಣ ,
ಅಕ್ಕಿ ತಿಂದವ ರೋಗಿ,
ರಾಗಿ ತಿಂದವ ನಿರೋಗಿ,
ಜೋಳ ತಿಂದವ ತೋಳ
ಇದು ಇಂದಿನ ಕಾಲವಣ್ಣ….
ಹತ್ತಕ್ಕೆ ಬಾಲ್ಯ, ಇಪ್ಪತ್ತಕ್ಕೆ ಯೌವನ
ಮೂವತ್ತಕ್ಕೆ ಗೃಹಸ್ಥ, ಐವತ್ತಕ್ಕೆ ವಾನಪ್ರಸ್ಥ,
ಅರವತ್ತಕ್ಕೆ ಅರಳು, ಎಪ್ಪತ್ತಕ್ಕೆ ಮರುಳು,
ಎಂಭತ್ತರ ನಂತರ ಪರಲೋಕಕ್ಕೆ ತೆರಳು
ಸಿರಿಧಾನ್ಯಗಳ ಬೆಳೆಯುತ್ತಿದ್ದ, ಉಣ್ಣುತ್ತಿದ್ದ ಆ ದಿನಗಳ ಲೆಕ್ಕಾಚಾರ,
ನಲವತ್ತಕ್ಕೆ ಸಕ್ಕರೆ ಕಾಯಿಲೆ,
ಅಧಿಕ ರಕ್ತದೊತ್ತಡ, ಹೃದಯಾಘಾತ
ಎಲ್ಲಾ ಕಾಯಿಲೆಗಳ ಸಮಾಗಮ
ಐವತ್ತರಿಂದಾಚೆಗೆ ಜೀವನವೇ ಅಂತಿಮ
ಇದು ಇಂದಿನ ಪಾಶ್ಚಿಮಾತ್ಯ ಲೆಕ್ಕಾಚಾರ…
ನಮ್ಮ ತಾತಮುತ್ತಾತಂದಿರು ಬೆಳೆಯುತ್ತಿದ್ದರು,
ರಾಗಿ,ಜೋಳ, ನವಣೆ, ಸಜ್ಜೆ,ಬರಗು ಬೆಳೆಗಳ,
ಬಳಸಿ ಮನೆಗೊಬ್ಬರ,
ಬೆಳೆಯುತ್ತಿದ್ದರು ಸತ್ವಯುತ ಆಹಾರ,
ಸಿರಿಧಾನ್ಯಗಳ ತಿಂದು ಆಗಿದ್ದರು ನಿರೋಗಿ
ನಡೆಸುತ್ತಿದ್ದರು ಪರಿಪೂರ್ಣ ಜೀವನ..
ಪಾಶ್ಚಿಮಾತ್ಯರ ದಾಳಿ,ಹಸಿರು ಕ್ರಾಂತಿಯ ಭ್ರಾಂತಿ,
ಹಣದ ಹಿಂದೆ ಓಡಿತು ರೈತ ಸಮುದಾಯ,
ಭತ್ತ,ಕಬ್ಬು, ಹೊಗೆಸೊಪ್ಪುಗಳ ಹಾವಳಿಗೆ
ಮಸುಕಾಯಿತು ಸಿರಿಧಾನ್ಯಗಳ ಕೃಷಿಯ ಭವಿಷ್ಯ..
ಸಿರಿಧಾನ್ಯ ಇಂದು-ನಿನ್ನೆಯದಲ್ಲ,
ಭಾರತ,ಚೀನಾ,ಕೊರಿಯಾ ರಾಷ್ಟ್ರಗಳ
ಪುರಾತನ ನವ ಶಿಲಾಯುಗದ ಜನರ ಬೆಳೆಯಿದು,
‘ಪೌಷ್ಟಿಕಾಂಶದ ನಿಧಿ ‘ ಸಿರಿಧಾನ್ಯವಾಗಿಹುದು,
ರಕ್ತದ ಕೊರತೆ, ದೇಹದ ಬೊಜ್ಜು ನಿವಾರಿಸುವುದು,
ರಕ್ತದಲಿ ಸಕ್ಕರೆಯ ಪ್ರಮಾಣವ ನಿಯಂತ್ರಿಸಿ ಮಧುಮೇಹ ನಿಯಂತ್ರಿಸುವುದು,
ಹೃದಯದ ಕಾಯಿಲೆಗೆ ರಾಮಬಾಣವಾಗಿಹುದು..
ನವಣೆ ಶರೀರದ ನರನಾಡಿಗಳಿಗೆ
ಚೈತನ್ಯ ನೀಡಿ ಪರಿಹರಿಸುತ್ತದೆ
ದೇಹದ ಅನಾರೋಗ್ಯದ ಬವಣೆ
,ಅರ್ಕ ಮಾಡಲಿದೆ ರಕ್ತದ ಶುದ್ದಿಯ ಪಕ್ಕಾ,
ಸಂತಾನೋತ್ಪತ್ತಿಗೆ ಸೀಮೆಅಕ್ಕಿ ಸಿರಿ ನೀಡಲಿದೆ,
ಊದಲು ಆಹಾರನಾಳಕ್ಕೆ ಬಲ ಕೊಟ್ಟರೆ,
ಕೂರಲು ಧಾನ್ಯ ಶರೀರದ ಜೀರ್ಣ ಶಕ್ತಿಗೆ ನೀಡಲಿದೆ ಬಹುಬಲವನ್ನು…
ಸಜ್ಜೆ ತಿಂದು ಹೆಜ್ಜೆ ಹಾಕು
,ನವಣೆ ತಿಂದು ಬವಣೆ ನೀಗು,
ಕೊರಡನ್ನೂ ಕೊನರಿಸುವ ಕೊರಲು
ಧಾನ್ಯ ಬಳಸು,
ಹಾರಕ ತಿಂದು ಹಾರಾಡುತ್ತಾ ಬದುಕು.
ಜೋಳ ತಿಂದು ತೋಳವಾಗು,
ರಾಗಿ ತಿಂದು ನಿರೋಗಿಯಾಗು
ಜೀವನದ ಕೊನೆಯವರೆಗೆ
ನಗುನಗುತ್ತಾ ಬಾಳು..
ಬಿಟ್ಟು ಹಣ,ಆಸ್ತಿ, ಠೇಂಕಾರಗಳ ಬ್ರಾಂತಿ,
ಎಲ್ಲರೂ ಮಾಡೋಣ ಸಿರಿಧಾನ್ಯಗಳ ಕ್ರಾಂತಿ,
ಪಾಶ್ಚಾತ್ಯ ಆಹಾರ ಪದ್ದತಿ ತ್ಯಜಿಸೋಣ,
ಬೆಳೆಯೋಣ..ತಿನ್ನೋಣ ಸಿರಿಧಾನ್ಯಗಳ,
ಸೃಷ್ಟಿಸೋಣ ಆರೋಗ್ಯವಂತ ಸಮಾಜವನು…
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು