ಅಳಿಸಲಾಗದ ನೆನಪು
ಅರಮನೆಯ ಅರಸ ನೀನಲ್ಲ
ಆದರೂ ಅರಸನಂತೆ ನನ್ನ ಬೆಳೆಸಿದೆ
ಮೊಮ್ಮಕ್ಕಳೊಡನೆ ಪ್ರೀತಿ ತೋರಿ
ಕರಗದಷ್ಟು ನೆನಪುಳಿಸಿದ ಸಾಹುಕಾರ
ಮತ್ತೆ ಮತ್ತೆ ನೆನಪಾಗುವುದು
ನಿಮ್ಮ ಆ ಪ್ರೀತಿ ತೋರಿದ ದಿನಗಳು
ಬೆಲೆ ಕಟ್ಟಲಾಗದ ಆಸ್ತಿ ನನ್ನ ಪಾಲಿಗೆ
ನನ್ನ ನೋವಿನಲ್ಲೂ ನಗುತ್ತಿರುವೆ
ನಿನ್ನ ನೆನಪಿನಾಳದಲ್ಲಿ ಹುದುಗಿ
ಬರಿಯ ಕೆಮ್ಮು ಕೆಮ್ಮುತಲಿ
ಸಾಗಿದೆ ಮಾತಾಡುತ ಆಸ್ಪತ್ರೆಗೆ
ವೈದ್ಯರ ಬೇಗ ಕರೆ ಕೆಮ್ಮು ಜೋರಾಗುತಿಹುದು
ವೈದ್ಯರು ಬರುವ ಮುಂಚೆ
ನೀನಿರಲಿಲ್ಲ
ದೇವರು ಒಂದೇ ಒಂದು ಅವಕಾಶ ನೀಡಲಿಲ್ಲ
ಹೋಗುವಾಗ ಜೊತೆಗೂಡಿ
ಮಾತನಾಡುತಲೇ ಸಾಗಿದ ನಮ್ಮ ಪಯಣ
ಮರಳುವಾಗ
ನಾ ಏಕಾಂಗಿ
ಮತ್ತೆ ಮತ್ತೆ ನೆನಪಾಗುತಿದೆ
ಆ ದಿನಗಳ ನೆನಪು
ನಿಸ್ವಾರ್ಥ ಬದುಕಿನ ನಾವಿಕ ನೀನೆನಗೆ
ಎಲ್ಲಾ ಜವಾಬ್ದಾರಿಗಳ ಹೊತ್ತು ಸಾಗಿದೆ
ಇನ್ನು ಮುಂದಿನ ದಿನಗಳು ನಿನ್ನವು
ಎನುತ ಕಷ್ಟಗಳೇ ಗೊತ್ತಿರದ ಈ ಹೃದಯಕೆ ಜವಾಬ್ದಾರಿ ಹೆಗಲೇರಿಸಿದೆ
ನಿನ್ನ ನಿಶ್ಯಬ್ದ ಮೌನ ಬರೀ ನೆನಪು
ಸಾವು ಎನ್ನುವ ಕಹಿಯಾದ ಸತ್ಯವ
ಹುಟ್ಟಿಗೆ ಸಾವಿಹದು ಎನ್ನುವ
ಸಾವಿನ ಮೆರವಣಿಗೆ ಸಮಾಧಿಯ ವರೆಗೆ
ಹುಟ್ಟು ಸಾವಿನ ನೋವು ನಲಿವುಗಳ ನಡುವೆ
ನಿನ್ನ ಅಳಿಸಲಾಗದ ನೆನಪು
ಅಮರ ಅಜರಾಮರ
ಅಪ್ಪನೆಂದರೆ ಆಕಾಶ ಎನ್ನುವರು
ಅದಕ್ಕಿಂತ ಮಿಗಿಲು ಎನಿಸುವುದು
ವರ್ಣಿಸಲು ಸಾಲದು
ಬರೀ ಶಬ್ದಗಳು
ಪ್ರೀತಿ ಮಮತೆ ವಾತ್ಸಲ್ಯ ಕರುಣೆ
ಇವೆಲ್ಲವೂ ನಿನ್ನ ವು
ಅವೆಲ್ಲವೂ ಅಳಿಸಲಾಗದ ನೆನಪು
ವೈ. ಬಿ. ಕಡಕೋಳ
ಮುನವಳ್ಳಿ ೫೯೧೧೧೭